ಶಿವಮೊಗ್ಗದಲ್ಲಿ ಗಣಪತಿ ವಿಸರ್ಜನೆ: ವಾಹನ ಸಂಚಾರ ಮಾರ್ಗ ಬದಲಾವಣೆ; ಯಾವ ರಸ್ತೆಯಲ್ಲಿ ನಿರ್ಬಂಧ?
ಶಿವಮೊಗ್ಗದಲ್ಲಿ ಸೆಪ್ಟೆಂಬರ್ 25ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಹಾಗೂ ಭಾರೀ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನ ಸೂಚಿಸಲಾಗಿದ್ದು, ವಾಹನ ಸವಾರರು ಸಂಚಾರ ಪೊಲೀಸರ ಸೂಚನೆ ಪಾಲಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
Shivamogga Ganapati Visarjan 2026: ನಗರದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 25ರಂದು ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಸಂಚಾರ ಬದಲಾವಣೆ ಜಾರಿಯಲ್ಲಿರಲಿದೆ. ವಾಹನ ಸವಾರರು ಸಂಚಾರ ನಿರ್ಬಂಧಗಳನ್ನ ಗಮನಿಸಿ ಪರ್ಯಾಯ ಮಾರ್ಗಗಳನ್ನ ಬಳಸುವಂತೆ ಸೂಚಿಸಲಾಗಿದೆ.
ಯಾವಾಗ, ಎಲ್ಲೆಲ್ಲಿ ಸಂಚಾರ ನಿರ್ಬಂಧ?
ಸೆಪ್ಟೆಂಬರ್ 25ರಂದು ನಡೆಯುವ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮೆರವಣಿಗೆ ಸಾಗುವ ರಸ್ತೆಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ. ಕೋಟೆ ರಸ್ತೆ ಮತ್ತು ಓಲ್ಡ್ ಬಾರ್ ಲೈನ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನ ನಿಷೇಧಿಸಲಾಗಿದೆ. ಮೆರವಣಿಗೆ ಸಾಗುವ ಮಾರ್ಗದ ಎರಡೂ ಬದಿಗಳಲ್ಲಿ 100 ಮೀಟರ್ ವ್ಯಾಪ್ತಿಯಲ್ಲಿಯೂ ವಾಹನ ಸಂಚಾರ ಮತ್ತು ಪಾರ್ಕಿಂಗ್‌ಗೆ ಅವಕಾಶ ಇರುವುದಿಲ್ಲ. ಪೊಲೀಸ್ ವಾಹನಗಳು, ಅಗ್ನಿಶಾಮಕ ದಳದ ವಾಹನಗಳು, ಆಂಬುಲೆನ್ಸ್ ಹಾಗೂ ಅಗತ್ಯ ಮೂಲಸೌಕರ್ಯ ಸೇವೆ ಒದಗಿಸುವ ವಾಹನಗಳಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಸಾರ್ವಜನಿಕರು ಸಂಚಾರ ಪೊಲೀಸರ ಸೂಚನೆಗಳನ್ನ ಪಾಲಿಸಬೇಕೆಂದು ಜಿಲ್ಲಾಡಳಿತ ತಿಳಿಸಿದೆ.
ಗಣಪತಿ ವಿಸರ್ಜನಾ ಮೆರವಣಿಗೆಯ ಮಾರ್ಗ ಯಾವುದು?
ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯು ಭೀಮೇಶ್ವರ ದೇವಸ್ಥಾನದಿಂದ ಆರಂಭವಾಗಲಿದೆ. ಅಲ್ಲಿಂದ ಎಸ್.ಪಿ.ಎಂ. ರಸ್ತೆ, ರಾಮಣ್ಣ ಶೆಟ್ಟಿ ಪಾರ್ಕ್, ಗಾಂಧಿ ಬಜಾರ್ ಮುಖ್ಯರಸ್ತೆ, ಎಸ್.ಎನ್.ಸರ್ಕಲ್, ಎ.ಎ.ಸರ್ಕಲ್ ಹಾಗೂ ನೆಹರೂ ರಸ್ತೆ ಮೂಲಕ ಸಾಗಲಿದೆ. ಮುಂದೆ ಗೋಪಿ ಸರ್ಕಲ್, ದುರ್ಗಿಗುಡಿ, ಜೈಲ್ ಸರ್ಕಲ್, ಶಿವಮೂರ್ತಿ ಸರ್ಕಲ್, ಮಹಾವೀರ ಸರ್ಕಲ್, ಡಿ.ವಿ.ಎಸ್.ಸರ್ಕಲ್ ಮತ್ತು ಕಾನ್ವೆಂಟ್ ರಸ್ತೆ ಮೂಲಕ ಮೆರವಣಿಗೆ ಸಾಗಲಿದೆ. ನಂತರ ಕೋಟೆ ರಸ್ತೆ ಮೂಲಕ ಭೀಮೇಶ್ವರ ದೇವಸ್ಥಾನದ ಸಮೀಪದ ತುಂಗಾ ನದಿಯಲ್ಲಿ ಗಣಪತಿ ಮೂರ್ತಿ ವಿಸರ್ಜನೆ ನಡೆಯಲಿದೆ. ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳಲ್ಲಿನ ವಾಹನ ಸಂಚಾರವನ್ನ ನಿಯಂತ್ರಿಸಲಾಗುತ್ತದೆ. ಹೀಗಾಗಿ ಈ ಮಾರ್ಗಗಳಲ್ಲಿ ಸಂಚರಿಸುವವರು ಮುಂಚಿತವಾಗಿ ಪರ್ಯಾಯ ಮಾರ್ಗಗಳನ್ನ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
ಬೆಂಗಳೂರು, ಭದ್ರಾವತಿ ಕಡೆಯಿಂದ ಬರುವವರಿಗೆ ಮಾರ್ಗ
ಬೆಂಗಳೂರು, ಭದ್ರಾವತಿ ಮತ್ತು ಎನ್.ಆರ್.ಪುರ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಭಾರೀ ವಾಹನಗಳು, ಬಸ್‌ಗಳು, ಸಿಟಿ ಬಸ್‌ಗಳು ಹಾಗೂ ಕಾರುಗಳು ಎಂ.ಆರ್.ಎಸ್.ಸರ್ಕಲ್‌ನಿಂದ ಬೈಪಾಸ್ ರಸ್ತೆ ಮೂಲಕ ಸಂಚರಿಸಬೇಕು. ಚಿತ್ರದುರ್ಗ ಮತ್ತು ಹೊಳೆಹೊನ್ನೂರು ಕಡೆಯಿಂದ ಬರುವ ಹಾಗೂ ಈ ಪ್ರದೇಶಗಳಿಗೆ ತೆರಳುವ ಭಾರೀ ವಾಹನಗಳು ಮತ್ತು ಬಸ್‌ಗಳು ಕೂಡ ಎಂ.ಆರ್.ಎಸ್.ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆಯನ್ನ ಬಳಸಬೇಕು. ಹೊನ್ನಾಳಿ, ಹರಿಹರ ಹಾಗೂ ದಾವಣಗೆರೆ ಕಡೆಯಿಂದ ಬರುವ ಮತ್ತು ಹೊರಹೋಗುವ ಭಾರೀ ವಾಹನಗಳು ಹಾಗೂ ಬಸ್‌ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಶಂಕರಮಠ ಸರ್ಕಲ್, ಹೊಳೆಹೊನ್ನೂರು ಸರ್ಕಲ್, ವಿದ್ಯಾನಗರ ಮತ್ತು ಎಂ.ಆರ್.ಎಸ್.ಸರ್ಕಲ್ ಮೂಲಕ ಬೈಪಾಸ್ ರಸ್ತೆಯನ್ನ ತಲುಪಬೇಕು.
ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳಿಗೆ ಪರ್ಯಾಯ ಮಾರ್ಗ
ಹೊನ್ನಾಳಿ, ಶಿಕಾರಿಪುರ, ಸೊರಬ, ಹರಿಹರ ಮತ್ತು ದಾವಣಗೆರೆ ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳಿಗೆ ಪ್ರತ್ಯೇಕ ಮಾರ್ಗ ಸೂಚಿಸಲಾಗಿದೆ. ಈ ಬಸ್‌ಗಳು ಸಾಗರ ರಸ್ತೆ, ಹೆಲಿಪ್ಯಾಡ್ ಸರ್ಕಲ್, ಅಶೋಕ ಸರ್ಕಲ್, ಪೊಲೀಸ್ ಚೌಕಿ, ರಾಜ್‌ಕುಮಾರ್ ಸರ್ಕಲ್, ಬೊಮ್ಮನಕಟ್ಟೆ ಮತ್ತು ಸವಳಂಗ ರಸ್ತೆ ಮಾರ್ಗವಾಗಿ ಸಂಚರಿಸಬೇಕು. ಬೆಂಗಳೂರು ಮತ್ತು ಭದ್ರಾವತಿ ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಬೈಪಾಸ್ ರಸ್ತೆ ಮತ್ತು ಎಂ.ಆರ್.ಎಸ್.ಸರ್ಕಲ್ ಮೂಲಕ ಸಂಚರಿಸಬೇಕು. ಶಿಕಾರಿಪುರ, ಸೊರಬ ಮತ್ತು ಆನವಟ್ಟಿ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಹಾಗೂ ಹೊರಹೋಗುವ ಬಸ್‌ಗಳು ಮತ್ತು ಭಾರೀ ವಾಹನಗಳು ಉಷಾ ನರ್ಸಿಂಗ್ ಹೋಂ ಸರ್ಕಲ್, ಲಕ್ಷ್ಮೀ ಟಾಕೀಸ್ ಸರ್ಕಲ್, ಪೊಲೀಸ್ ಚೌಕಿ ಹಾಗೂ ಅಶೋಕ ಸರ್ಕಲ್ ಮೂಲಕ ಸಾಗರ ರಸ್ತೆಯನ್ನ ತಲುಪಬೇಕು.
ವಾಹನ ಸವಾರರಿಗೆ ಜಿಲ್ಲಾಡಳಿತದ ಸೂಚನೆ
ಗಣಪತಿ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಸಾರ್ವಜನಿಕರು ಅನಗತ್ಯವಾಗಿ ಮೆರವಣಿಗೆ ಸಾಗುವ ರಸ್ತೆಗಳತ್ತ ವಾಹನಗಳನ್ನು ತೆಗೆದುಕೊಂಡು ಹೋಗದಂತೆ ಸೂಚಿಸಲಾಗಿದೆ. ವಿಶೇಷವಾಗಿ ಸೆಪ್ಟೆಂಬರ್ 25ರಂದು ನಗರಕ್ಕೆ ಬರುವವರು ಪ್ರಯಾಣ ಆರಂಭಿಸುವ ಮುನ್ನ ತಮ್ಮ ಮಾರ್ಗವನ್ನ ಯೋಜಿಸಿಕೊಳ್ಳಬೇಕು. ಬಸ್ ಪ್ರಯಾಣಿಕರು ಕೂಡ ಬಸ್ ನಿಲ್ದಾಣಗಳು ಮತ್ತು ಬಸ್ ಸಂಚಾರ ಮಾರ್ಗಗಳಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು.
ಒಟ್ನಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಶುಕ್ರವಾರ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಸಂಚಾರ ಬದಲಾವಣೆ ಜಾರಿಯಲ್ಲಿರಲಿದೆ. ಸಾರ್ವಜನಿಕರು ಜಿಲ್ಲಾಡಳಿತ ಮತ್ತು ಸಂಚಾರ ಪೊಲೀಸರ ಸೂಚನೆಗಳನ್ನ ಪಾಲಿಸಿ, ನಿಗದಿಪಡಿಸಿದ ಪರ್ಯಾಯ ಮಾರ್ಗಗಳನ್ನ ಬಳಸುವಂತೆ ಮನವಿ ಮಾಡಲಾಗಿದೆ.