SOCIAL MEDIA

Newsletter

PARTNER SITES
Select Language Select State

ಬಂಗಾರಪ್ಪನವರಿಗೆ ಅತಿ ಹೆಚ್ಚು ನೋವು ನೀಡಿದ್ದೇ ಸ್ವತಃ ಮಧು ಬಂಗಾರಪ್ಪ : ಹರತಾಳು ಹಾಲಪ್ಪ

ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇಬ್ಬರು ನಾಯಕರ ನಡುವಿನ ರಾಜಕೀಯ ಮಾತಿನ ಸಮರ ತಾರಕಕ್ಕೇರಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Nov 18, 2026, 16:44 IST | Updated: Nov 18, 2026, 16:46 IST
Image Credit: Hartalu Halappa
Join

ಶಿವಮೊಗ್ಗ : ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮಧು ಬಂಗಾರಪ್ಪ ಅವರ ಹೇಳಿಕೆಗಳಿಗೆ ಆಕ್ರೋಶ ವ್ಯಕ್ತಪಡಿಸಿದ ಹಾಲಪ್ಪ, ಅವರದ್ದು ಅವಿವೇಕದ ಮಾತುಗಳೆಂದು ಟೀಕಿಸಿದರು.

ಹೌದು.. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಕುಟುಂಬದ ಜತೆಗಿನ ತಮ್ಮ ಒಡನಾಟದ ಬಗ್ಗೆ ಮಾತನಾಡಿರುವ ಹರತಾಳು ಹಾಲಪ್ಪ, ತಾವು ಎಂದಿಗೂ ಬಂಗಾರಪ್ಪರ ಮನೆಯಲ್ಲಿ ಕೆಲಸದಾಳಾಗಿ ಅಥವಾ ಸಂಬಳಕ್ಕೆ ಕೆಲಸ ಮಾಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "1987ರಲ್ಲಿ ಅವರ ಬಳಿ ಮಾರುತಿ ಕಾರಿತ್ತು, ನನ್ನ ಬಳಿಯೂ ವೈಟ್ ಮಾರುತಿ ಕಾರಿತ್ತು. ಮಧು ಬಂಗಾರಪ್ಪಗೆ ಈ ವಿಷಯಗಳು ಗೊತ್ತಿರಲಿಲ್ಲ, ಯಾಕೆಂದರೆ ಆ ಸಮಯದಲ್ಲಿ ಅವರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಅವರಿಗೆ ಮನೆಯಲ್ಲಿ ಕೆಲಸಗಾರರು ಯಾರು, ಅಡುಗೆಯವರು ಯಾರು ಎನ್ನುವುದೇ ತಿಳಿದಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ. ಮಧು ಬಂಗಾರಪ್ಪ ಅವರು ಕೇವಲ ಅಪ್ಪನ ಹೆಸರಿನಲ್ಲಿ ಮಾತ್ರ ಮಂತ್ರಿಯಾಗಿದ್ದಾರೆ ಎಂದು ಹಾಲಪ್ಪ ಕಿಡಿಕಾರಿದ್ದಾರೆ.

ಸಚಿವ ಮಧು ಬಂಗಾರಪ್ಪ ಅವರ ಭಾಷೆ ಹಾಗೂ ಸಂಸ್ಕಾರದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ಹಾಲಪ್ಪ, "ಯಡಿಯೂರಪ್ಪ ಅವರ ಮಕ್ಕಳ ಬಗ್ಗೆ ಅವರು ಲಘುವಾಗಿ ಮಾತನಾಡಿದ್ದಾರೆ. ಬೊಗಳೋದು ನಾಯಿ, ಒದರೋದು ಕತ್ತೆ ಎಂದು ಯಾರಿಗೆ ಅನ್ವಯಿಸುತ್ತದೆಯೋ ಅವರೇ ಹಾಗೆ ವರ್ತಿಸುತ್ತಿದ್ದಾರೆ. ಇದು ಒಬ್ಬ ಶಿಕ್ಷಣ ಸಚಿವರ ಬಾಯಲ್ಲಿ ಬರಬೇಕಾದ ಮಾತೇ?" ಎಂದು ಪ್ರಶ್ನಿಸಿದರು. ಬಂಗಾರಪ್ಪನವರಿಗೆ ಅತಿ ಹೆಚ್ಚು ನೋವು ನೀಡಿದ್ದೇ ಸ್ವತಃ ಮಧು ಬಂಗಾರಪ್ಪ ಎಂದು ಗಂಭೀರ ಆರೋಪ ಮಾಡಿರುವ ಅವರು, ಯಡಿಯೂರಪ್ಪ ಅವರ ಮಕ್ಕಳಿಗೆ ಇರುವ ಪರಿವಾರದ ಸಂಸ್ಕಾರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇಲ್ಲ ಎಂದು ಹರಿಹಾಯ್ದರು.

ನಾವು ಬಡತನದಿಂದ ಬಂದವರು, ಮೂರು ರೂಪಾಯಿ ಕೂಲಿ ಕೆಲಸ ಮಾಡಿಕೊಂಡು ಮೇಲೆ ಬಂದವರು. ಶಿವಮೊಗ್ಗದಲ್ಲೇ ಓದಿದ ಮಧು ಬಂಗಾರಪ್ಪಗೆ ಸರಿಯಾಗಿ ಕನ್ನಡವೇ ಬರುವುದಿಲ್ಲ. ಟಶ್‌ಫುಷ್ ಇಂಗ್ಲಿಷ್ ಕಲಿತುಕೊಂಡು ಬಂದು ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ತಮ್ಮ ಮೇಲಿನ ಹಳೆಯ ಪ್ರಕರಣಗಳ ಬಗ್ಗೆಯೂ ಪ್ರಸ್ತಾಪಿಸಿದ ಹಾಲಪ್ಪ, ತಮ್ಮ ಪ್ರಕರಣದಲ್ಲಿ ಮಧು ಬಂಗಾರಪ್ಪ ಅವರ ಮನೆಯಿಂದಲೇ ನೂರಕ್ಕೂ ಹೆಚ್ಚು ಬಾರಿ ಕರೆ ಹೋಗಿತ್ತು ಎಂದು ಆರೋಪಿಸಿದರು. ಅಷ್ಟೇ ಅಲ್ಲದೆ, ಬಂಗಾರಪ್ಪನವರ ಮೇಲೆಯೇ ಕೇಸ್ ಹಾಕಿಸಿದವರು ಇಂದಿನ ಕಾಂಗ್ರೆಸ್‌ನವರೇ ಹೊರತು ಬೇರೆಯವರಲ್ಲ ಎಂದರು.

ಸೊರಬ ಕ್ಷೇತ್ರದಲ್ಲಿ ರೈತರ ತೋಟಗಳನ್ನು ಯಾವ ಕೋರ್ಟ್ ಆದೇಶದ ಮೇರೆಗೆ ತೆರವು ಮಾಡಲಾಗಿದೆ ಎಂಬುದನ್ನು ಪ್ರಶ್ನಿಸಬೇಕು ಎಂದ ಹಾಲಪ್ಪ, ಜಿಲ್ಲೆಯ ಅಭಿವೃದ್ಧಿಯ ಕಡೆಗೆ ಗಮನ ಹರಿಸುವುದನ್ನು ಬಿಟ್ಟು ಸಚಿವರು ಬೇರೆ ವಿಚಾರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಮಕ್ಕಳ ದಿನಾಚರಣೆಯನ್ನು ತಪ್ಪು ದಿನಾಂಕದಂದು ಆಚರಿಸಿದ ಪ್ರಸಂಗವನ್ನು ಉಲ್ಲೇಖಿಸಿ, "ನಾನು ದಡ್ಡನೇ, ಇವರು ದೊಡ್ಡ ಬುದ್ಧಿವಂತರು" ಎಂದು ವ್ಯಂಗ್ಯವಾಡಿದರು.

ಒಟ್ಟಾರೆಯಾಗಿ.. ಮಧು ಬಂಗಾರಪ್ಪ ಮತ್ತೊಮ್ಮೆ ತಮ್ಮ ವಿಚಾರವನ್ನು ಪ್ರಸ್ತಾಪಿಸಿದರೆ ತಾವೂ ಸಹ ಇನ್ನಷ್ಟು ಸಂಗತಿಗಳನ್ನು ಬಹಿರಂಗಪಡಿಸುವುದಾಗಿ ಎಚ್ಚರಿಕೆ ನೀಡಿದ ಹಾಲಪ್ಪ, ತಮ್ಮ ಪಕ್ಷದ ಹೈಕಮಾಂಡ್ ಎಲ್ಲಿ ಸ್ಪರ್ಧಿಸಲು ಹೇಳುತ್ತದೋ ಅಲ್ಲಿ ಸ್ಪರ್ಧಿಸಲು ತಾವು ಸಿದ್ಧವಿರುವುದಾಗಿ ತಿಳಿಸಿದರು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES