ʼಇಸ್ಕಾನ್ ಒಂದು ರೀತಿ ಇಂಟರ್ ನ್ಯಾಷಿನಲ್ ಬೆಗ್ಗರ್ ಸಂಸ್ಥೆʼ : CITU ಹೋರಾಟಗಾರ್ತಿ ಆರೋಪ
ಮಂಡ್ಯದಲ್ಲಿ ಅಕ್ಷರ ದಾಸೋಹ ಕಾರ್ಯಕರ್ತರ ಪ್ರತಿಭಟನೆ ವೇಳೆ ಸಿಐಟಿಯುನ ರಾಜ್ಯ ಕಾರ್ಯದರ್ಶಿಯು ಇಸ್ಕಾನ್ ವಿರುದ್ಧ ಇಂಟರ್ ನ್ಯಾಷಿನಲ್ ಬೆಗ್ಗರ್ ಸಂಸ್ಥೆ ಎಂಬ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.
ಮಂಡ್ಯದಲ್ಲಿ ಅಕ್ಷರ ದಾಸೋಹ ಕಾರ್ಯಕರ್ತರ ಪ್ರತಿಭಟನೆ ವೇಳೆ ಸಿಐಟಿಯುನ ರಾಜ್ಯ ಕಾರ್ಯದರ್ಶಿಯು ಇಸ್ಕಾನ್ ವಿರುದ್ಧ ಇಂಟರ್ ನ್ಯಾಷಿನಲ್ ಬೆಗ್ಗರ್ ಸಂಸ್ಥೆ ಎಂಬ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.
ಮಂಡ್ಯ : ಶಾಲಾ ಮಕ್ಕಳ ಬಿಸಿಯೂಟ ಯೋಜನೆ ನಿರ್ವಹಣೆಯನ್ನು ಕ್ಲಸ್ಟರ್ ಕಿಚನ್‌ಗೆ ನೀಡುವ ವಿಚಾರವಾಗಿ ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಮಂಡ್ಯದಲ್ಲಿ ಇಸ್ಕಾನ್ ಸಂಸ್ಥೆಯ ವಿರುದ್ಧ ಸಿಐಟಿಯು ರಾಜ್ಯ ಕಾರ್ಯದರ್ಶಿ ಸಿ. ಕುಮಾರಿ ತೀವ್ರ ವಾಗ್ದಾಳಿ ನಡೆಸಿದ್ದು, ಈ ವಿವಾದಾತ್ಮಕ ಹೇಳಿಕೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಂಡ್ಯದಲ್ಲಿ ಅಕ್ಷರ ದಾಸೋಹ ಕಾರ್ಯಕರ್ತರು ನಡೆಸುತ್ತಿದ್ದ ಹೋರಾಟದ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಸಿ. ಕುಮಾರಿ, ಇಸ್ಕಾನ್ ಸಂಸ್ಥೆಯ ಕಾರ್ಯವೈಖರಿ ಹಾಗೂ ಶಾಲಾ ಮಕ್ಕಳಿಗೆ ಬಿಸಿಯೂಟ ಪೂರೈಸುವ ಯೋಜನೆಯ ಹಿಂದೆ ದೊಡ್ಡ ಹುನ್ನಾರ ಅಡಗಿದೆ ಎಂದು ಆರೋಪಿಸಿದ್ದಾರೆ. ಮಕ್ಕಳ ಹೆಸರಿನಲ್ಲಿ ಹಣ ಸಂಗ್ರಹಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರವು ಶಿಕ್ಷಕರ ಸಂಘದ ಲೆಟರ್ ಹೆಡ್ ನೆಪ ಮಾಡಿಕೊಂಡು ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುವ ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಸ್ಥೆಗಳ ಕೈಗೆ ಒಪ್ಪಿಸುವ ಪ್ರಯತ್ನ ಮಾಡುತ್ತಿದೆ . ಇದ್ರಲ್ಲಿ ದೊಡ್ಡ ಹುನ್ನಾರ ಇದ್ದು, ದೊಡ್ಡ ದೊಡ್ಡ NGO ಗಳು ಧಾರ್ಮಿಕ ಸಂಸ್ಥೆಯ ಕೈವಾಡ ಇವೆ. ಇದರಲ್ಲಿ ಅವುಗಳು ಶಾಮೀಲಾಗಿದ್ದು ಅದರಲ್ಲೂ ಇಸ್ಕಾನ್ ನ ಕೈವಾಡ ಹೆಚ್ಚಾಗಿದೆ. ಮಕ್ಕಳ ಹೆಸರೇಳಿಕೊಂಡು ಈ ಇಸ್ಕಾನ್ ಒಂದು ರೀತಿ ಇಂಟರ್ ನ್ಯಾಷಿನಲ್ ಬೆಗ್ಗರ್ ತರ ಆಗಿದೆ ಎಂದು ಅಕ್ಷರ ದಾಸೋಹ ರಾಜ್ಯ ಕಾರ್ಯದರ್ಶಿ ಸಿ. ಕುಮಾರಿ ಗಂಭೀರ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಅದಮ್ಯ ಚೇತನ ಸಂಸ್ಥೆಯು ಯೋಜನೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಮುಂದಾಗಿತ್ತು. ಇದೀಗ ಇಸ್ಕಾನ್ ಸಂಸ್ಥೆಯ ಹೆಸರು ಮುನ್ನಲೆಗೆ ಬಂದಿದ್ದು, ಇದರ ಹಿಂದೆ ಬೇರೆ ಬೇರೆ ಶಕ್ತಿಗಳ ಕೈವಾಡವಿದೆ. ಸರ್ಕಾರವು ಶಾಲಾ ಮಕ್ಕಳ ಬಿಸಿಯೂಟ ಯೋಜನೆಯನ್ನು ಇಸ್ಕಾನ್ ಸಂಸ್ಥೆಗೆ ವಹಿಸಲು ಪ್ರಯತ್ನಿಸುತ್ತಿದೆ. ಇಂತಹ ಕ್ರಮಗಳಿಂದ ಅಕ್ಷರ ದಾಸೋಹ ಕಾರ್ಯಕರ್ತರ ಉದ್ಯೋಗದ ಭದ್ರತೆ ಹಾಗೂ ಅವರ ಭವಿಷ್ಯಕ್ಕೆ ಧಕ್ಕೆಯಾಗಲಿದೆ ಎಂಬ ಆತಂಕವನ್ನೂ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸುವ ಮಹತ್ವದ ಯೋಜನೆಯ ನಿರ್ವಹಣೆ, ಖಾಸಗಿ ಸಂಸ್ಥೆಗಳ ಪಾತ್ರ ಹಾಗೂ ಅಕ್ಷರ ದಾಸೋಹ ಕಾರ್ಯಕರ್ತರ ಉದ್ಯೋಗದ ಭದ್ರತೆ ವಿಚಾರಗಳು ಇದೀಗ ಚರ್ಚೆಗೆ ಕೇಂದ್ರ ಬಿಂದುವಾಗಿದೆ. ಈ ಹಿನ್ನಲೆಯಲ್ಲಿ ಮಂಡ್ಯದಲ್ಲಿ ನಡೆದ ಪ್ರತಿಭಟನೆ ವೇಳೆ ಸಿ ಕುಮಾರಿ ಮಾಡಿರುವ ಗಂಭೀರ ಆರೋಪಗಳು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಒಟ್ಟಾರೆಯಾಗಿ ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಸ್ಥೆಗಳ ಮೂಲಕ ನಿರ್ವಹಿಸುವ ವಿಚಾರಕ್ಕೆ ಸಿಐಟಿಯು ವಿರೋಧ ವ್ಯಕ್ತಪಡಿಸಿದ್ದು, ಇಸ್ಕಾನ್ ಹಾಗೂ ರಾಜ್ಯ ಸರ್ಕಾರ ವಿರುದ್ಧ ಕೇಳಿ ಬಂದಿರುವ ಆರೋಪಗಳು ಹೊಸ ವಿವಾದಕ್ಕೆ ನಾಂದಿ ಹಾಡಿವೆ. ಈ ಆರೋಪದ ಕುರಿತು ಇಸ್ಕಾನ್ ಸಂಸ್ಥೆ ಹಾಗೂ ರಾಜ್ಯ ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.