ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದು, ಅರಣ್ಯ ಇಲಾಖೆ ಹಾಗೂ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಸಚಿವರು ಭೇಟಿ ನೀಡಬೇಕು, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಮೃತದೇಹವನ್ನು ಸ್ಥಳದಿಂದ ತೆಗೆದುಕೊಂಡು ಹೋಗಲು ಬಿಡದೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಘಟನೆ ನಡೆದು 12 ಗಂಟೆ ಕಳೆದರೂ ಸ್ಥಳೀಯ ಶಾಸಕರು ಸ್ಥಳಕ್ಕೆ ಬಾರದಿರುವುದು ಜನರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿದೆ.
ಬೇಲೂರು ತಾಲೂಕಿನ ಚೌಡನಹಳ್ಳಿ ಗ್ರಾಮದಲ್ಲಿ ಕಾಡಾನೆ ಅಟ್ಟಹಾಸಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ನಿನ್ನೆ ಸಂಜೆ ದನ ಮೇಯಿಸಲು ಹೋಗಿದ್ದ 48 ವರ್ಷದ ಜಯಮ್ಮ ಅವರ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡ ಜಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಹಿಳೆಯ ಸಾವಿನಿಂದ ಗ್ರಾಮಸ್ಥರು ರೊಚ್ಚಿಗೆದ್ದಿದ್ದು, ಸ್ಥಳಕ್ಕೆ ಸಚಿವರು ಆಗಮಿಸಬೇಕು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮೃತದೇಹವನ್ನು ಸ್ಥಳದಿಂದ ಮೇಲೆತ್ತಲು ಬಿಡದೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಬಾರಿ ಕಾಡಾನೆ ದಾಳಿಯಿಂದ ಸಾವು ಸಂಭವಿಸಿದಾಗ ಅಧಿಕಾರಿಗಳು ಬಂದು ಪರಿಹಾರದ ಚೆಕ್ ನೀಡಿ ಹೋಗುತ್ತಾರೆ. ಆದರೆ ಕಾಡಾನೆಗಳ ಹಾವಳಿಗೆ ಮಾತ್ರ ಶಾಶ್ವತ ಪರಿಹಾರ ಸಿಗುತ್ತಿಲ್ಲ. ರೈತರು ಪ್ರತಿನಿತ್ಯ ಜೀವಭಯದಲ್ಲೇ ದಿನ ಕಳೆಯುವಂತಾಗಿದೆ. ಯಾವಾಗ, ಯಾರ ಮೇಲೆ ಕಾಡಾನೆ ದಾಳಿ ಮಾಡುತ್ತದೆಯೋ ಎಂಬ ಆತಂಕ ಮನೆಮಾಡಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದು 12 ಗಂಟೆಗಳಾದರೂ ಸ್ಥಳೀಯ ಶಾಸಕರು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಜನರ ಜೀವಕ್ಕೆ ಬೆಲೆ ಇಲ್ಲವೇ? ಇನ್ನೆಷ್ಟು ಸಾವು ಸಂಭವಿಸಬೇಕು? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ನಿನ್ನೆ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದ ಸ್ಥಳದ ಸಮೀಪವೇ ಇಂದು ಬರೋಬ್ಬರಿ 17 ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಹಾಡಹಗಲೇ ರಸ್ತೆಯಲ್ಲಿ ರಾಜಾರೋಷವಾಗಿ ಸಂಚರಿಸಿದ ಆನೆಗಳನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಇತ್ತ ಮಹಿಳೆಯ ಜೀವ ತೆಗೆದ ಒಂಟಿ ಸಲಗವೂ ಇದೇ ಗುಂಪಿನೊಂದಿಗೆ ಸೇರಿಕೊಂಡಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚೌಡನಹಳ್ಳಿ ಗ್ರಾಮದ ಬಳಿ ಕಂಡುಬಂದ ಆನೆಗಳ ಹಿಂಡು ಓಡಾದಿದೆ.ನಿನ್ನೆ ಇದೇ ಪ್ರದೇಶದಲ್ಲಿ ಒಂಟಿ ಸಲಗದ ದಾಳಿಗೆ ಜಯಮ್ಮ (48) ಎಂಬ ಮಹಿಳೆ ಬಲಿಯಾಗಿದ್ದರು.
ಮಹಿಳೆಯ ಪ್ರಾಣ ತೆಗೆದ ಒಂಟಿ ಸಲಗ ಇದೀಗ ಮತ್ತೆ ತನ್ನ ಗುಂಪಿನೊಂದಿಗೆ ಸೇರಿಕೊಂಡಿದೆ ಎನ್ನಲಾಗಿದೆ.ಇಂದು ಮತ್ತೆ ಅದೇ ಪ್ರದೇಶದಲ್ಲಿ 17 ಕಾಡಾನೆಗಳು ರಸ್ತೆ ದಾಟಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಚೌಡನಹಳ್ಳಿ, ಕುಶಾವರ, ಬಕ್ರವಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಆನೆ ಕಾರ್ಯಪಡೆ ಸಿಬ್ಬಂದಿ ಮನವಿ ಮಾಡಿದ್ದಾರೆ.ಆನೆಗಳ ಚಲನವಲನದ ಬಗ್ಗೆ ನಿರಂತರ ಮಾಹಿತಿ ನೀಡುತ್ತಿರುವ ಸಿಬ್ಬಂದಿ, ಜನರು ಅನಗತ್ಯವಾಗಿ ಕಾಡಾನೆಗಳ ಸಮೀಪ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.ನಿತ್ಯ ಕಾಡಾನೆಗಳ ಸಂಚಾರದಿಂದಾಗಿ ಕೃಷಿ ಚಟುವಟಿಕೆಗೂ ಅಡ್ಡಿಯಾಗುತ್ತಿದ್ದು, ಜೀವ ಭಯದಲ್ಲೇ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.