ನರಭಕ್ಷಕ ಹುಲಿ ಸೆರೆಗೆ ಗಜಪಡೆ ಎಂಟ್ರಿ: ಬಡಗಲಪುರದಲ್ಲಿ ಕಂಜನ್-ಈಶ್ವರನಿಂದ ಟೈಗರ್ ಕೂಂಬಿಂಗ್
tiger combing in chamarajnagar: ಬಡಗಲಪುರದಲ್ಲಿ ಆತಂಕಕ್ಕೆ ಕಾರಣವಾಗಿರುವ ನರಭಕ್ಷಕ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದೆ.
ಚಾಮರಾಜನಗರ: ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ರೈತ ಬಸವಣ್ಣ ಅವರನ್ನು ಹುಲಿ ಬಲಿ ಪಡೆದ ಪ್ರಕರಣದ ಬಳಿಕ ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಹುಲಿಯನ್ನು ಪತ್ತೆಹಚ್ಚಿ ಸೆರೆ ಹಿಡಿಯುವ ಕಾರ್ಯಾಚರಣೆಗೆ ಇದೀಗ ಗಜಪಡೆಯನ್ನೂ ಬಳಸಿಕೊಳ್ಳಲಾಗುತ್ತಿದ್ದು, ದುಬಾರೆ ಆನೆ ಶಿಬಿರದಿಂದ ಕಂಜನ್ ಹಾಗೂ ಈಶ್ವರ ಎಂಬ ಎರಡು ಕುಮ್ಕಿ ಆನೆಗಳನ್ನು ಬಡಗಲಪುರಕ್ಕೆ ಕರೆತರಲಾಗಿದೆ.
ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಅನುಭವ ಹೊಂದಿರುವ ಕಂಜನ್ ಹಾಗೂ ಈಶ್ವರ ಆನೆಗಳು ಈ ಹಿಂದೆಯೂ ಹಲವು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ಯಶಸ್ವಿಯಾಗಿವೆ. ಹೀಗಾಗಿ ಬಡಗಲಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿಯ ಚಲನವಲನ ಪತ್ತೆಹಚ್ಚಲು ಈ ಆನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ದಟ್ಟ ಪೊದೆ ಹಾಗೂ ಅರಣ್ಯದಂಚಿನ ಪ್ರದೇಶಗಳಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಲು ಕುಮ್ಕಿ ಆನೆಗಳು ನೆರವಾಗಲಿವೆ.
ರೈತ ಬಸವಣ್ಣ ಹುಲಿ ದಾಳಿಗೆ ಬಲಿಯಾದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹುಲಿ ಮತ್ತೆ ಜನವಸತಿ ಪ್ರದೇಶದತ್ತ ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಬೆಳಗ್ಗೆಯಿಂದಲೇ ಬಿಆರ್‌ಟಿ ಅರಣ್ಯ ಸಿಬ್ಬಂದಿ ವಿವಿಧ ತಂಡಗಳಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಬಡಗಲಪುರ ಸುತ್ತಮುತ್ತ ಟೈಗರ್ ಕೂಂಬಿಂಗ್ ನಡೆಸಲಾಗುತ್ತಿದೆ.
ಹುಲಿಯ ಸುಳಿವು ಪತ್ತೆಹಚ್ಚಲು ಗಜಪಡೆಯ ಜೊತೆಗೆ ಶ್ವಾನದಳವನ್ನೂ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಹುಲಿ ಸಂಚರಿಸಬಹುದಾದ ಪ್ರದೇಶಗಳು, ಜಮೀನುಗಳು ಹಾಗೂ ಅರಣ್ಯದಂಚಿನಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ. ಅಲ್ಲದೆ ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯುವ ಉದ್ದೇಶದಿಂದ ಕೊಟ್ಟಿಗೆ ಮಾದರಿಯ ಬೋನ್ ಅನ್ನೂ ಅಳವಡಿಸಲಾಗಿದೆ.
ಹುಲಿಯ ಹೆಜ್ಜೆ ಗುರುತು ಸೇರಿದಂತೆ ಅದರ ಚಲನವಲನಕ್ಕೆ ಸಂಬಂಧಿಸಿದ ಸುಳಿವುಗಳಿಗಾಗಿ ಅರಣ್ಯ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ತಂಡಗಳು ಹುಲಿಯ ಇರುವಿಕೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳ ಮೇಲೂ ನಿಗಾ ಇಡಲಾಗಿದೆ.
ಕಂಜನ್ ಮತ್ತು ಈಶ್ವರ ಕುಮ್ಕಿ ಆನೆಗಳ ಆಗಮನದಿಂದ ಹುಲಿ ಸೆರೆ ಕಾರ್ಯಾಚರಣೆಗೆ ಮತ್ತಷ್ಟು ಬಲ ಸಿಕ್ಕಿದೆ. ಹುಲಿಯನ್ನು ಆದಷ್ಟು ಬೇಗ ಪತ್ತೆಹಚ್ಚಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಬಡಗಲಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹುಲಿ ಸೆರೆ ಸಿಗುವವರೆಗೂ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರಿಸುವ ಸಾಧ್ಯತೆಯಿದೆ.