ನ. 16ರಿಂದ ಮೈಶುಗರ್ ಕಾರ್ಖಾನೆ ಕಬ್ಬು ಅರೆಯುವಿಕೆ ಕಾರ್ಯ ಸ್ಥಗಿತ
ಬಾಯ್ಲಿಂಗ್ ಹೌಸ್ ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಮಂಡ್ಯದ ಮೈಶುಗರ್ ಕಾರ್ಖಾನೆಯ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮು ನವೆಂಬರ್ 16ರ ಸಂಜೆ 6 ಗಂಟೆಗೆ ಸ್ಥಗಿತಗೊಳ್ಳಲಿದೆ ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಮಂಡ್ಯದಲ್ಲಿ ಮಾಹಿತಿ ನೀಡಿದ್ದಾರೆ.
ಮಂಡ್ಯ: ಜಿಲ್ಲೆಯ ಪ್ರತಿಷ್ಠಿತ ಮೈಶುಗರ್ ಸಕ್ಕರೆ ಕಾರ್ಖಾನೆಯ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮು ನವೆಂಬರ್ 16ರ ಸಂಜೆ 6 ಗಂಟೆಗೆ ಅಧಿಕೃತವಾಗಿ ಮುಕ್ತಾಯಗೊಳ್ಳಲಿದೆ. ಕಾರ್ಖಾನೆಯ ಬಾಯ್ಲಿಂಗ್ ಹೌಸ್ ನವೀಕರಣ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಮಂಡ್ಯದಲ್ಲಿ ಮಾಹಿತಿ ನೀಡಿದ್ದಾರೆ.
ಕಾರ್ಖಾನೆಯ ಯಂತ್ರೋಪಕರಣಗಳ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಬಾಯ್ಲಿಂಗ್ ಹೌಸ್ ನವೀಕರಣ ಅತ್ಯಗತ್ಯವಾಗಿದೆ. ಈ ನವೀಕರಣ ಕಾರ್ಯ ಪೂರ್ಣಗೊಂಡು ಪುನರಾರಂಭಗೊಂಡ ನಂತರ, ಕಾರ್ಖಾನೆಯಲ್ಲಿ ನಿತ್ಯ 4,500 ಟನ್ ಕಬ್ಬು ನುರಿಸುವ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ರೈತರ ಕಬ್ಬನ್ನು ಅತ್ಯಂತ ವೇಗವಾಗಿ ಅರೆಯಲು ಸಾಧ್ಯವಾಗಲಿದೆ ಎಂದು ಅಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ 2026-27ನೇ ಸಾಲಿನ ಹಂಗಾಮಿನಲ್ಲಿ ಕಾರ್ಖಾನೆಗೆ ಸುಮಾರು 4.38 ಲಕ್ಷ ಟನ್ ಕಬ್ಬು ಪೂರೈಸುವಂತೆ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಕೆಲವು ರೈತರು ತಮ್ಮ ಕಬ್ಬನ್ನು ಜಿಲ್ಲೆಯ ಇತರೆ ಸಕ್ಕರೆ ಕಾರ್ಖಾನೆಗಳಿಗೆ ಸಾಗಣೆ ಮಾಡಿದ್ದಾರೆ ಎನ್ನಲಾಗಿದ್ದು, ಇದರ ಪರಿಣಾಮವಾಗಿ ಮೈಶುಗರ್ ಕಾರ್ಖಾನೆಯಲ್ಲಿ ಇದು ವರೆಗೆ ಒಟ್ಟು 2.10 ಲಕ್ಷ ಟನ್ ಕಬ್ಬನ್ನು ಮಾತ್ರ ಅರೆಯಲು ಸಾಧ್ಯವಾಗಿದೆ ಎಂದು ಸಿ.ಡಿ. ಗಂಗಾಧರ್ ವಿವರಿಸಿದರು.
ಕಾರ್ಖಾನೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಇನ್ನೂ 27 ಸಾವಿರ ಟನ್ ಕಬ್ಬು ಕಟಾವಿಗೆ ಬಾಕಿ ಉಳಿದಿದೆ. ಇದರಲ್ಲಿ ಸುಮಾರು 10 ಸಾವಿರ ಟನ್ ಕಬ್ಬು ಕಳಪೆ ಗುಣ ಮಟ್ಟದಿಂದ ಕೂಡಿದೆ. ಉಳಿದ 17 ಸಾವಿರ ಟನ್ ಉತ್ತಮ ಕಬ್ಬನ್ನು ರೈತರಿಗೆ ಯಾವುದೇ ತೊಂದರೆ ಆಗದಂತೆ ಮೈಶುಗರ್ ಕಾರ್ಖಾನೆಯ ಮೂಲಕವೇ ಜಿಲ್ಲೆಯ ಇತರ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ರೈತರ ಹಿತದೃಷ್ಟಿ ಇಂದ ಕಬ್ಬು ಪೂರೈಸಿದ ಬೆಳೆಗಾರರಿಗೆ ಈಗಾಗಲೇ 48 ಕೋಟಿ ರೂಪಾಯಿ ಹಣವನ್ನು ಪಾವತಿಸಲಾಗಿದೆ. ಇನ್ನುಳಿದ 12 ಕೋಟಿ ರೂಪಾಯಿ ಬಾಕಿ ಹಣವನ್ನು ಕೂಡ ಅತ್ಯಂತ ಶೀಘ್ರದಲ್ಲೇ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದ್ದಾರೆ. ಸದ್ಯ ಮೈಶುಗರ್ ಕಾರ್ಖಾನೆಯು ಉತ್ತಮ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದು, ನವೀಕರಣದ ನಂತರ ಮತ್ತಷ್ಟು ಬಲಿಷ್ಠವಾಗಿ ಕಾರ್ಯನಿರ್ವಹಿಸಲಿದೆ ಎಂದು ಸಿ.ಡಿ. ಗಂಗಾಧರ್ ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ಜುಲೈ 15ರಂದು ಆರಂಭವಾಗಿದ್ದ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು, ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಅತ್ಯಂತ ಯಶಸ್ವಿಯಾಗಿ ಹಾಗೂ ಯಾವುದೇ ತಾಂತ್ರಿಕ ಅಡಚಣೆಗಳಿಲ್ಲದೆ ಲಾಭದಾಯಕವಾಗಿ ನಡೆದಿದೆ. ರೈತರಿಗೆ ಕಬ್ಬು ಪೂರೈಸಿದ 15 ದಿನಗಳೊಳಗೆ ಹಣ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಬಾಕಿ ಉಳಿದಿರುವ 12 ಕೋಟಿ ರೂಪಾಯಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಬಾಯ್ಲಿಂಗ್ ಹೌಸ್ ನವೀಕರಣದ ಬಳಿಕ ಕಾರ್ಖಾನೆಯ ಕಾರ್ಯಕ್ಷಮತೆ ಮತ್ತಷ್ಟು ಹೆಚ್ಚಲಿದ್ದು, ಮುಂದಿನ ಹಂಗಾಮಿನಲ್ಲಿ ರೈತರ ಎಲ್ಲಾ ಕಬ್ಬನ್ನು ನಿಗದಿತ ಸಮಯದೊಳಗೆ ಅರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.