SOCIAL MEDIA

Newsletter

PARTNER SITES
Select Language Select State

Mysuru Dasara 2026: ಅಭಿಮನ್ಯು ಬಳಿಕ ಪ್ರಶಾಂತನಿಗೆ ಪಟ್ಟ! ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ

ಮೈಸೂರು ದಸರಾ 2026ರ ಜಂಬೂಸವಾರಿಯಲ್ಲಿ 54 ವರ್ಷದ ದುಬಾರೆ ಶಿಬಿರದ ಪ್ರಶಾಂತ ಆನೆ ಚಿನ್ನದ ಅಂಬಾರಿ ಹೊತ್ತು ಸಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಪ್ರಶಾಂತನ ಆಯ್ಕೆಯನ್ನ ಅಧಿಕೃತವಾಗಿ ಘೋಷಿಸಿದ್ದಾರೆ. ಕಳೆದ 18 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಪ್ರಶಾಂತ, ಈ ಬಾರಿ ಮೊದಲ ಬಾರಿಗೆ 750 ಕೆ.ಜಿ. ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಪಡೆದಿದೆ. ಅಭಿಮನ್ಯು ನಿವೃತ್ತಿಯ ಬಳಿಕ ಪ್ರಶಾಂತನ ಆಯ್ಕೆ ಕುತೂಹಲ ಮೂಡಿಸಿದೆ.

Written By Puttaraj K Alur
Published: Oct 14, 2026, 07:25 PM IST | Updated: Oct 14, 2026, 07:50 PM IST
Image Credit: Prashantha Elephant
Join

Mysuru Dasara 2026: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅರಮನೆ ನಗರಿಯಲ್ಲಿ ದಸರಾ ಸಂಭ್ರಮ ಮನೆಮಾಡಿದ್ದು, ವಿಜಯದಶಮಿಯಂದು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನ ಹೊತ್ತು ಸಾಗುವ ಗಜಪಡೆಯ ಕ್ಯಾಪ್ಟನ್ ಯಾರು ಎಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. 2026ರ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ 54 ವರ್ಷದ ಪ್ರಶಾಂತ ಆನೆಗೆ ಒಲಿದು ಬಂದಿದೆ. ಮೈಸೂರು ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಪ್ರಶಾಂತನೇ ಈ ಬಾರಿಯ ಅಂಬಾರಿ ಆನೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಇದರೊಂದಿಗೆ ಹಲವು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದ ದುಬಾರೆ ಶಿಬಿರದ ಪ್ರಶಾಂತ ಆನೆಗೆ ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರುವ ಅವಕಾಶ ಸಿಕ್ಕಿದೆ. ಈ ಘೋಷಣೆಯು ದಸರಾ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದು, ಜಂಬೂಸವಾರಿಯಲ್ಲಿ ಪ್ರಶಾಂತ ಹೇಗೆ ಹೆಜ್ಜೆ ಹಾಕಲಿದೆ ಎಂಬುದನ್ನು ಕಣ್ತುಂಬಿಕೊಳ್ಳಲು ಜನರು ಕಾಯುತ್ತಿದ್ದಾರೆ.

ಅಭಿಮನ್ಯು ನಿವೃತ್ತಿ ಬಳಿಕ ಪ್ರಶಾಂತನಿಗೆ ಅದೃಷ್ಟ

ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆಗೆ ವಿಶೇಷ ಗೌರವವಿದೆ. ಹಲವು ವರ್ಷಗಳಿಂದ ಈ ಮಹತ್ವದ ಜವಾಬ್ದಾರಿಯನ್ನ ಸಮರ್ಥವಾಗಿ ನಿರ್ವಹಿಸಿದ್ದ ಅಭಿಮನ್ಯು ಗಜಪಡೆಯ ಕ್ಯಾಪ್ಟನ್ ಸ್ಥಾನದಿಂದ ನಿವೃತ್ತಿ ಪಡೆದ ಬಳಿಕ, ಮುಂದಿನ ಅಂಬಾರಿ ಆನೆ ಯಾರು ಎಂಬ ಚರ್ಚೆ ಆರಂಭವಾಗಿತ್ತು. ಈ ಸ್ಥಾನಕ್ಕಾಗಿ ಧನಂಜಯ, ಪ್ರಶಾಂತ, ಏಕಲವ್ಯ, ಮಹೇಂದ್ರ ಹಾಗೂ ಸುಗ್ರೀವ ಆನೆಗಳ ಹೆಸರುಗಳು ಪ್ರಮುಖವಾಗಿ ಕೇಳಿಬಂದಿದ್ದವು.

ಅಂಬಾರಿ ಹೊರುವ ಸಾಮರ್ಥ್ಯ, ತಾಲೀಮಿನಲ್ಲಿ ತೋರುವ ಸ್ಥಿರತೆ ಮತ್ತು ಗಜಪಡೆಯೊಂದಿಗೆ ಹೊಂದಾಣಿಕೆಯಂತಹ ಅಂಶಗಳು ಆಯ್ಕೆಯಲ್ಲಿ ಮಹತ್ವ ಪಡೆದಿದ್ದವು. ತಾಲೀಮು ವೇಳೆ ಮರದ ಅಂಬಾರಿ ಹೊತ್ತು ಸಾಗುತ್ತಿದ್ದ ಮಹೇಂದ್ರ ಆನೆ ಅರ್ಧ ದಾರಿಯಲ್ಲೇ ನಿಂತಿದ್ದರಿಂದ ಕ್ಯಾಪ್ಟನ್ ಆಯ್ಕೆಯ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ಅಂತಿಮವಾಗಿ ಪ್ರಶಾಂತನಿಗೆ ಈ ಮಹತ್ವದ ಜವಾಬ್ದಾರಿ ಒಲಿದಿದೆ. ಅಭಿಮನ್ಯು ಬಳಿಕ ಚಿನ್ನದ ಅಂಬಾರಿಯನ್ನ ಹೊತ್ತು ಸಾಗುವ ಹೊಸ ಕ್ಯಾಪ್ಟನ್‌ನನ್ನ ನೋಡಲು ದಸರಾ ಪ್ರೇಮಿಗಳು ಉತ್ಸುಕರಾಗಿದ್ದಾರೆ.

ದುಬಾರೆ ಶಿಬಿರದ ಬಲಿಷ್ಠ ಆನೆ ಪ್ರಶಾಂತ

ಪ್ರಶಾಂತ ಆನೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದಲ್ಲಿರುವ ದುಬಾರೆ ಆನೆ ಶಿಬಿರಕ್ಕೆ ಸೇರಿದೆ. 1993ರಲ್ಲಿ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಈ ಆನೆಯನ್ನ ಸೆರೆಹಿಡಿಯಲಾಗಿತ್ತು. ಅಂದಿನಿಂದ ವಿವಿಧ ತರಬೇತಿ ಮತ್ತು ನಿರ್ವಹಣಾ ಹಂತಗಳನ್ನ ದಾಟಿರುವ ಪ್ರಶಾಂತ, ಇದೀಗ ಮೈಸೂರು ದಸರಾ ಇತಿಹಾಸದಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಲು ಸಜ್ಜಾಗಿದೆ. 54 ವರ್ಷದ ಪ್ರಶಾಂತ ಸುಮಾರು 2.61 ಮೀಟರ್ ಎತ್ತರ ಹಾಗೂ 3.46 ಮೀಟರ್ ಉದ್ದವನ್ನ ಹೊಂದಿದೆ. ಇದರ ತೂಕ ಅಂದಾಜು 5,100 ಕೆ.ಜಿ. ಎಂದು ತಿಳಿಸಲಾಗಿದೆ. ಬಲಿಷ್ಠ ಮೈಕಟ್ಟು ಹೊಂದಿರುವ ಈ ಆನೆ ಕಳೆದ 18 ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. ಇಷ್ಟು ವರ್ಷಗಳ ಅನುಭವದ ಬಳಿಕ ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರುವ ಅವಕಾಶ ದೊರೆತಿರುವುದು ವಿಶೇಷವಾಗಿದೆ.

ಪ್ರಶಾಂತನ ಸಾರಥಿಗಳು ಯಾರು?

ದಸರಾ ಗಜಪಡೆಯ ಪ್ರತಿಯೊಂದು ಆನೆಯ ಹಿಂದೆಯೂ ಅದರೊಂದಿಗೆ ನಿಕಟ ಸಂಬಂಧ ಹೊಂದಿರುವ ಮಾವುತರು ಮತ್ತು ಕಾವಾಡಿಗರ ಪರಿಶ್ರಮ ಇರುತ್ತದೆ. ಪ್ರಶಾಂತ ಆನೆಯ ಮಾವುತರಾಗಿ ಜೆ.ಎ.ಚಿನ್ನಪ್ಪ ಕಾರ್ಯನಿರ್ವಹಿಸುತ್ತಿದ್ದು, ಚಂದ್ರ ಅವರು ಕಾವಾಡಿಗರಾಗಿದ್ದಾರೆ. ಆನೆಯ ದೈನಂದಿನ ಆರೈಕೆ, ಆಹಾರ, ತರಬೇತಿ ಮತ್ತು ತಾಲೀಮುಗಳಲ್ಲಿ ಮಾವುತರು ಹಾಗೂ ಕಾವಾಡಿಗರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಚಿನ್ನದ ಅಂಬಾರಿಯಂತಹ ಭಾರವಾದ ಜವಾಬ್ದಾರಿಯನ್ನ ನಿರ್ವಹಿಸುವ ಸಂದರ್ಭದಲ್ಲಿ ಆನೆ ಮತ್ತು ಅದರ ಆರೈಕೆದಾರರ ನಡುವಿನ ವಿಶ್ವಾಸ ಹಾಗೂ ಹೊಂದಾಣಿಕೆ ನಿರ್ಣಾಯಕವಾಗುತ್ತದೆ.

ಜಂಬೂಸವಾರಿಗೆ ಹೆಚ್ಚಿದ ನಿರೀಕ್ಷೆ

ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯೊಂದಿಗೆ ಸಾಗುವ ಗಜಪಡೆ ಪ್ರಮುಖ ಆಕರ್ಷಣೆಯಾಗಿದೆ. ಅರಮನೆಯಿಂದ ಆರಂಭವಾಗುವ ಜಂಬೂಸವಾರಿಯನ್ನ ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ದೇಶ-ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಈ ಬಾರಿ ಅಭಿಮನ್ಯು ಬದಲಿಗೆ ಪ್ರಶಾಂತ ಅಂಬಾರಿ ಹೊರುವುದರಿಂದ ಜಂಬೂಸವಾರಿಗೆ ಹೊಸ ಆಕರ್ಷಣೆ ಸಿಕ್ಕಿದೆ. ಕಳೆದ 18 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಪ್ರಶಾಂತ, ಈಗ ಮೊದಲ ಬಾರಿಗೆ ಅಂಬಾರಿ ಆನೆಯಾಗಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ತಾಲೀಮು ಹಾಗೂ ಸಿದ್ಧತೆಯ ಬಳಿಕ ವಿಜಯದಶಮಿಯಂದು ಚಿನ್ನದ ಅಂಬಾರಿಯನ್ನ ಹೊತ್ತು ಸಾಗಲಿರುವ ಪ್ರಶಾಂತನ ಹೆಜ್ಜೆಗಳನ್ನ ಕಣ್ತುಂಬಿಕೊಳ್ಳಲು ದಸರಾ ಸಂಭ್ರಮದಲ್ಲಿ ಭಾಗಿಯಾಗುವ ಜನರು ಕಾತರದಿಂದ ಕಾಯುತ್ತಿದ್ದಾರೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES