7.05 ಕೋಟಿ ರೂಪಾಯಿ ಅನುದಾನ..ಆದ್ರೂ ಬಡಾವಣೆಗೆ ನೀರಿಲ್ಲ..!
ವಿಪರ್ಯಾಸ ಅಂದ್ರೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ 2014ರಲ್ಲೇ ಗೃಹ ಮಂಡಳಿಯಿಂದ ನಗರಸಭೆಗೆ 4.50 ಕೋಟಿ ರೂಪಾಯಿ ಚೆಕ್ ನೀಡಲಾಗಿದೆ. 2016ರಲ್ಲಿ ಮತ್ತೆ 2.55 ಕೋಟಿ ರೂಪಾಯಿ ಅನುದಾನ ನೀಡಿದ್ರೂ ಕಾಮಗಾರಿ ಮಾತ್ರ ಆಗಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಹಾಗಾದ್ರೆ ಒಟ್ಟು 7.05 ಕೋಟಿ ರೂಪಾಯಿ ಹಣ ಏನಾಯ್ತು..? ನೀರಿನ ಯೋಜನೆ ಕಾಗದದಲ್ಲೇ ಉಳಿದಿದ್ಯಾ..? ಇಲ್ಲಿದೆ ಒಂದು ಸ್ಪೆಷಲ್ ರಿಪೋರ್ಟ್.
ಗದಗ: ಬಡವರಿಗೊಂದು ಸ್ವಂತ ಸೂರು ಇರಬೇಕು. ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಬದುಕಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಆದ್ರೆ ಇಲ್ಲೊಂದು ಬಡಾವಣೆಯಲ್ಲಿ ನಿವೇಶನ ಖರೀದಿಸಿದ ಜನರ ಕನಸು ನನಸಾಗುವ ಲಕ್ಷಣ ಕಾಣ್ತಿಲ್ಲ. ಯಾಕಂದ್ರೆ ಬರೋಬ್ಬರಿ 20 ವರ್ಷಗಳಿಂದ ಈ ಬಡಾವಣೆಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ. ವಿಪರ್ಯಾಸ ಅಂದ್ರೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ 2014ರಲ್ಲೇ ಗೃಹ ಮಂಡಳಿಯಿಂದ ನಗರಸಭೆಗೆ 4.50 ಕೋಟಿ ರೂಪಾಯಿ ಚೆಕ್ ನೀಡಲಾಗಿದೆ. 2016ರಲ್ಲಿ ಮತ್ತೆ 2.55 ಕೋಟಿ ರೂಪಾಯಿ ಅನುದಾನ ನೀಡಿದ್ರೂ ಕಾಮಗಾರಿ ಮಾತ್ರ ಆಗಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಹಾಗಾದ್ರೆ ಒಟ್ಟು 7.05 ಕೋಟಿ ರೂಪಾಯಿ ಹಣ ಏನಾಯ್ತು..? ನೀರಿನ ಯೋಜನೆ ಕಾಗದದಲ್ಲೇ ಉಳಿದಿದ್ಯಾ..? ಇಲ್ಲಿದೆ ಒಂದು ಸ್ಪೆಷಲ್ ರಿಪೋರ್ಟ್.
ಎಸ್..ಇದು ಗದಗ ನಗರದ ಹೊರವಲಯದಲ್ಲಿರೋ ಕಳಸಾಪುರ ಕೆಎಚ್‌ಬಿ ಬಡಾವಣೆ. ಬರೋಬ್ಬರಿ 300 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರೋ ಬಡಾವಣೆ. ಸ್ವಂತ ಮನೆ ಕಟ್ಟಿಕೊಳ್ಳುವ ಆಸೆಯಿಂದ ಬಡ, ಮಧ್ಯಮ ವರ್ಗದ ಜನ ಇಲ್ಲಿ ನಿವೇಶನ ಖರೀದಿ ಮಾಡಿದ್ದಾರೆ. ಆದ್ರೆ ನಿವೇಶನ ಖರೀದಿಸಿ ವರ್ಷಗಳೇ ಕಳೆದ್ರೂ ಮನೆ ಕಟ್ಟಿಕೊಳ್ಳುವ ಭಾಗ್ಯ ಮಾತ್ರ ಈ ಜನ್ರಿಗೆ ಸಿಕ್ಕಿಲ್ಲ. ಇದಕ್ಕೆ ಪ್ರಮುಖ ಕಾರಣ ಕುಡಿಯುವ ನೀರಿನ ಸಮಸ್ಯೆ. ಕಳೆದ 20 ವರ್ಷಗಳಿಂದ ನೀರಿಗಾಗಿ ಇಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ. ಬೋರ್‌ವೆಲ್ ಕೊರೆಸಿದ್ರೂ ಅಂತರ್ಜಲದ ಕೊರತೆಯಿಂದ ಸಮರ್ಪಕ ನೀರು ಸಿಗ್ತಿಲ್ಲ. ದೂರದ ಪ್ರದೇಶಗಳಿಂದ ನೀರು ತಂದು ಬದುಕು ಸಾಗಿಸುವ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ನೀರಿನ ಸೌಲಭ್ಯವೇ ಇಲ್ಲದ ಮೇಲೆ ಮನೆ ಕಟ್ಟಿಕೊಂಡು ಏನು ಮಾಡೋದು ಅನ್ನೋ ಪ್ರಶ್ನೆ ಜನರದ್ದು.
ಇನ್ನು ಈ ಬಡಾವಣೆಗೆ ಶಾಶ್ವತ ಕುಡಿಯುವ ನೀರು ಒದಗಿಸಲೆಂದೇ 2014ರಲ್ಲಿ ಕರ್ನಾಟಕ ಗೃಹ ಮಂಡಳಿ ಗದಗ-ಬೆಟಗೇರಿ ನಗರಸಭೆಗೆ 4.50 ಕೋಟಿ ರೂಪಾಯಿ ಮೊತ್ತದ ಚೆಕ್ ನೀಡಿತ್ತು. ನಂತ್ರ 2016ರಲ್ಲಿ ನಗರಸಭೆಯ ಟ್ಯಾಪಿಂಗ್ ಪಾಯಿಂಟ್‌ನಿಂದ ಬಡಾವಣೆಯ ನೆಲಮಟ್ಟದ ಸಂಗ್ರಹಾಗಾರಕ್ಕೆ ಕೊಳವೆ ಮಾರ್ಗ ಅಳವಡಿಸಲು 2.55 ಕೋಟಿ ರೂಪಾಯಿ ನೀಡಲಾಗಿದೆ. ಆದ್ರೆ ಇಷ್ಟೊಂದು ಹಣ ಬಿಡುಗಡೆಯಾದ್ರೂ ನೀರಿನ ಯೋಜನೆ ಮಾತ್ರ ಅನುಷ್ಠಾನವಾಗಿಲ್ಲ ಅನ್ನೋದು ನಿವಾಸಿಗಳ ಆರೋಪ. ಇನ್ನು 2014ರಲ್ಲಿ ಬಿಡುಗಡೆಯಾದ 4.50 ಕೋಟಿ ರೂಪಾಯಿ ಚೆಕ್ ಬಳಕೆ ಬಗ್ಗೆಯೂ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಹಣ ಬಿಡುಗಡೆಯಾದ ಉದ್ದೇಶವೇ ಬೇರೆ, ಬಳಕೆಯಾದ ಉದ್ದೇಶವೇ ಬೇರೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ನಗರಸಭೆ ಮತ್ತು ಗೃಹ ಮಂಡಳಿಯಲ್ಲಿ ಹಣದ ವ್ಯವಹಾರಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳೂ ಲಭ್ಯವಿಲ್ಲ ಎಂಬ ಮಾಹಿತಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಅನುದಾನ ಬಳಕೆ ಪ್ರಮಾಣಪತ್ರವನ್ನೂ ಗೃಹ ಮಂಡಳಿ ಪಡೆದಿಲ್ಲ ಅನ್ನೋ ಆರೋಪಗಳು ಸಹ ಸ್ಥಳೀಯ ನಿವಾಸಿಗಳದ್ದು.
ಒಂದೆಡೆ ಸ್ವಂತ ಮನೆ ಕಟ್ಟಿಕೊಳ್ಳುವ ಬಡವರ ಕನಸು. ಮತ್ತೊಂದೆಡೆ ಕೋಟ್ಯಂತರ ರೂಪಾಯಿ ಅನುದಾನದ ಬಳಕೆ ಬಗ್ಗೆ ಅನುಮಾನ. ಒಟ್ಟು 7.05 ಕೋಟಿ ರೂಪಾಯಿ ಹಣದ ಲೆಕ್ಕ ಎಲ್ಲಿ.?ಕುಡಿಯುವ ನೀರಿನ ಯೋಜನೆ ಯಾಕೆ ಇನ್ನೂ ಪೂರ್ಣಗೊಂಡಿಲ್ಲ..? ಈ ಎಲ್ಲಾ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರ ನೀಡಬೇಕಿದೆ. ಹಣದ ಬಳಕೆ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಕಳಸಾಪುರ ಬಡಾವಣೆಗೆ ಶಾಶ್ವತ ಕುಡಿಯುವ ನೀರು ಒದಗಿಸಬೇಕಿದೆ. ಆಗ ಮಾತ್ರ ನಿವೇಶನ ಖರೀದಿಸಿದ ಸಾವಿರಾರು ಬಡವರ ಸ್ವಂತ ಮನೆಯ ಕನಸು ನನಸಾಗಲು ಸಾಧ್ಯ.