ಕೊಡಗು: ಕುಟುಂಬ ಕಳೆದುಕೊಂಡ ಬಾಲಕಿಯ ಹುಟ್ಟುಹಬ್ಬ ಆಚರಿಸಿದ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ
ಅಪಘಾತದಲ್ಲಿ ತಂದೆ, ತಾಯಿ ಹಾಗೂ ಪುಟ್ಟ ತಂಗಿಯನ್ನು ಕಳೆದುಕೊಂಡು ಅನಾಥಳಾಗಿರುವ ಒಂಬತ್ತು ವರ್ಷದ ಬಾಲಕಿಯ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಪೊಲೀಸ್ ಅಧಿಕಾರಿ ಒಬ್ಬರು ಮಾನವೀಯತೆ ಮೆರೆದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಸಿದ್ದಾಪುರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆ, ಅಪಘಾತದಲ್ಲಿ ತಂದೆ, ತಾಯಿ ಹಾಗೂ ಪುಟ್ಟ ತಂಗಿಯನ್ನು ಕಳೆದುಕೊಂಡು ಅನಾಥಳಾಗಿರುವ ಒಂಬತ್ತು ವರ್ಷದ ಬಾಲಕಿಯ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಆ ಮಹಾನುಭಾವ ವ್ಯಕ್ತಿಯೇ ಪಿಎಸ್‌ಐ ಮಂಜುನಾಥ್.
ಅಕ್ಟೋಬರ್‌ನಲ್ಲಿ ರಸ್ತೆ ಅಪಘಾತದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಬಾಲಕಿ:
ಕಳೆದ ಅಕ್ಟೋಬರ್ 20ರಂದು ಸಿದ್ದಾಪುರದಲ್ಲಿ ನಡೆದ ಅಪಘಾತದಲ್ಲಿ ವಿಜೇಶ್, ಅವರ ಪತ್ನಿ ಪಮಿತ ಹಾಗೂ ಮೂರು ವರ್ಷದ ಪುತ್ರಿ ಲಿಯಾ ಮೃತಪಟ್ಟಿದ್ದರು.
ಏನಿದು ಘಟನೆ :
ಸಿದ್ದಾಪುರ ಗ್ರಾಮದ ಹೈಸ್ಕೂಲ್ ಪೈಸಾರಿ ನಿವಾಸಿ ಹಾಗೂ ಇಲ್ ಕಿಲ್ ಎಸ್ಟೇಟ್ ಫೀಲ್ಡ್ ಆಫೀಸರ್ ಆಗಿದ್ದ ವಿಜೇಶ್ ಅಕ್ಟೋಬರ್ 20 ರಂದು ಸಿದ್ದಾಪುರದಲ್ಲಿ ನಡೆದ ಆಯುಧ ಪೂಜಾ ಕಾರ್ಯಕ್ರಮದ ರಸಮಂಜರಿಯನ್ನು ವೀಕ್ಷಿಸಿ ಬಾಡಗ ಬಾಣಂಗಾಲದ ವಸತಿ ಗೃಹಕ್ಕೆ ತನ್ನ ಪತ್ನಿ ಪಮಿತ ಹಾಗೂ ಮೂರು ವರ್ಷ ಪ್ರಾಯದ ಮಗಳು ಲಿಯ ರೊಂದಿಗೆ ವಾಹನದಲ್ಲಿ ತೆರಳಿದ್ದರು. ದಟ್ಟವಾದ ಮಂಜು ಇದ್ದ ಕಾರಣ ವಾಹನವು ಅಪಘಾತವಾಗಿ ರಸ್ತೆ ಬದಿಯಲ್ಲಿದ್ದ ಕೆರೆಗೆ ಮಗುಚಿತ್ತು. ಪರಿಣಾಮ ವಾಹನದಲ್ಲಿದ್ದ ಮೂವರು ಮೃತಪಟ್ಟಿದ್ದರು. ಅದೃಷ್ಟವಶಾತ್ ಕುಟುಂಬದೊಂದಿಗೆ ರಸಮಂಜರಿ ವೀಕ್ಷಿಸಿದ ನಂತರ ವಿಜೇಶ್ ನ ಹಿರಿಯ ಪುತ್ರಿ ದೀಕ್ಷ ಸಿದ್ದಾಪುರದಲ್ಲಿನ ಚಿಕ್ಕಪ್ಪನ ಮನೆಗೆ ತೆರಳಿದ ಪರಿಣಾಮ ಪ್ರಾಣಪಾಯದಿಂದ ಪಾರಾಗಿದ್ದಳು.
ಪೋಷಕರು ಹಾಗೂ ಸಹೋದರಿಯನ್ನು ಕಳೆದುಕೊಂಡ ಒಂಬತ್ತರ ಬಾಲೆಗೆ ನವೆಂಬರ್ 11 ಹುಟ್ಟುಹಬ್ಬ ಇತ್ತು. ವಿಷಯ ತಿಳಿದ ಸಿದ್ದಾಪುರದ ಪಿಎಸ್‌ಐ ಮಂಜುನಾಥ್ ಹೊಸ ಬಟ್ಟೆ ಹಾಗೂ ಕೇಕ್ ಖರೀದಿಸಿ ಖುದ್ದಾಗಿ ಬಾಲಕಿಯ ಮನೆಗೆ ತೆರಳಿ ಹುಟ್ಟು ಹಬ್ಬವನ್ನು ಆಚರಿಸಿ ಹರಸಿದರು.
ಪೋಷಕ ರನ್ನು ಕಳೆದುಕೊಂಡ ಬಾಲಕಿಗೆ ಪೊಲೀಸ್ ಅಪ್ಪುಗೆ : ಹದಿಹರೆಯದ ಪ್ರಾಯದಲ್ಲೇ ತನ್ನ ಪೋಷಕರು ಹಾಗೂ ಸಹೋದರಿಯನ್ನು ಕಳೆದುಕೊಂಡ ಬಾಲಕಿಗೆ ತನ್ನ ಕುಟುಂಬದ ಅನುಪಸ್ಥಿತಿಯಲ್ಲಿ ನಡೆದ ಮೊದಲ ಹುಟ್ಟು ಹಬ್ಬ ಎಂಬ ಅರಿವಿರಲಿಲ್ಲ. ಆದರೆ ಬಾಲಕಿಯ ಹುಟ್ಟುಹಬ್ಬವನ್ನು ಅರಿತ ಠಾಣಾಧಿಕಾರಿ ಮಂಜುನಾಥ್ ಬಾಲಕಿಯನ್ನು ತನ್ನ ಮಗಳಂತೆ ಕಂಡು ಭಾವುಕರಾದರು. ಅಧಿಕಾರಿಯ ಮಗಳ ಹೆಸರು ಕೂಡ ದೀಕ್ಷ ಎಂಬೂದು ವಿಶೇಷ. ಬಾಲಕಿಯ ನೋವನ್ನು ಅರಿತ ಅಧಿಕಾರಿಯು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಘಟನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಮೆಚ್ಚುಗೆಗೆ ಪಾತ್ರವಾಗಿದೆ.
ಮಾನವೀಯತೆ ಮೆರೆವ ಸಿದ್ದಾಪುರ ಎಸ್ ಐ :
ಸಿದ್ದಾಪುರದ ಪಿಎಸ್‌ಐ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಇವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸಿ ಜನಮೆಚ್ಚುಗೆಗೆ ಪಾತ್ರರಾದವರು. ದಕ್ಷ ಅಧಿಕಾರಿಯಾಗಿಯೂ ಹೆಸರುವಾಸಿಯಾಗಿರುವ ಮಂಜುನಾಥ್, ವ್ಯಾಪ್ತಿಯ ನಿರ್ಗತಿಕರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಪ್ರಚಾರವಿಲ್ಲದೇ ಜನಸೇವೆಯಲ್ಲಿ ನಿರತರಾಗಿರುವುದು ವಿಶೇಷವಾಗಿದೆ.