ಒಂದೆಡೆ ಕಾಡಾನೆ ದಾಳಿಗೆ ಇಬ್ಬರ ಬಲಿ, ಮತ್ತೊಂದೆಡೆ ಬೆಳೆ ನಾಶ; ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಯಾವಾಗ?
ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷ ತೀವ್ರಗೊಂಡಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನ.15 ಮತ್ತು 16ರಂದು ಸತತ ಎರಡು ದಿನಗಳಲ್ಲಿ ಕಾಡಾನೆ ದಾಳಿಗೆ ಇಬ್ಬರು ಮೃತಪಟ್ಟಿದ್ದಾರೆ. ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ 10 ಗಂಡು ಕಾಡಾನೆಗಳನ್ನ ಸೆರೆಹಿಡಿದು ಸ್ಥಳಾಂತರಿಸಲು ಅರಣ್ಯ ಇಲಾಖೆ ಆದೇಶಿಸಿದೆ. ಇತ್ತ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಮತ್ತು ಮಂಚಹಳ್ಳಿ ಗ್ರಾಮಗಳಲ್ಲಿ ಕಾಡಾನೆಗಳು ರೈತರ ಬೀನ್ಸ್, ಬಾಳೆ ಹಾಗೂ ತೆಂಗಿನ ಬೆಳೆಗಳನ್ನ ನಾಶಪಡಿಸಿವೆ.
Human Wildlife Conflict: ಕರ್ನಾಟಕದಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾಡಾನೆಗಳ ನಿರಂತರ ದಾಳಿ ಒಂದೆಡೆ ರೈತರ ಬದುಕಿಗೆ ಹೊಡೆತ ನೀಡುತ್ತಿದ್ದರೆ, ಮತ್ತೊಂದೆಡೆ ಜನರ ಜೀವಕ್ಕೂ ಅಪಾಯ ತಂದೊಡ್ಡಿದೆ. ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಇಬ್ಬರು ಮೃತಪಟ್ಟಿರುವ ಘಟನೆ ಆತಂಕ ಮೂಡಿಸಿದ್ದರೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನ ನಾಶಪಡಿಸುತ್ತಿವೆ. ಬೆಳೆದ ಬೆಳೆ ಕೈಗೆ ಸಿಗದೆ ರೈತರು ಕಂಗಾಲಾಗಿದ್ದು, ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಾಸನದಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿ
ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಬೇಲೂರು ತಾಲೂಕಿನಲ್ಲಿ ಕಾಡಾನೆಗಳ ದಾಳಿ ತೀವ್ರಗೊಂಡಿದ್ದು, ಸತತ ಎರಡು ದಿನಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ನವೆಂಬರ್ 15ರಂದು ಚೌಡನಹಳ್ಳಿಯಲ್ಲಿ ಜಯಮ್ಮ (50) ಎಂಬ ಮಹಿಳೆ ಕಾಡಾನೆ ದಾಳಿಗೆ ಬಲಿಯಾಗಿದ್ದರೆ, ನ.16ರಂದು ಹಫೀಜ್ ಉರ್ ರೆಹಮಾನ್ (64) ಎಂಬುವವರು ಮೃತಪಟ್ಟಿದ್ದಾರೆ. ನಿರಂತರವಾಗಿ ಸಂಭವಿಸುತ್ತಿರುವ ಇಂತಹ ಘಟನೆಗಳಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಕಾಡಾನೆಗಳ ಹಾವಳಿ ತಡೆಯಲು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ಜನರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಕಾಡಾನೆಗಳ ಸಂಚಾರ ಮತ್ತು ದಾಳಿಯಿಂದ ಜನಜೀವನಕ್ಕೆ ಎದುರಾಗಿರುವ ಅಪಾಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರ ಭರವಸೆಯ ಬಳಿಕ ಪ್ರತಿಭಟನೆಯನ್ನ ಕೈಬಿಡಲಾಗಿದೆ. ಆದರೆ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕೆಂಬ ಸ್ಥಳೀಯರ ಒತ್ತಾಯ ಮುಂದುವರಿದಿದೆ. ಅಲ್ಲದೇ ಹಾಸನ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳು ಸಲ್ಲಿಸಿದ ತುರ್ತು ವರದಿಯನ್ನ ಪರಿಗಣಿಸಿರುವ ಅರಣ್ಯ ಇಲಾಖೆಯು 10 ಗಂಡು ಕಾಡಾನೆಗಳನ್ನ ಸೆರೆಹಿಡಿದು ಸ್ಥಳಾಂತರಿಸಲು ಮಹತ್ವದ ಆದೇಶ ಹೊರಡಿಸಿದೆ.
ಚಾಮರಾಜನಗರದಲ್ಲಿ ಕಟಾವಿಗೆ ಬಂದಿದ್ದ ಬೀನ್ಸ್ ಬೆಳೆ ನಾಶ!
ಇತ್ತ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮದಲ್ಲಿ ಕಾಡಾನೆಗಳ ಉಪಟಳದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂಡೀಪುರ ಹುಲಿ ರಕ್ಷಿತಾರಣ್ಯದ ಮದ್ದೂರು ವನ್ಯಜೀವಿ ವಲಯ ವ್ಯಾಪ್ತಿಯ ಈ ಗ್ರಾಮದಲ್ಲಿ ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನ ಹಾನಿಗೊಳಿಸಿವೆ. ಗ್ರಾಮದ ಮನು ಎಂಬುವವರ ಜಮೀನಿಗೆ ನುಗ್ಗಿದ ಕಾಡಾನೆಗಳು ಒಂದು ಎಕರೆಯಲ್ಲಿ ಬೆಳೆದು ಕಟಾವಿಗೆ ಬಂದಿದ್ದ ಬೀನ್ಸ್ ಬೆಳೆಯನ್ನ ನಾಶಪಡಿಸಿವೆ. ಸಾಲ ಮಾಡಿ ಕೃಷಿ ಮಾಡಿದ್ದ ರೈತರಿಗೆ ಕಟಾವಿನ ಸಮಯದಲ್ಲಿ ಎದುರಾದ ಈ ನಷ್ಟ ದೊಡ್ಡ ಆಘಾತ ನೀಡಿದೆ.
ಬೆಳೆಯನ್ನ ಉಳಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟಿದ್ದರೂ ಕಾಡಾನೆಗಳ ದಾಳಿಯಿಂದ ಎಲ್ಲವೂ ಹಾನಿಯಾಗಿದೆ ಎಂದು ಮನು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಕಾಡಾನೆಗಳ ಉಪಟಳ ಹೆಚ್ಚಾಗಿದೆ ಎಂದು ಆರೋಪಿಸಿರುವ ರೈತರು, ಬೆಳೆ ನಷ್ಟಕ್ಕೆ ಪರಿಹಾರ ಹಾಗೂ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಂಚಹಳ್ಳಿಯಲ್ಲಿ ಬಾಳೆ, ತೆಂಗಿನ ಫಸಲು ಧ್ವಂಸ!
ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಗ್ರಾಮದಲ್ಲಿಯೂ ಕಾಡಾನೆಗಳ ದಾಳಿ ರೈತರನ್ನ ಕಂಗೆಡಿಸಿದೆ. ಬಂಡೀಪುರದ ಓಂಕಾರ ವಲಯ ವ್ಯಾಪ್ತಿಯ ಮಂಚಹಳ್ಳಿಯಲ್ಲಿ ಕಾಡಾನೆಗಳು ಜಮೀನುಗಳಿಗೆ ನುಗ್ಗಿ ಬಾಳೆ ಮತ್ತು ತೆಂಗಿನ ಫಸಲನ್ನ ತುಳಿದು ನಾಶಪಡಿಸಿವೆ. ಗ್ರಾಮದ ನಂದೀಶ್ ಮತ್ತು ಮಲ್ಲಣ್ಣ ಅವರಿಗೆ ಸೇರಿದ ಜಮೀನುಗಳಲ್ಲಿ ಬೆಳೆ ಹಾನಿಯಾಗಿದೆ. ವಿಶೇಷವಾಗಿ ರೈತ ನಂದೀಶ್ ಅವರ ಜಮೀನಿಗೆ ಕಾಡಾನೆಗಳು ನಾಲ್ಕನೇ ಬಾರಿಗೆ ದಾಳಿ ನಡೆಸಿವೆ. ಕಷ್ಟಪಟ್ಟು ಬೆಳೆಸಿದ ಫಸಲು ಮತ್ತೆ ಮತ್ತೆ ನಾಶವಾಗುತ್ತಿರುವುದರಿಂದ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ನಿರಂತರ ಸಂಚಾರದಿಂದ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗುತ್ತಿದ್ದು, ಕೂಡಲೇ ಅರಣ್ಯ ಇಲಾಖೆ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
ರೈತರ ಬದುಕು ಮತ್ತು ಜನರ ಜೀವಕ್ಕೆ ಸವಾಲಾದ ಸಂಘರ್ಷ
ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ವರದಿಯಾಗಿರುವ ಈ ಘಟನೆಗಳು ಮಾನವ-ವನ್ಯಜೀವಿ ಸಂಘರ್ಷದ ವಿಭಿನ್ನ ಪರಿಣಾಮಗಳನ್ನ ತೋರಿಸುತ್ತಿವೆ. ಹಾಸನದಲ್ಲಿ ಕಾಡಾನೆ ದಾಳಿಯಿಂದ ಮಾನವ ಜೀವಹಾನಿ ಸಂಭವಿಸಿದ್ದರೆ, ಚಾಮರಾಜನಗರದಲ್ಲಿ ರೈತರ ಕೃಷಿ ಫಸಲುಗಳು ನಾಶವಾಗಿವೆ. ಒಂದು ಕಡೆ ಜನರು ಜೀವಭಯದಲ್ಲಿ ಬದುಕುತ್ತಿದ್ದರೆ, ಮತ್ತೊಂದೆಡೆ ಸಾಲ ಮಾಡಿ ಕೃಷಿ ಮಾಡಿರುವ ರೈತರು ಬೆಳೆ ನಷ್ಟದಿಂದ ಸಂಕಷ್ಟ ಎದುರಿಸುತ್ತಿದ್ದಾರೆ.
ಕಾಡಾನೆಗಳ ಹಾವಳಿ ತಡೆಯಲು ಶಾಶ್ವತ ಕ್ರಮ ಕೈಗೊಳ್ಳಬೇಕೆಂಬುದು ಎರಡೂ ಜಿಲ್ಲೆಗಳ ಜನರ ಪ್ರಮುಖ ಬೇಡಿಕೆಯಾಗಿದೆ. ಬೆಳೆ ನಷ್ಟ ಅನುಭವಿಸಿರುವ ರೈತರು ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದರೆ, ಮಾನವ ಜೀವಹಾನಿ ಸಂಭವಿಸಿರುವ ಪ್ರದೇಶಗಳ ಜನರು ತಮ್ಮ ಸುರಕ್ಷತೆಗೆ ಆದ್ಯತೆ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಒಟ್ನಲ್ಲಿ ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಾಡಾನೆಗಳ ದಾಳಿ ಹಾಗೂ ಹಾವಳಿಯಿಂದ ಮಾನವ-ವನ್ಯಜೀವಿ ಸಂಘರ್ಷ ಮತ್ತೆ ಚರ್ಚೆಗೆ ಬಂದಿದೆ. ಜನರ ಜೀವ ರಕ್ಷಣೆ, ರೈತರ ಬೆಳೆಗಳ ಸಂರಕ್ಷಣೆ ಮತ್ತು ಕಾಡಾನೆಗಳ ಹಾವಳಿ ನಿಯಂತ್ರಣದ ಬೇಡಿಕೆಗಳು ಮುನ್ನೆಲೆಗೆ ಬಂದಿವೆ.