• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /Mysuru Dasara: ಅರಮನೆಯಲ್ಲಿ ಅ.7ರಿಂದ ಧಾರ್ಮಿಕ ಕಾರ್ಯಕ್ರಮ; ವಿಜಯದಶಮಿಯಂದು ಶರನ್ನವರಾತ್ರಿ ಸಂಪನ್ನ

Mysuru Dasara: ಅರಮನೆಯಲ್ಲಿ ಅ.7ರಿಂದ ಧಾರ್ಮಿಕ ಕಾರ್ಯಕ್ರಮ; ವಿಜಯದಶಮಿಯಂದು ಶರನ್ನವರಾತ್ರಿ ಸಂಪನ್ನ

ಮೈಸೂರು ಅರಮನೆಯಲ್ಲಿ ಅಕ್ಟೋಬರ್‌ 7ರಿಂದ ಖಾಸಗಿ ದಸರಾ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಅಕ್ಟೋಬರ್‌ 21ರಂದು ವಿಜಯದಶಮಿಯೊಂದಿಗೆ ಶರನ್ನವರಾತ್ರಿ ಸಂಪನ್ನವಾಗಲಿದೆ. ಕಂಬಳವನ್ನ ದಸರಾ ಭಾಗವಾಗಿಸುವ ಬದಲು ಪ್ರತ್ಯೇಕವಾಗಿ ಆಯೋಜಿಸಿದರೆ ಹೆಚ್ಚಿನ ಮಹತ್ವ ಸಿಗಲಿದೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಹೇಳಿದ್ದಾರೆ.

Reported ByPuttaraj K AlurEdited ByPuttaraj K Alur
Published: Sep 22, 2026, 07:33 PM IST|Updated: Sep 22, 2026, 07:46 PM IST
joinshare
Mysuru Dasara: ಅರಮನೆಯಲ್ಲಿ ಅ.7ರಿಂದ ಧಾರ್ಮಿಕ ಕಾರ್ಯಕ್ರಮ; ವಿಜಯದಶಮಿಯಂದು ಶರನ್ನವರಾತ್ರಿ ಸಂಪನ್ನ
Image Credit: Mysuru Dasara 2026

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

2

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

3

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

4

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

5

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Mysuru Dasara 2026: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಮೈಸೂರು ಅರಮನೆಯಲ್ಲಿ ನಡೆಯಲಿರುವ ಖಾಸಗಿ ದಸರಾ ಕಾರ್ಯಕ್ರಮಗಳ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಾಹಿತಿ ನೀಡಿದ್ದಾರೆ. ಅಕ್ಟೋಬರ್‌ 7ರಿಂದ ಅರಮನೆಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಅಕ್ಟೋಬರ್‌ 21ರಂದು ವಿಜಯದಶಮಿಯೊಂದಿಗೆ ಶರನ್ನವರಾತ್ರಿ ಆಚರಣೆ ಸಂಪನ್ನವಾಗಲಿದೆ.

ಅರಮನೆಯ ಖಾಸಗಿ ಕಾರ್ಯಕ್ರಮಗಳು ಪ್ರತಿ ವರ್ಷವೂ ತನ್ನದೇ ಆದ ಧಾರ್ಮಿಕ ಮತ್ತು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆಯುತ್ತವೆ. ಈ ಬಾರಿಯೂ ನಿಗದಿತ ಮುಹೂರ್ತಗಳಲ್ಲಿ ವಿವಿಧ ಪೂಜೆ, ಹೋಮ, ಸಿಂಹಾಸನ ಜೋಡಣೆ, ಖಾಸಗಿ ದರ್ಬಾರ್‌, ಆಯುಧ ಪೂಜೆ ಹಾಗೂ ವಿಜಯಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.

ಅಕ್ಟೋಬರ್‌ 7ರಿಂದ ಕಾರ್ಯಕ್ರಮ ಆರಂಭ

ಅಕ್ಟೋಬರ್‌ 7ರಂದು ಬೆಳಗ್ಗೆ 7.30ಕ್ಕೆ ನವಗ್ರಹ ಹೋಮ ಹಾಗೂ ಸ್ಥಳಶುದ್ಧೀಕರಣ ನಡೆಯಲಿದೆ. ಬಳಿಕ ಬೆಳಗ್ಗೆ 10ರಿಂದ 10.20ರವರೆಗೆ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದೆ. ಅಕ್ಟೋಬರ್‌ 11ರಂದು ಬೆಳಗ್ಗೆ 6ರಿಂದ 7.12ರವರೆಗೆ ಸಿಂಹಾಸನಕ್ಕೆ ಸಿಂಹ ಜೋಡಣೆ ನಡೆಯಲಿದೆ. ನಂತರ ಬೆಳಗ್ಗೆ 8.35ರಿಂದ 9.05ರವರೆಗೆ ಕಂಕಣಧಾರಣೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 11.45ರಿಂದ 12.05ರವರೆಗೆ ಸಿಂಹಾಸನಾರೋಹಣ ನೆರವೇರಲಿದೆ. ಮಧ್ಯಾಹ್ನ 1.40ರಿಂದ 2.05ರವರೆಗೆ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ದೇವರನ್ನ ಕರೆತಂದು, ವಿಜಯದಶಮಿಯವರೆಗೂ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತದೆ.

ಸರಸ್ವತಿ ಪೂಜೆ, ಕಾಳರಾತ್ರಿ ಮತ್ತು ದುರ್ಗಾಷ್ಟಮಿ

ಅಕ್ಟೋಬರ್‌ 16ರಂದು ಬೆಳಗ್ಗೆ 10.10ರಿಂದ 10.30ರವರೆಗೆ ಸರಸ್ವತಿ ಪೂಜೆ ಆರಂಭವಾಗಲಿದೆ. ಅಕ್ಟೋಬರ್‌ 17ರಂದು ಶನಿವಾರ ಸಂಜೆ ಖಾಸಗಿ ದರ್ಬಾರ್‌ ಬಳಿಕ ಕಾಳರಾತ್ರಿ ಪೂಜೆ ನಡೆಯಲಿದೆ. ಅಕ್ಟೋಬರ್‌ 18ರಂದು ಭಾನುವಾರ ದುರ್ಗಾಷ್ಟಮಿ ಪೂಜೆ ನೆರವೇರಲಿದೆ. ಅಕ್ಟೋಬರ್‌ 20ರಂದು ಮಹಾನವಮಿ ಆಚರಣೆ ನಡೆಯಲಿದ್ದು, ಬೆಳಗ್ಗೆ 6 ಗಂಟೆಗೆ ಚಂಡಿ ಹೋಮ ಆರಂಭವಾಗಲಿದೆ. ಇದೇ ದಿನ ಕೋಡಿ ಸೋಮೇಶ್ವರ ದೇವಾಲಯಕ್ಕೆ ಅರಮನೆಯಿಂದ ಖಾಸಗಿ ಆಯುಧಗಳನ್ನ ಕಳುಹಿಸಲಾಗುತ್ತದೆ. ಅಲ್ಲಿ ಎಣ್ಣೆ ಪೂಜೆ ನೆರವೇರಿಸಿದ ಬಳಿಕ ಖಾಸಾ ಆಯುಧಗಳನ್ನ ಮತ್ತೆ ಕಲ್ಯಾಣ ಮಂಟಪಕ್ಕೆ ತರಲಾಗುತ್ತದೆ. ಬೆಳಗ್ಗೆ 11.32ರಿಂದ 11.52ರ ಒಳಗೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನಡೆಯಲಿದೆ. ನಂತರ ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಒಂಟೆ, ಪಟ್ಟದ ಕುದುರೆಗಳು ಸೇರಿದಂತೆ ಅರಮನೆಯ ವಾಹನಗಳು ಹಾಗೂ ಕತ್ತಿ, ಈಟಿ, ಗುರಾಣಿ ಸೇರಿದಂತೆ ವಿವಿಧ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ಅ.21ರಂದು ವಿಜಯದಶಮಿ

ಅಕ್ಟೋಬರ್‌ 21ರಂದು ವಿಜಯದಶಮಿ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಹಾಗೂ ಪಟ್ಟದ ಒಂಟೆ ಆನೆಬಾಗಿಲಿಗೆ ಆಗಮಿಸಲಿವೆ. ಬೆಳಗ್ಗೆ 8.15ಕ್ಕೆ ಕಲ್ಯಾಣ ಮಂಟಪದಲ್ಲಿ ಉತ್ತರ ಪೂಜೆ ಆರಂಭವಾಗಲಿದೆ. ಬಳಿಕ 9.30ರಿಂದ 10.10ರ ಒಳಗೆ ವಿಜಯಯಾತ್ರೆ ಹಾಗೂ ಶಮಿ ಪೂಜೆ ನಡೆಯಲಿದೆ. ವಿಜಯಯಾತ್ರೆ ಬಳಿಕ ವಾಣಿವಿಲಾಸ ದೇವರ ಕೋಣೆಯಲ್ಲಿ ಕಂಕಣ ವಿಸರ್ಜನೆ ನೆರವೇರಲಿದೆ. ನಂತರ ಚಾಮುಂಡೇಶ್ವರಿ ವಿಗ್ರಹವನ್ನ ಸ್ವಸ್ಥಾನವಾದ ಚಾಮುಂಡಿ ತೊಟ್ಟಿಗೆ ತಲುಪಿಸುವ ಮೂಲಕ ಶರನ್ನವರಾತ್ರಿ ಆಚರಣೆ ಸಂಪನ್ನವಾಗಲಿದೆ.

ದಸರಾ ಕಾರ್ಯಕ್ರಮದಲ್ಲಿ ಕಂಬಳ ಸೇರ್ಪಡೆ ವಿಚಾರ

ಈ ಬಾರಿ ದಸರಾ ಕಾರ್ಯಕ್ರಮದ ಭಾಗವಾಗಿ ಕಂಬಳ ಆಯೋಜಿಸುವ ವಿಚಾರವೂ ಚರ್ಚೆಗೆ ಬಂದಿದೆ. ಈ ಕುರಿತು ಪ್ರಮೋದಾದೇವಿ ಒಡೆಯರ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಂಬಳಕ್ಕೆ ಕರಾವಳಿ ಭಾಗದಲ್ಲಿ ತನ್ನದೇ ಆದ ವಿಶಿಷ್ಟ ಪರಂಪರೆ ಮತ್ತು ಮಹತ್ವವಿದೆ ಎಂದಿದ್ದಾರೆ. ದಸರಾ ಕಾರ್ಯಕ್ರಮದೊಳಗೆ ಕಂಬಳವನ್ನ ಸೇರಿಸುವುದಕ್ಕಿಂತ ಪ್ರತ್ಯೇಕವಾಗಿ ಕಂಬಳ ಆಯೋಜಿಸಿದರೆ ಅದಕ್ಕೆ ಹೆಚ್ಚಿನ ಮಹತ್ವ ದೊರೆಯಬಹುದು ಎಂಬ ಅಭಿಪ್ರಾಯವನ್ನ ಅವರು ವ್ಯಕ್ತಪಡಿಸಿದ್ದಾರೆ. ದಸರಾ ಭಾಗವಾಗಿಸಿದರೆ ಕಂಬಳಕ್ಕೆ ಸಿಗಬೇಕಾದ ಪ್ರತ್ಯೇಕ ಗಮನ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಬರಗಾಲದಲ್ಲೂ ಅದ್ದೂರಿ ದಸರಾ ಆಚರಣೆ

ಮಳೆ ಕೊರತೆ ಹಾಗೂ ಬರಗಾಲದ ನಡುವೆಯೂ ಅದ್ದೂರಿ ದಸರಾ ಆಚರಣೆ ನಡೆಸುವ ವಿಚಾರವನ್ನ ಪ್ರಮೋದಾದೇವಿ ಒಡೆಯರ್‌ ಸಮರ್ಥಿಸಿದ್ದಾರೆ. ದಸರಾ ಎಂಬ ಶಬ್ದದಲ್ಲೇ ಅದ್ದೂರಿತನ ಅಡಗಿದೆ ಎಂದು ಹೇಳಿರುವ ಅವರು, ದಸರಾ ಆಚರಣೆಯನ್ನ ಸಂಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಮಳೆ ಕೊರತೆ ಅಥವಾ ಬರಗಾಲವಿದ್ದರೂ ಸಂಪ್ರದಾಯದಂತೆ ದಸರಾ ಆಚರಿಸಲಾಗುತ್ತದೆ. ಉತ್ತಮ ಮಳೆ ಹಾಗೂ ಉತ್ತಮ ಬೆಳೆ ಬರಲಿ ಎಂಬ ಆಶಯವೂ ದಸರಾ ಆಚರಣೆಯ ಹಿಂದಿದೆ ಎಂದು ತಿಳಿಸಿದ್ದಾರೆ.

ಜಂಬೂಸವಾರಿ ಬದಲಾವಣೆಗೆ ಅರಮನೆ ಪರಂಪರೆಯ ಸಂಬಂಧವಿಲ್ಲ

ಜಂಬೂಸವಾರಿಯಲ್ಲಿ ಸರ್ಕಾರ ಕೈಗೊಳ್ಳುವ ಬದಲಾವಣೆಗಳಿಗೂ ಅರಮನೆಯ ಧಾರ್ಮಿಕ ಪರಂಪರೆಗೂ ನೇರ ಸಂಬಂಧವಿಲ್ಲ ಎಂದು ಪ್ರಮೋದಾದೇವಿ ಒಡೆಯರ್‌ ಹೇಳಿದ್ದಾರೆ. ಸರ್ಕಾರದ ವತಿಯಿಂದ ನಡೆಯುವ ಜಂಬೂಸವಾರಿಯಲ್ಲಿ ಹೊಸತನ ತರಲು ಬದಲಾವಣೆಗಳನ್ನ ಮಾಡಬಹುದು. ಆದರೆ ಅದರಿಂದ ಅರಮನೆಯಲ್ಲಿ ನಡೆದುಕೊಂಡು ಬರುತ್ತಿರುವ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳಿಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ. ಹೊಸತನ ತರುವ ಬಗ್ಗೆ ಸರ್ಕಾರ ಹಾಗೂ ಯುವ ಪೀಳಿಗೆ ಚರ್ಚಿಸಬಹುದು. ಕಾಲಕ್ಕೆ ತಕ್ಕಂತೆ ಕಾರ್ಯಕ್ರಮಗಳಲ್ಲಿ ಬದಲಾವಣೆ ಮಾಡುವ ವಿಚಾರವನ್ನ ಮಾತುಕತೆಯ ಮೂಲಕ ನಿರ್ಧರಿಸಬಹುದು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಆನೆ-ಕುದುರೆಗಳ ಸುರಕ್ಷತೆ ಬಗ್ಗೆ ಕಾಳಜಿ

ಆಯುಧ ಪೂಜೆ ಹಾಗೂ ವಿಜಯದಶಮಿ ದಿನಗಳಲ್ಲಿ ಕೆಲವೊಮ್ಮೆ ಗೊಂದಲದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಪ್ರಮೋದಾದೇವಿ ಒಡೆಯರ್‌ ಹೇಳಿದ್ದಾರೆ. ಬ್ಯಾರಿಕೇಡ್‌, ಕುರ್ಚಿಗಳು ಹಾಗೂ ಹೆಚ್ಚಿನ ಗದ್ದಲದಿಂದ ಆನೆ ಮತ್ತು ಕುದುರೆಗಳು ಬೆದರುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಅಗತ್ಯ. ಸರ್ಕಾರಿ ಕಾರ್ಯಕ್ರಮಗಳ ಸಮಯ ಹಾಗೂ ಅರಮನೆಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಸಮಯದ ನಡುವೆ ಸಮರ್ಪಕ ಹೊಂದಾಣಿಕೆ ಇರಬೇಕೆಂದು ಅವರು ಹೇಳಿದ್ದಾರೆ. ಈ ಸಂಬಂಧ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಲಾಗುವುದು ಎಂದು ಪ್ರಮೋದಾದೇವಿ ಒಡೆಯರ್‌ ತಿಳಿಸಿದ್ದಾರೆ.

ಒಟ್ನಲ್ಲಿ ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಸರ್ಕಾರಿ ಕಾರ್ಯಕ್ರಮಗಳ ಜೊತೆಗೆ ಅರಮನೆಯ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೂ ವಿಶೇಷ ಮಹತ್ವ ಇರಲಿದೆ. ಅಕ್ಟೋಬರ್‌ 7ರಿಂದ ಆರಂಭವಾಗುವ ಅರಮನೆಯ ಖಾಸಗಿ ದಸರಾ ಕಾರ್ಯಕ್ರಮಗಳು ಅಕ್ಟೋಬರ್‌ 21ರ ವಿಜಯದಶಮಿಯಂದು ಶರನ್ನವರಾತ್ರಿ ಸಂಪನ್ನಗೊಳ್ಳುವುದರೊಂದಿಗೆ ಪೂರ್ಣಗೊಳ್ಳಲಿವೆ.

Add Zee News as a Preferred Source
TAGS:
Kannada News