ಶಿವಮೊಗ್ಗ: ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಸಂಸದ ಬಿ.ವೈ. ರಾಘವೇಂದ್ರ ಅವರು ಏಕವಚನದಲ್ಲಿ ಮಾತನಾಡಿರುವ ವಿಚಾರ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ರಾಘವೇಂದ್ರ ಅವರ ಹೇಳಿಕೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಶಿಕಾರಿಪುರದಲ್ಲೇ ರಾಘವೇಂದ್ರ ಅವರಿಗೆ ಸವಾಲು ಹಾಕಿದ್ದಾರೆ.
ಮಧು ಬಂಗಾರಪ್ಪ ವಿರುದ್ಧ ರಾಘವೇಂದ್ರ ಅವರು ವೀರಾವೇಶದಲ್ಲಿ ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಟೀಕಿಸಿದರು. “ವೀರ ಕಂಠೀರವ ಶಿಕಾರಿಪುರದ ಶೂರರ ರೀತಿಯಲ್ಲಿ ಮಾತನಾಡಿದ್ದಾರೆ. ನಿಮ್ಮ ಪಕ್ಷದಲ್ಲಿ ಎಲ್ಲವನ್ನೂ ನೋಡಿ ಬಂದಿದ್ದೇನೆ. ನಿನ್ನನ್ನೂ, ನಿಮ್ಮ ತಮ್ಮನನ್ನೂ ನೋಡಿ ಬಂದಿದ್ದೇನೆ” ಎಂದು ಅವರು ತಿರುಗೇಟು ನೀಡಿದರು.
ರಾಘವೇಂದ್ರ ಅವರು ತಮ್ಮನ್ನು ಏಕವಚನದಲ್ಲಿ ಉದ್ದೇಶಿಸಿ ಮಾತನಾಡಿದರೆ ತಾವೂ ಅದೇ ರೀತಿಯಲ್ಲಿ ಪ್ರತಿಕ್ರಿಯಿಸಬೇಕಾಗುತ್ತದೆ ಎಂಬ ರೀತಿಯಲ್ಲಿ ಬೇಳೂರು ಗೋಪಾಲಕೃಷ್ಣ ಎಚ್ಚರಿಕೆ ನೀಡಿದರು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ಸ್ಪಷ್ಟಪಡಿಸಿದರು. ಯಡಿಯೂರಪ್ಪ ಅವರ ಬಗ್ಗೆ ನನಗೆ ಗೌರವವಿದೆ. ಅವರಿಗೆ ನಾನು ಗೌರವ ಕೊಡುತ್ತೇನೆ. ಆದರೆ ಪಕ್ಷದ ವಿಚಾರ ಬಂದಾಗ ಅವರ ರಾಜಕೀಯದ ಬಗ್ಗೆ ಮಾತನಾಡುತ್ತೇನೆ. ಎಲ್ಲೂ ಕೂಡ ಏಕವಚನದಲ್ಲಿ ಮಾತನಾಡುವುದಿಲ್ಲ ಎಂದು ಬೇಳೂರು ಹೇಳಿದರು.
ಬಿ.ವೈ. ರಾಘವೇಂದ್ರ ಅವರು ತಮ್ಮ ವಿರುದ್ಧ ಅಥವಾ ಕಾಂಗ್ರೆಸ್ ನಾಯಕರ ವಿರುದ್ಧ ಸವಾಲಿನ ಮಾತುಗಳನ್ನು ಆಡುವ ಮೊದಲು ಶಿಕಾರಿಪುರದಲ್ಲಿ ಮುಂದಿನ ಬಾರಿ ಗೆದ್ದು ತೋರಿಸಲಿ ಎಂದು ಬೇಳೂರು ಗೋಪಾಲಕೃಷ್ಣ ಸವಾಲು ಹಾಕಿದರು. ಈ ಮೂಲಕ ಶಿಕಾರಿಪುರ ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸೂಚನೆ ನೀಡಿದ್ದಾರೆ.
ಕುಮಾರ್ ಬಂಗಾರಪ್ಪ ಅವರಿಗೆ ಶಿಕಾರಿಪುರದಲ್ಲಿ ಟಿಕೆಟ್ ನೀಡಿದ್ದರೆ ವಿಜಯೇಂದ್ರ ರಾಜಕೀಯವಾಗಿ ಹಿಂದೆ ಸರಿಯಬೇಕಾಗುತ್ತಿತ್ತು ಎಂಬ ಅಭಿಪ್ರಾಯವನ್ನೂ ಬೇಳೂರು ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷ ಯಾರೊಬ್ಬರ ವೈಯಕ್ತಿಕ ಸ್ವತ್ತಲ್ಲ. ಪಕ್ಷಕ್ಕೆ ಬರುವ ಎಲ್ಲರನ್ನೂ ಸ್ವಾಗತಿಸಲಾಗುವುದು ಎಂದು ಹೇಳಿದರು.
ಬಿಜೆಪಿ ವತಿಯಿಂದ ನಡೆಯಲಿರುವ ‘ಬಳ್ಳಾರಿ ಚಲೋ’ಗೆ ಪ್ರತಿಯಾಗಿ ಶಿಕಾರಿಪುರದಲ್ಲೇ ಕಾಂಗ್ರೆಸ್ ವತಿಯಿಂದ ಬೃಹತ್ ಹೋರಾಟ ನಡೆಸುವ ಬಗ್ಗೆ ಬೇಳೂರು ಮಾತನಾಡಿದರು. ಶಿಕಾರಿಪುರದಿಂದ ಭಾರತ್ ಜೋಡೋ ಮಾದರಿಯ ಬೃಹತ್ ಪಾದಯಾತ್ರೆ ಹಾಗೂ ಹೋರಾಟ ಆರಂಭಿಸುವ ಕುರಿತು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಇನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗುವ ನಿರೀಕ್ಷೆಯಲ್ಲಿದ್ದ ಹೆಚ್.ಎಸ್. ಸುಂದರೇಶ್ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆಯೂ ಬೇಳೂರು ಪ್ರತಿಕ್ರಿಯಿಸಿದರು. ಅಧಿಕಾರ ಇಲ್ಲದಿರುವುದರಿಂದ ಈ ರೀತಿಯ ಹೇಳಿಕೆ ನೀಡಿರಬಹುದು ಎಂದು ಅವರು ಹೇಳಿದರು.
ಯಾರೂ ನೇರವಾಗಿ ಪಕ್ಷದ ವಿರುದ್ಧ ಮಾತನಾಡಬಾರದು. ಸುಂದರೇಶ್ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ಸಿಗದಿರುವ ಬೇಸರದಿಂದ ಈ ರೀತಿಯ ಹೇಳಿಕೆ ಬಂದಿರಬಹುದು ಎಂದು ಬೇಳೂರು ಅಭಿಪ್ರಾಯಪಟ್ಟರು. ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣದಿಂದಲೂ ಅವರು ಈ ರೀತಿ ಮಾತನಾಡಿರಬಹುದು ಎಂದು ಹೇಳಿದರು.
ಬಿ.ವೈ. ರಾಘವೇಂದ್ರ ಅವರ ಹೇಳಿಕೆಗೆ ಬೇಳೂರು ಗೋಪಾಲಕೃಷ್ಣ ನೀಡಿರುವ ತಿರುಗೇಟು ಶಿವಮೊಗ್ಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಮಧು ಬಂಗಾರಪ್ಪ ಹಾಗೂ ಬೇಳೂರು ನಡುವೆ ಹಿಂದೆಯೂ ರಾಜಕೀಯ ಭಿನ್ನಾಭಿಪ್ರಾಯಗಳು ಬಹಿರಂಗವಾಗಿ ವ್ಯಕ್ತವಾಗಿದ್ದವು.