ಮಳೆ ತಂದ ಅವಾಂತರ: ತಡರಾತ್ರಿ ಸುರಿದ ಭಾರೀ ಮಳೆಗೆ ಸೇತುವೆಗೆ ಹಾನಿ.. ಬೇಗೂರಿನಲ್ಲಿ ನೆಲಕಚ್ಚಿದ ಬಾಳೆ
ಗಡಿಜಿಲ್ಲೆ ಚಾಮರಾಜನಗರದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ಕೆಲವೆಡೆ ಭಾರೀ ಅವಾಂತರವೇ ಸೃಷ್ಟಿ ಆಗಿದೆ.
ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಹಾಗೂ ಗುಂಡ್ಲುಪೇಟೆ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು ಒಂದೆಡೆ 40 ವರ್ಷದ ಹಳೆಯ ಸೇತುವೆ ಹಾನಿಯಾಗಿದ್ದರೆ, ಮತ್ತೊಂದೆಡೆ ಬೆಳೆ ಹಾನಿಯಿಂದಾಗಿ ರೈತರು ತತ್ತರಿಸಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಮಳೆಯಿಂದ ಏನೆಲ್ಲಾ ಹಾನಿಯಾಗಿದೆ ಎಂಬ ವರದಿ ಇಲ್ಲಿದೆ.
ಕೊಳ್ಳೆಗಾಲ ಟು ಮಲೆ ಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಹಾನಿಗೊಳಗಾದ ಸೇತುವೆ:
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಳೆಯ ಸೇತುವೆಗೆ ಹಾನಿ ಹಾನಿಯಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೌದಳ್ಳಿ ಬಳಿಯ ಕೊಳ್ಳೇಗಾಲ ದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯೆ ಮಳೆ ಅವಾಂತರ ಸೃಷ್ಟಿಸಿದ್ದು 40 ವರ್ಷದ ಹಳೆಯ ಸೇತುವೆಗೆ ಮಳೆಯಿಂದ ಹಾನಿಗೊಳಗಾಗಿದೆ.
ಮಳೆಯ ರಭಸಕ್ಕೆ ಸೇತುವೆ ಮೇಲೆ ಹಾಕಿದ್ದ ಡಾಂಬಾರು ಕೊಚ್ಚಿ ಹೋಗಿದ್ದು, ಮಳೆಯಿಂದಾಗಿ ತುವೆ ಮೇಲೆ ಬೃಹತ್ ಲಾರಿ ಸಿಲುಕಿರುವುದರಿಂದ ಸಂಚಾರ ದಟ್ಟಣೆಗೆ ಕಾರಣವಾಗಿದೆ.
ಹನೂರು ತಾಲೂಕಿನಲ್ಲಿ ಎರಡು ದಶಕಗಳಿಂದ ಕಂಡು ಕೇಳರಿಯದ ಮಳೆ:
ಇನ್ನು ಕಳೆದ 20 ವರ್ಷಗಳಲ್ಲೆ ಕಂಡು ಕೇಳರಿಯದ ಮಳೆ ಕಂಡು ಹನೂರು ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದಾರೆ.
ಮಳೆ ತಂದ ಅವಾಂತರ: ಬೇಗೂರಿನಲ್ಲಿ ನೆಲಕಚ್ಚಿದ ಬಾಳೆ
ಇನ್ನು ಬಿಸಿಲಿನಿಂದ ತತ್ತರಿಸಿದ್ದ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ವರುಣ ಆರ್ಭಟಿಸಿದ್ದು ಬಹುತೇಕ ಕಡೆ ಜೋರು ಮಳೆಯಾಗಿದೆ. ಜೊತೆಗೆ, ಬಿರುಗಾಳಿಯಿಂದ ಬಾಳೆ ನೆಲಕಚ್ಚಿ ರೈತರಿಗೆ ನಷ್ಟ ಉಂಟು ಮಾಡಿದೆ.
ಬಿರುಗಾಳಿ ಸಹಿತ ಭಾರೀ ಮಳೆಗೆ ಬಾಳೆ ಬೆಳೆ ಸಂಪೂರ್ಣ ಹಾನಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದ್ದು ಶ್ರೀನಿವಾಸ ಎಂಬವರಿಗೆ ಸೇರಿದ ಒಂದೂವರೆ ಎಕರೆ ಬಾಳೆ ಸಂಪೂರ್ಣ ನೆಲಕಚ್ಚಿದೆ.
ಸಾಲ ಮಾಡಿ ಬಾಳೆ ಫಸಲು ಬೆಳೆದಿದ್ದೆವು. ಇನ್ನೇನು ಬೆಳೆ ಕೈಗೆ ಬರಬೇಕಿತ್ತು. ಅಷ್ಟರಲ್ಲೇ ಪ್ರಕೃತಿ ಮುನಿದು ಎಲ್ಲವನ್ನೂ ಮಣ್ಣುಪಾಲು ಮಾಡಿದೆ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಮಳೆ ಅವಾಂತರದ ಬಗ್ಗೆ ಮಾಧ್ಯಮಗಳೊಂದಿಗೆ ತಮ್ಮ ಅಳಲು ತೋಡಿಕೊಂಡಿರುವ ರೈತ ಶ್ರೀನಿವಾಸ್, ಈ ಬಾರಿ ಬಾಳೆ ಫಸಲು ಉತ್ತಮವಾಗಿತ್ತು. ಹೀಗಾಗಿ, ಈ ಫಸಲಿನಲ್ಲಿ ಸುಮಾರು 4 ಲಕ್ಷ ರೂ.ಗಳಷ್ಟು ಆದಾಯ ನಿರೀಕ್ಷೆ ಮಾಡಿದ್ದೆ. ಆದರೆ, ಮಳೆಯಿಂದಾಗಿ ಬೆಳೆ ನೆಲಕಚ್ಚಿರುವುದರಿಂದ ಏನು ಮಾಡಬೇಕೆಂಬುದೇ ಅರಿಯದಂತಾಗಿದೆ ಎಂದಿದ್ದಾರೆ.
ಒಟ್ಟಾರೆಯಾಗಿ ಮೊದಲು ಮುಂಗಾರಿನ ವೇಳೆ ಸರಿಯಾಗಿ ಮಳೆ ಬಾರದೆ ಬಿತ್ತನೆ ನೆಲಕಚ್ಚಿತ್ತು. ಇದೀಗ, ಹಿಂಗಾರು ಅಬ್ಬರ ಜೋರಾಗಿ ರೈತರಿಗೆ ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿರುವುದು ಮಾತ್ರ ನಿಜಕ್ಕೂ ವಿಪರ್ಯಾಸವೇ ಸರಿ.