ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ, 150- 160 ಜೊತೆ ಕೋಣಗಳು.. ಹೇಗಿದೆ ಸಿದ್ಧತೆ?
ಮೈಸೂರಿನಲ್ಲಿ ನಡೆಯುವ ವಿಶ್ವ ವಿಖ್ಯಾತ ದಸರಾದಲ್ಲಿ ಕಂಬಳ ನಡೆಯಲಿದೆ. ಈ ಅದ್ಧೂರಿಯಾದ ಸಂಭ್ರಮಕ್ಕೆ 150 ರಿಂದ 160 ಜೊತೆ ಕೋಣಗಳು ಮೊದಲ ಬಾರಿಗೆ ಭಾಗವಹಿಸುವ ನಿರೀಕ್ಷೆ ಇದೆ.
Mysore Dasara festival Kambala competition: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಯೋಜಿಸಿರುವ ದಸರಾ ಕಂಬಳಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಅಕ್ಟೋಬರ್ 18 ಮತ್ತು 19 ರಂದು ಮೈಸೂರಿನಲ್ಲಿ ದಸರಾ ಕಂಬಳ ನಡೆಯಲಿದೆ. ಈ ಅದ್ಧೂರಿಯಾದ ಸಂಭ್ರಮಕ್ಕೆ 150 ರಿಂದ 160 ಜೊತೆ ಕೋಣಗಳು ಮೊದಲ ಬಾರಿಗೆ ಭಾಗವಹಿಸುವ ನಿರೀಕ್ಷೆ ಇದೆ. ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಎಲ್ಲರೂ ಕಂಬಳವನ್ನು ಕಣ್ತುಂಬಿಕೊಳ್ಳಬಹುದು.
150 ಜೊತೆ ಕೋಣಗಳು ಪುತ್ತೂರಿನಿಂದ ಕುಶಾಲನಗರಕ್ಕೆ ಅಕ್ಟೋಬರ್ 17 ರಂದು ಮಧ್ಯಾಹ್ನದ ವೇಳೆಗೆ ಆಗಮಿಸಲಿವೆ. ಇದಕ್ಕೂ ಮೊದಲು ಕುಶಾಲನಗರದಲ್ಲಿ ಪೂರ್ವಭಾವಿ ಸಭೆ ನಡೆಸಿ ಕೋಣಗಳಿಗೆ ವಿಶ್ರಾಂತಿ, ಕುಡಿಯುವ ನೀರು, ಮೇವು ಮತ್ತು ಶಾಮಿಯಾನ ಸೇರಿದಂತೆ ಇತರೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಚರ್ಚೆ ಮಾಡಲಾಯಿತು. ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು, ದಸರಾ ಕಂಬಳಕ್ಕೆ 25 ರಿಂದ 30 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ. ಕಂಬಳ ನೋಡಲು ಸಾಕಷ್ಟು ಜನರು ಬಂದೇ ಬರುತ್ತಾರೆ. 8 ಸಾವಿರ ಆಸನಗಳ ಗ್ಯಾಲರಿ ಹಾಗೂ 145 ಮೀಟರ್ ಉದ್ದದ ಟ್ರ್ಯಾಕ್ ಅನ್ನು ಸಿದ್ಧ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕಂಬಳದ ಕಾನೂನು ಹೋರಾಟದ ಇತಿಹಾಸವನ್ನು ವಿವರಿಸಿದರು. ಕೊಡಗು ಮತ್ತು ದಕ್ಷಿಣ ಕನ್ನಡ ಅಣ್ಣ-ತಮ್ಮಂದಿರಂತೆ ಒಗ್ಗಟ್ಟಿನಿಂದ ಟೀಮ್ ವರ್ಕ್ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. ದಸರಾದಲ್ಲಿ ಕಂಬಳಕ್ಕೆ ವಿಶೇಷವಾದ ಮಹತ್ವ ಸಿಗಲಿದೆ. ನಮ್ಮ ಭಾಗದ ಎಲ್ಲರೂ ದಸರಾ ಮಹೋತ್ವಸವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಅದರಂತೆ ಮೊದಲ ಬಾರಿಗೆ ದಸರಾದಲ್ಲಿ ಕೋಣಗಳ ಓಟ ಜನರಿಗೆ ಹೊಸ ಅನುಭವ ನೀಡಲಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ದಸರಾ ಮಹೋತ್ಸವ ನಡೆಯಲಿದೆ. ನಾಡಿನಾದ್ಯಂತ ಇದರ ಕಂಪು ಹರಡಲಿದ್ದು ಗಜ ಪಡೆಗಳು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಲಿವೆ. ಆನೆಯ ಮೇಲೆ ಅಂಬಾರಿ ನೋಡುವುದು ಅದೊಂದು ಅದ್ಭುತವಾದ, ಸೊಗಸಾದ ಸುಂದರವಾದ ದೃಶ್ಯವಾಗಿದೆ.
ಪ್ರತ್ಯೇಕ ಸುದ್ದಿ;
ನಿಯಮಗಳನ್ನು ಸಡಿಲಿಸುವಂತೆ ಬೇಡಿಕೆ ಇಡುವುದು ತಪ್ಪಲ್ಲ: ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರಸ್ವಾಮಿ
ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಡಿಕೇರಿ, ಗೋಣಿಕೊಪ್ಪಲು ದಸರಾ ಹಾಗೂ ತಲಕಾವೇರಿ ಪವಿತ್ರ ತೀರ್ಥೋದ್ಭವ ಕುರಿತ ಸಭೆ ನಡೆಸಲಾಯಿತು. ಸಭೆಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಮಾತನಾಡಿ, ನಿಯಮಗಳಡಿಯಲ್ಲೇ ಜವಾಬ್ದಾರಿಯಿಂದ ದಸರಾ ಉತ್ಸವ ಆಚರಿಸುವಂತೆ ಮನವಿ ಮಾಡಿದರು. ನಿಯಮಗಳನ್ನು ಸಡಿಲಿಸುವಂತೆ ಬೇಡಿಕೆ ಇಡುವುದು ತಪ್ಪಲ್ಲ. ಆದರೆ ಒಮ್ಮೆ ನಿಯಮ ಸಡಿಲಿಸಿದರೆ ಮುಂದೆ ದಸರೆಯ ಸ್ವರೂಪವೇ ಬದಲಾಗಬಹುದು. ಹೀಗಾಗಿ ನಿಯಮ ಮೀರದಂತೆ ಇತಿಮಿತಿಯಲ್ಲಿ ಉತ್ಸವ ಆಚರಿಸಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ.
ತಲಕಾವೇರಿ ಪವಿತ್ರ ತೀರ್ಥೋದ್ಭವಕ್ಕೂ ಸರ್ಕಾರ ಅನುದಾನ ನೀಡಿದ್ದು, ಅಧಿಕಾರಿಗಳು ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದರು. ಈಗಾಗಲೇ ದಸರಾಗೆ ಸರ್ಕಾರ 2 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು. ಇದೇ ವೇಳೆ ದಸರಾ ಸಮಿತಿ ಸದಸ್ಯರು, ರಾತ್ರಿ 10 ಗಂಟೆಗೆ ಧ್ವನಿವರ್ಧಕ ನಿಲ್ಲಿಸುವಂತೆ ಪೊಲೀಸರು ತಕರಾರು ಮಾಡುತ್ತಾರೆ. ಕಾರ್ಯಕ್ರಮ ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಈ ಕುರಿತು ಮಾತನಾಡಿದ ಸಚಿವರು, ದಸರಾ ಆಚರಣೆಗೆ ಸಂಬಂಧಿಸಿದ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಭರವಸೆಯನ್ನು ನೀಡಿದ್ದಾರೆ.