Mysuru Dasara 2026: ಇಂದಿನಿಂದ ಗೋಲ್ಡ್ ಕಾರ್ಡ್ ಸೇರಿ ಪ್ರಮುಖ ಕಾರ್ಯಕ್ರಮಗಳ ಟಿಕೆಟ್ ಮಾರಾಟ ಆರಂಭ! ದರ ಎಷ್ಟು?
ಮೈಸೂರು ದಸರಾ 2026ರ ಅಧಿಕೃತ ಕಾರ್ಯಕ್ರಮಗಳು ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿವೆ. ಅಕ್ಟೋಬರ್ 11ರಂದು ಚಾಮುಂಡೇಶ್ವರಿ ದೇವಾಲಯದಲ್ಲಿ ದಸರಾ ಉದ್ಘಾಟನೆಯಾಗಲಿದ್ದು, ಅಕ್ಟೋಬರ್ 21ರಂದು ವಿಜಯದಶಮಿಯಂದು ಜಂಬೂ ಸವಾರಿ ಮೂಲಕ ದಸರಾ ಮಹೋತ್ಸವದ ಪ್ರಮುಖ ಘಟ್ಟ ನಡೆಯಲಿದೆ.
Mysuru Dasara Ticket Booking: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಡಹಬ್ಬದ ಪ್ರಮುಖ ಕಾರ್ಯಕ್ರಮಗಳನ್ನ ಕಣ್ತುಂಬಿಕೊಳ್ಳಲು ಬಯಸುವ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಇದೀಗ ಮಹತ್ವದ ಮಾಹಿತಿ ಹೊರಬಿದ್ದಿದೆ. ಸೆಪ್ಟೆಂಬರ್ 21ರಿಂದ ಮೈಸೂರು ದಸರಾ 2026ರ ಪ್ರಮುಖ ಟಿಕೆಟ್‌ಗಳ ಆನ್‌ಲೈನ್ ಬುಕ್ಕಿಂಗ್ ಆರಂಭವಾಗಿದೆ. ಈ ಬಾರಿ ದಸರಾ ಗೋಲ್ಡ್ ಕಾರ್ಡ್, ಜಂಬೂ ಸವಾರಿ, ಪಂಜಿನ ಕವಾಯತು ಹಾಗೂ ಡ್ರೋನ್ ಶೋ ಸೇರಿದಂತೆ ನಾಲ್ಕು ಪ್ರಮುಖ ಕಾರ್ಯಕ್ರಮಗಳಿಗೆ ಟಿಕೆಟ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಅಕ್ಟೋಬರ್ 11ರಿಂದ 21ರವರೆಗೆ ದಸರಾ
ಮೈಸೂರು ದಸರಾ 2026ರ ಅಧಿಕೃತ ಕಾರ್ಯಕ್ರಮಗಳು ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿವೆ. ಅಕ್ಟೋಬರ್ 11ರಂದು ಚಾಮುಂಡೇಶ್ವರಿ ದೇವಾಲಯದಲ್ಲಿ ದಸರಾ ಉದ್ಘಾಟನೆಯಾಗಲಿದ್ದು, ಅಕ್ಟೋಬರ್ 21ರಂದು ವಿಜಯದಶಮಿಯಂದು ಜಂಬೂ ಸವಾರಿ ಮೂಲಕ ದಸರಾ ಮಹೋತ್ಸವದ ಪ್ರಮುಖ ಘಟ್ಟ ನಡೆಯಲಿದೆ. ದಸರಾ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಕಂಬಳ, ಪಂಜಿನ ಕವಾಯತು ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ಹೀಗಾಗಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಈ ಬಾರಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.
₹6,500ಕ್ಕೆ ದಸರಾ ಗೋಲ್ಡ್ ಕಾರ್ಡ್
ಈ ಬಾರಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಮೈಸೂರು ದಸರಾ ಗೋಲ್ಡ್ ಕಾರ್ಡ್ ಬೆಲೆ ₹6,500 ಪ್ರತಿ ವ್ಯಕ್ತಿಗೆ ನಿಗದಿಯಾಗಿದೆ. ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ದಸರಾ ಅವಧಿಯಲ್ಲಿ ಹಲವು ಪ್ರಮುಖ ಸ್ಥಳಗಳು ಹಾಗೂ ಕಾರ್ಯಕ್ರಮಗಳಿಗೆ ಪ್ರವೇಶ ಸಿಗಲಿದೆ. ಗೋಲ್ಡ್ ಕಾರ್ಡ್ ಮೂಲಕ ಮೈಸೂರು ಅರಮನೆ, ಚಾಮುಂಡಿ ಬೆಟ್ಟ ಮತ್ತು ಮೈಸೂರು ಮೃಗಾಲಯಕ್ಕೆ ತಲಾ ಒಂದು ಬಾರಿ ಪ್ರವೇಶ ಪಡೆಯಬಹುದು. ಇದರ ಜೊತೆಗೆ ಜಂಬೂ ಸವಾರಿ ವೀಕ್ಷಣೆಗೆ ನಿಗದಿತ ಆಸನ, ಪಂಜಿನ ಕವಾಯತು ವೀಕ್ಷಣೆಗೆ ಗೋಲ್ಡ್ ಕಾರ್ಡ್ ಎನ್‌ಕ್ಲೋಸರ್ ಪ್ರವೇಶ ಹಾಗೂ ನಿಗದಿತ ದಿನದ ಡ್ರೋನ್ ಶೋ ವೀಕ್ಷಣೆಯ ಅವಕಾಶವೂ ದೊರೆಯುತ್ತದೆ. ಅಂದರೆ ಒಂದೇ ಗೋಲ್ಡ್ ಕಾರ್ಡ್ ಮೂಲಕ ದಸರಾ ಹಬ್ಬದ ಪ್ರಮುಖ ಕಾರ್ಯಕ್ರಮಗಳ ಜೊತೆಗೆ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳನ್ನೂ ವೀಕ್ಷಿಸಲು ಅವಕಾಶ ಸಿಗಲಿದೆ.
ಜಂಬೂ ಸವಾರಿಗೆ ₹3,500
ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ವೀಕ್ಷಣೆಗೆ ಟಿಕೆಟ್ ದರ ₹3,500ರಿಂದ ಆರಂಭವಾಗುತ್ತದೆ. ವಿಜಯದಶಮಿಯಂದು ಅಂದರೆ ಅಕ್ಟೋಬರ್ 21ರಂದು ಜಂಬೂ ಸವಾರಿ ನಡೆಯಲಿದೆ. ಅಧಿಕೃತ ಮಾಹಿತಿಯ ಪ್ರಕಾರ, ಜಂಬೂ ಸವಾರಿಯ ಸಂದರ್ಭದಲ್ಲಿ ಅರಮನೆ ಆವರಣದಿಂದ ನಿಗದಿತ ಆಸನ ವ್ಯವಸ್ಥೆಯ ಮೂಲಕ ಮೆರವಣಿಗೆಯನ್ನ ವೀಕ್ಷಿಸಬಹುದು. ಅಕ್ಟೋಬರ್ 21ರಂದು ಮಧ್ಯಾಹ್ನ 4:10ಕ್ಕೆ ಪುಷ್ಪಾರ್ಚನೆ ನಡೆಯಲಿದ್ದು, ಬಳಿಕ ಜಂಬೂ ಸವಾರಿ ಅರಮನೆಯಿಂದ ಬನ್ನಿಮಂಟಪದತ್ತ ಸಾಗಲಿದೆ. ಮೆರವಣಿಗೆಯ ಒಟ್ಟು ಮಾರ್ಗ ಸುಮಾರು 5 ಕಿ.ಮೀ. ಇರಲಿದೆ.
ಪಂಜಿನ ಕವಾಯತಿಗೆ ₹1,500
ಮೈಸೂರು ದಸರಾ ಮತ್ತೊಂದು ಪ್ರಮುಖ ಕಾರ್ಯಕ್ರಮವಾದ ಪಂಜಿನ ಕವಾಯತು ವೀಕ್ಷಣೆಗೆ ₹1,500ರಿಂದ ಟಿಕೆಟ್ ದರ ಆರಂಭವಾಗುತ್ತದೆ. ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪೊಲೀಸ್ ಹಾಗೂ ಮಿಲಿಟರಿ ಬ್ಯಾಂಡ್‌ಗಳು, ವಿವಿಧ ಪ್ರದರ್ಶನಗಳು ಹಾಗೂ ಪಟಾಕಿ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿರುತ್ತವೆ. ಅಧಿಕೃತ ವೇಳಾಪಟ್ಟಿಯ ಪ್ರಕಾರ ಪಂಜಿನ ಕವಾಯತು ಅಕ್ಟೋಬರ್ 20 ಮತ್ತು 21ರಂದು ಸಂಜೆ 7 ಗಂಟೆಯಿಂದ ಬನ್ನಿಮಂಟಪ ಮೈದಾನದಲ್ಲಿ ನಡೆಯಲಿದೆ.
ಡ್ರೋನ್ ಶೋಗೆ ₹1,000
ತಂತ್ರಜ್ಞಾನ ಮತ್ತು ಬೆಳಕಿನ ಅದ್ಭುತ ಸಂಯೋಜನೆಯಾಗಿರುವ ದಸರಾ ಡ್ರೋನ್ ಶೋ ವೀಕ್ಷಣೆಗೆ ₹1,000ರಿಂದ ಟಿಕೆಟ್ ಲಭ್ಯವಿದೆ. ಅಧಿಕೃತ ಟಿಕೆಟ್ ಮಾಹಿತಿಯ ಪ್ರಕಾರ ಡ್ರೋನ್ ಶೋಗೆ ಪ್ರತ್ಯೇಕ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ದಸರಾ 2026ರ ಕಾರ್ಯಕ್ರಮ ಪಟ್ಟಿಯಲ್ಲಿ ಡ್ರೋನ್ ಶೋವನ್ನ ಅಕ್ಟೋಬರ್ 17ರಂದು ಪ್ರಮುಖ ಕಾರ್ಯಕ್ರಮವಾಗಿ ಗುರುತಿಸಲಾಗಿದೆ. ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಿಸಲು ಅವಕಾಶವಿರುವ ಕೆಲವು ಪ್ರದೇಶಗಳೂ ಇವೆ ಎಂದು ಅಧಿಕೃತ ವೆಬ್‌ಸೈಟ್ ತಿಳಿಸಿದೆ.
ಟಿಕೆಟ್ ಎಲ್ಲಿ ಬುಕ್ ಮಾಡಬೇಕು?
ದಸರಾ 2026ರ ಈ ನಾಲ್ಕು ಟಿಕೆಟ್ ಕಾರ್ಯಕ್ರಮಗಳ ಬುಕ್ಕಿಂಗ್‌ಗಾಗಿ TicketGenie ಅನ್ನ ಅಧಿಕೃತ ಟಿಕೆಟ್ ಪಾಲುದಾರರನ್ನಾಗಿ ಮಾಡಲಾಗಿದೆ. ದಸರಾ ಸಮಿತಿಯ ಅಧಿಕೃತ ವೆಬ್‌ಸೈಟ್ ಮೂಲಕ TicketGenieಗೆ ತೆರಳಿ ಟಿಕೆಟ್ ಬುಕ್ ಮಾಡಬಹುದು. ಟಿಕೆಟ್ ಬುಕ್ಕಿಂಗ್ ನಂತರ ದೊರೆಯುವ ವೋಚರ್ ಅನ್ನ ಸೂಚಿಸಿದ ಸ್ಥಳದಲ್ಲಿ ಭೌತಿಕ ಟಿಕೆಟ್ ಅಥವಾ ಗೋಲ್ಡ್ ಕಾರ್ಡ್‌ಗೆ ಬದಲಾಯಿಸಿಕೊಳ್ಳಬೇಕು. ಪ್ರವೇಶದ ವೇಳೆ ಭೌತಿಕ ಟಿಕೆಟ್/ಗೋಲ್ಡ್ ಕಾರ್ಡ್ ಜೊತೆಗೆ ಫೋಟೋ ಐಡಿ ಕೊಂಡೊಯ್ಯುವುದು ಅಗತ್ಯವಾಗಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ TicketGenie ಮಾತ್ರ ಅಧಿಕೃತ ಮಾರಾಟಗಾರ ಎಂದು ತಿಳಿಸಲಾಗಿದೆ; ಬೇರೆ ಏಜೆಂಟ್‌ಗಳು ಅಥವಾ ಅನಧಿಕೃತ ಕೌಂಟರ್‌ಗಳ ಮೂಲಕ ಟಿಕೆಟ್ ಖರೀದಿಸದಂತೆ ಸೂಚಿಸಲಾಗಿದೆ.
ಹಲವು ಕಾರ್ಯಕ್ರಮಗಳು ಉಚಿತ
ದಸರಾ ಕಾರ್ಯಕ್ರಮಗಳೆಲ್ಲಕ್ಕೂ ಟಿಕೆಟ್ ಅಗತ್ಯವಿಲ್ಲ ಎಂಬುದು ಪ್ರವಾಸಿಗರು ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶ. ಅಧಿಕೃತ ಮಾಹಿತಿಯ ಪ್ರಕಾರ ಜಂಬೂ ಸವಾರಿ ಸಾಗುವ ಸುಮಾರು 5 ಕಿ.ಮೀ. ಮಾರ್ಗದ ಸಾರ್ವಜನಿಕ ವೀಕ್ಷಣಾ ಪ್ರದೇಶಗಳು, ಅರಮನೆ ದೀಪಾಲಂಕಾರ, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಫಲಪುಷ್ಪ ಪ್ರದರ್ಶನ ಹಾಗೂ ಆಹಾರ ಮೇಳ ಸೇರಿದಂತೆ ಹಲವು ಕಾರ್ಯಕ್ರಮಗಳನ್ನ ಉಚಿತವಾಗಿ ವೀಕ್ಷಿಸಬಹುದು. ಅರಮನೆ ದೀಪಾಲಂಕಾರವು ದಸರಾ ಅವಧಿಯಲ್ಲಿ ಪ್ರತಿದಿನ ಸಂಜೆ 7ರಿಂದ ರಾತ್ರಿ 10ರವರೆಗೆ ನಡೆಯಲಿದೆ. ಫಲಪುಷ್ಪ ಪ್ರದರ್ಶನ ಅಕ್ಟೋಬರ್ 11ರಿಂದ 21ರವರೆಗೆ ಕುವೆಂಪು ಉದ್ಯಾನದಲ್ಲಿರುವ ಕುಪ್ಪಣ್ಣ ಪಾರ್ಕ್‌ನಲ್ಲಿ ನಡೆಯಲಿದ್ದು, ಆಹಾರ ಮೇಳ ಅಕ್ಟೋಬರ್ 11ರಿಂದ 25ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಟಿಕೆಟ್ ದರಗಳ ಸಂಪೂರ್ಣ ಮಾಹಿತಿ
| ಕಾರ್ಯಕ್ರಮ | ಟಿಕೆಟ್ ದರ |
| ದಸರಾ ಗೋಲ್ಡ್ ಕಾರ್ಡ್ | ₹6,500 |
| ಜಂಬೂ ಸವಾರಿ | ₹3,500ರಿಂದ |
| ಪಂಜಿನ ಕವಾಯತು | ₹1,500ರಿಂದ |
| ಡ್ರೋನ್ ಶೋ | ₹1,000ರಿಂದ |
ಹೀಗಾಗಿ ಈ ಬಾರಿ ಮೈಸೂರು ದಸರಾವನ್ನ ವಿಶೇಷವಾಗಿ ಅನುಭವಿಸಲು ಬಯಸುವವರು ಈಗಲೇ ತಮ್ಮ ಪ್ರಯಾಣದ ಯೋಜನೆ ರೂಪಿಸಿಕೊಳ್ಳಬಹುದು. ವಿಶೇಷವಾಗಿ ಜಂಬೂ ಸವಾರಿ ಮತ್ತು ಗೋಲ್ಡ್ ಕಾರ್ಡ್‌ನಂತಹ ಟಿಕೆಟ್ ಕಾರ್ಯಕ್ರಮಗಳಿಗೆ ಆಸನಗಳ ಸಂಖ್ಯೆ ಸೀಮಿತವಾಗಿರುವುದರಿಂದ, ಅಧಿಕೃತ ಮಾರ್ಗದ ಮೂಲಕ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುವುದು ಸೂಕ್ತ. ಟಿಕೆಟ್ ಖರೀದಿಸುವ ಮೊದಲು ಕಾರ್ಯಕ್ರಮದ ದಿನಾಂಕ, ಪ್ರವೇಶ ಸಮಯ, ಆಸನ/ಎನ್‌ಕ್ಲೋಸರ್ ವಿವರ ಹಾಗೂ ವೋಚರ್ ರಿಡೆಂಪ್ಶನ್ ನಿಯಮಗಳನ್ನ ಪರಿಶೀಲಿಸುವುದು ಅಗತ್ಯವಾಗಿದೆ.