ನೀರ್ಥಡಿಯಲ್ಲಿ ಕೇಂದ್ರ ಬರ ಅಧ್ಯಯನ ತಂಡ : 'ವಿಮೆ ಕಟ್ಟಿದ್ರೂ ಪರಿಹಾರ ಸಿಗಲಿಲ್ಲ' ಎಂದು ರೈತನ ಕಣ್ಣೀರು!
ನೀರ್ಥಡಿ ಗ್ರಾಮಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡಿ, ಮಳೆ ಅಭಾವದಿಂದ ಒಣಗಿ ಹೋಗಿರುವ ಮೆಕ್ಕೆಜೋಳ ಬೆಳೆಯನ್ನು ಪರಿಶೀಲಿಸಿತು. ಈ ವೇಳೆ, ಎರಡು ಬಾರಿ ಬೆಳೆ ವಿಮೆ ಮಾಡಿಸಿದರೂ ಪರಿಹಾರ ಸಿಗದಿರುವ ಕುರಿತು ಸ್ಥಳೀಯ ರೈತ ವೀರಯ್ಯ ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡ ಘಟನೆ ನಡೆಯಿತು.. ಹೆಚ್ಚಿನ ಮಾಹಿತಿ ಇಲ್ಲಿದೆ..
ದಾವಣಗೆರೆ: ಜಿಲ್ಲೆಯ ದಾವಣಗೆರೆ ತಾಲೂಕಿನ ನೀರ್ಥಡಿ ಗ್ರಾಮಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡಿ, ಬೆಳೆ ಹಾನಿ ವೀಕ್ಷಣೆ ನಡೆಸಿತು. ಅಧಿಕಾರಿಗಳಾದ ಅಜಿತ್ ಕುಮಾರ್ ಸಾಹು, ಚೇತ್‌ರಾಮ್ ಮೀನಾ, ಕರ್ನಲ್ ಅಮರೇಂದ್ರ ಸಿಂಗ್ ಹಾಗೂ ಜೆ. ಹರ್ಷಾ ಅವರನ್ನೊಳಗೊಂಡ ತಂಡವು ಸ್ಥಳೀಯ ರೈತ ವೀರಯ್ಯ ಅವರ ಜಮೀನಿಗೆ ಭೇಟಿ ನೀಡಿತು. ಮಳೆ ಅಭಾವದಿಂದ ಸಂಪೂರ್ಣ ಒಣಗಿ ಹೋಗಿದ್ದ ಮೆಕ್ಕೆಜೋಳ ಬೆಳೆಯನ್ನು ಪರಿಶೀಲಿಸಿದ ಅಧಿಕಾರಿಗಳು, ಬೆಳೆ ಹಾನಿಯ ಕುರಿತು ರೈತನಿಂದ ನೇರವಾಗಿ ಮಾಹಿತಿ ಪಡೆದುಕೊಂಡರು.
ಈ ವೇಳೆ, "ಬೆಳೆ ವಿಮೆ ಏಕೆ ಮಾಡಿಸಿಲ್ಲ?" ಎಂದು ಅಧಿಕಾರಿಗಳು ಪ್ರಶ್ನಿಸಿದಾಗ, "ಎರಡು ಬಾರಿ ಬೆಳೆ ವಿಮೆ ಮಾಡಿಸಿದ್ದರೂ ನಮಗೆ ಯಾವುದೇ ಪರಿಹಾರ ಧನ ಬರಲಿಲ್ಲ" ಎಂದು ರೈತ ವೀರಯ್ಯ ತಮ್ಮ ಅಳಲು ತೋಡಿಕೊಂಡರು. ಇದಕ್ಕೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, "ಈ ಬಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರಿಂದ ಬೆಳೆ ವಿಮೆ ಮಾಡಿಸಲಾಗಿದೆ" ಎಂದು ನಿಯೋಗಕ್ಕೆ ತಿಳಿಸಿದರು. ಸ್ಥಳದಲ್ಲಿ ಮಾಹಿತಿ ಸಂಗ್ರಹಿಸಿ, ಛಾಯಾಚಿತ್ರಗಳನ್ನು ತೆಗೆದುಕೊಂಡ ಕೇಂದ್ರ ತಂಡವು ಕೇವಲ ಹತ್ತು ನಿಮಿಷಗಳಲ್ಲಿ ಬರ ಅಧ್ಯಯನ ಪ್ರಕ್ರಿಯೆ ಮುಗಿಸಿ ಅಲ್ಲಿಂದ ತೆರಳಿತು.
ಈ ಸಂದರ್ಭದಲ್ಲಿ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಸಾಹಿತ್ಯ ಆಲದಕಟ್ಟಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಹಾಗೂ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು.