Mangalore Bike accident: ಫ್ಲೈಓವರ್ ಮೇಲ್ಭಾಗದಲ್ಲಿ ಬೈಕೊಂದಕ್ಕೆ ಹಿಂಬದಿಯಿಂದ ಬಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ 40 ಅಡಿ ಎತ್ತರದ ಫ್ಲೈಓವರ್ ಮೇಲ್ಭಾಗದಿಂದ ಕೆಳಗೆ ಸರ್ವೀಸ್ ರಸ್ತೆಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಿಸಿರೋಡ್ ನಲ್ಲಿ ನಡೆದಿದೆ.
ಫ್ಲೈಓವರ್ ಮೇಲಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಅವ್ ನೀಲ್ ಸಾವಿಯೋ ಡಿಸೋಜಾ ಎಂದು ಗುರುತಿಸಲಾಗಿದೆ. ಇವರು ಬೈಕಿನಲ್ಲಿ ಬಿ.ಸಿ.ರೋಡಿನ ಫ್ಲೈಓವರ್ ಮೇಲ್ಭಾಗದಲ್ಲಿ ಸಂಚರಿಸುತ್ತಿದ್ದ ವೇಳೆ ಹಿಂದಿನಿಂದ ದಿಯಾ ಕೊಠಾರಿ ಎಂಬಾಕೆ ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದು ಅಪಘಾತ ನಡೆದಿದೆ. ಅಪಘಾತದ ತೀವ್ರತೆಗೆ ಡಿಸೋಜ ಅವರು 40 ಅಡಿ ಎತ್ತರದ ಫ್ಲೈಓವರ್ ಮೇಲಿಂದ ಕೆಳಗೆ ಸರ್ವೀಸ್ ರಸ್ತೆಗೆ ಬಿದ್ದಿದ್ದಾರೆ.
ಈ ಘಟನೆಯಿಂದ ಡಿಸೋಜ ಅವರ ಎದೆಗೆ, ಎಡ ಭುಜಕ್ಕೆ, ಹೊಟ್ಟೆಗೆ, ಬೆನ್ನಿಗೆ ಹಾಗೂ ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದು, ಹೆಲ್ಮೆಟ್ ಧರಿಸಿದ್ದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರನ್ನು ಸ್ಥಳೀಯರು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತಪಡಿಸಿದ ಬೈಕ್ ಸವಾರೆಗೆ ಯಾವುದೇ ಗಾಯಗಳಾಗಿಲ್ಲ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ಬ್ರಹ್ಮರಕೂಟ್ಲುಟೋಲ್ ಗೇಟ್ ತೆರವುಗೊಳಿಸಲು ಎಸ್‌ಡಿಪಿಐ ನಿಂದ ಹೋರಾಟ ಮುಂದುವರಿದಿದೆ. ಕಳೆದ 23 ವರ್ಷಗಳಿಂದ ಕಳಪೆ ರಸ್ತೆಯಲ್ಲಿ ಅನಧಿಕೃತವಾಗಿ ಸುಂಕ ಸಂಗ್ರಹಿಸುತ್ತಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಹೋರಾಟದ ಮುಂದುವರಿದ ಭಾಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಬ್ರಹ್ಮರಕೊಟ್ಲು ಟೋಲ್ ಗೇಟ್ ಬಳಿ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಶಾಂತಿಯುತ ಪ್ರತಿಭಟನೆ ಹಾಗೂ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಡಿಪಿಐ ಮುಖಂಡ ಅನ್ವರ್ ಸಾದತ್, "ಕಳೆದ 10 ವರ್ಷಗಳಿಂದ ಎಸ್‌ಡಿಪಿಐ ಈ ಟೋಲ್ ಗೇಟ್ ವಿರುದ್ಧ ಪಾದಯಾತ್ರೆ ಸೇರಿದಂತೆ ಹಲವು ಹಂತದ ಹೋರಾಟಗಳನ್ನು ನಡೆಸಿದೆ. ಮುಖ್ಯಮಂತ್ರಿಗಳು, ಕೇಂದ್ರ ಹೆದ್ದಾರಿ ಸಚಿವರು, ಸ್ಥಳೀಯ ಸಂಸದರು ಮತ್ತು ಶಾಸಕರಿಗೆ ನಿರಂತರವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ವಾಹನ ಸವಾರರಿಂದ ಪ್ರತಿದಿನ ಸಾವಿರಾರು ರೂಪಾಯಿ ವಸೂಲಿ ಮಾಡಲಾಗುತ್ತಿದ್ದು, ಇದೊಂದು ಸರ್ಕಾರಿ ಪ್ರಾಯೋಜಿತ ಹಗಲು ದರೋಡೆ ಹಾಗೂ ಲೂಟಿ ಕೇಂದ್ರವಾಗಿದೆ" ಎಂದು ಕಿಡಿಕಾರಿದರು. ಬೇರೆ ಟೋಲ್ ಗೇಟ್‌ಗಳು ಆರಂಭವಾಗುವಾಗ ಬ್ರಹ್ಮರಕೂಟ್ಲು ಟೋಲ್ ಬಂದ್ ಮಾಡಲಾಗುವುದು ಎಂದು ಸಂಸದರು ಭರವಸೆ ನೀಡಿ ಎರಡು ತಿಂಗಳು ಕಳೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಟೋಲ್ ತೆರವಾಗುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಇದೇ ವೇಳೆ ಮಾತನಾಡಿದ ಎಸ್‌ಡಿಪಿಐ ನಾಯಕ ರಿಯಾಝ್ ಕಡಂಬು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. "ಜನರು ಗಾಢ ನಿದ್ರೆಯಲ್ಲಿದ್ದಾಗ ರಾತ್ರೋರಾತ್ರಿ ನಾವು ಅಳವಡಿಸಿದ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಹರಿದುಹಾಕುವ ಹೇಡಿತನದ ಕೆಲಸವನ್ನು ಪ್ರಾಧಿಕಾರದ ಅಧಿಕಾರಿಗಳು ಮಾಡಿದ್ದಾರೆ. ಅಧಿಕಾರಿಗಳು ಎಷ್ಟೇ ಫ್ಲೆಕ್ಸ್ಗಳನ್ನು ಹರಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಇದೇ ಪ್ರವೃತ್ತಿಯನ್ನು ಮುಂದುವರಿಸಿದರೆ, ಮುಂದಿನ ದಿನಗಳಲ್ಲಿ ನಿಮ್ಮ ಕಚೇರಿಯ ಮುಂದೆಯೂ ಇಂತಹ ಪೋಸ್ಟರ್‌ಗಳು ಹರಿದಾಡಬಹುದು ಮತ್ತು ನಿಮಗೆ ಕಚೇರಿಗೆ ಪ್ರವೇಶಿಸಲು ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು" ಎಂದು ಎಚ್ಚರಿಸಿದರು.
ಜಿಲ್ಲೆಯ ಸಂಸದರು ಹಾಗೂ ಶಾಸಕರು ಈ ಗಂಭೀರ ಸಮಸ್ಯೆಯ ಬಗ್ಗೆ ಗಮನಹರಿಸಬೇಕು. ಇಂದು ನಾವು ಅತ್ಯಂತ ಸಂಯಮ ಮತ್ತು ಶಾಂತಿಯುತವಾಗಿ ರಸ್ತೆಬದಿಯ ಪ್ರಮುಖ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸುವ ಅಭಿಯಾನದ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಆದರೆ, ಮುಂದಿನ ಎಲ್ಲಾ ಹೋರಾಟಗಳಲ್ಲೂ ಇದೇ ರೀತಿಯ ಶಾಂತಿಯ ವಾತಾವರಣವನ್ನು ನಿರೀಕ್ಷಿಸಬಾರದು. ಸರಕಾರ ಮತ್ತು ಪ್ರಾಧಿಕಾರ ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ, ಜಿಲ್ಲೆಯ ಜನತೆಯನ್ನು ಒಗ್ಗೂಡಿಸಿ ಟೋಲ್ ಗೇಟ್‌ಗೆ ಮುತ್ತಿಗೆ ಹಾಕುವ ಮೂಲಕ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಉಭಯ ನಾಯಕರು ಎಚ್ಚರಿಕೆ ನೀಡಿದರು.
ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರುಗಳಾದ ಇನಾಸ್ ರೋಡ್ರಿಗಸ್, ಅಬ್ದುಲ್ ಕಲಾಂ ಸುಳ್ಯ, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಕಾರ್ಯದರ್ಶಿ ಅಶ್ರಫ್ ತಲಪಾಡಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಶಾಹುಲ್ ಹಮೀದ್ ಎಸ್. ಎಚ್, ಸುಳ್ಯ ಮೀರಾಝ್ ಸುಳ್ಯ, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್, ಬೆಳ್ತಂಗಡಿ ಕಾರ್ಯದರ್ಶಿ ಅಶ್ಫಾಕ್ ಪೂಂಜಾಲ್ ಕಟ್ಟೆ, ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೀಕ್ ಅಲೆಕ್ಕಾಡಿ, ಕಬೀರ್ ಕೆಮ್ಮಾರ, ಅಕ್ಬರ್ ಅಲಿ ಪೊನ್ನೋಡಿ ಉಪಸ್ಥಿತರಿದ್ದರು.