ನಿವೇಶನ ರಹಿತರ 5 ದಶಕಗಳ ಕನಸು ಕಡೆಗೂ ನನಸು.. ಕೊಟ್ಟ ಮಾತು ಉಳಿಸಿಕೊಂಡ ಸಚಿವ ಪಿ.ಎಂ. ನರೇಂದ್ರ ಸ್ವಾಮಿ
ಬಡವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿರುವ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಇಲ್ಲದವರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ. ಈ ಮೂಲಕ ಸುಮಾರು ಐದು ದಶಕಗಳ ಕನಸು ಕಡೆಗೂ ನನಸಾಗಿದೆ.
ನಿವೇಶನ ರಹಿತರ 5 ದಶಕದ ಕನಸು ಕಡೆಗೂ ನನಸಾಗಿದೆ. ನಿವೇಶನ ಹಂಚಿಕೆಗೆ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಚಾಲನೆ ಕೊಟ್ಟಿದ್ದು, ಬರೋಬ್ಬರಿ ನಾಲ್ಕೂವರೆ ದಶಕಗಳ ಬಳಿಕ ನಿವೇಶನ ವಂಚಿತರಿಗೆ ಸೈಟ್ ಹಂಚಿಕೆ ಮಾಡಲಾಗಿದೆ. ಬಡವರಿಗೆ ಕೊಟ್ಟ ಮಾತಿನಂತೆ ನಿವೇಶನ ಕೊಟ್ಟ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರ ಕಾರ್ಯಕ್ಕೆ ಕ್ಷೇತ್ರದ ಜನತೆ ಸಲಾಂ ಎಂದಿದ್ದಾರೆ. ಈ ಕುರಿತ ವರದಿ ಇಲ್ಲಿದೆ.
896 ಫಲಾನುಭವಿಗಳಿಗೆ ಸೈಟ್ ಹಂಚಿಕೆ:
ಮಳವಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ ನಿವೇಶನ ಹಂಚಿಕೆ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರ, ನಗರಾಭಿವೃದ್ಧಿ ಇಲಾಖೆ, ರಾಜೀವ್ ಗಾಂಧಿ ವಸತಿ ನಿಗಮ, ಜಿಲ್ಲಾಡಳಿತ ಹಾಗೂ ಪುರಸಭೆ ವತಿಯಿಂದ ಬರೋಬ್ಬರಿ 896 ಫಲಾನುಭವಿಗಳಿಗೆ ಸೈಟ್ ಹಂಚಿಕೆ ಮಾಡಲಾಗಿದೆ.
ಸೈಟ್ ಹಂಚಿಕೆಯಲ್ಲಿ ಪಾರದರ್ಶಕತೆ:
ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯದ ಕೃಷಿ ಸಚಿವರೂ ಆದ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರು ಬಡವರ ಪರ ನಿಂತು ಅವರಿಗೆ ಬೆಳಕಾಗಿದ್ದಾರೆ. ಸಚಿವ ನರೇಂದ್ರ ಸ್ವಾಮಿ ಅವರ ನಿರಂತರ ಪರಿಶ್ರಮ, 45 ವರ್ಷದ ಹೋರಾಟದ ಫಲವಾಗಿ ಕಳೆದ 45 ವರ್ಷಗಳಿಂದ ನಿವೇಶನ ವಂಚಿತರಾಗಿದ್ದ ಮಳವಳ್ಳಿಯ ಬಡ ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಹಾಗೂ ಡಿಸಿ ಡಾ. ಕುಮಾರ ನೇತೃತ್ವದಲ್ಲಿ ಲಾಟರಿ ಮೂಲಕ 896 ಫಲಾನುಭವಿಗಳಿಗೆ ಪಾರದರ್ಶಕವಾಗಿ ನಿವೇಶನಗಳ ಸಂಖ್ಯೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಿ.ಎಂ. ನರೇಂದ್ರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಗುಂಡುರಾವ್ ಅವರ ಕಾಲದಲ್ಲೇ ಇದು ಗೆಜೆಟ್ ನೋಟಿಫಿಕೇಷನ್ ಆಗಲಿದೆ ಎಂಬುದು ಗಮನಕ್ಕೆ ಬಂದಿತ್ತು. ಬಡವರಿಗೆ ನಿವೇಶನ ಕೊಡಲು 1974 ರಲ್ಲಿ ಶಾಂತಿ ಕಾಲೇಜು ಮುಂಭಾಗದ ಸುಮಾರು 33ಎಕರೆ ಭೂಸ್ವಾದೀನ ಮಾಡಿಕೊಳ್ಳಲಾಗಿತ್ತು. 1982 ರಲ್ಲಿ ಗೆಜೆಟ್ ನೋಟಿಫೀಕೇಶನ್ ಹೊರಡಿಸಲಾಗಿತ್ತು. 1988ರಲ್ಲಿ ಸರ್ಕಾರ 20ಕ್ಕೂ ಹೆಚ್ಚು ಭೂ ಮಾಲೀಕರಿಗೆ 1.89ಲಕ್ಷ ರೂ. ಪರಿಹಾರವನ್ನೂ ನೀಡಿತ್ತು. 1982 ರಿಂದ 2013 ರ ವರೆಗೆ ಕೋರ್ಟ್ ನಲ್ಲಿ ಈ ಪ್ರಕರಣದ ವ್ಯಾಜ್ಯ ಮುಂದುವರೆದಿತ್ತು. 2017ರಲ್ಲಿ ಹೈಕೋರ್ಟ್ ಮತ್ತೆ ಭೂ ಸ್ವಾಧೀನ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿತ್ತು. 2018ರ ಚುನಾವಣೆಯಲ್ಲಿ ನೀವು ನನ್ನನ್ನು ಸೋಲಿಸಿದ್ದಿರಿ. 2018ರಿಂದ 2023ರವರೆಗೆ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ. 2023ರಲ್ಲಿ ನಾನು ಮತ್ತೆ ಶಾಸಕನಾಗಿ ಆಯ್ಕೆಯಾದ ಬಳಿಕ ಮಾರ್ಚ್ 11, 2024 ರಲ್ಲಿ ಸರ್ಕಾರದ ವಕೀಲರ ಮೂಲಕ ವಾದ ಮಂಡಿಸಿ ಹೈಕೋರ್ಟ್‌ನಲ್ಲಿ ಗೆಲುವು ಸಾಧಿಸಿದ್ದೆವು. ಬಳಿಕ ಅರ್ಹ ಬಡವರಿಗೆ ನಿವೇಶನ ಹಂಚಲು ಹೈಕೋರ್ಟ್ ಆದೇಶ ಕೊಟ್ಟಿತ್ತು. ಈ ಹಿನ್ನಲೆಯಲ್ಲಿ ಪ್ರತಿ ವಾರ್ಡ್ ಗಳಲ್ಲಿ ಸಭೆ ನಡೆಸಿ ಫಲಾನುಭವಿಗಳನ್ನ ಗುರುತಿಸಿ ಇದೀಗ 33ಎಕರೆ ಪ್ರದೇಶದಲ್ಲಿ ಸುಮಾರು 1086 ನಿವೇಶನಗಳನ್ನಾಗಿ ಮಾರ್ಪಡಿಸಿ 896 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಇದಕ್ಕೆ, ಅಗತ್ಯ ಸಹಕಾರ ನೀಡಿದ ಜಿಲ್ಲೆಯ ಡಿಸಿ ಡಾ. ಕುಮಾರ ಅವರಿಗೂ ಧನ್ಯವಾದಗಳು ಎಂದು ಹೇಳಿದರು.
ನಿವೇಶನ ಪಡೆದವರು ಪಾಲಿಸಬೇಕಾದ ನಿಯಮಗಳು ಈ ಕೆಳಕಂಡಂತಿವೆ:
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿ ಡಾ. ಕುಮಾರ, ನಿವೇಶನ ಪಡೆದವರು 2 ವರ್ಷದೊಳಗೆ ಕಡ್ಡಾಯವಾಗಿ ಮನೆ ಕಟ್ಟಬೇಕು. ಮನೆ ಕಟ್ಟದಿದ್ದರೆ ಸೈಟ್ ವಾಪಸ್ ಪಡೆಯಲಾಗುತ್ತದೆ. ಜೊತೆಗೆ 20 ವರ್ಷದ ವರೆಗೆ ಈ ಹಂಚಿಕೆಯಾಗಿರುವ ಸೈಟ್ ಅನ್ನು ಯಾರಿಗೂ ಮಾರಾಟ ಮಾಡುವ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದರು.