ಬೆಂಗಳೂರು: ರಾಜ್ಯದಲ್ಲಿ ಮಳೆಯ ಪ್ರಮಾಣ ಸಂಪೂರ್ಣವಾಗಿ ತಗ್ಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಅದರಲ್ಲೂ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಾದ ಕಬಿನಿ ಮತ್ತು ಕೆ ಆರ್ ಎಸ್‌ನಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿರುವುದು ರೈತರಲ್ಲಿ ಮಾತ್ರವಲ್ಲದೆ, ರಾಜಧಾನಿ ಬೆಂಗಳೂರಿನ ಕುಡಿಯುವ ನೀರಿನ ಪೂರೈಕೆಯ ಬಗ್ಗೆಯೂ ಆತಂಕ ಮೂಡಿಸಿದೆ.
ಮೈಸೂರು ಜಿಲ್ಲೇಯ ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿಕೆ ಖಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಬಿನಿಯಲ್ಲಿ 17.46 ಟಿಎಂಸಿ ನೀರಿನ ಸಂಗ್ರಹವಿತ್ತು. ಆದರೆ ಈ ಬಾರಿ ಕೇವಲ 12.14 ಟಿಎಂಸಿ ನೀರು ಮಾತ್ರ ಲಭ್ಯವಿದ್ದು, ಕಳೆದ ವರ್ಷಕ್ಕಿಂತ ಸುಮಾರು 5.32 ಟಿಎಂಸಿ ನೀರು ಕಡಿಮೆಯಾಗಿದೆ. ಜಲಾಶಯದ ಗರಿಷ್ಠ ಸಾಮರ್ಥ್ಯ 19.52 ಟಿಎಂಸಿಯಾಗಿದ್ದು, ಇಂದಿನ ನೀರಿನ ಮಟ್ಟ 70.93 ಅಡಿಯಷ್ಟಿದೆ. ಆತಂಕಕಾರಿ ಸಂಗತಿಯೆಂದರೆ, ಜಲಾಶಯದಲ್ಲಿ ಶುದ್ದ ನೀರಿನ ಸಂಗ್ರಹ ಕೇವಲ 2.33 ಟಿಎಂಸಿಯಷ್ಟಿದೆ. ಕಬಿನಿಗೆ ಕೇವಲ 254 ಕ್ಯುಸೆಕ್ ಒಳಹರಿವಿದ್ದು, ಕಬಿನಿ ನದಿಗೆ 600 ಕ್ಯುಸೆಕ್ ಹಾಗೂ ಬಲದಂಡೆ ನಾಲೆಗೆ 750 ಕ್ಯುಸೆಕ್ ಸೇರಿ ಒಟ್ಟು 1,350 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಎಡದಂಡೆ ನಾಲೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ.
ಕೆಆರ್‌ಎಸ್ ಜಲಾಶಯದ ಸ್ಥಿತಿ:
ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ (KRS) ನೀರಿನ ಮಟ್ಟ ಇಳಿಕೆಯಾಗಿದೆ. 124.80 ಅಡಿ ಗರಿಷ್ಠ ಮಟ್ಟ ಹಾಗೂ 49.452 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 97.96 ಅಡಿ ನೀರಿದ್ದು, 21.252 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ ಶುದ್ಧ ನೀರಿನ ಸಂಗ್ರಹ 12.873 ಟಿಎಂಸಿಯಷ್ಟಿದೆ. ಜಲಾಶಯಕ್ಕೆ 892 ಕ್ಯುಸೆಕ್ ಒಳಹರಿವು ಇದ್ದರೆ, ಕಾಲುವೆ ಮತ್ತು ಕುಡಿಯುವ ನೀರಿನ ಉದ್ದೇಶಕ್ಕಾಗಿ ಒಟ್ಟು 1,295 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಬೆಂಗಳೂರಿನ ಕುಡಿಯುವ ನೀರಿನ ಪೂರೈಕೆಯು ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳ ನೀರಿನ ಸಂಗ್ರಹವನ್ನೇ ಪ್ರಮುಖವಾಗಿ ಅವಲಂಬಿಸಿರುವುದರಿಂದ, ಈ ಇಳಿಕೆ ಗಮನ ಸೆಳೆದಿದೆ.
ಇನ್ನು ಉತ್ತರ ಕರ್ನಾಟಕದ ಜೀವನಾಡಿಗಳಾದ ತುಂಗಾಭದ್ರಾ ಮತ್ತು ಆಲಮಟ್ಟಿಜಲಾಶಯಗಳಿಗೆ ಒಳಹರಿವು ಸಂಪೂರ್ಣವಾಗಿ ನಿಂತುಹೋಗಿದೆ.
ತುಂಗಭದ್ರಾ ಜಲಾಶಯ: 1,633 ಅಡಿ ಗರಿಷ್ಠ ಮಟ್ಟದ ತುಂಗಭದ್ರಾ ಜಲಾಶಯದಲ್ಲಿ ಸದ್ಯ 1,606.219 ಅಡಿ ನೀರಿನ ಮಟ್ಟವಿದ್ದು, 30.706 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು ಸಂಪೂರ್ಣ ಶೂನ್ಯವಾಗಿದ್ದರೂ, ಕಾಲುವೆಗಳ ಮೂಲಕ 8,619 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿರುವುದು ನೀರಿನ ಸಂಗ್ರಹದ ಮೇಲೆ ಒತ್ತಡ ಹೆಚ್ಚಿಸಿದೆ.
ಆಲಮಟ್ಟಿ ಜಲಾಶಯ: ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಆಗಿದ್ದು, ಇಂದು 513.87 ಮೀಟರ್ ನೀರಿದೆ. ಒಳಹರಿವು ಶೂನ್ಯವಾಗಿದ್ದು, 1,317 ಕ್ಯುಸೆಕ್ ಹೊರಹರಿವಿದೆ.
ಬಸವಸಾಗರ ಜಲಾಶಯ: ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯದ ಗರಿಷ್ಠ ಮಟ್ಟ 492.25 ಮೀಟರ್ ಇದ್ದು, ಪ್ರಸ್ತುತ 489.19 ಮೀಟರ್ ಮಟ್ಟವಿದೆ. 51 ಕ್ಯುಸೆಕ್ ಒಳಹರಿವು ಹಾಗೂ 843 ಕ್ಯುಸೆಕ್ ಹೊರಹರಿವು ದಾಖಲಾಗಿದೆ.
ಒಟ್ಟಾರೆಯಾಗಿ, ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವು ತೀವ್ರವಾಗಿ ಕುಸಿದಿದ್ದು, ಹೊರಹರಿವು ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಬೇಸಿಗೆಗೂ ಮುನ್ನವೇ ಕುಡಿಯುವ ನೀರು ಹಾಗೂ ಕೃಷಿಗೆ ತೀವ್ರ ಅಭಾವ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಈಗಿನಿಂದಲೇ ನೀರನ್ನು ಅತ್ಯಂತ ಮಿತವಾಗಿ ಬಳಸುವುದು ಅನಿವಾರ್ಯವಾಗಿದೆ.