SOCIAL MEDIA

Newsletter

PARTNER SITES
Select Language Select State

ಶಿವಮೊಗ್ಗ ದಸರಾ ಆನೆ ಬೆದರಿ ಓಡಿದ ಘಟನೆ ಬೆನ್ನಲ್ಲೇ ಹೊಸ ರೂಲ್ಸ್‌! ಮುಂದಿನ ವರ್ಷದಿಂದ ಜಂಬೂಸವಾರಿಗೆ ಕಟ್ಟುನಿಟ್ಟಿನ ನಿಯಮ

ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ನಡೆದ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ಮುಂದಿನ ವರ್ಷದಿಂದ ಜಂಬೂಸವಾರಿ ನಡೆಸಲು ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಅಷ್ಟಕ್ಕೂ ಏನದು ಹೊಸ ರೂಲ್ಸ್‌? ಇಲ್ಲಿದೆ ಸಂಪೂರ್ಣ ಮಾಹಿತಿ.

Written By Ramya. R. Gowda
Published: Oct 22, 2026, 07:25 AM IST | Updated: Oct 22, 2026, 07:39 AM IST
Join

ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ಬೆದರಿ ಓಡಿದ ಘಟನೆ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಆನೆ ಬೆದರಿ ಓಡಿದ ಪರಿಣಾಮ ಕಾರು, ಬೈಕ್‌ಗಳಿಗೆ ಹಾನಿಯಾಗಿದ್ದು, ಬೆಳ್ಳಿಯ ಅಂಬಾರಿಗೂ ಹಾನಿಯಾಗಿದೆ. ಈ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ಮುಂದಿನ ವರ್ಷದಿಂದ ಜಂಬೂಸವಾರಿ ನಡೆಸಲು ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಅಷ್ಟಕ್ಕೂ ಏನದು ಹೊಸ ರೂಲ್ಸ್‌? ಇಲ್ಲಿದೆ ಸಂಪೂರ್ಣ ಮಾಹಿತಿ.


ಶಿವಮೊಗ್ಗ ದಸರಾ ಸಂಭ್ರಮದ ನಡುವೆ ಆನೆ ಮಾಡಿದ ಅವಾಂತರ ಈಗ ಅಧಿಕಾರಿಗಳನ್ನು ಎಚ್ಚರಿಸಿದೆ. ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ಬೆದರಿ ಓಡಿದ ಪರಿಣಾಮ ವಾಹನಗಳಿಗೆ ಹಾನಿಯಾಗಿದೆ. ಅಷ್ಟೇ ಅಲ್ಲ, ಬೆಳ್ಳಿಯ ಅಂಬಾರಿಗೂ ಹಾನಿಯಾಗಿದ್ದು, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ಅರಣ್ಯ ಇಲಾಖೆ ಮುಂದಾಗಿದೆ.ಈ ಘಟನೆ ಕುರಿತು ಸಚಿವ ರಾಮಲಿಂಗಾ ರೆಡ್ಡಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಸಂಭವಿಸದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಮುಂದಿನ ವರ್ಷದಿಂದ ದಸರಾ ಜಂಬೂಸವಾರಿ ಆರಂಭಿಸುವ ಮೊದಲು ಆನೆಗಳಿಗೆ ವಿಶೇಷ ತಾಲೀಮು ನೀಡುವುದು ಕಡ್ಡಾಯವಾಗಲಿದೆ. ಕನಿಷ್ಠ 20 ದಿನಗಳಿಂದ ಒಂದು ತಿಂಗಳವರೆಗೆ ನುರಿತ ಮಾವುತರು ಹಾಗೂ ಕಾವಾಡಿಗರ ನೇತೃತ್ವದಲ್ಲಿ ಆನೆಗಳಿಗೆ ತಾಲೀಮು ನಡೆಸುವ ವ್ಯವಸ್ಥೆ ಕಲ್ಪಿಸುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಬೂಸವಾರಿಯಂತಹ ದೊಡ್ಡ ಉತ್ಸವಗಳಲ್ಲಿ ಆನೆಗಳ ವರ್ತನೆ, ಜನಸಂದಣಿಯ ವಾತಾವರಣ ಹಾಗೂ ಸುರಕ್ಷತೆಯ ವಿಚಾರದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯವಾಗಿದೆ. ಹೀಗಾಗಿ, ಆನೆಗಳ ಸಿದ್ಧತೆ ಮತ್ತು ಸುರಕ್ಷತಾ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲು ಇಲಾಖೆ ಮುಂದಾಗಿದೆ. ಈ ಹೊಸ ನಿಯಮಗಳಿಂದ ಮುಂದಿನ ದಸರಾ ಜಂಬೂಸವಾರಿ ವೇಳೆ ಇಂತಹ ಅವಘಡಗಳನ್ನು ತಡೆಯಲು ಸಾಧ್ಯವಾಗಬಹುದು ಎಂಬ ನಿರೀಕ್ಷೆಯಿದೆ.

ಅಷ್ಟಕ್ಕೂ ಜಂಜೂಸವಾರಿ ವೇಳೆ ನಡಿದ್ಹೇನು? 

ಶಿವಮೊಗ್ಗದ ಐತಿಹಾಸಿಕ ಕೋಟೆ ಶಿವಪ್ಪನಾಯಕ ಅರಮನೆ ಮುಂಭಾಗದಿಂದ ಆರಂಭವಾಗಿದ್ದ ಜಂಬೂಸವಾರಿ ಮೆರವಣಿಗೆ, ಅಲ್ಲಮಪ್ರಭು ಮೈದಾನದತ್ತ ಸಾಗುತ್ತಿತ್ತು. ಈ ಅದ್ಧೂರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಸೇರಿದ್ದರು. ಆದ್ರೆ, ಮೆರವಣಿಗೆ ಸಾಗುತ್ತಿದ್ದ ವೇಳೆ ಬೆಳ್ಳಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಯಾವುದೋ ಸದ್ದು ಅಥವಾ ಜನಸ್ತೋಮದಿಂದ ವಿಚಲಿತಗೊಂಡು ಏಕಾಏಕಿ ಓಡಲು ಶುರು ಮಾಡಿದೆ ಎನ್ನಲಾಗಿದೆ.


ಇನ್ನು ಆನೆ ಓಡುತ್ತಿದ್ದಂತೆ ರಸ್ತೆ ಬದಿ ನಿಂತಿದ್ದ ಜನರು ಪ್ರಾಣಭಯದಿಂದ ಓಡಿಹೋಗಿದ್ದಾರೆ. ಆನೆಯ ಓಟದ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ಕಾರೊಂದು ಹಾಗೂ ಎರಡು-ಮೂರು ಬೈಕ್‌ಗಳು ಜಖಂಗೊಂಡಿವೆ. ಅಷ್ಟೇ ಅಲ್ಲ, ಚಾಮುಂಡೇಶ್ವರಿ ದೇವಿಯ ಬೆಳ್ಳಿ ಅಂಬಾರಿ ಕೂಡ ಕೆಳಗೆ ಬಿದ್ದು ಹಾನಿಗೀಡಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಂದಹಾಗೆ, ಈ ಬಾರಿಯ ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಸಾಗರ ಆನೆಯ ಬದಲಿಗೆ ಸೋಮಣ್ಣ ಆನೆಗೆ ವಹಿಸಲಾಗಿತ್ತು. ಮೊದಲ ಬಾರಿಗೆ ಬೆಳ್ಳಿ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದ ಸೋಮಣ್ಣ ಆನೆಗೆ ಇದು ಹೊಸ ಅನುಭವವಾಗಿತ್ತು. ಆದ್ರೆ, ಮೆರವಣಿಗೆಯ ಕೊನೆಯ ಹಂತದಲ್ಲಿ ನಡೆದ ಈ ಅನಿರೀಕ್ಷಿತ ಘಟನೆಯಿಂದ ದಸರಾ ಸಂಭ್ರಮಕ್ಕೆ ಆತಂಕ ಎದುರಾಗಿದೆ. ಒಟ್ಟಿನಲ್ಲಿ, ಅದ್ಧೂರಿಯಾಗಿ ನಡೆಯುತ್ತಿದ್ದ ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಆನೆ ಬೆದರಿ ಓಡಿದ ಘಟನೆ ಭಾರೀ ಆತಂಕ ಮೂಡಿಸಿದೆ. ಪ್ರಾಣಹಾನಿ ಸಂಭವಿಸದಿರುವುದು ಸಮಾಧಾನದ ಸಂಗತಿಯಾಗಿದೆ.

ಇನ್ನು ಬೆದರಿ ಓಡುತ್ತಿದ್ದ ಸೋಮಣ್ಣ ಆನೆಯನ್ನು ನಿಯಂತ್ರಿಸಲು ಮಾವುತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಅರಿವಳಿಕೆ ಮದ್ದು ನೀಡಲಾಗಿದ್ದು, ಬಳಿಕ ಆನೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ.

ಸದ್ಯ ಶಿವಮೊಗ್ಗ ದಸರಾ ಆನೆ ಅವಘಡದ ಬೆನ್ನಲ್ಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಮುಂದಿನ ವರ್ಷದಿಂದ ಜಂಬೂಸವಾರಿಗೂ ಮುನ್ನ ಕನಿಷ್ಠ 20 ದಿನಗಳಿಂದ ಒಂದು ತಿಂಗಳವರೆಗೆ ಆನೆಗಳಿಗೆ ಕಡ್ಡಾಯ ತಾಲೀಮು ನೀಡುವಂತೆ ಸೂಚಿಸಲಾಗಿದೆ. ಮುಂಬರುವ ದಸರಾ ಉತ್ಸವದಲ್ಲಿ ಆನೆಗಳ ಸುರಕ್ಷತೆ ಹಾಗೂ ಸಾರ್ವಜನಿಕರ ರಕ್ಷಣೆಗೆ ಇಲಾಖೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES