ಧರ್ಮಸ್ಥಳದಲ್ಲಿ 1,510 ಸಾ*ವುಗಳಾಗಿವೆ ಎಂಬುದು ಶುದ್ಧ ಸುಳ್ಳು": ಸತ್ಯ ಬಿಚ್ಚಿಟ್ಟ ಗ್ರಾಮಸ್ಥರು
ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವುಗಳ ಸಂಖ್ಯೆ ಹಾಗೂ ಕ್ಷೇತ್ರದ ಕುರಿತು ಸುಳ್ಳು ಮಾಹಿತಿ ಮತ್ತು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಗ್ರಾಮಸ್ಥರು, ಗಿರೀಶ್ ಮಟ್ಟಣ್ಣವರ್ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ಕುರಿತು ಸಾಮಾಜಿಕ ಜಾಲತಾಣಗಳು ಮತ್ತು ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಸುಳ್ಳು ಮತ್ತು ತೇಜೋವಧೆ ಮಾಡುವಂತಹ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿ ಧರ್ಮಸ್ಥಳದ ಗ್ರಾಮಸ್ಥರು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನು ನಡೆಸಿ ತೀವ್ರ ಆಕ್ರೋಶವನ್ನು ಹೊರಹಾಕಿದರು. ಕ್ಷೇತ್ರ ಹಾಗೂ ಗ್ರಾಮದ ಶಾಂತಿ-ಸುವ್ಯವಸ್ಥೆಗೆ ಭಂಗ ತರುವ ಮತ್ತು ಇಲ್ಲಿನ ನಿವಾಸಿಗಳ ಗೌರವಕ್ಕೆ ಕಳಂಕ ತರುವ ಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎಂದು ಸ್ಥಳೀಯ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರ ಪರವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ ರಾವ್ ಕನ್ಯಾಡಿ ಅವರು, ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಜಯಂತ್ ಟಿ ಸೇರಿದಂತೆ ಕೆಲವರು ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಿಕೊಂಡು ಬರುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.
ಸುಳ್ಳು ಅಂಕಿ-ಅಂಶಗಳ ಬಿತ್ತನೆ
ಇತ್ತೀಚೆಗೆ ಧರ್ಮಸ್ಥಳದಲ್ಲಿ 1,510 ಅಸಹಜ ಸಾವುಗಳು (UDR) ಸಂಭವಿಸಿವೆ ಎಂದು ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಯನ್ನು ಹಬ್ಬಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು ಸುದ್ದಿಯಾಗಿದೆ ಎಂದು ಶ್ರೀನಿವಾಸ ರಾವ್ ಸ್ಪಷ್ಟಪಡಿಸಿದರು. ವಾಸ್ತವವಾಗಿ, 2000ನೇ ಇಸವಿಯಿಂದ 2014ರವರೆಗೆ ಧರ್ಮಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರದಿಯಾಗಿರುವ ಒಟ್ಟು ಅಸಹಜ ಸಾವಿನ ಸಂಖ್ಯೆ 374 ಮಾತ್ರ. ಆದರೆ, ಈ ಸಂಖ್ಯೆಯನ್ನು ತಿರುಚಿ, ಧರ್ಮಸ್ಥಳದಲ್ಲಿ ಸಾವಿರಾರು ಕೊಲೆಗಳು ಮತ್ತು ಅತ್ಯಾಚಾರಗಳು ನಡೆದಿವೆ ಎಂದು ಬಿಂಬಿಸುವ ಮೂಲಕ ಕ್ಷೇತ್ರದ ಕೀರ್ತಿಗೆ ಮಸಿ ಬಳಿಯುವ ದೊಡ್ಡ ಮಟ್ಟದ ಸಂಚು ನಡೆಯುತ್ತಿದೆ ಎಂದು ದೂರಿದರು.
ಅಲ್ಲದೆ, ಈ 1,510 ಎಂಬ ಸಂಖ್ಯೆ ಕೇವಲ ಧರ್ಮಸ್ಥಳ ಗ್ರಾಮಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಮಹಿಳಾ ಆಯೋಗದ ಅಧ್ಯಕ್ಷರು ಬಳಸಿದ ಈ ಸಂಖ್ಯೆಯ ಮೂಲದ ಬಗ್ಗೆಯೂ ಅವರು ಸ್ಪಷ್ಟನೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಗ್ರಾಮಸ್ಥರ ಗೌರವಕ್ಕೆ ಧಕ್ಕೆ ಮತ್ತು ಮಾನಸಿಕ ವೇದನೆ
ಧರ್ಮಸ್ಥಳದಲ್ಲಿ ಸದಾ ಧರ್ಮ, ಶ್ರದ್ಧೆ ಮತ್ತು ನೆಮ್ಮದಿಯ ವಾತಾವರಣವಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಧರ್ಮಸ್ಥಳದಲ್ಲಿ ಎಲ್ಲವೂ ತಪ್ಪಾಗಿ ನಡೆಯುತ್ತಿದೆ ಎಂಬಂತೆ ಬಿಂಬಿಸಿ, ಇಲ್ಲಿನ ಪ್ರತಿಯೊಬ್ಬ ನಿವಾಸಿಯ ಹಾಗೂ ಭಕ್ತರ ಗೌರವಕ್ಕೆ ಧಕ್ಕೆ ತರಲಾಗುತ್ತಿದೆ. ಕೋರ್ಟ್‌ನಲ್ಲಿಯೂ ಕೆಲವರು ಸುಳ್ಳು ಮಾಹಿತಿಗಳನ್ನು ನೀಡಿ ಸತ್ಯವನ್ನು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ. ಈ "ಬುರುಡೆ ಗ್ಯಾಂಗ್" ಸದಸ್ಯರ ದುಷ್ಕೃತ್ಯಗಳಿಂದಾಗಿ ಸ್ಥಳೀಯ ಗ್ರಾಮಸ್ಥರು ತೀವ್ರ ಮಾನಸಿಕ ವೇದನೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಮತ್ತೊಮ್ಮೆ SIT ರಚನೆಗೆ ಒತ್ತಾಯಿಸುವುದರ ಹಿಂದೆ ಪೂರ್ವನಿಯೋಜಿತ ಷಡ್ಯಂತ್ರ
ಯಾವುದೇ ಆಧಾರವಿಲ್ಲದೆ ಮತ್ತೆ ಮತ್ತೆ ವಿಶೇಷ ತನಿಖಾ ತಂಡ (SIT) ರಚಿಸುವಂತೆ ಒತ್ತಾಯಿಸುತ್ತಿರುವುದು ಕೇವಲ ಪ್ರಚಾರಕ್ಕಾಗಿ ನಡೆಸುತ್ತಿರುವ ಪೂರ್ವನಿಯೋಜಿತ ಷಡ್ಯಂತ್ರವಾಗಿದೆ. ಯಾವುದೇ ರೀತಿಯ ತನಿಖೆ ಅಥವಾ ನಿರ್ಧಾರ ಕೈಗೊಳ್ಳುವ ಮುನ್ನ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಗ್ರಾಮಸ್ಥರ ಅಹವಾಲುಗಳನ್ನು ಕೂಡ ಆಲಿಸಬೇಕು ಎಂದು ಅವರು ಮನವಿ ಮಾಡಿದರು.
ಕಾನೂನು ಕ್ರಮಕ್ಕೆ ಆಗ್ರಹ
ಧರ್ಮಸ್ಥಳದ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಹಬ್ಬಿಸುತ್ತಿರುವ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಜಯಂತ್ ಟಿ ವಿರುದ್ಧ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ಹರಡುವವರ ಮೇಲೂ ನಿಗಾ ಇಟ್ಟು ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಧರ್ಮಸ್ಥಳದ ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.