SOCIAL MEDIA

Newsletter

PARTNER SITES
Select Language Select State

ರಾಜ್ಯದ ಈ ಜಿಲ್ಲೆಯ ಹೆಸರು ಚೇಂಜ್‌ ಮಾಡಬೇಡಿ.. ಮೊದಲ ಐತಿಹಾಸಿಕ ಹೆಸರೇ ಮುಂದುವರೆಸಿ..

ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡಲು ಪ್ರಸ್ತಾವನೆ ಇದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ನಾಗರಿಕರು, ಬುದ್ಧಿಜೀವಿಗಳು, ಇತಿಹಾಸಕಾರರು, ಸಾಹಿತಿಗಳು, ಸಾಂಸ್ಕೃತಿಕ ಕಾರ್ಯಕರ್ತರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು 'ದಕ್ಷಿಣ ಕನ್ನಡ' ಎಂಬ ಐತಿಹಾಸಿಕ ಹೆಸರನ್ನೇ ಮುಂದುವರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಒತ್ತಾಯಿಸುತ್ತೇವೆ

Written By Bhimappa
Published: Sep 29, 2026, 06:02 PM IST | Updated: Sep 29, 2026, 06:09 PM IST
Image Credit: Mangalore
Join

Dakshina Kannada district to Mangalore: ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಎಂದು ಐತಿಹಾಸಿಕ ಹೆಸರನ್ನೇ ಮುಂದುವರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಹೆಸರನ್ನು ಬದಲಾಯಿಸಿ 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣ ಮಾಡಲು ಪ್ರಸ್ತಾವನೆ ಇದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ನಾಗರಿಕರು, ಬುದ್ಧಿಜೀವಿಗಳು, ಇತಿಹಾಸಕಾರರು, ಸಾಹಿತಿಗಳು, ಸಾಂಸ್ಕೃತಿಕ ಕಾರ್ಯಕರ್ತರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು 'ದಕ್ಷಿಣ ಕನ್ನಡ' ಎಂಬ ಐತಿಹಾಸಿಕ ಹೆಸರನ್ನೇ ಮುಂದುವರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ದಕ್ಷಿಣ ಕನ್ನಡ ಉಳಿಸಿ ವೇದಿಕೆಯ ಮುಖಂಡರಾದ ವಿಲಿಯಮ್ ಪಾಯ್ಸ್, ಬೆನೆಟ್ ಅಮ್ಮಣ್ಣ ಹೇಳಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ, ಈ ಬೇಡಿಕೆ ಮಂಗಳೂರಿನ ವಿರುದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸರ್ಕಾರ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿರುವುದನ್ನು ಸ್ವಾಗತಿಸಿ, ಈ ಪ್ರಕ್ರಿಯೆಯನ್ನು ಮಂಗಳೂರು ನಗರಕ್ಕೆ ಮಾತ್ರ ಸೀಮಿತಗೊಳಿಸದೇ ಜಿಲ್ಲೆಯ ಎಲ್ಲಾ ತಾಲೂಕುಗಳು, ಪಟ್ಟಣಗಳು ಹಾಗೂ ಗ್ರಾಮಗಳ ಜನರ ಅಭಿಪ್ರಾಯವನ್ನು ಒಳಗೊಂಡಂತೆ ವ್ಯಾಪಕ ಹಾಗೂ ಪಾರದರ್ಶಕವಾಗಿ ನಡೆಸಬೇಕು. ಇತಿಹಾಸಕಾರರು, ಶಿಕ್ಷಣ ತಜ್ಞರು, ಸಾಹಿತಿಗಳು, ಸಾಂಸ್ಕೃತಿಕ ಸಂಘಟನೆಗಳು ಹಾಗೂ ಇತರ ಪ್ರಮುಖ ಪಾಲುದಾರರ ಅಭಿಪ್ರಾಯವನ್ನೂ ಪರಿಗಣಿಸಬೇಕು ಎಂದು ಹೇಳಿದರು.

ಮಂಗಳೂರು ದಕ್ಷಿಣ ಕನ್ನಡದ ಹೃದಯಭಾಗವಾಗಿ ಉಳಿಯಲಿ; ದಕ್ಷಿಣ ಕನ್ನಡವು ಜಿಲ್ಲೆಯ ಹೆಮ್ಮೆಯ ಐತಿಹಾಸಿಕ ಹೆಸರಾಗಿ ಉಳಿಯಲಿ. ಇದು ಮಂಗಳೂರಿನ ವಿರುದ್ಧದ ಬೇಡಿಕೆಯಲ್ಲ. ಬದಲಾಗಿ ದಕ್ಷಿಣ ಕನ್ನಡದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಭೌಗೋಳಿಕ ಅಸ್ತಿತ್ವವನ್ನು ಸಂರಕ್ಷಿಸುವ ಒಂದು ಪ್ರಾಮಾಣಿಕ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.  

ಮಂಗಳೂರು ಈ ಪ್ರದೇಶದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕೇಂದ್ರವಾಗಿದ್ದು, ತನ್ನದೇ ಆದ ವಿಶಿಷ್ಟ ಅಸ್ತಿತ್ವ ಮತ್ತು ಮಹತ್ವವನ್ನು ಹೊಂದಿದೆ. ಆದರೆ ದಕ್ಷಿಣ ಕನ್ನಡ ಎಂಬ ಹೆಸರು ಮಂಗಳೂರನ್ನು ಮೀರಿದ ವಿಶಾಲ ಭೌಗೋಳಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರದೇಶವನ್ನು ಪ್ರತಿನಿಧಿಸುತ್ತದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಗೆ 150 ವರ್ಷಕ್ಕೂ ಮೀರಿದ ಆಡಳಿತಾತ್ಮಕ ಇತಿಹಾಸವಿದೆ. ಈ ಪ್ರದೇಶವು ಹಿಂದೆ 'ಸೌತ್ ಕೆನರಾ' ಅಥವಾ 'ಸೌತ್ ಕನಾರಾ' ಎಂದು ಕರೆಯಲ್ಪಡುತ್ತಿತ್ತು. 1977ರ ಜನವರಿಯಲ್ಲಿ ಕರ್ನಾಟಕ ಸರ್ಕಾರವು 'ಸೌತ್ ಕನಾರಾ' ಹೆಸರನ್ನು 'ದಕ್ಷಿಣ ಕನ್ನಡ' ಎಂದು ಬದಲಾಯಿಸಿತು. ಹೀಗಾಗಿ 'ದಕ್ಷಿಣ ಕನ್ನಡ' ಎಂಬ ಹೆಸರು ಈಗ ಸುಮಾರು ಐದು ದಶಕಗಳ ಐತಿಹಾಸಿಕ ನಿರಂತರತೆಯನ್ನು ಹೊಂದಿದೆ. 

ಜಿಲ್ಲೆಯ ಕೇಂದ್ರ ಮಂಗಳೂರು ಎಂಬ ಕಾರಣಕ್ಕೆ ಜಿಲ್ಲೆಯ ಹೆಸರನ್ನೂ ಮಂಗಳೂರಿನ ಹೆಸರಿನಿಂದಲೇ ಕರೆಯಬೇಕೆಂಬ ಆಡಳಿತಾತ್ಮಕ ಅನಿವಾರ್ಯತೆ ಇಲ್ಲ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಮೂಡುಬಿದಿರೆ, ಮುಲ್ಕಿ ಸೇರಿದಂತೆ ಅನೇಕ ಪಟ್ಟಣಗಳು, ಗ್ರಾಮಗಳು ಮತ್ತು ಐತಿಹಾಸಿಕ ಪ್ರದೇಶಗಳು ದಕ್ಷಿಣ ಕನ್ನಡದ ವಿಶಾಲ ಅಸ್ತಿತ್ವದ ಭಾಗವಾಗಿವೆ ಎಂದರು‌.

1997ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ಭಾಗವನ್ನು ಪ್ರತ್ಯೇಕಿಸಿ ಉಡುಪಿ ಜಿಲ್ಲೆಯನ್ನು ರಚಿಸಿದ ನಂತರವೂ ಉಳಿದ ಜಿಲ್ಲೆಗೆ 'ದಕ್ಷಿಣ ಕನ್ನಡ' ಎಂಬ ಹೆಸರನ್ನೇ ಮುಂದುವರಿಸಲಾಗಿತ್ತು. ಇಂತಹ ಆಡಳಿತಾತ್ಮಕ ಬದಲಾವಣೆಗಳ ನಡುವೆಯೂ ಹೆಸರು ಉಳಿದುಕೊಂಡಿರುವುದು ಅದರ ಐತಿಹಾಸಿಕ ನಿರಂತರತೆಯನ್ನು ತೋರಿಸುತ್ತದೆ.

'ದಕ್ಷಿಣ ಕನ್ನಡ' ಹೆಸರನ್ನು ಬದಲಾಯಿಸುವುದರಿಂದ ಐತಿಹಾಸಿಕ ದಾಖಲೆಗಳು, ಪುಸ್ತಕಗಳು, ನಕ್ಷೆಗಳು, ಶೈಕ್ಷಣಿಕ ಮತ್ತು ಆಡಳಿತಾತ್ಮಕ ದಾಖಲೆಗಳು, ಕಾನೂನು ಹಾಗೂ ಸಾಂಸ್ಕೃತಿಕ ಉಲ್ಲೇಖಗಳು ಸೇರಿದಂತೆ ಅಪಾರ ಪ್ರಮಾಣದ ದಾಖಲೆಗಳಲ್ಲಿ ಬದಲಾವಣೆ ಮಾಡುವ ಅಗತ್ಯ ಉಂಟಾಗಬಹುದು.

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES