SOCIAL MEDIA

Newsletter

PARTNER SITES
Select Language Select State

ಮುಖ್ಯಮಂತ್ರಿಗೆ ತಾಯಿ ಹೃದಯ ಇಲ್ಲ, ರೈತರ ಬದುಕು ಬೀದಿಗೆ! ನಿಖಿಲ್ ಕುಮಾರಸ್ವಾಮಿ ಕಿಡಿ

ರೈತರ ಸಮಸ್ಯೆಗಳ ಕುರಿತು ವಿಶೇಷ ಅಧಿವೇಶನ ಕರೆದರೂ, ರೈತರಿಗೆ ನಿಜವಾದ ಪರಿಹಾರ ಸಿಕ್ಕಿಲ್ಲವೆಂದು ನಿಖಿಲ್ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಅಧಿವೇಶನದಲ್ಲಿ ವಾಲ್ಮೀಕಿ ಹಗರಣದ ವಿಚಾರವಾಗಿ ಚರ್ಚೆ ನಡೆದು ಸಮಯ ವ್ಯರ್ಥವಾಯಿತು ಎಂದು ಆರೋಪಿಸಿದ್ದಾರೆ.

Written By Puttaraj K Alur
Published: Sep 29, 2026, 04:26 PM IST | Updated: Sep 29, 2026, 04:50 PM IST
Image Credit: Nikhil Kumaraswamy
Join

Nikhil Kumaraswamy Slams DK Shivakumar: ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳು ಒಣಗಿ ರೈತರ ಬದುಕು ಬೀದಿಗೆ ಬಿದ್ದಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಕನಿಷ್ಠ ₹25,000 ಪರಿಹಾರ ಘೋಷಿಸಬೇಕಿದ್ದ ಸರ್ಕಾರ ಕೇವಲ ₹2,500 ನೀಡುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಲಗೂರಿನಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರೈತರ ಬಗ್ಗೆ ತಾಯಿ ಹೃದಯವಿಲ್ಲವೆಂದು ಟೀಕಿಸಿದ್ದಾರೆ.

ರೈತರಿಗೆ ಎಕರೆಗೆ ₹25 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆ ಕೈಕೊಟ್ಟಿರುವುದರಿಂದ ರೈತರು ಕೃಷಿ ಚಟುವಟಿಕೆಗಳನ್ನ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಬಿತ್ತನೆ ಮಾಡಿರುವ ಬೆಳೆಗಳು ಒಣಗುತ್ತಿದ್ದು, ರೈತರು ಆರ್ಥಿಕವಾಗಿ ಹಾಗೂ ಕೃಷಿ ಚಟುವಟಿಕೆಗಳ ದೃಷ್ಟಿಯಿಂದ ತತ್ತರಿಸಿದ್ದಾರೆಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ರೈತರ ಸಂಕಷ್ಟವನ್ನ ಗಮನಿಸಿ ಸರ್ಕಾರ ಎಕರೆಗೆ ಕನಿಷ್ಠ ₹25,000 ಪರಿಹಾರ ಘೋಷಿಸಬೇಕಿತ್ತು. ಆದರೆ ರೈತರಿಗೆ ₹2,500 ನೀಡುವುದರಿಂದ ಏನು ಪ್ರಯೋಜನವಾಗಲಿದೆ ಎಂದು ಪ್ರಶ್ನಿಸಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ 97 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿರುವ ನಿಖಿಲ್, ರೈತರ ಬದುಕು ಕಟ್ಟಿಕೊಡುವ ಕೆಲಸವನ್ನ ಸರ್ಕಾರ ಮಾಡುತ್ತಿಲ್ಲವೆಂದು ಆರೋಪಿಸಿದ್ದಾರೆ. ರೈತರ ಪರವಾಗಿ ಮಳವಳ್ಳಿ ಭಾಗದಲ್ಲಿ ಜೆಡಿಎಸ್ ವತಿಯಿಂದ ಪಾದಯಾತ್ರೆ ನಡೆಸಲಾಗುತ್ತಿದೆ. ರೈತರ ಸಮಸ್ಯೆಗಳನ್ನ ಸರ್ಕಾರದ ಗಮನಕ್ಕೆ ತಂದು, ಅವರ ಪರವಾಗಿ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.

90 ಅಡಿ ನೀರಿದ್ದರೂ ಕೆಆರ್‌ಎಸ್‌ನಿಂದ ನೀರು ಬಿಡಲಿಲ್ಲ!

ಕಾವೇರಿ ನೀರಿನ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧವೂ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಆರ್‌ಎಸ್ ಜಲಾಶಯದಲ್ಲಿ 70 ಅಡಿ ನೀರಿದ್ದಾಗಲೂ ನೀರು ಬಿಡುಗಡೆ ಮಾಡಿದ ಇತಿಹಾಸವಿದೆ. ಆದರೆ ಈ ಬಾರಿ 90 ಅಡಿ ನೀರಿದ್ದರೂ ಸರ್ಕಾರ ನೀರು ಬಿಡಲಿಲ್ಲವೆಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳು ರೈತರಿಗೆ ಬೆಳೆ ಹಾಕಬೇಡಿ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ ನಾಲೆಗಳ ದುರಸ್ತಿ ಕಾರ್ಯವನ್ನ ಈಗ ಕೈಗೆತ್ತಿಕೊಳ್ಳಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ನೀರು ಮತ್ತು ಮೂಲಸೌಕರ್ಯ ಒದಗಿಸದಿದ್ದರೆ ರೈತರು ಕೃಷಿ ಮಾಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

35 ಹೆಕ್ಟರ್ ಪ್ರದೇಶದಲ್ಲಿ ಕಬ್ಬು ಬೆಳೆದಿರುವ ರೈತರ ಬೆಳೆ ಒಣಗಿದೆ ಎಂದು ಉದಾಹರಿಸಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ಫೋಟೊ ಮತ್ತು ವಿಡಿಯೋ ಮಾಡಿಸಿಕೊಳ್ಳುವುದರಲ್ಲೇ ಕಾಲಹರಣ ಮಾಡುವ ಬದಲು, ಕಾವೇರಿ ನೀರಿನ ಹಕ್ಕು ಉಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ವಿಶೇಷ ಅಧಿವೇಶನದಲ್ಲಿ ರೈತರಿಗೆ ಏನು ಸಿಕ್ಕಿತು?

ರೈತರ ಸಮಸ್ಯೆಗಳ ಕುರಿತು ವಿಶೇಷ ಅಧಿವೇಶನ ಕರೆದರೂ, ರೈತರಿಗೆ ನಿಜವಾದ ಪರಿಹಾರ ಸಿಕ್ಕಿಲ್ಲವೆಂದು ನಿಖಿಲ್ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಅಧಿವೇಶನದಲ್ಲಿ ವಾಲ್ಮೀಕಿ ಹಗರಣದ ವಿಚಾರವಾಗಿ ಚರ್ಚೆ ನಡೆದು ಸಮಯ ವ್ಯರ್ಥವಾಯಿತು ಎಂದು ಆರೋಪಿಸಿದ್ದಾರೆ. ರೈತರ ಬದುಕು ಕಟ್ಟಿಕೊಡುತ್ತೇನೆ ಎಂದು ಮುಖ್ಯಮಂತ್ರಿ ಪದೇಪದೇ ಹೇಳುತ್ತಾರೆ. ಆದರೆ ವಾಸ್ತವದಲ್ಲಿ ರೈತರು ಕಣ್ಣೀರಿಡುತ್ತಿದ್ದಾರೆ. ಕೇವಲ ಘೋಷಣೆಗಳಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ. ಕನಿಷ್ಠ ₹25,000 ಪರಿಹಾರ ನೀಡುವ ಮೂಲಕ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಜನರನ್ನ ಆರ್ಥಿಕ ದಿವಾಳಿಯ ಅಂಚಿಗೆ ತಳ್ಳಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಕಲಬುರಗಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಿದರೂ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದನ್ನ ಸರ್ಕಾರ ಸ್ಪಷ್ಟಪಡಿಸಬೇಕು. ಮಂಗಳೂರಿಗೆ ತೆರಳಿ ₹35 ಸಾವಿರ ಕೋಟಿ ಬಜೆಟ್ ನೀಡುವುದಾಗಿ ಹೇಳುವ ಸರ್ಕಾರದ ಬಳಿ ಹಣಕಾಸಿನ ಪರಿಸ್ಥಿತಿ ಕುರಿತು ಸ್ಪಷ್ಟತೆ ಇರಬೇಕು ಎಂದು ಹೇಳಿದ್ದಾರೆ.

ಬರದ ನಡುವೆ ಅದ್ದೂರಿ ದಸರಾ, ಕಾವೇರಿ ಆರತಿಗೆ ವಿರೋಧ

ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇರುವಾಗ ಅದ್ದೂರಿ ದಸರಾ ಮತ್ತು ಕಾವೇರಿ ಆರತಿ ಆಚರಣೆಯ ಅಗತ್ಯವೇನು ಎಂದು ನಿಖಿಲ್ ಪ್ರಶ್ನಿಸಿದ್ದಾರೆ. ರಾಜ್ಯದ ಹಣವನ್ನ ರೈತರ ಸಂಕಷ್ಟ ಪರಿಹಾರಕ್ಕೆ ಬಳಸಬೇಕು. ವಿಧಾನಸೌಧದಲ್ಲಿ ಟೀ, ಕಾಫಿಗೆ ₹200 ಕೋಟಿ ಖರ್ಚು ತೋರಿಸಿದ್ದಾರೆ ಎಂದು ಆರೋಪಿಸಿದ ಅವರು, ಮಂಡ್ಯಕ್ಕೆ ಬಂದರೆ ₹5ಕ್ಕೆ ಉತ್ತಮ ಚಹಾ ಕೊಡಿಸುವುದಾಗಿ ವ್ಯಂಗ್ಯವಾಡಿದ್ದಾರೆ.

ದಸರಾಕ್ಕೆ ಐತಿಹಾಸಿಕ ಮಹತ್ವವಿದೆ ಎಂದು ಹೇಳಿದ ನಿಖಿಲ್, ಸರ್ಕಾರ ಹೇಗೆ ಬೇಕಾದರೂ ಆಚರಣೆ ಮಾಡಿಕೊಳ್ಳಲಿ, ಆದರೆ ಭೀಕರ ಬರಗಾಲದ ನಡುವೆ ರೈತರನ್ನ ಉಳಿಸುವುದು ಮೊದಲ ಆದ್ಯತೆಯಾಗಬೇಕು ಎಂದಿದ್ದಾರೆ. ಮುಂದಿನ ಒಂದೂವರೆ ವರ್ಷ ರಾಜ್ಯದ ಜನರನ್ನ ದೇವರೇ ಕಾಪಾಡಬೇಕು ಎಂದು ಟೀಕಿಸಿದ ಅವರು, ಜೆಡಿಎಸ್ ರೈತ ಸಮುದಾಯವನ್ನ ಒಗ್ಗೂಡಿಸಿ ರೈತರ ಪರವಾಗಿ ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES