SOCIAL MEDIA

Newsletter

PARTNER SITES
Select Language Select State

ARAI ಘಟಕ ಸ್ಥಾಪನೆಗೆ ಆರಂಭದಲ್ಲೇ ವಿಘ್ನ! ನನಸಾಗುವ ಮುನ್ನವೇ ಮಾಸಿ ಹೋಯ್ತ ಕೇಂದ್ರ ಸಚಿವ ಹೆಚ್‌ಡಿಕೆ ಕನಸು?

ಕೃಷಿ ಭೂಮಿಯಲ್ಲಿ ಯಾವುದೇ ಕಾರಣಕ್ಕೂ ಕೈಗಾರಿಕೆ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಮಂಡ್ಯದಲ್ಲಿ ARAI ಘಟಕ ಸ್ಥಾಪನೆಗೆ ಆರಂಭದಲ್ಲೇ ವಿಘ್ನ ಎದುರಾದಂತಾಗಿದೆ.

Written By Yashaswini V
Published: Nov 10, 2026, 15:00 IST | Updated: Nov 10, 2026, 15:03 IST
Join

ಮಂಡ್ಯದಲ್ಲೇ ಬೃಹತ್ ಕೈಗಾರಿಕೆ ಸ್ಥಾಪನೆಗೆ ಪಟ್ಟು ಹಿಡಿದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಕನಸಿಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಕನಸು ನನಸಾಗುವ ಮೊದಲೇ ಮಾಸಿ ಹೋಗುತ್ತಾ ಎನ್ನುವ ಆತಂಕ ಮೂಡಿದೆ.

ಹೌದು, ತಮ್ಮ ಸಂಸದೀಯ ಕ್ಷೇತ್ರವಾಗಿರುವ ಮಂಡ್ಯ ಜಿಲ್ಲೆಯಲ್ಲೇ ಬೃಹತ್ ಕೈಗಾರಿಕೆ ಸ್ಥಾಪಿಸಬೇಕು ಎಂದು ಹೆಚ್.ಡಿ. ಕುಮಾರಸ್ವಾಮಿ ಮಹತ್ವದ ಆಕಾಂಕ್ಷೆ ಹೊಂದಿದ್ದಾರೆ. ಹೆಚ್‌ಡಿಕೆ ಕನಸು ನನಸು ಮಾಡಲು ಸಾಥ್‌ ನೀಡಿದ್ದ ರಾಜ್ಯ ಸರ್ಕಾರ ಇದಕ್ಕಾಗಿ 105 ಎಕರೆ ಜಾಗವನ್ನೂ  ಗುರುತಿಸಿತ್ತು.

ಮಂಡ್ಯ ತಾಲೂಕಿನ ಹೆಗ್ಗಡತಹಳ್ಳಿ-ಮುದ್ದನಘಟ್ಟ ಗ್ರಾಮದಲ್ಲಿ ಜಿಲ್ಲಾಡಳಿತ 105 ಎಕರೆ ಗುರುತಿಸಿತ್ತು. ರಾಜ್ಯ ಸರ್ಕಾರ ಗುರುತಿಸಿದ ಜಾಗಕ್ಕೆ ಭೇಟಿ ನೀಡಿದ್ದ ತಂಡ ಸ್ಥಳ ಪರಿಶೀಲನೆಯನ್ನೂ ಪೂರ್ಣಗೊಳಿಸಿತ್ತು. ಆದರೆ, ಇದರ ನಡುವೆಯೇ ಸ್ಥಳೀಯ ರೈತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೃಷಿ ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಿದ್ರೆ ಆತ್ಮಹ*ತ್ಯೆಯೇ ದಾರಿ:
ಸಾಕಷ್ಟು ಚರ್ಚೆ, ಗೊಂದಲಕ್ಕೆ ಕಾರಣವಾದ ಮಂಡ್ಯದಲ್ಲಿ ಬೃಹತ್ ಕೈಗಾರಿಕೆ ಆರಂಭ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗ್ರಾಮದ ರೈತರಾದ ದೇಶಿಲಿಂಗೇಗೌಡ ಹಾಗೂ ರಾಜೇಗೌಡ ಶಾಸಕರ ನಡೆಗೂ ತೀವ್ರ ಆಕ್ರೋಶ ಹೊರಹಾಕಿದರು. ಕೃಷಿ ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಿದ್ರೆ ಆತ್ಮಹ*ತ್ಯೆಯೇ ಮುಂದಿನ ದಾರಿ ಎನ್ನುತ್ತಿರುವ ರೈತರು, ನಮ್ಮ ಗ್ರಾಮದಲ್ಲಿ ಖಾಲಿ ಜಾಗವೇ ಇಲ್ಲ, 40 ವರ್ಷದಿಂದ ಕಷ್ಟಪಟ್ಟು ಇಲ್ಲಿ ನೆಲೆ ಕಟ್ಟಿದ್ದೇವೆ. ಕೃಷಿ ಚಟುವಟಿಕೆಗೆ ಬಳಸುತ್ತಿರುವ ಭೂಮಿಯನ್ನ ಯಾವುದೇ ಕಾರಣಕ್ಕೂ ಕೈಗಾರಿಕೆಗೆ ಕೊಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಶಾಸಕ ಗಣಿಗ ರವಿಕುಮಾರ್ ಗೆ ಶಾಕ್ ಕೊಟ್ಟಿರೋ ರೈತರು!
ರೈತರ ವಿರೋಧದ ನಡುವೆಯೂ ಬೃಹತ್‌ ಕೈಗಾರಿಕೆ ಸ್ಥಾಪಿಸುವ ಹೆಚ್‌ಡಿಕೆ ಕನಸು ನನಸಾಗಿಸಲು 105 ಎಕರೆ ಜಾಗ ಕೊಟ್ಟೇ ಕೊಡುತ್ತೇವೆ, ಭೂಮಿ ಕೊಡ್ತೇವೆ ಎನ್ನುತ್ತಿರುವ ಸ್ಥಳೀಯ ಶಾಸಕ ಗಣಿಗ ರವಿಕುಮಾರ್ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯ ರೈತರು, ಮುದ್ದನಘಟ್ಟ ಗ್ರಾಮದ ಸರ್ವೆ ನಂ.48 ಹಾಗೂ ಹೆಗ್ಗಡತಹಳ್ಳಿ ಗ್ರಾಮದ ಸರ್ವೆ ನಂ.35 ರಲ್ಲಿನ ಉದ್ದೇಶಿತ 100 ಎಕರೆ ಭೂಮಿಯಲ್ಲಿ ಯಾರೂ ಉಳುಮೆ ಮಾಡುತ್ತಿಲ್ಲ, ಖಾಲಿ ಇದೆ ಎಂದು ಶಾಸಕರು ಹೇಳಿರುವುದು ಸುಳ್ಳು. ಆ ಜಾಗದಲ್ಲಿ ನೆಲೆ ಕಟ್ಟಿಕೊಂಡು ಕೃಷಿ ಚಟುವಟಿಕೆ ಮಾಡುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ RTC, ಸಾಗುವಳಿ ಚೀಟಿ, ದಾಖಲಾತಿ ಇದೆ ಎಂದಿದ್ದಾರೆ.

ಈಗ ಬೃಹತ್‌ ಕೈಗಾರಿಕೆಗಾಗಿ ಗುರುತಿಸಿರುವ ಜಾಗದಲ್ಲೇ, ನಾವು ಬಹಳ ಹಿಂದಿನಿಂದಲೂ ನಮ್ಮ ಹಣದಿಂದ ಬೋರ್‌ವೇಲ್ ಕೊರೆಸಿ ರಾಗಿ, ಭತ್ತ, ತೆಂಗು ಬೆಳೆಯುತ್ತಿದ್ದೇವೆ. ಅಲ್ಲಿ 50 ವರ್ಷದ ಮರಗಳಿವೆ. ರಾಜಕಾರಣಿಗಳು ಗಾಳಿಗೆ ಗುಂಡು ಹಾರಿಸೋದು ಬೇಡ. ನಮ್ಮ ಶಾಸಕರು ಖುದ್ದಾಗಿ ಅಧಿಕಾರಿಗಳನ್ನು ಕರೆದುಕೊಂಡು ಬಂದು ಜಾಗ ಖಾಲಿ ಇದ್ರೆ ತೋರಿಸಿಕೊಡಲಿ ಎಂದಿದ್ದಾರೆ.

ARAI ಸಂಸ್ಥೆಯವರು ಸರ್ವೆ ಮಾಡಿದಾಗಲೇ ವಿರೋಧ ಪಡಿಸಿದ್ದೆವು:
ಇನ್ನು ಈ ಸಂಬಂಧ ARAI ಸಂಸ್ಥೆಯವರು ಸರ್ವೆ ಮಾಡಿದಾಗಲೇ ವಿರೋಧ ಮಾಡಿದ್ವಿ. ಎಲ್ಲರೂ ಸೇರಿ ನಮ್ಮನ್ನು ಯಾಮಾರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿರು ರೈತರು, ರೈತರ ಅಹವಾಲನ್ನು ಕೇಳಿ ಪರಿಹಾರ ಕಂಡುಕೊಳ್ಳಬೇಕಾದ ಶಾಸಕರು ನಮ್ಮ ಸಮಸ್ಯೆಯನ್ನು ರಾಜಕೀಯ ಪ್ರೇರಿತವೆಂದು ತಳ್ಳಿಹಾಕುತ್ತಿರುವುದು ಉದ್ದೇಶಪೂರ್ವಕವಾಗಿದೆ ಎಂದು ಅವರ  ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಜಮೀನು, ಬೆಳೆ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ನಿರ್ಧರಿಸುವ ಅರಿವು ನಮಗಿದೆ. ಮತ್ತೆ ಮುಂದುವರೆದು ನಮ್ಮ ಜೀವನದ ಚೆಲ್ಲಾಟವಾಡಿದರೆ ಆತ್ಮಹ*ತ್ಯೆ ಮಾಡಿಕೊಳ್ಳದೇ ಗತ್ಯಂತರವಿಲ್ಲ ಎಂದು ಇದೇ ವೇಳೆ ರೈತರು ಎಚ್ಚರಿಕೆ ಕೊಟ್ಟಿದ್ದಾರೆ.

ARAI ಘಟಕ ಸ್ಥಾಪನೆಗೆ ಮುದ್ದನಘಟ್ಟ ರೈತರು ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರ ಮುಂದಿನ ನಿಲುವೇನು? ರಾಜ್ಯ ಸರ್ಕಾರ, ಮಂಡ್ಯ ಜಿಲ್ಲಾಡಳಿತದ ಮುಂದಿನ ನಡೆ ಹೇಗಿರಲಿದೆ? ಎಂಬುದನ್ನು ಕಾದುನೋಡಬೇಕಿದೆ. 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES