SOCIAL MEDIA

Newsletter

PARTNER SITES
Select Language Select State

ಅಕ್ಟೋಬರ್ 29ರಿಂದ ಹಾಸನಾಂಬ ಜಾತ್ರ ಮಹೋತ್ಸವ ಆರಂಭ.. ಈ ಬಾರಿಯ ವಿಶೇಷತೆಗಳೇನು ಗೊತ್ತಾ?

Hasanamba temple opening: ಈ ಹಾಸನಾಂಬೆಯ ಇತಿಹಾಸವೇನು? ಉತ್ಸವದ ವಿಶೇಷತೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Written By Ramya. R. Gowda
Published: Sep 26, 2026, 03:01 PM IST | Updated: Sep 26, 2026, 03:03 PM IST
Join

ವರ್ಷವಿಡೀ ಮುಚ್ಚಿರುವ ದೇವಸ್ಥಾನದ ಬಾಗಿಲು ತೆರೆಯೋದು ಕೆಲವೇ ದಿನಗಳು ಮಾತ್ರ.. ಆ ಕೆಲ ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯಲು ಕಾತರರಾಗಿರ್ತಾರೆ..ಇದು ಹಾಸನದ ಅಧಿದೇವತೆ ಹಾಸನಾಂಬೆಯ ಮಹೋತ್ಸವ. ಹಾಸನಾಂಬೆಯ ದರ್ಶನ ಪಡೆದ್ರೆ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಹಾಗಾದ್ರೆ ಈ ಹಾಸನಾಂಬೆಯ ಇತಿಹಾಸವೇನು? ಉತ್ಸವದ ವಿಶೇಷತೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ.ಈ ಬಾರಿ ಯಾವಾಗ ಹಾಸನಾಂಬೆಯ ಗರ್ಭಗುಡಿ ಬಾಗಿಲು ತೆರೆಯಲಿದೆ? ಯಾವ ದಿನದಿಂದ ಭಕ್ತರಿಗೆ ದರ್ಶನ ಸಿಗಲಿದೆ? ಜಾತ್ರೆಯಲ್ಲಿ ಭಕ್ತರಿಗಾಗಿ ಏನೆಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ?


ಹಾಸನಾಂಬೆಯ ದರ್ಶನಕ್ಕೆ ಭಕ್ತರಲ್ಲಿ ಕಾತುರ
ವರ್ಷಕ್ಕೊಮ್ಮೆ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುವ ಹಾಸನಾಂಬ ದೇವಿಯ ಮಹಾ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಅಧಿಕೃತ ದಿನಾಂಕ ಪ್ರಕಟಿಸಿದೆಈ ಬಾರಿ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ. ಅಕ್ಟೋಬರ್ 29ರಂದು ಮಧ್ಯಾಹ್ನ 12 ಗಂಟೆಗೆ ಹಾಸನಾಂಬ ದೇವಿಯ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ತೆರೆಯಲಾಗುತ್ತದೆ. ಆದರೆ ಮೊದಲ ದಿನವೇ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ.ಅಕ್ಟೋಬರ್ 29ರಂದು ದೇವಿಗೆ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಅಕ್ಟೋಬರ್ 30ರಿಂದ ಸಾರ್ವಜನಿಕ ಭಕ್ತರಿಗೆ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಹಾಸನಾಂಬೆ ಗುಡಿ ಓಪನ್‌ಗೆ ಮೂಹೂರ್ತ ಫಿಕ್ಸ್‌

ಅಕ್ಟೋಬರ್ 29 — ಗರ್ಭಗುಡಿ ಬಾಗಿಲು ತೆರೆಯುವಿಕೆ
ಮಧ್ಯಾಹ್ನ 12 ಗಂಟೆ — ಮುಹೂರ್ತ
ಅಕ್ಟೋಬರ್ 30ರಿಂದ — ಸಾರ್ವಜನಿಕ ದರ್ಶನ
ನವೆಂಬರ್ 11 — ಜಾತ್ರಾ ಮಹೋತ್ಸವ ಮುಕ್ತಾಯ


ಈ ಬಾರಿ ಹಾಸನ ಜಿಲ್ಲೆಯ ಏಳು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆದರೂ ಜನರ ನಂಬಿಕೆ, ಭಕ್ತಿ ಮತ್ತು ಶತಮಾನಗಳ ಸಂಪ್ರದಾಯಕ್ಕೆ ಯಾವುದೇ ಧಕ್ಕೆಯಾಗದಂತೆ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಲಕ್ಷಾಂತರ ಭಕ್ತರು ಹಾಸನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಸುಗಮ ಸಂಚಾರ, ಮೂಲಸೌಕರ್ಯ, ಭದ್ರತೆ ಸೇರಿದಂತೆ ಹಲವು ವ್ಯವಸ್ಥೆಗಳಿಗೆ ಈಗಾಗಲೇ ಸಮಿತಿಗಳನ್ನು ರಚಿಸಲಾಗಿದೆ.


ಇನ್ನು ಹಾಸನಾಂಬೆಯ ದರ್ಶನದ ಜೊತೆಗೆ ಭಕ್ತರಿಗೆ ಮನರಂಜನೆ ಹಾಗೂ ಸ್ಥಳೀಯ ಕಲೆಗೆ ಉತ್ತೇಜನ ನೀಡಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆಹಾರ ಮೇಳ, ಚಿತ್ರಸಂತೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಹಿತ್ಯ ವೈಭವ ಭಕ್ತರ ಗಮನ ಸೆಳೆಯಲಿವೆ. ಇನ್ನು ಜಾತ್ರಾ ಮಹೋತ್ಸವದ ವ್ಯವಸ್ಥೆಗಳ ಕುರಿತು ಸೆಪ್ಟೆಂಬರ್ 26ರಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಅಧಿಕೃತ ಪೋಸ್ಟರ್ ಹಾಗೂ ವಿಶೇಷ ವೆಬ್‌ಸೈಟ್‌ನ್ನು ಲೋಕಾರ್ಪಣೆ ಮಾಡಲಿದ್ದಾರೆ.

ವರ್ಷಕ್ಕೊಮ್ಮೆ ಮಾತ್ರ ಕಣ್ಣುಂಬಿಕೊಳ್ಳಬಹುದಾದ ಹಾಸನಾಂಬೆಯ ದರ್ಶನಕ್ಕಾಗಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಅಕ್ಟೋಬರ್ 30ರಿಂದ ಭಕ್ತರಿಗೆ ದರ್ಶನ ಆರಂಭವಾಗಲಿದ್ದು, ಈ ಬಾರಿ ಜಾತ್ರಾ ಮಹೋತ್ಸವವನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಹಾಸನಾಂಬೆಯ ಮಹಿಮೆ
ಹಾಸನ ನಗರದ ಹೃದಯಭಾಗದಲ್ಲಿರೋ ಹಾಸನಾಂಬ ದೇವಸ್ಥಾನಕ್ಕೆ ತನ್ನದೇ ಆದ ಐತಿಹ್ಯವಿದೆ. ವರ್ಷಕ್ಕೆ ಒಮ್ಮೆ ಮಾತ್ರ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ದೇವಿಯ ದರ್ಶನಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲ, ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ.

ವರ್ಷಕ್ಕೊಮ್ಮೆ ದರ್ಶನ
ಹಾಸನಾಂಬ ದೇವಸ್ಥಾನದ ಬಾಗಿಲು ತೆರೆಯುವ ದಿನದಿಂದ ಮತ್ತೆ ಬಾಗಿಲು ಮುಚ್ಚುವವರೆಗಿನ ಅವಧಿ ಭಕ್ತರಿಗೆ ಅತ್ಯಂತ ವಿಶೇಷ. ದೇವಿಯ ದರ್ಶನ ಪಡೆದರೆ ಒಳಿತಾಗುತ್ತದೆ, ಕುಟುಂಬದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಪವಾಡದ ಹೂವಿನ ನಂಬಿಕೆ
ಹಾಸನಾಂಬೆಯ ಗರ್ಭಗುಡಿಯಲ್ಲಿ ಹಚ್ಚುವ ದೀಪ ಹಾಗೂ ದೇವಿಗೆ ಅರ್ಪಿಸುವ ಹೂವಿನ ಕುರಿತೂ ಭಕ್ತರಲ್ಲಿ ವಿಶೇಷ ನಂಬಿಕೆಯಿದೆ. ದೇವಸ್ಥಾನದ ಬಾಗಿಲು ಮುಚ್ಚುವಾಗ ದೇವಿಗೆ ಹಚ್ಚಿದ ದೀಪ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಬೆಳಗಿರುತ್ತದೆ ಎಂಬುದು ಸ್ಥಳೀಯ ಐತಿಹ್ಯ. ಹೂವು ಕೂಡ ಒಣಗದೆ ತಾಜಾ ಸ್ಥಿತಿಯಲ್ಲಿರುತ್ತದೆ ಎಂಬ ನಂಬಿಕೆ ಇದೆ.

ಉತ್ಸವದ ವೈಭವ
ಹಾಸನಾಂಬ ಉತ್ಸವದ ಸಂದರ್ಭದಲ್ಲಿ ದೇವಸ್ಥಾನ ಹಾಗೂ ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತದಿಂದಲೂ ವಿವಿಧ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.

ಭಕ್ತರ ದಂಡು
ಹಾಸನಾಂಬೆಯ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೂರದ ಊರುಗಳಿಂದ ಬರುವ ಭಕ್ತರಿಗಾಗಿ ಸರತಿ ಸಾಲು, ಕುಡಿಯುವ ನೀರು, ಭದ್ರತೆ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತದೆ.


ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ.. ಭಕ್ತರ ಪಾಲಿಗೆ ನಂಬಿಕೆಯ ಶಕ್ತಿಸ್ವರೂಪಿಣಿ. ಹಾಸನಾಂಬೆಯ ದರ್ಶನಕ್ಕಾಗಿ ಕಾತರರಾಗಿರೋ ಭಕ್ತರಿಗೆ ಉತ್ಸವದ ದಿನಗಳು ನಿಜಕ್ಕೂ ಸಂಭ್ರಮದ ಕ್ಷಣಗಳು. ಭಕ್ತಿ, ನಂಬಿಕೆ ಮತ್ತು ಐತಿಹ್ಯದ ಸಂಗಮವಾಗಿರುವ ಹಾಸನಾಂಬ ಉತ್ಸವ ಮತ್ತೊಮ್ಮೆ ಹಾಸನ ನಗರವನ್ನು ಭಕ್ತಿಸಾಗರವಾಗಿಸಲಿದೆ.

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES