SOCIAL MEDIA

Newsletter

PARTNER SITES
Select Language Select State

ಮಕ್ಕಳ ಕಣ್ಣ ಮುಂದೆಯೇ ಬೋಟ್ ಮಗುಚಿ ದಂಪತಿ ದುರ್ಮ*ರಣ! ಕೊಡಗಿನಲ್ಲಿ ಭೀಕರ ದುರ್ಘಟನೆ

ಸುಂದರ ಕನಸುಗಳನ್ನು ಕಟ್ಕೊಂಡು ಪ್ರವಾಸಕ್ಕೆ ತೆರಳಿದ್ದ ದಂಪತಿ ವಿಧಿಯಾಟಕ್ಕೆ ಬಲಿಯಾಗಿರುವ ಕರುಣಾಜನಕ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮಕ್ಕಳ ಕಣ್ಣ ಮುಂದೆಯೇ ಹಾರಂಗಿ ಹಿನ್ನೀರಿನಲ್ಲಿ ಬೋಟ್ ಮಗುಚಿ ತಂದೆ-ತಾಯಿ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಡೀ ಪ್ರವಾಸೋದ್ಯಮ ವಲಯದಲ್ಲಿ ಆತಂಕ ಮೂಡಿಸಿದೆ.. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ..

Written By Krishna NK
Published: Nov 14, 2026, 20:26 IST | Updated: Nov 14, 2026, 20:27 IST
Image Credit: Kodagu News
Join

ಮಡಿಕೇರಿ: ಕೊಡಗು ಅಂದ್ರೆನೇ ಅದು ಪ್ರವಾಸಿಗರ ಸ್ವರ್ಗ. ಇಲ್ಲಿಗೆ ಬರೋ ಪ್ರವಾಸಿಗರು ಎಷ್ಟೋ ಕನಸು ಕಟ್ಟಿ ಟೈಮ್ ಸ್ಪೆಂಡ್ ಮಾಡಲು ಬರ್ತಾರೆ. ಅಂತಹುದೇ ಸುಂದರ ಕನಸು ಕಟ್ಟಿಕೊಂಡು ಬಂದ ಕುಟುಂಬ ಸೇರಿದ್ದು ಮಾತ್ರ ಮಸಣಕ್ಕೆ. ಮಕ್ಕಳ ಕಣ್ಣ ಮುಂದೆಯೇ ತಂದೆ-ತಾಯಿ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹಾರಂಗಿ ಹಿನ್ನೀರಿನಲ್ಲಿ ನಡೆದ ಈ ಘನಘೋರ ದುರಂತದ ಒಂದು ವರದಿ ಇಲ್ಲಿದೆ ನೋಡಿ.

ಹೌದು.. ಹೀಗೊಂದು ಘೋರ ಘಟನೆ ನಡೆದಿರೋದು ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಹಾರಂಗಿ ಹಿನ್ನೀರು ಪ್ರದೇಶದಲ್ಲಿ. ಹೀಗೆ ಜೊತೆಜೊತೆಯಾಗಿ ನಿಂತಿರೋ ಮೂಲತಃ ಗುಜರಾತ್‌ನ ಸೂರತ್ ನಿವಾಸಿಗಳಾದ 50 ವರ್ಷದ ಧರ್ಮೇಶ್ ಹಾಗೂ 48 ವರ್ಷದ ನಿಮ್ಮಿ ದಂಪತಿಗಳು. ಸೂರತ್‌ನಲ್ಲಿ ಧರ್ಮೇಶ್ ಆರ್ಕಿಟೆಕ್ಟ್ ಹಾಗೂ ನಿಮ್ಮಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಧರ್ಮೇಶ್, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಗುಜರಾತ್‌ನಿಂದ ಬೆಂಗಳೂರಿಗೆ ಬಂದು, ಅಲ್ಲಿಂದ ಕೊಡಗಿನ ಕುಶಾಲನಗರ ಸಮೀಪದ ಖಾಸಗಿ ರೆಸಾರ್ಟ್‌ಗೆ ಆಗಮಿಸಿದ್ದರು.

ನಿನ್ನೆ ಸಂಜೆ ಕುಟುಂಬ ಸಮೇತರಾಗಿ ಹಾರಂಗಿ ಆನೆ ಕ್ಯಾಂಪ್ ಸಮೀಪದ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್‌ನಲ್ಲಿ ಭಾಗವಹಿಸಿದ್ದರು. ಸ್ಪೀಡ್ ಬೋಟ್ ಹತ್ತಿದ್ದ ಕುಟುಂಬ ಹಾರಂಗಿ ಹಿನ್ನೀರಿನಲ್ಲಿ ಕೆಲಕಾಲ ಎಂಜಾಯ್ ಮಾಡುತ್ತಿತ್ತು. ಸುಮಾರು ಒಂದುವರೆ ಕಿಲೋಮೀಟರ್ ದೂರದಲ್ಲಿ ಬೋಟ್ ತಿರುವು ಪಡೆದುಕೊಳ್ಳುವ ವೇಳೆ ನಿಯಂತ್ರಣ ಕಳೆದುಕೊಂಡು ಮಗುಚಿಕೊಂಡಿದೆ. ಈ ಸಂದರ್ಭದಲ್ಲಿ ಇಬ್ಬರು ಮಕ್ಕಳು ಬೋಟ್ ಪಕ್ಕಕ್ಕೆ ಬಿದ್ದರೆ, ಗಂಡ ಮತ್ತು ಹೆಂಡತಿ ಬೋಟ್ ಕೆಳಗೆ ಸಿಲುಕಿಕೊಂಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಎರಡು-ಮೂರು ಬೋಟ್‌ಗಳು ಕೂಡಲೇ ರಕ್ಷಣೆಗೆ ಧಾವಿಸಿದವು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಸೇಫ್ಟಿ ಜಾಕೆಟ್ ಹಾಗೂ ನುರಿತ ಸರ್ಟಿಫೈಡ್ ಗೈಡ್‌ಗಳು ಇದ್ದರೂ ಕೂಡ ಈ ಘಟನೆ ನಡೆದಿದ್ದು ಎಲ್ಲರಿಗೂ ಶಾಕ್ ನೀಡಿದೆ. ಇನ್ನು ಮಕ್ಕಳ ಮುಂದೆಯೇ ತಂದೆ-ತಾಯಿ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದನ್ನು ನೋಡಿ ಮಕ್ಕಳಿಬ್ಬರೂ ಕೂಡ ಆಘಾತಕ್ಕೊಳಗಾಗಿದ್ದಾರೆ. ಸದ್ಯ ಹಾರಂಗಿ ಸ್ಪೋರ್ಟ್ಸ್ ಅಡ್ವೆಂಚರ್ಸ್ ಮಂಜುನಾಥ್ ಹೇಳುವ ಪ್ರಕಾರ... "ಈ ರೀತಿಯ ದುರ್ಘಟನೆ ಇದೇ ಮೊದಲು, ನಾವು ಕೂಡ ಶಾಕ್‌ಗೆ ಒಳಗಾಗಿದ್ದೇವೆ. ಕೆಲವು ದಿನ ನಾವಾಗಿಯೇ ಸ್ಪೋರ್ಟ್ಸ್ ಆಕ್ಟಿವಿಟೀಸ್ ಬಂದ್ ಮಾಡಿದ್ದೇವೆ" ಎಂದರು.

ಇನ್ನು ವಿಚಾರ ತಿಳಿಯುತ್ತಿದ್ದಂತೆ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಕೂಡ ರಾತ್ರೋರಾತ್ರಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಜೊತೆಗೆ ನಿರ್ಲಕ್ಷ್ಯ ವಹಿಸಿದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಸದ್ಯ ಬೋಟ್ ರೈಡರ್ ಪ್ರದೀಪ್, ಅರಣ್ಯ ಇಲಾಖೆ, ಸಣ್ಣ ನೀರಾವರಿ ಇಲಾಖೆ ಹಾಗೂ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ಟೀಮ್ ಮೇಲೆ ದೂರು ದಾಖಲಿಸಿ ಕುಶಾಲನಗರ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸದ್ಯ ಇಬ್ಬರ ಮೃತದೇಹ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಒಟ್ಟಿನಲ್ಲಿ ಕೊಡಗಿನಂತಹ ಪ್ರಸಿದ್ಧ ಪ್ರವಾಸಿ ಸ್ಥಳದಲ್ಲಿ ಹಲವು ಸಮಯದಿಂದ ಸಾಕಷ್ಟು ದುರಂತಗಳು ನಡೆಯುತ್ತಿದ್ದು, ಸುರಕ್ಷತೆಯ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಕೊಡಗಿನ ಪ್ರವಾಸೋದ್ಯಮ ಇಲಾಖೆ ಮುಂದಿನ ದಿನಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES