SOCIAL MEDIA

Newsletter

PARTNER SITES
Select Language Select State

ಮದುವೆಗೆ ಹೆಣ್ಣು ಸಿಕ್ತಿಲ್ಲ..‌ ಯೋಜನೆ ತನ್ನಿ ಸರ್ ಎಂದ ಯುವಕ! ಸಿಎಂ‌ ಡಿ.ಕೆ.ಶಿವಕುಮಾರ್‌ ಹೇಳಿದ್ದೇನು?

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಯುವಕರು ಮದುವೆಯಾಗಲು ಎದುರಿಸುತ್ತಿರುವ ಸಮಸ್ಯೆಗಳು ಸಾರ್ವಜನಿಕ ಚರ್ಚೆಗೆ ಬರುತ್ತಿವೆ. ವಿಶೇಷವಾಗಿ ಕೃಷಿಯನ್ನೇ ನಂಬಿಕೊಂಡಿರುವ ಯುವಕರಿಗೆ ಸೂಕ್ತ ಸಂಗಾತಿ ಹುಡುಕುವುದು ಕಷ್ಟವಾಗುತ್ತಿದೆ ಎಂಬ ಅಳಲು ಕೇಳಿಬರುತ್ತಿದೆ.

Written By Puttaraj K Alur
Published: Oct 04, 2026, 06:18 AM IST | Updated: Oct 04, 2026, 06:32 AM IST
Image Credit: Prajaseva Programme
Join

CM DK Shivakumar Prajaseva Programme: ರೈತರು ದೇಶದ ಬೆನ್ನೆಲುಬು, ಅನ್ನದಾತರು ಎಂದು ಗೌರವಿಸಲಾಗುತ್ತದೆ. ಆದರೆ ಕೃಷಿಯನ್ನೇ ನಂಬಿಕೊಂಡಿರುವ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವೆಂಬ ಸಮಸ್ಯೆ ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಯುವಕನೊಬ್ಬ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮುಂದೆಯೇ ಈ ಸಮಸ್ಯೆಯನ್ನ ಪ್ರಸ್ತಾಪಿಸಿ, ಮದುವೆಯಾಗಲು ನೆರವಾಗುವಂತಹ ಯೋಜನೆ ರೂಪಿಸುವಂತೆ ಮನವಿ ಮಾಡಿದ್ದಾನೆ. ಈ ವೇಳೆ ಮುಖ್ಯಮಂತ್ರಿಗಳು ನೀಡಿದ ಪ್ರತಿಕ್ರಿಯೆ ಗಮನ ಸೆಳೆದಿದೆ.  

“35-40 ವರ್ಷವಾದರೂ ಮದುವೆಯಾಗುತ್ತಿಲ್ಲ”

ಪ್ರಜಾಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದ ಯುವಕ, ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಅನೇಕ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ. ಕಷ್ಟಪಟ್ಟು ಬೆಳೆ ಬೆಳೆದು ಬದುಕು ಕಟ್ಟಿಕೊಳ್ಳುವ ರೈತರ ಮಕ್ಕಳಿಗೆ ಮದುವೆ ವಿಚಾರದಲ್ಲಿ ತೊಂದರೆ ಎದುರಾಗುತ್ತಿದೆ ಎಂದು ಹೇಳಿದ್ದಾನೆ.

“ನಮಗೆ 35ರಿಂದ 40 ವರ್ಷ ವಯಸ್ಸಾದರೂ ಮದುವೆಯಾಗುತ್ತಿಲ್ಲ. ಎಷ್ಟೇ ಜಮೀನು, ಆಸ್ತಿ ಇದ್ದರೂ ರೈತರು ಎಂದರೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಮನೆ, ಜಮೀನು ಮಾರಿಕೊಂಡರೂ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ” ಎಂದು ಯುವಕ ತನ್ನ ನೋವನ್ನ ವ್ಯಕ್ತಪಡಿಸಿದ್ದಾನೆ.

ಈ ಸಮಸ್ಯೆ ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ, ರಾಜ್ಯದ ಅನೇಕ ಯುವಕರ ಬದುಕಿನ ಪ್ರಶ್ನೆಯಾಗಿದೆ ಎಂದು ಹೇಳಿದ ಆತ, ಮದುವೆಯಾಗಲು ಸಾಧ್ಯವಾಗದೆ ಕೆಲವರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ ಎಂದೂ ಆತಂಕ ವ್ಯಕ್ತಪಡಿಸಿದ್ದಾನೆ. ಈ ಸಮಸ್ಯೆಗೆ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾನೆ.  

“ಇದನ್ನು ತಮಾಷೆ ಎಂದುಕೊಳ್ಳಬೇಡಿ”

ರೈತ ಯುವಕರ ಮದುವೆ ಸಮಸ್ಯೆಯನ್ನ ಪ್ರಸ್ತಾಪಿಸಿದ ಯುವಕ, ಇದನ್ನ ಕೇವಲ ಹಾಸ್ಯ ಅಥವಾ ತಮಾಷೆಯ ವಿಷಯವಾಗಿ ಪರಿಗಣಿಸಬಾರದು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾನೆ. ಮದುವೆಯಾಗದೆ ಉಳಿಯುತ್ತಿರುವ ಯುವಕರ ಬದುಕಿನ ಬಗ್ಗೆ ಸರ್ಕಾರ ಗಮನಹರಿಸಬೇಕು. ಲಕ್ಷಾಂತರ ಯುವಕರಿಗೆ ಅನುಕೂಲವಾಗುವಂತಹ ಯೋಜನೆಯನ್ನ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾನೆ.

ಸಾಮಾನ್ಯವಾಗಿ ರೈತರನ್ನ ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ಆದರೆ ಕೃಷಿಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ಯುವಕರಿಗೆ ಮದುವೆಯ ವಿಚಾರದಲ್ಲಿ ಎದುರಾಗುತ್ತಿರುವ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಬೇಕು ಎಂಬುದು ಯುವಕನ ಮನವಿಯ ಮುಖ್ಯ ಆಶಯವಾಗಿತ್ತು.

ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ಏನು?

ಯುವಕನ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಇದು ತಮಾಷೆಯ ವಿಷಯವಲ್ಲ, ಸಾಮಾಜಿಕ ಸಮಸ್ಯೆ ಎಂಬುದನ್ನ ಒಪ್ಪಿಕೊಂಡರು. ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವೆಂಬ ಯುವಕನ ಅಳಲಿಗೆ ಪ್ರತಿಕ್ರಿಯಿಸಿದ ಅವರು, ಇಂದಿನ ಸಮಾಜದಲ್ಲಿ ಉದ್ಯೋಗ ಮತ್ತು ಜೀವನಶೈಲಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರವೃತ್ತಿಯ ಬಗ್ಗೆಯೂ ಪ್ರಸ್ತಾಪಿಸಿದರು. ಯುವಕನ ಮನವಿಗೆ ಸಮಾಧಾನಕರವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, “ನಿನ್ನ ಹೆಸರಲ್ಲೇ ಯೋಜನೆ ತರೋಣ ಹೋಗು” ಎಂದು ಹೇಳಿದರು. ಮುಖ್ಯಮಂತ್ರಿಗಳ ಈ ಮಾತು ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.  

ರೈತ ಯುವಕರ ಸಮಸ್ಯೆ ಮತ್ತೆ ಚರ್ಚೆಗೆ

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಯುವಕರು ಮದುವೆಯಾಗಲು ಎದುರಿಸುತ್ತಿರುವ ಸಮಸ್ಯೆಗಳು ಸಾರ್ವಜನಿಕ ಚರ್ಚೆಗೆ ಬರುತ್ತಿವೆ. ವಿಶೇಷವಾಗಿ ಕೃಷಿಯನ್ನೇ ನಂಬಿಕೊಂಡಿರುವ ಯುವಕರಿಗೆ ಸೂಕ್ತ ಸಂಗಾತಿ ಹುಡುಕುವುದು ಕಷ್ಟವಾಗುತ್ತಿದೆ ಎಂಬ ಅಳಲು ಕೇಳಿಬರುತ್ತಿದೆ. ಕೃಷಿ ಆದಾಯದ ಅನಿಶ್ಚಿತತೆ, ಗ್ರಾಮೀಣ ಜೀವನದ ಬಗ್ಗೆ ಇರುವ ಪೂರ್ವಗ್ರಹಗಳು ಹಾಗೂ ಉದ್ಯೋಗದ ಕುರಿತ ನಿರೀಕ್ಷೆಗಳು ಈ ಚರ್ಚೆಯಲ್ಲಿ ಪ್ರಸ್ತಾಪವಾಗುವ ಅಂಶಗಳಾಗಿವೆ. ಆದರೆ ಎಲ್ಲ ಕುಟುಂಬಗಳ ನಿರ್ಧಾರಕ್ಕೂ ಒಂದೇ ಕಾರಣವಿದೆ ಎಂದು ಹೇಳಲು ಸಾಧ್ಯವಿಲ್ಲ.

ಹಾಸನದಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿಯೂ ಯುವಕನೊಬ್ಬ ಮದುವೆ ಮಾಡಿಸುವಂತೆ ಮನವಿ ಮಾಡಿದ್ದ. ಇದೀಗ ಪಿರಿಯಾಪಟ್ಟಣದಲ್ಲೂ ಇದೇ ರೀತಿಯ ಬೇಡಿಕೆ ಕೇಳಿಬಂದಿರುವುದು ಗ್ರಾಮೀಣ ಯುವಕರ ಮದುವೆ ಸಮಸ್ಯೆಯ ಕುರಿತು ಮತ್ತೊಮ್ಮೆ ಗಮನ ಸೆಳೆದಿದೆ. ಜನರ ಸಮಸ್ಯೆಗಳನ್ನ ಆಲಿಸಿ ಪರಿಹಾರ ಒದಗಿಸುವ ಉದ್ದೇಶದಿಂದ ಪ್ರಜಾಸೇವೆ ಕಾರ್ಯಕ್ರಮಗಳನ್ನ ನಡೆಸಲಾಗುತ್ತಿದೆ. ಈ ವೇದಿಕೆಯಲ್ಲಿ ಯುವಕನೊಬ್ಬ ಮುಂದಿಟ್ಟಿರುವ ಬೇಡಿಕೆ, ರೈತ ಯುವಕರ ಸಾಮಾಜಿಕ ಬದುಕಿನ ಸವಾಲುಗಳ ಕುರಿತು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.  

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES