• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಶಿವಮೊಗ್ಗ
  • /ದಾವಣಗೆರೆಯ ಮೊದಲ ಪ್ರಕೃತಿ ಚಿಕಿತ್ಸಾ ಕ್ಲಿನಿಕ್‌ನ ಸ್ಪೂರ್ತಿ ಶಕ್ತಿ - ಶ್ರೀಮತಿ ತುಳಸಿ ರಾಮರಾಜು

ದಾವಣಗೆರೆಯ ಮೊದಲ ಪ್ರಕೃತಿ ಚಿಕಿತ್ಸಾ ಕ್ಲಿನಿಕ್‌ನ ಸ್ಪೂರ್ತಿ ಶಕ್ತಿ - ಶ್ರೀಮತಿ ತುಳಸಿ ರಾಮರಾಜು

ಶ್ರೀಮತಿ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವತಿಯಿಂದ 9ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇಂದಿನ ಒತ್ತಡದ ಜೀವನಶೈಲಿಯಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ನೈಸರ್ಗಿಕ ವಿಧಾನಗಳು ಮತ್ತು ಔಷಧ ರಹಿತ ಚಿಕಿತ್ಸೆಗಳ ಮೂಲಕ ಆರೋಗ್ಯಕರ ಸಮಾಜವನ್ನು ನಿರ್ಮಿಸುವ ಕುರಿತು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಮಹತ್ವದ ಸಂದೇಶಗಳನ್ನು ನೀಡಿದರು. ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Nov 18, 2026, 19:41 IST|Updated: Nov 18, 2026, 19:43 IST
joinshare
ದಾವಣಗೆರೆಯ ಮೊದಲ ಪ್ರಕೃತಿ ಚಿಕಿತ್ಸಾ ಕ್ಲಿನಿಕ್‌ನ ಸ್ಪೂರ್ತಿ ಶಕ್ತಿ - ಶ್ರೀಮತಿ ತುಳಸಿ ರಾಮರಾಜು
Image Credit: Davangere News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ದಾವಣಗೆರೆ: ನಗರದ ವಿದ್ಯಾನಗರದಲ್ಲಿರುವ ಶ್ರೀಮತಿ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವತಿಯಿಂದ 9ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಆಧುನಿಕ ಜೀವನಶೈಲಿ ಮತ್ತು ಅನಾರೋಗ್ಯಕರ ಅಭ್ಯಾಸಗಳಿಂದ ಹೊರಬಂದು, ನೈಸರ್ಗಿಕ ವಿಧಾನಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಕಾರ್ಯಕ್ರಮದಲ್ಲಿ ವ್ಯಾಪಕ ಚರ್ಚೆ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ದಾವಣಗೆರೆಯ ಮೊದಲ ಪ್ರಕೃತಿ ಚಿಕಿತ್ಸಾ ಕ್ಲಿನಿಕ್‌ನ ಸ್ಪೂರ್ತಿಶಕ್ತಿಯಾದ ಶ್ರೀಮತಿ ತುಳಸಿ ರಾಮರಾಜು, ಸಾಮಾನ್ಯ ಜನರಿಗೂ ಅತ್ಯಂತ ಕಡಿಮೆ ಹಾಗೂ ಕೈಗೆಟುಕುವ ದರದಲ್ಲಿ ನೈಸರ್ಗಿಕ ಆರೋಗ್ಯ ಸೇವೆಗಳು ಸಿಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ತಾವು ಈ ಕೇಂದ್ರವನ್ನು ಆರಂಭಿಸಿದ್ದಾಗಿ ನೆನಪಿಸಿಕೊಂಡರು. ಅಂದು ತಾವು ಬಿತ್ತಿದ ಆ ಪುಟ್ಟ ಕನಸು ಇಂದು ಸಾವಿರಾರು ಜನರಿಗೆ ಆರೋಗ್ಯಕರ ಬದುಕಿನ ದಾರಿ ತೋರಿಸುತ್ತಿರುವುದು ತಮಗೆ ಅಪಾರ ಸಂತಸ ತಂದಿದೆ ಎಂದು ಭಾವುಕರಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಿರುಪತಿ ತಿರುಮಲ ದೇವಸ್ಥಾನದ (TTD) ಶ್ರೀ ಜನಾರ್ದನ ಬಾಲ ನರಸಿಂಹರಾವ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹೃದಯ ಕಾಯಿಲೆಗಳಿಗೆ ಸಂಪೂರ್ಣವಾಗಿ ನಮ್ಮ ಅನಾರೋಗ್ಯಕರ ಜೀವನಶೈಲಿಯೇ ಕಾರಣ ಎಂದರು. ಪ್ರತಿದಿನದ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು, ತಪ್ಪದೇ ನಡಿಗೆ ಮತ್ತು ಯೋಗಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು. ತಾವೇ ಸ್ವತಃ ಆಂಧ್ರಪ್ರದೇಶದ ತಿರುಪತಿಯಿಂದ ದಾವಣಗೆರೆಯ ಈ ಕ್ಲಿನಿಕ್‌ಗೆ ಬಂದು ಚಿಕಿತ್ಸೆ ಪಡೆದಿರುವುದಾಗಿ ತಿಳಿಸಿದ ಅವರು, ಪ್ರಕೃತಿ ಚಿಕಿತ್ಸೆಯಿಂದ ತಮಗಾದ ಅನುಭವ ಹಾಗೂ ಅದರ ಮಹತ್ವವನ್ನು ಸಭೆಯೊಂದಿಗೆ ಮುಕ್ತವಾಗಿ ಹಂಚಿಕೊಂಡರು.

ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಖ್ಯಾತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞ ಡಾ. ಗಂಗಾಧರ ವರ್ಮ ಮಾತನಾಡಿ, ಇಂದಿನ ಯುವಜನತೆಯಲ್ಲಿ ಹೆಚ್ಚುತ್ತಿರುವ ಆಹಾರ ಪದ್ಧತಿಯ ದೋಷಗಳು, ದೈಹಿಕ ವ್ಯಾಯಾಮದ ಕೊರತೆ, ನಿದ್ರಾಹೀನತೆ ಮತ್ತು ಮಾನಸಿಕ ಒತ್ತಡಗಳು ಅನೇಕ ಗಂಭೀರ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿವೆ ಎಂದು ಎಚ್ಚರಿಸಿದರು. ಯಾವುದೋ ಕಾಯಿಲೆ ಬಂದ ನಂತರ ಆಸ್ಪತ್ರೆಗೆ ಅಲೆಯುವುದಕ್ಕಿಂತ, ಕಾಯಿಲೆ ಬರುವ ಮೊದಲೇ ನಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳುವ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಜಾಣತನ ಎಂದರು. ಆಹಾರ ನಿಯಂತ್ರಣ, ಯೋಗಾಸನ, ವಿಶ್ರಾಂತಿ ಮತ್ತು ನೈಸರ್ಗಿಕ ಮನೆಮದ್ದುಗಳ ಮೂಲಕ ಮಾತ್ರವೇ 'ಆರೋಗ್ಯಕರ ಭಾರತ'ವನ್ನು ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ವಿಂಧ್ಯ ವರ್ಮ ಅವರು ಪ್ರಕೃತಿ ಚಿಕಿತ್ಸೆಯ ವಿವಿಧ ಪ್ರಕಾರಗಳ ಬಗ್ಗೆ ವಿವರವಾಗಿ ತಿಳಿಸುತ್ತಾ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜುತನ, ಸಯಾಟಿಕ, ಕೀಲುನೋವು, ಬೆನ್ನುಮೂಳೆಯ ಸಮಸ್ಯೆ ಹಾಗೂ ಪಾರ್ಶ್ವವಾಯುವಿನಂತಹ ದೀರ್ಘಕಾಲಿಕ ಕಾಯಿಲೆಗಳಿಗೆ ಪ್ರಕೃತಿ ಚಿಕಿತ್ಸೆಯು ರಾಮಬಾಣವಿದ್ದಂತೆ ಎಂದರು. ಜಲಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಅಕ್ಯುಪಂಕ್ಚರ್, ಮಸಾಜ್, ವಿಶೇಷ ಆಹಾರ ಚಿಕಿತ್ಸೆ ಮತ್ತು ಯಾವುದೇ ಅಡ್ಡಪರಿಣಾಮವಿಲ್ಲದ ಔಷಧ ರಹಿತ ಚಿಕಿತ್ಸೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು.

ಇದೇ ವೇಳೆ ಮಾತನಾಡಿದ ಶ್ರೀಮತಿ ಸಂತೋಷ್ ಮೋಹಿತೆ, ಇಂದಿನ ಯುವ ಪಿಳಿಗೆಯಲ್ಲಿ ಹೆಚ್ಚುತ್ತಿರುವ ಫಾಸ್ಟ್‌ಫುಡ್ ಸಂಸ್ಕೃತಿ, ರಾತ್ರಿ ಇಡೀ ಮೊಬೈಲ್ ಬಳಕೆ ಮತ್ತು ತಡರಾತ್ರಿಯ ನಿದ್ರೆಯ ಅಭ್ಯಾಸಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಹಿರಿಯ ವೈದ್ಯರಾದ ಬಿ. ರಾಮರಾಜು ಅವರು ಮಾತನಾಡಿ, ಪ್ರಕೃತಿಯೊಂದಿಗೆ ನಿಕಟವಾಗಿ ಬದುಕೋಣ, ಆರೋಗ್ಯದಿಂದ ಬಾಳೋಣ ಎಂದು ಕಿವಿಮಾತು ಹೇಳಿದರು.

ಕುಮಾರಿ ಪವಿತ್ರ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರೆ, ಶ್ರೀಮತಿ ಗಾಯತ್ರಿ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಾದ ಶ್ರೀನಿವಾಸ, ಖಾಸಿಂ ಸಾಬ್ (ಮುನ್ನಾ), ಮೇಘ, ನಾಗ ಲಲಿತ, ಪ್ರಕಾಶ್ ಸೇರಿದಂತೆ ಅನೇಕ ಸಾಧಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು.

Add Zee News as a Preferred Source
TAGS:
Kannada News