SOCIAL MEDIA

Newsletter

PARTNER SITES
Select Language Select State

ನಾಡಹಬ್ಬ ದಸರಾದಲ್ಲಿ ಈ ಬಾರಿ ಮಹತ್ವದ ಬದಲಾವಣೆ!

Dasara: ಮೈಸೂರು ದಸರಾ ಅಂದ್ರೆ ವೈಭವ, ಪರಂಪರೆ, ಸಂಸ್ಕೃತಿಯ ಸಮ್ಮಿಲನ.. ಆದ್ರೆ ಈ ಬಾರಿ ದಸರಾಕ್ಕೆ ಮತ್ತಷ್ಟು ಹೊಸತನದ ಸ್ಪರ್ಶ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

Written By Ramya. R. Gowda
Published: Oct 03, 2026, 04:18 PM IST | Updated: Oct 03, 2026, 04:25 PM IST
Join

ಮೈಸೂರು ದಸರಾ ಅಂದ್ರೆ ವೈಭವ, ಪರಂಪರೆ, ಸಂಸ್ಕೃತಿಯ ಸಮ್ಮಿಲನ.. ಆದ್ರೆ ಈ ಬಾರಿ ದಸರಾಕ್ಕೆ ಮತ್ತಷ್ಟು ಹೊಸತನದ ಸ್ಪರ್ಶ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಏರ್‌ಶೋ ಆಯೋಜನೆಗೆ ಮನವಿ.. ಸೇನಾ ತುಕಡಿಗಳನ್ನ ಕಳುಹಿಸುವಂತೆ ರಕ್ಷಣಾ ಸಚಿವರಿಗೆ ಮನವಿ.. ಜಂಬೂ ಸವಾರಿಯಲ್ಲಿ ಬೇರೆ ರಾಜ್ಯಗಳ ಕಲೆ-ಸಂಸ್ಕೃತಿ ಸಾರುವ ಟ್ಯಾಬ್ಲೋಗಳಿಗೂ ಆಹ್ವಾನ..ಹೀಗೆ ಈ ಬಾರಿಯ ದಸರಾವನ್ನ ಮತ್ತಷ್ಟು ವಿಭಿನ್ನವಾಗಿ ಆಚರಿಸಲು ಪ್ಲಾನ್ ಮಾಡಲಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

 

ಮೈಸೂರು ದಸರಾ.. ಕರ್ನಾಟಕದ ನಾಡಹಬ್ಬ.. ಪ್ರತಿ ವರ್ಷವೂ ತನ್ನದೇ ಆದ ವೈಭವದಿಂದ ದೇಶದ ಗಮನ ಸೆಳೆಯುವ ದಸರಾಕ್ಕೆ ಈ ಬಾರಿ ಮತ್ತಷ್ಟು ಹೊಸತನ ನೀಡಲು ಸರ್ಕಾರ ಸಜ್ಜಾಗಿದೆ.ಪಿರಿಯಾಪಟ್ಟಣದಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕು.. ದಸರಾದಲ್ಲೂ ಒಂದಷ್ಟು ಬದಲಾವಣೆ ಮಾಡಿದ್ದೇವೆ ಎಂದಿದ್ದಾರೆ.ಸಿನಿಮಾ, ಟಿವಿ, ಮೊಬೈಲ್ ಸೇರಿದಂತೆ ಕಾಲ ಬದಲಾದಂತೆ ಮನರಂಜನೆಯ ಸ್ವರೂಪವೂ ಬದಲಾಗಿದೆ. ಅದೇ ರೀತಿ ನಾಡಹಬ್ಬದಲ್ಲೂ ಹೊಸತನ ಇರಬೇಕು ಎಂಬುದು ತಮ್ಮ ಆಶಯ ಎಂದು ಸಿಎಂ ಹೇಳಿದ್ದಾರೆ. "ಇದು ನನ್ನ ಕನಸು ಅಂತ ಏನೂ ಇಲ್ಲ.. ಹೊಸತನ ಬರಬೇಕು ಅನ್ನೋದು ನನ್ನ ಆಸೆ. ಏರ್‌ಶೋಗೆ ಮನವಿ ಮಾಡಿದ್ದೇನೆ. ರಕ್ಷಣಾ ಸಚಿವರಿಗೆ ಸೇನಾ ತುಕಡಿಗಳನ್ನ ಕಳುಹಿಸುವಂತೆ ಮನವಿ ಮಾಡಿದ್ದೇನೆ."

ಅಷ್ಟೇ ಅಲ್ಲ.. ಮೈಸೂರು ದಸರಾದ ಜಂಬೂ ಸವಾರಿಯಲ್ಲೂ ಹೊಸ ಪ್ರಯೋಗಕ್ಕೆ ಸರ್ಕಾರ ಮುಂದಾಗಿದೆ.ಬೇರೆ ರಾಜ್ಯಗಳ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನ ಪರಿಚಯಿಸುವ ಟ್ಯಾಬ್ಲೋಗಳನ್ನ ಜಂಬೂ ಸವಾರಿಗೆ ಕಳುಹಿಸುವಂತೆ ಅಕ್ಕಪಕ್ಕದ ರಾಜ್ಯಗಳಿಗೆ ಮನವಿ ಮಾಡಲಾಗಿದೆ ಎಂದು ಡಿಕೆಶಿ ತಿಳಿಸಿದ್ದಾರೆ. ನಮ್ಮ ಸಂಸ್ಕೃತಿ ಬೇರೆ ರಾಜ್ಯಗಳಿಗೆ ಹೋಗುವಂತೆ.. ಅವರ ಕಲೆ-ಸಂಸ್ಕೃತಿಗೂ ನಮ್ಮ ದಸರಾದಲ್ಲಿ ವೇದಿಕೆ ಸಿಗಬೇಕು ಅನ್ನೋದು ಸರ್ಕಾರದ ಉದ್ದೇಶ.

"ನಮ್ಮ ಭರತನಾಟ್ಯ ಕೇರಳದಲ್ಲಿ ಮಾಡಲ್ವಾ? ಕೇರಳದ ಚೆಂಡೆ ನಮ್ಮಲ್ಲಿ ಮಾಡಲ್ವಾ? ಬೇರೆ ರಾಜ್ಯದವರನ್ನು ಬಂದು ಇಲ್ಲಿ ವಾಸ ಮಾಡೋದು ಬೇಡ ಅನ್ನೋಕ್ಕಾಗುತ್ತಾ? ಇದು ನಾಡಹಬ್ಬ.. ಎಲ್ಲಾ ಕಲೆಗಳು ಇರಲಿ ಅನ್ನೋದು ನಮ್ಮ ಆಸೆ." ಇನ್ನು ದಸರಾಗೆ ಅಕ್ಕಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಲಾಗಿದೆ. ಬೇರೆ ರಾಜ್ಯಗಳಲ್ಲೂ ದಸರಾ ಆಚರಣೆ ನಡೆಯುವುದರಿಂದ ಕಾರ್ಯಕ್ರಮಗಳ ಬಗ್ಗೆ ಇನ್ನೆರಡು ದಿನಗಳಲ್ಲಿ ಅಂತಿಮ ರೂಪ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ. ಸಿನಿಮಾ ಕ್ಷೇತ್ರದವರಿಗೂ ದಸರಾಗೆ ಬರುವಂತೆ ಆಹ್ವಾನ ನೀಡಿರುವುದಾಗಿ ತಿಳಿಸಿದ್ದಾರೆ.

ದಸರಾ ಸಿದ್ಧತೆ ನಡುವೆ SIR ಗೊಂದಲದ ಬಗ್ಗೆ ಡಿಕೆಶಿ ಮಾತು
ಇನ್ನು ಮೈಸೂರಿನಲ್ಲಿ ಎಸ್‌ಐಆರ್ ಗೊಂದಲದ ಬಗ್ಗೆಯೂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಎಸ್‌ಐಆರ್ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಸದ್ಯಕ್ಕೆ ಪ್ರತ್ಯೇಕ ತನಿಖೆ ಇಲ್ಲ. ಚುನಾವಣಾ ಆಯೋಗವೇ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಫಾರಂಗಳು ಎಲ್ಲಿಂದ ಮುದ್ರಣವಾದವು? ಅವು ಹೇಗೆ ಬಿಜೆಪಿ ಕೈಗೆ ತಲುಪಿದವು? ಎಂಬ ವಿಚಾರಗಳ ಬಗ್ಗೆ ಮಾಹಿತಿ ಹೊರಬರುತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ.
"ಕೇಂದ್ರ ಚುನಾವಣಾ ಆಯೋಗಕ್ಕೆ ಸತ್ಯ ದರ್ಶನ ಆಗಿದೆ. ಅವರು ಏನೇನು ಕ್ರಮ ಕೈಗೊಳ್ಳುತ್ತಾರೆ ನೋಡೋಣ. ಆಮೇಲೆ ನಮ್ಮ ತೀರ್ಮಾನ ಮಾಡುತ್ತೇವೆ."

ವೇಳೆ ಚುನಾವಣಾ ಆಯುಕ್ತರ ಮುಂದೆ ಧರಣಿ ನಡೆಸಿದ ಆರೋಪವನ್ನೂ ಡಿಕೆಶಿ ತಳ್ಳಿಹಾಕಿದ್ದಾರೆ.ತಾವು ಯಾವುದೇ ಕಾನೂನು ಉಲ್ಲಂಘಿಸಿಲ್ಲ. ಜನಪ್ರತಿನಿಧಿಯಾಗಿ ಸಮಸ್ಯೆಯನ್ನ ಚುನಾವಣಾ ಆಯುಕ್ತರ ಗಮನಕ್ಕೆ ತಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ತಪ್ಪು ಮಾಡಿದ್ದರೆ ತಮ್ಮ ಮೇಲೂ ಪ್ರಕರಣ ದಾಖಲಿಸಲಿ.. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದ್ದಾರೆ."ನಾನು ತಪ್ಪು ಮಾಡಿದರೆ ನನ್ನ ಮೇಲೆ ಕೇಸ್ ಹಾಕಲಿ. ಕಾನೂನು ಎಲ್ಲರಿಗೂ ಒಂದೇ. ನನ್ನಿಂದ ಶಾಂತಿ ಭಂಗ ಆಗಿದ್ದರೆ, ಕಾನೂನು ಉಲ್ಲಂಘನೆಯಾಗಿದ್ದರೆ ನನ್ನ ಮೇಲೂ ಕೇಸ್ ಹಾಕಲಿ."

ಇನ್ನು ನೈಸ್ ಅಕ್ರಮದ ವಿಚಾರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೂ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.ಯಾರು ಏನೇ ಹೇಳಿದರೂ ಕಾನೂನು ತನ್ನ ಕೆಲಸ ಮಾಡಲಿದೆ. ಯಾರು ತಪ್ಪು ಮಾಡಿದ್ದಾರೆ, ಯಾರು ಸರಿ ಅನ್ನೋದನ್ನ ಕಾನೂನು ತೀರ್ಮಾನಿಸಲಿದೆ ಎಂದು ಹೇಳಿದ್ದಾರೆ. ಎಲ್ಲಾ ಆರೋಪಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕ ವಿಚಾರವನ್ನ ಡೈವರ್ಟ್ ಮಾಡುವುದಿಲ್ಲ ಎಂದು ಹೇಳಿ, ನೈಸ್ ವಿಚಾರದ ಚರ್ಚೆಗೆ ಸದ್ಯಕ್ಕೆ ತೆರೆ ಎಳೆದಿದ್ದಾರೆ.

ಒಟ್ಟಿನಲ್ಲಿ ಮೈಸೂರು ದಸರಾದಲ್ಲಿ ಈ ಬಾರಿ ಹೊಸತನಕ್ಕೆ ಒತ್ತು ನೀಡಲು ಸರ್ಕಾರ ಮುಂದಾಗಿದೆ.ಏರ್‌ಶೋ.. ಸೇನಾ ತುಕಡಿ.. ಹೊರರಾಜ್ಯದ ಕಲೆ-ಸಂಸ್ಕೃತಿಯ ಟ್ಯಾಬ್ಲೋ.. ಹೀಗೆ ದಸರಾ ವೈಭವಕ್ಕೆ ಹೊಸ ಆಯಾಮ ನೀಡುವ ಸಿದ್ಧತೆ ನಡೆದಿದೆ. ಇದರ ಅಂತಿಮ ರೂಪ ಹೇಗಿರಲಿದೆ ಅನ್ನೋದು ಇನ್ನೆರಡು ದಿನಗಳಲ್ಲಿ ಸ್ಪಷ್ಟವಾಗಲಿದೆ.

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES