SOCIAL MEDIA

Newsletter

PARTNER SITES
Select Language Select State

ಸಮಯ ಪ್ರಜ್ಞೆ ಇಲ್ವೇನ್ರೀ? ಎಲ್ಲದ್ದಕ್ಕೂ ಒಂದು ಲಿಮಿಟ್‌ ಇದೆ: ಯತೀಂದ್ರ ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಗರಂ!

ಮೈಸೂರು ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗರಿಗಾಗಿ ಆಯೋಜಿಸಿದ್ದ ಉಪಹಾರ ಕೂಟಕ್ಕೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಡವಾಗಿ ಆಗಮಿಸಿದ್ದಕ್ಕೆ ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿ ಸ್ಥಳದಿಂದ ನಿರ್ಗಮಿಸಿದರು. ಮಾವುತರನ್ನ ತಿಂಡಿಗಾಗಿ ಕಾಯಿಸುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸಮಯಕ್ಕೆ ಸರಿಯಾಗಿ ಉಪಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಯತೀಂದ್ರ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಆಗಮಿಸಿ ಮಾವುತರು ಮತ್ತು ಕಾವಾಡಿಗರ ಕುಟುಂಬಸ್ಥರೊಂದಿಗೆ ಉಪಹಾರ ಸೇವಿಸಿದರು.

Written By Puttaraj K Alur
Published: Sep 28, 2026, 12:09 PM IST | Updated: Sep 28, 2026, 12:26 PM IST
Image Credit: Mysuru Dasara 2026
Join

Mysuru Dasara 2026: ಮೈಸೂರು ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗರ ಕುಟುಂಬಸ್ಥರಿಗಾಗಿ ಆಯೋಜಿಸಿದ್ದ ಉಪಹಾರ ಕೂಟಕ್ಕೆ ತಡವಾಗಿ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಶಾಸಕ ತನ್ವೀರ್ ಸೇಠ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಸಚಿವರು ಸಮಯಕ್ಕೆ ಸರಿಯಾಗಿ ಆಗಮಿಸದ ಹಿನ್ನೆಲೆಯಲ್ಲಿ ಮಾವುತರು, ಕಾವಾಡಿಗರು ಹಾಗೂ ಅವರ ಕುಟುಂಬಸ್ಥರು ಉಪಹಾರಕ್ಕಾಗಿ ಕಾಯುವಂತಾಯಿತು. ಇದರಿಂದ ಬೇಸರಗೊಂಡ ತನ್ವೀರ್ ಸೇಠ್ ಸ್ಥಳದಿಂದಲೇ ನಿರ್ಗಮಿಸಿದರು.

ಮೈಸೂರು ಅರಮನೆ ಆವರಣದಲ್ಲಿ ದಸರಾ ಗಜಪಡೆಯ ಮಾವುತರು, ಕಾವಾಡಿಗರು ಹಾಗೂ ಅವರ ಕುಟುಂಬದ ಸದಸ್ಯರಿಗಾಗಿ ಸೋಮವಾರ ಬೆಳಗ್ಗೆ ಉಪಹಾರ ಕೂಟ ಮತ್ತು ಕಿಟ್ ವಿತರಣಾ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬೆಳಗ್ಗೆ 9 ಗಂಟೆಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ ನಿಗದಿತ ಸಮಯಕ್ಕೆ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಆಗಮಿಸದ ಕಾರಣ ಕಾರ್ಯಕ್ರಮ ಆರಂಭವಾಗದೆ ವಿಳಂಬವಾಯಿತು.

ಮಾವುತರಿಗೆ ಕಾಯಿಸುವುದೇಕೆ? ತನ್ವೀರ್ ಸೇಠ್ ಅಸಮಾಧಾನ

ಬೆಳಗ್ಗೆಯಿಂದಲೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾವುತರು ಮತ್ತು ಕಾವಾಡಿಗರ ಕುಟುಂಬಸ್ಥರು ಉಪಹಾರಕ್ಕಾಗಿ ಕಾಯುತ್ತಿದ್ದರು. ಕಾರ್ಯಕ್ರಮದ ಸ್ಥಳದಲ್ಲಿ ಬಾಳೆ ಎಲೆಗಳನ್ನ ಹಾಕಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸಚಿವರು ಆಗಮಿಸದ ಕಾರಣ ಉಪಹಾರ ಕೂಟ ಆರಂಭವಾಗಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಶಾಸಕ ತನ್ವೀರ್ ಸೇಠ್, ಮಾವುತರು ಮತ್ತು ಕಾವಾಡಿಗರನ್ನ ತಿಂಡಿ ಊಟಕ್ಕಾಗಿ ಕಾಯಿಸುವುದು ಸರಿಯಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಬೇರೆ ಕಾರ್ಯಕ್ರಮಗಳಿದ್ದರೆ ವಿಳಂಬವಾಗುವುದನ್ನ ಒಪ್ಪಿಕೊಳ್ಳಬಹುದು. ಆದರೆ ಕಾಡಿನಲ್ಲಿ ಕಾರ್ಯನಿರ್ವಹಿಸುವ ಮಾವುತರು ಮತ್ತು ಕಾವಾಡಿಗರಿಗಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಮಯಪ್ರಜ್ಞೆ ಇರಬೇಕೆಂದು ಸಿಟ್ಟು ಹೊರಹಾಕಿದರು. ಮಾವುತರು ಮತ್ತು ಕಾವಾಡಿಗರಿಗೆ ಗೌರವ ನೀಡಬೇಕು. ಅವರಿಗೆ ಸಮಯಕ್ಕೆ ಸರಿಯಾಗಿ ಉಪಹಾರ ನೀಡುವುದು ಮುಖ್ಯ. ಕಾರ್ಯಕ್ರಮಕ್ಕೆ ಬಂದಿರುವ ಕುಟುಂಬಸ್ಥರನ್ನ ದೀರ್ಘಕಾಲ ಕಾಯಿಸುವುದು ಸರಿಯಲ್ಲವೆಂದು ಅವರು ಅಧಿಕಾರಿಗಳ ಗಮನಕ್ಕೆ ತಂದರು.

ಜಿಲ್ಲಾಧಿಕಾರಿಗೆ ತರಾಟೆ, ಸ್ಥಳದಿಂದ ನಿರ್ಗಮನ

ಕಾರ್ಯಕ್ರಮ ಆರಂಭಿಸಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದುದಕ್ಕೆ ಶಾಸಕ ತನ್ವೀರ್ ಸೇಠ್ ಮತ್ತಷ್ಟು ಅಸಮಾಧಾನಗೊಂಡರು. ಈ ವೇಳೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ, ಸಮಯದ ಮಹತ್ವವನ್ನ ನೆನಪಿಸಿದರು. "ಸಮಯ ಪ್ರಜ್ಞೆ ಇಲ್ವೇನ್ರೀ? ದೇರ್ ಇಸ್ ಎ ಲಿಮಿಟ್ ಫಾರ್ ಎವರಿಥಿಂಗ್" ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮಾವುತರು ಕಾಡಿನ ಜನರು, ಅವರಿಗೆ ಸಮಯಕ್ಕೆ ಸರಿಯಾಗಿ ಊಟ ಮತ್ತು ತಿಂಡಿ ಆಗಬೇಕೆಂದು ಹೇಳಿದರು. ಕಾಯುವಿಕೆ ಮುಂದುವರಿದ ಹಿನ್ನೆಲೆಯಲ್ಲಿ ತನ್ವೀರ್ ಸೇಠ್ ಕಾರ್ಯಕ್ರಮದ ಸ್ಥಳದಿಂದ ಹೊರನಡೆದರು. ಸಚಿವರಿಗಾಗಿ ಕಾರ್ಯಕ್ರಮ ವಿಳಂಬಗೊಳಿಸುವ ಬದಲು ಮಾವುತರು ಮತ್ತು ಕಾವಾಡಿಗರಿಗೆ ಸಮಯಕ್ಕೆ ಸರಿಯಾಗಿ ಉಪಹಾರ ನೀಡಬೇಕಿತ್ತು ಎಂಬುದು ಅವರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿತ್ತು.

10 ಗಂಟೆ ಬಳಿಕ ಆಗಮಿಸಿದ ಯತೀಂದ್ರ ಸಿದ್ದರಾಮಯ್ಯ

ಶಾಸಕ ತನ್ವೀರ್ ಸೇಠ್ ಸ್ಥಳದಿಂದ ನಿರ್ಗಮಿಸಿದ ಬಳಿಕ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅರಮನೆ ಆವರಣಕ್ಕೆ ಆಗಮಿಸಿದರು. ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಅವರು ಸುಮಾರು 10.12ರ ವೇಳೆಗೆ ಆಗಮಿಸಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿತ್ತು. ನಂತರ ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ.ದೇವೇಗೌಡ, ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಸ್ಥಳೀಯ ನಾಯಕರು ಸಚಿವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಾವುತರು ಮತ್ತು ಕಾವಾಡಿಗರ ಕುಟುಂಬ ಸದಸ್ಯರ ಜೊತೆ ಕುಳಿತು ಸಚಿವ ಯತೀಂದ್ರ ಸಿದ್ದರಾಮಯ್ಯ ಉಪಹಾರ ಸೇವಿಸಿದರು. ಬಳಿಕ ಕಿಟ್ ವಿತರಣಾ ಕಾರ್ಯಕ್ರಮವೂ ನಡೆಯಿತು. ಮಾವುತರು ಮತ್ತು ಕಾವಾಡಿಗರ ಕುಟುಂಬಸ್ಥರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರ ತಡವಾದ ಆಗಮನ ಹಾಗೂ ತನ್ವೀರ್ ಸೇಠ್ ಅವರ ಅಸಮಾಧಾನ ಸ್ಥಳದಲ್ಲಿ ಕೆಲಕಾಲ ಗಮನ ಸೆಳೆಯಿತು.

ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾದ ಘಟನೆ

ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗರು ಮೈಸೂರು ದಸರಾ ಉತ್ಸವದ ಪ್ರಮುಖ ಭಾಗವಾಗಿದ್ದಾರೆ. ಜಂಬೂ ಸವಾರಿ ಸೇರಿದಂತೆ ದಸರಾ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಅಂತಹವರಿಗಾಗಿ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಸಮಯಪಾಲನೆಯ ವಿಚಾರವೇ ವಿವಾದಕ್ಕೆ ಕಾರಣವಾಗಿದೆ. ಸಚಿವ ಯತೀಂದ್ರ ಸಿದ್ದರಾಮಯ್ಯ ತಡವಾಗಿ ಆಗಮಿಸಿದ್ದಕ್ಕೆ ತನ್ವೀರ್ ಸೇಠ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ಸ್ಥಳದಿಂದ ನಿರ್ಗಮಿಸಿರುವುದು ಮೈಸೂರು ಕಾಂಗ್ರೆಸ್ ವಲಯದಲ್ಲಿ ಸಣ್ಣ ಮಟ್ಟದ ಇರುಸುಮುರುಸು ಸೃಷ್ಟಿಸಿದೆ. ಮಾವುತರು ಮತ್ತು ಕಾವಾಡಿಗರಿಗೆ ಗೌರವ ನೀಡುವ ಹಾಗೂ ಕಾರ್ಯಕ್ರಮಗಳಲ್ಲಿ ಸಮಯಪಾಲನೆ ಮಾಡುವ ವಿಚಾರ ಈ ಘಟನೆಯಿಂದ ಮತ್ತೆ ಮುನ್ನೆಲೆಗೆ ಬಂದಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES