SOCIAL MEDIA

Newsletter

PARTNER SITES
Select Language Select State

ಕಸ್ತೂರಿ ರಂಗನ್‌ ವರದಿ: ಮಲೆನಾಡು, ಪಶ್ಚಿಮಘಟ್ಟ ನಿವಾಸಿಗಳ ಹಿತ ಕಾಯಲು ಬಿ.ಕೆ. ಹರಿಪ್ರಸಾದ್‌ ಆಗ್ರಹ

ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ವಿಚಾರವಾಗಿ ವಿಧಾನ ಪರಿಷತ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ವ್ಯಕ್ತಪಡಿಸಿದ ಕಳಕಳಿ ಏನು? ಅವರ ಮಾತಿನ ಮುಖ್ಯಾಂಶಗಳ ಬಗ್ಗೆ ಇಲ್ಲಿದೆ ಮಾಹಿತಿ.

Written By Yashaswini V
Published: Sep 21, 2026, 04:04 PM IST | Updated: Sep 21, 2026, 04:07 PM IST
Join

ಪಶ್ಚಿಮಘಟ್ಟದ ವಿಚಾರ ಕೇವಲ ಕರ್ನಾಟಕದ ವಿಚಾರ ಮಾತ್ರವಲ್ಲ, ಗುಜರಾತಿನಿಂದ ಕೇರಳದವರೆಗೆ ಆರು ರಾಜ್ಯಗಳಿಗೆ ಸಂಬಂಧಿಸಿದ ವಿಚಾರ. ಕರ್ನಾಟಕ ರಾಜ್ಯದಲ್ಲಿ ಬೆಳಗಾವಿ, ಚಾಮರಾಜನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉಡುಪಿ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಈ ಕಸ್ತೂರಿ ರಂಗನ್ ವರದಿಯಿಂದ ಆಗುವ ಅನಾಹುತ ಚರ್ಚೆ ಆಗಬೇಕು. ಒಂದು ಕಡೆ ಪರಿಸರವಾದಿಗಳು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಮತ್ತೊಂದು ಕಡೆ ನೂರಾರು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ವಾಸವಿರುವ ಜನರು ಹಾಗೂ ರೈತರ ಜೀವನದ ವಿಚಾರವಿದೆ. ಈ ಸೂಕ್ಷ್ಮ ವಿಚಾರವನ್ನು ನಾವು ಚರ್ಚೆ ಮಾಡುತ್ತಿದ್ದೇವೆ.

ಬೆಳಗಾವಿಯಲ್ಲಿ 62, ಚಾಮರಾಜನಗರದಲ್ಲಿ 20, ಉತ್ತರ ಕನ್ನಡದ 566, ದಕ್ಷಿಣ ಕನ್ನಡದ 43, ಚಿಕ್ಕಮಗಳೂರಿನ 137, ಕೊಡಗಿನ 53, ಶಿವಮೊಗ್ಗದ 446, ಉಡುಪಿಯ 34, ಹಾಸನದ 30, ಮೈಸೂರಿನ 48 ಗ್ರಾಮಗಳು ಈ ವರದಿಯ ವ್ಯಾಪ್ತಿಗೆ ಸೇರುತ್ತಿವೆ.

ರಾಜೀವ್ ಗಾಂಧಿ ಅವರ ಸರ್ಕಾರದಲ್ಲಿ ಯಾವ ಕಾರಣಕ್ಕೆ ಗಾಡ್ಗಿಲ್ ಸಮಿತಿ, ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಕಸ್ತೂರಿ ರಂಗನ್ ಅವರ ಸಮಿತಿ ರಚಿಸಲಾಯಿತು ಎಂದು ನಾವು ನೋಡಬೇಕು. ಪರಿಸರ ಅಸಮತೋಲನ ಆದ ಸಂದರ್ಭದಲ್ಲಿ ಸರ್ಕಾರದ ತೀರ್ಮಾನ ಕೈಗೊಳ್ಳುವ ಮುನ್ನ ಪರಿಸರವಾದಿಗಳು ಹೋರಾಟ ಮಾಡಿದರು. ನ್ಮದಾ ನದಿ ವಿಚಾರದಲ್ಲಿ ಐದು ರಾಜ್ಯಗಳಿಗೆ ನೆರವಾಗುತ್ತದೆ ಎಂದರೂ ಈಗಲೂ ಅಣೆಕಟ್ಟಿಗೆ ವಿರೋಧ ವ್ಯಕ್ತಪಡಿಸುತ್ತಾರೆ.

ಕೇರಳದಲ್ಲಿ ಡಾ. ಉಮನ್ ಸಮಿತಿ ಮಾಡಿ ಕಂದಾಯ ಮಟ್ಟದಲ್ಲಿ ಭೂಮಟ್ಟದ ಸಮೀಕ್ಷೆ ಮಾಡಲಾಯಿತು. ಈಗ ಈ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 7ನೇ ಅಧಿಸೂಚನೆ ಹೊರಡಿಸಲಾಗುತ್ತಿದೆ. ಪಶ್ಚಿಮ ಘಟ್ಟದ ಪೈಕಿ ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಬರುತ್ತದೆ. ಗುಜರಾತಿನಲ್ಲಿ 2 ಜಿಲ್ಲೆಗಳಲ್ಲಿ 435 ಚ.ಕಿ.ಮೀ ಅರಣ್ಯವಿದ್ದು ಇಲ್ಲಿ ಸಂಪೂರ್ಣ ವಾಣಿಜ್ಯಕರಣವಾಗಿದೆ. ಗೋವಾದಲ್ಲಿ ಸಿಆರ್ ಜಡ್ ಪ್ರದೇಶದಲ್ಲಿ ಆ ರಾಜ್ಯದ ವಿಧಾನಸಭೆ ಇದೆ. ಈ ವರದಿ ಜಾರಿಯಾದರೆ ಗೋವಾ ವಿಧಾನಸಭೆ ಕಟ್ಟಡ ಕೆಡವಬೇಕಾಗುತ್ತದೆ.

ಕುದುರೆಮುಖ ವಿಚಾರ ಬಂದಾಗ ಪರಿಸರವಾದಿಗಳು, ರೈತರ ವಿರೋಧದಿಂದ ಸಾವಿರಾರು ಕೋಟಿ ಯೋಜನೆ ನಿಲ್ಲಿಸಬೇಕಾಯಿತು. ನಾವು ಪರಿಸರ, ರೈತರು, ಅರಣ್ಯವಾಸಿಗಳ ಹಿತ ಕಾಪಾಡಬೇಕು. ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರು 2011ರಲ್ಲಿ ಅರಣ್ಯ ಹಕ್ಕು ಕಾಯ್ದೆ ತಂದಿದ್ದು, ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಲು. ಒರಿಸ್ಸಾದ ನಿಯಮಗಿರಿ ಬೆಟ್ಟವನ್ನು ಜನ ದೇವರಂತೆ ಪೂಜಿಸುತ್ತಾರೆ. ಯಾರೂ ಕೂಡ ಅದನ್ನು ಮುಟ್ಟಲು ಬಿಡುವುದಿಲ್ಲ. ಅಲ್ಲಿ ಗಣಿಗಾರಿಕೆಗೆ ಮುಂದಾದಾಗ ಅಲ್ಲಿನ ಜನ ಬಿಲ್ಲು ಬಾಣ ಹಿಡಿದು ಹೋರಾಟ ಮಾಡಲು ಮುಂದಾದರು. ಆಗ ಕರ್ನಾಟಕದವರಾದ ಅಶೋಕ ದಳವಾಯಿ ಅವರು ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದರು. ಪಶ್ಚಿಮಘಟ್ಟದಲ್ಲಿ ಪ್ರಜ್ಞಾವಂತ ಜನರು ಇರುವ ಕಾರಣ ಈ ಅರಣ್ಯ ಪ್ರದೇಶ ಕಾಪಾಡಿಕೊಂಡು ಬರುತ್ತಿದ್ದೇವೆ.  

ನರ್ಮದಾ, ಕೃಷ್ಣಾ, ಕಾವೇರಿ, ಗೋದಾವರಿ ನದಿಗಳು ಹುಟ್ಟುವುದೇ ಪಶ್ಚಿಮ ಘಟ್ಟದಲ್ಲಿ. ನಮ್ಮ ದೇಶದ ಬೊಕ್ಕಸಕ್ಕೆ ಹೆಚ್ಚು ಉದ್ಯೋಗ ನೀಡುವುದು ಕೃಷಿ ಚಟುವಟಿಕೆಗಳೇ ಹೊರತು, ಸೇವಾ ಕ್ಷೇತ್ರಗಳು ಅಲ್ಲ. ಸಧ್ಯದ ಪರಿಸ್ಥಿತಿಯಲ್ಲಿ 72% ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಈ ಪರಿಸರ ಕಾಪಾಡಿರುವುದು ಅರಣ್ಯವಾಸಿಗಳೇ ಹೊರತು, ಸರ್ಕಾರಗಳಲ್ಲ.

ಗಾಡ್ಗಿಲ್ ಹಾಗೂ ಕಸ್ತೂರಿ ರಂಗನ್ ವರದಿಗಳಲ್ಲಿ ಮುಖ್ಯವಾಗಿರುವ ಆತಂಕಗಳೆಂದರೆ, ಹಳೆಯ ಗ್ರಾಮಗಳ ವಿವರ, ಸರ್ವೇ ನಂಬರ್ ಆಧಾರಿತ ಗಡಿಗಳ ಕೊರತೆ, ವಸತಿ, ಅರಣ್ಯ ಕೃಷಿ ಪ್ರದೇಶ ಒಂದೇ ವರ್ಗದಲ್ಲಿ ಸೇರಿಸುವುದು, ಭೂಮಿಯ ಮೌಲ್ಯ, ಬ್ಯಾಂಕ್ ಸಾಲದ ಮೇಲೆ ಪರಿಣಾಮ, ರಸ್ತೆ ಹಾಗೂ ಸಾರ್ವಜನಿಕ ಸೌಲಭ್ಯ ಮೇಲಿನ ಪ್ರಮಾಣ, ಜೀವನೋಪಾಯ, ಹೋಂ ಸ್ಟೇ ಹಾಗೂ ಆದಾಯಗಳು ಸೇರಿದಂತೆ ಅನೇಕ ತೊಂದರೆಗಳು ಎದುರಾಗಲಿವೆ.

ಕರ್ನಾಟಕ ರಾಜ್ಯದಲ್ಲಿ 1576 ಗ್ರಾಮ ವ್ಯಾಪ್ತಿಯಲ್ಲಿ 20,668 ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಲಾಗಿದೆ. ನಮ್ಮ ಸರ್ಕಾರ ಮಲೆನಾಡಿನ ಜನರಿಗೆ ತೊಂದರೆ ಆಗಲು ನಮ್ಮ ಸರ್ಕಾರ ಬಿಡುವುದಿಲ್ಲ. ನಮ್ಮ ನೆಲ ಜಲ ಅರಣ್ಯ ಕಾಪಾಡುವಾಗ ನಮಗೂ ಹೆಚ್ಚಿನ ಜವಾಬ್ದಾರಿ ಇದೆ.

ಗಾಡ್ಗಿಲ್ ವರದಿಯಲ್ಲಿ ಸ್ಥಳೀಯ ಪರಿಸರ ಸೂಖ್ಮತೆ ಆಧರಿಸಿ, ಕೃಷಿ ಚಟುವಂಟಿಕೆ ನಿಯಂತ್ರಣದ ಶಿಫಾರಸ್ಸು ಮಾಡಲಾಗಿದೆ. ಕಸ್ತೂರಿ ರಂಗನ್ ವರದಿಯಲ್ಲಿ ಕೃಷಿ ಹಾಗೂ ತೋಟಗಾರಿಗೆಯನ್ನು ನಿಷೇಧಿಸುವ ಉದ್ದೇಶವಿಲ್ಲ ಎಂದು ಹೇಳಲಾಗಿದೆ. ಇನ್ನು ಕಲ್ಲುಗಣಿಗಾರಿಕೆಗೆ ಸಂಪೂರ್ಮ ನಿಷೇಧ ಹೇರಲು ತೀರ್ಮಾನಿಸಲಾಗಿದೆ. ಪರಿಸರಕ್ಕೆ ಹಾನಿ ಮಾಡುವ ಕೈಗಾರಿಕೆಗಳಿಗೆ ನಿರ್ಬಂಧ ಹೇರಲು ಶಿಫಾರಸ್ಸು ಮಾಡಲಾಗಿದೆ.

ರೈತರಲ್ಲಿ ತಮ್ಮ ಮನೆ, ಕೃಷಿ ಭೂಮಿ ಸುರಕ್ಷಿತವಾಗಿರುವುದೇ ಎಂಬ ಆತಂಕ ಮೂಡಿದೆ. ಕೃಷಿ ನಿಷೇಧ ಎಂದು ಕಸ್ತೂರಿ ರಂಗನ್ ವರದಿಯಾಗಲಿ, ಗಾಡ್ಗಿಲ್ ವರದಿಯಾಗಲಿ ಹೇಳಿಲ್ಲ. ಯಾರ ಜೀವನಕ್ಕೂ ತೊಂದರೆಯಾಗದಂತೆ ಪರಿಸರ ರಕ್ಷೆ ಮಾಡಬೇಕು. ಕರ್ನಾಟಕ ಸರ್ಕಾರ ಕೇರಳ ಮಾದರಿಯಲ್ಲಿ ತಜ್ಞರ ಸಮಿತಿ ರಚಿಸಿ, ನಮ್ಮದೇ ಆದ ವರದಿ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಕಸ್ತೂರಿ ರಂಗನ್ ಖ್ಯಾತ ವಿಜ್ಞಾನಿ. ಆದರೆ ಅವರು ಉಪಗ್ರಹಗಳ ಮೂಲಕ ಮ್ಯಾಪಿಂಗ್ ಸಮೀಕ್ಷೆ ಮಾಡಿದ್ದು, ಸರಿ ಎಂದು ಒಪ್ಪಲು ಸಾಧ್ಯವಿಲ್ಲ. ಇದರಿಂದ ಬಡವರು, ಅರಣ್ಯವಾಸಿಗಳಿಗೆ ತೊಂದರೆಯಾಗಲಿದೆ.

ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶವನ್ನು ಒಂದೇ ರೀತಿ ನಿಯಂತ್ರಿಸದೇ, ಹೆಚ್ಚು ನೈಸರ್ಗಿಕ ಪ್ರದೇಶ ಗುರುತಿಸಿ ಅಲ್ಲಿ ಕಠಿಣ ನಿಯಂತ್ರಣ ಸಾಧಿಸಬೇಕು.

ಶರಾವತಿ ಸಂತ್ರಸ್ತರು 60 ವರ್ಷ ಕಳೆದರೂ ಪುನರ್ವಸತಿ ಕಾಣದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅರಣ್ಯ ಸೂಕ್ಷ್ಮ ಪ್ರದೇಶ ಎಂದು ಒಕ್ಕಲೆಬ್ಬಿಸುವ ಜನರಿಗೆ ಸೂಕ್ತ ಪುರ್ವಸತಿ ಸಿಗಲಿದೆ ಎಂಬುದಕ್ಕೆ ಖಾತರಿ ಏನಿದೆ? ಬಡ ರೈತರು, ಅರಣ್ಯವಾಸಿಗಳಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES