ರಾಜಕೀಯ ಲೇಪವಿಲ್ಲದೆ ವೈಭವದ ದಸರಾ ನಡೆಯಬೇಕು: ಸಿಎಂ ಡಿ ಕೆ ಶಿವಕುಮಾರ್
ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಸರಾ ಪ್ರಗತಿ ಪರಿಶೀಲನಾ ಸಭೆ ಬಳಿಕ ಶಿವಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಶನಿವಾರ ಮಾತನಾಡಿದರು.
ಮೈಸೂರು: ರಾಜಕೀಯಕ್ಕೆ ಅವಕಾಶವಿಲ್ಲದಂತೆ ವೈಭವದಿಂದ ದಸರಾ ನಡೆಯಬೇಕು. ದಸರಾ ಮಹೋತ್ಸವದಲ್ಲಿ ಅಂಬಾರಿ ಹೊರಲು ಧನಂಜಯ, ಏಕಲವ್ಯ ಸೇರಿ ಐದು ಆನೆಗಳಿಗೆ ತರಬೇತಿ ನೀಡಲಾಗಿದೆ. ಇನ್ನೂ ಹೆಚ್ಚಿನ ತರಬೇತಿ ನೀಡಲುಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. "ರಾಜ ವಂಶಸ್ಥರಿಗೂ ಗೌರವ ಪೂರ್ವಕ ಆಹ್ವಾನ ನೀಡಬೇಕು. ಯಾರ ಸ್ಥಾನ, ಸ್ವಾಭಿಮಾನಕ್ಕೂ ಧಕ್ಕೆ ತರುವ ಕೆಲಸ ಆಗಬಾರದು. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ಇಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲದಂತೆ ವೈಭವದಿಂದ ದಸರಾ ನಡೆಸಲು ಸೂಚಿಸಲಾಗಿದೆ" ಎಂದರು. ಏಷ್ಯನ್ ಗೇಮ್ ನಲ್ಲಿ ಪದಕ ಗೆದ್ದಿರುವ ರಾಜ್ಯದ ಕ್ರೀಡಾಪಟುಗಳನ್ನು ದಸರಾ ಕ್ರೀಡಾಕೂಟಕ್ಕೆ ಆಹ್ವಾನಿಸಿ ಗೌರವ ನೀಡಬೇಕು ಎಂದು ಸೂಚನೆ ನೀಡಿದರು.
"ದಸರಾ ಹನ್ನೊಂದು ದಿನವೂ ದಿನಕ್ಕೆ ಇಬ್ಬರು ಸಚಿವರಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬೆಂಬಲವಾಗಿ ಕೆಲಸ ಮಾಡಬೇಕು. ಏಕೆಂದರೆ ಒಬ್ಬರ ಮೇಲೆಯೇ ಒತ್ತಡ ಹೆಚ್ಚುವುದನ್ನು ತಪ್ಪಿಸಬೇಕು ಎನ್ನುವ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲರ ಸಲಹೆಯಂತೆ ದಸರಾ ಕಾರ್ಯಕ್ರಮ ನಡೆಸಬೇಕು" ಎಂದು ಸೂಚನೆ ನೀಡಿದರು.
"ನಗರದಲ್ಲಿ ಎಲ್ಲಿಯೂ ಖಾಸಗಿ ಪ್ಲೆಕ್ಸ್ ಗಳಿಗೆ ಅವಕಾಶ ನೀಡಬಾರದು. ನನ್ನ ಫೋಟೊ ಸೇರಿದಂತೆ ಯಾವ ಫೋಟೊಗಳನ್ನೂ ಹಾಕಬಾರದು. ದಸರಾ ಹಬ್ಬ ಮಾತ್ರ ವಿಜೃಂಭಿಸಬೇಕು. ದಸರಾ ಸೌಂದರ್ಯವನ್ನು ಯಾವ ಕಾರಣಕ್ಕೂ ಹಾಳುಗೆಡವಬಾರದು" ಎಂದು ಸೂಚಿಸಿದರು.
"ಈ ವರ್ಷ ದೀಪಾಲಂಕಾರವನ್ನು ವಿಶೇಷವಾಗಿ ಆಯೋಜನೆ ಮಾಡಲಾಗುವುದು. 21 ದಿನಗಳ ಕಾಲ ಇದು ನಡೆಯಲಿದೆ. ಯುವದಸರಾ ಕಂಬಳ ಸೇರಿದಂತೆ ಇತರೆಡೆ ಆಹಾರ ಮೇಳ ಆಯೋಜನೆ ಮಾಡಬೇಕು. ಅಲ್ಲಲ್ಲಿ ಶೌಚಾಲಯ, ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು. ಈ ಬಾರಿ ಯುವ ದಸರಾದಲ್ಲಿ ಎರಡು ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ" ಎಂದರು.
ಹೋಟೆಲ್ ಗಳು ಯಾವುದೇ ಕಾರಣಕ್ಕೂ ಪ್ರವಾಸಿಗರಿಂದ ಸುಲಿಗೆ ಮಾಡಬಾರದು. ಗೌರವಯುತ ಮೊತ್ತ ಪಡೆಯಬೇಕು ಎಂದು ಸೂಚಿಸಲಾಗಿದೆ. ದೇಶ- ವಿದೇಶಗಳ ರಾಯಬಾರಿಗಳಿಗೆ ಆಹ್ವಾನ ನೀಡಲಾಗಿದೆ. ಅವರಿಗೂ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುವುದು. ಹಣ ಕೊಟ್ಟು ಜಂಬೂ ಸವಾರಿ ವೀಕ್ಷಣೆ ಮಾಡುವವರಿಗೆ ಸೂಕ್ತ ಆಸನ ವ್ಯವಸ್ಥೆ, ಆಸನಗಳಿಗೆ ನಂಬರ್ ಹಾಗೂ ಹೆಸರು ಹಾಕಬೇಕು. ಯಾರೋ ಬಂದು ಕೂರಬಾರದು. ಜೊತೆಗೆ ಎಷ್ಟು ಗಂಟೆಗೆ ಒಳಗೆ ಬರಬೇಕು ಎಂಬುದನ್ನೂ ತಿಳಿಸಬೇಕು ಎಂದು ಸೂಚಿಸಿದರು.
ದಸರಾ ಮೆರವಣಿಗೆ ಹೋಗುವಾಗ ಒಂದೇ ರೀತಿಯ ತಂಡಗಳಿಗೆ ಅವಕಾಶ ನೀಡಬಾರದು. ವೈವಿಧ್ಯಮಯ ಕಲಾ ತಂಡಗಳಿಗೆ ಅವಕಾಶ ನೀಡಬೇಕು. ಟ್ಯಾಬ್ಲೋಗಳೂ ಸಹ ಶಿಸ್ತು ಕಾಪಾಡಬೇಕು ಎಂದರು. "ಭಾನುವಾರ ಗವಿಸಿದ್ದೇಶ್ವರ ಶ್ರೀಗಳನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲು ಜಿಲ್ಲಾಡಳಿತ ತೆರಳಲಿದೆ. ಜಾತಿ, ಧರ್ಮ ಬೇಧವಿಲ್ಲದೆ ಎಲ್ಲ ಮಠಾಧೀಶರು, ಕ್ರೈಸ್ತ, ಬೌದ್ಧ, ಸಿಖ್, ಅಲ್ಪಸಂಖ್ಯಾತರು ಮತ್ತಿತರ ಧರ್ಮಗಳ ಗುರುಗಳನ್ನು ಆಹ್ವಾನಿಸಲು ಸೂಚಿಸಲಾಗಿದೆ. ಧಾರ್ಮಿಕ ಪ್ರಮುಖರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗುವುದು" ಎಂದರು.
"ಟಿಬೆಟಿಯನ್ನರಿಗೂ ದಸರಾ ಮೆರವಣಿಗೆಯಲ್ಲಿ ಟ್ಯಾಬ್ಲೋ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಮಂಗಳೂರಿನ ಇತಿಹಾಸ ಬಿಂಬಿಸುವ ಟ್ಯಾಬ್ಲೋ, ಕೇರಳ, ತಮಿಳುನಾಡು ಹಾಗೂ ಆಂದ್ರಪ್ರದೇಶದವರಿಗೂ ಅವರ ಪರಂಪರೆ ಬಿಂಬಿಸುವ ಟ್ಯಾಬ್ಲೋಗಳನ್ನು ಕಳುಹಿಸಿ ಎಂದು ಪತ್ರ ಬರೆಯಲಾಗಿದೆ. ಜೊತೆಗೆ ಚಿತ್ರರಂಗದವರೂ ಸಹ ಈ ಬಾರಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಜಯಮಾಲ ಅವರೊಟ್ಟಿಗೆ ಈ ಬಗ್ಗೆ ಸಂವಹನ ನಡೆಸಲಾಗಿದೆ" ಎಂದರು.
"ತುಳುನಾಡಿಗೆ ಸುದೀರ್ಘ ಇತಿಹಾಸವಿದೆ. ಅವರ ಭಾವನಾತ್ಮಕ ವಿಚಾರಕ್ಕೆ ಗೌರವ ಸಲ್ಲಿಸಿದ್ದು, ಅವರ ಸಂಸ್ಕೃತಿ ಬಿಂಬಿಸಲು ಪ್ರತ್ಯೇಕ ಸ್ತಬ್ಧಚಿತ್ರ ಸಿದ್ಧಪಡಿಸಲು ಆಹ್ವಾನಿಸಲಾಗಿದೆ" ಎಂದರು ಸೂಚಿಸಿದರು.
"ದಸರಾ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರ ಕಾರ್ಯವನ್ನು ಸೂಕ್ತ ರೀತಿಯಲ್ಲಿ ಗೌರವ ನೀಡಲಾಗುವುದು. ಚಾಮರಾಜನಗರ, ಮಡಿಕೇರಿ, ಶ್ರೀರಂಗಪಟ್ಟಣ ದಸರಾ ಎಂದಿನಂತೆ ನಡೆಯಲಿದೆ. ಐತಿಹಾಸಿಕವಾದ ಡ್ರೋಣ್ ಶೋ ಆಯೋಜನೆ ಮಾಡಲಾಗುವುದು" ಎಂದರು.
"ಭೂ ಸೇನೆ, ವಾಯು ಹಾಗೂ ಜಲಸೇನೆ ಮೂರು ತಂಡಗಳು ಜಂಬೂಸವಾರಿಯಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿದ್ದು, ಇವರ ಶಿಸ್ತು ಎಲ್ಲರಿಗೂ ಮಾದರಿಯಾಗಬೇಕು. ಕಂಬಳವು ಸಂಪ್ರದಾಯದ ಪ್ರಕಾರ ನಡೆಯಬೇಕು. ಜನರಿಗೆ ವೀಕ್ಷಿಸಲು ಅಲ್ಲಲ್ಲಿ ಎಲ್.ಇ.ಡಿ ಪರದೆಗಳನ್ನು ಅಳವಡಿಸಿ ನೇರ ಪ್ರಸಾರ ನಡೆಯುವಂತೆ ನೋಡಿಕೊಳ್ಳಬೇಕು. ರಸ್ತೆಗಳಲ್ಲಿ ಫ್ಲೆಕ್ಸ್ ಅಳವಡಿಸಬಾರದು ಎಂದು ಸೂಚಿಸಲಾಗಿದೆ" ಎಂದರು.
"ಮೆರವಣಿಗೆಯಲ್ಲಿ ಕಲಾತಂಡಗಳು ಪುನರಾವರ್ತನೆಯಾಗಬಾರದು. ಕಲಾವಿದರು ಹಾಗೂ ಸುತ್ತಮುತ್ತಲು ಮೊಬೈಲ್ ಬಳಕೆ ಮಾಡಬಾರದು. ಧರಿಸುವ ಸಮವಸ್ತ್ರಗಳು ಒಂದೇ ರೀತಿ ಇರಬೇಕು" ಎಂದು ತಿಳಿಸಿದರು.
ಹಣ ಕೊಟ್ಟು ಟಿಕೇಟ್ ಖರೀದಿಸಿ ಜಂಬೂಸವಾರಿ ವೀಕ್ಷಿಸಲು ಆಗಮಿಸುವವರಿಗೆ ಸೂಕ್ತ ಆಸನದ ವ್ಯವಸ್ಥೆಯಾಗಬೇಕು. ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಚಿವರಿಗೆ ಕಡ್ಡಾಯವಾಗಿ ಆಹ್ವಾನ ಪತ್ರಿಕೆ ತಲುಪಬೇಕು" ಎಂದು ಹೇಳಿದರು.