SOCIAL MEDIA

Newsletter

PARTNER SITES
Select Language Select State

ಗದಗ ಎಪಿಎಂಸಿಯಲ್ಲಿ ಧಾನ್ಯಗಳ ಅಭಾವ, ಕಂಗಾಲಾದ ರೈತ-ವರ್ತಕರು!

ಒಂದೆಡೆ ಮಳೆ ಕೈಕೊಟ್ಟು ಹೊಲದಲ್ಲಿ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಇನ್ನೊಂದೆಡೆ ಬಂದಿರುವ ಬೆಳೆಗೆ ಮಾರುಕಟ್ಟೆಯಲ್ಲಿ ಆವಕವೇ ಕಡಿಮೆಯಾಗಿದೆ. ಇದರಿಂದ ರೈತರ ಆದಾಯದ ಮೇಲೆ ಪರಿಣಾಮ ಬೀರುವ ಜೊತೆಗೆ, ಬೆಳೆ ಖರೀದಿ-ಮಾರಾಟವನ್ನೇ ಅವಲಂಬಿಸಿರುವ ವರ್ತಕರ ವಹಿವಾಟಿಗೂ ಸಹ ಹೊಡೆತ ಬಿದ್ದಿದೆ.

Reported By Manjunath Naragund Written By Manjunath Naragund
Published: Oct 02, 2026, 02:46 PM IST | Updated: Oct 02, 2026, 02:55 PM IST
Image Credit: Gadag
Join

ಗದಗ: ಆ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈ ಬಾರಿ ಬೆಳೆ ಆವಕ ಕುಸಿತ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಮಳೆ ಕೊರತೆ, ಕಡಿಮೆ ಇಳುವರಿ ಮತ್ತು ಬರದ ಪರಿಣಾಮ ಬೆಳೆ ಉತ್ಪಾದನೆ ಕುಂಠಿತ. ಗದಗ ಜಿಲ್ಲೆಯ ಕೃಷಿ ಮಾರುಕಟ್ಟೆಗೂ ಬರದ ಬಿಸಿ ತಟ್ಟಿದೆ. ಮಳೆ ಕೈಕೊಟ್ಟಿದ್ದರಿಂದ ಹೊಲದಲ್ಲಿ ಬೆಳೆ ಸರಿಯಾಗಿ ಬಂದಿಲ್ಲ. ಹೀಗಾಗಿ ಬೆಳೆ ಕಡಿಮೆಯಾದ ಬೆನ್ನಲ್ಲೇ ಎಪಿಎಂಸಿಗೆ ಬರುತ್ತಿದ್ದ ಆವಕವೂ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಈ ಕುರಿತು ಗದಗ ಜಿಲ್ಲೆಯಿಂದ ಬಂದ ಒಂದು ವರದಿ ನಿಮ್ಮ ಮುಂದೆ.

ಇದು ಗದಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ..ಸಾಮಾನ್ಯವಾಗಿ ರೈತರ ಬೆಳೆಗಳಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆ.. ಈ ಬಾರಿ ಆವಕದ ಪ್ರಮಾಣವೇ ಕಡಿಮೆಯಾಗಿದೆ..ಮಳೆ ಕೊರತೆ.. ಬೆಳೆ ಇಳುವರಿ ಕುಸಿತ..ಇದರ ನೇರ ಪರಿಣಾಮ ಎಪಿಎಂಸಿ ಮೇಲೂ ಬಿದ್ದಿದೆ.. ಹೌದು ಗದಗ ಜಿಲ್ಲೆ ಮಾತ್ರವಲ್ಲ. ಸುತ್ತಮುತ್ತಲಿನ ಬಾಗಲಕೋಟೆ ಹಾಗೂ ಹಾವೇರಿ ಜಿಲ್ಲೆಗಳಿಂದಲೂ ಎಪಿಎಂಸಿಗೆ ಬರುತ್ತಿದ್ದ ಬೆಳೆ ಪ್ರಮಾಣ ಕಡಿಮೆಯಾಗಿದೆ. ಮುಖ್ಯವಾಗಿ ಮೆಕ್ಕೆಜೋಳ, ಕಡಲೆ, ಒಣಮೆಣಸಿನಕಾಯಿ ಹಾಗೂ ಶೇಂಗಾ ಆವಕದಲ್ಲಿ ಭಾರೀ ಇಳಿಕೆಯಾಗಿದೆ. ಇದರಿಂದ ಅನ್ನದಾತನ ಜೊತೆ ಮಾರುಕಟ್ಟೆಯ ವರ್ತಕರಿಗೂ ಸಂಕಷ್ಟ ಎದುರಾಗಿದೆ. ಇನ್ನು ಅಂಕಿ-ಅಂಶ ನೋಡಿದ್ರೆ ಬರದ ಹೊಡೆತ ಎಷ್ಟಿದೆ ಅನ್ನೋದು ಸ್ಪಷ್ಟವಾಗುತ್ತೆ. ಕಳೆದ ಅವಧಿಗೆ ಹೋಲಿಸಿದರೆ, ಈ ಬಾರಿ ಕಡಲೆ ಆವಕ 75.71ರಷ್ಟು ಕುಸಿದಿದೆ. ಕಳೆದ ಬಾರಿ 7 ಲಕ್ಷಕ್ಕೂ ಅಧಿಕ ಕ್ವಿಂಟಾಲ್ ಇದ್ದ ಕಡಲೆ ಆವಕ, ಈ ಬಾರಿ ಸುಮಾರು 1 ಲಕ್ಷ 70 ಸಾವಿರ ಕ್ವಿಂಟಾಲ್‌ಗೆ ಇಳಿದಿದೆ. ಇನ್ನು ಮೆಕ್ಕೆಜೋಳದ ಸ್ಥಿತಿ ಇನ್ನೂ ಗಂಭೀರವಾಗಿದೆ. ಕಳೆದ ಬಾರಿ 3 ಲಕ್ಷ  ಕ್ವಿಂಟಾಲ್ ಇದ್ದ ಮೆಕ್ಕೆಜೋಳದ ಆವಕ, ಈ ಬಾರಿ ಕೇವಲ 30 ಸಾವಿರ ಕ್ವಿಂಟಾಲ್ಗೆ ಬಂದಿದೆ. ಅಂದ್ರೆ ಬರೋಬ್ಬರಿ ಶೇಕಡಾ 92ರಷ್ಟು ಕುಸಿದಿದೆ.

ಒಂದೆಡೆ ಮಳೆ ಕೈಕೊಟ್ಟು ಹೊಲದಲ್ಲಿ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಇನ್ನೊಂದೆಡೆ ಬಂದಿರುವ ಬೆಳೆಗೆ ಮಾರುಕಟ್ಟೆಯಲ್ಲಿ ಆವಕವೇ ಕಡಿಮೆಯಾಗಿದೆ. ಇದರಿಂದ ರೈತರ ಆದಾಯದ ಮೇಲೆ ಪರಿಣಾಮ ಬೀರುವ ಜೊತೆಗೆ, ಬೆಳೆ ಖರೀದಿ-ಮಾರಾಟವನ್ನೇ ಅವಲಂಬಿಸಿರುವ ವರ್ತಕರ ವಹಿವಾಟಿಗೂ ಸಹ ಹೊಡೆತ ಬಿದ್ದಿದೆ. ಬೆಳೆ ಕಡಿಮೆಯಾದ್ರೆ ಆವಕ ಕಡಿಮೆ. ಆವಕ ಕಡಿಮೆಯಾದ್ರೆ ಮಾರುಕಟ್ಟೆಯ ವಹಿವಾಟೂ ಡಲ್. ಇದೀಗ ಇದೇ ಪರಿಸ್ಥಿತಿ ಗದಗ ಎಪಿಎಂಸಿಯಲ್ಲಿ ಕಂಡುಬರುತ್ತಿದೆ. ಗದಗ ಎಪಿಎಂಸಿಯ ಪ್ರಮುಖ ವಾಣಿಜ್ಯ ಬೆಳೆಯಾದ ಒಣಮೆಣಸಿನಕಾಯಿಗೂ ಈ ಬಾರಿ ಬರದ ಹೊಡೆತ ತಪ್ಪಿಲ್ಲ. ಕಳೆದ ಬಾರಿ 23 ಸಾವಿರ ಕ್ವಿಂಟಾಲ್ ಇದ್ದ ಆವಕ, ಈ ಬಾರಿ 3 ಸಾವಿರ ಕ್ವಿಂಟಾಲ್‌ಗೆ ಕುಸಿದಿದೆ. ಶೇಂಗಾ ಆವಕದಲ್ಲೂ ಇದೇ ಪರಿಸ್ಥಿತಿ. ಶೇಕಡಾ 62 ರಷ್ಟು ಕುಸಿತ ಕಂಡಿದೆ. ಇನ್ನು ಜೋಳದ ಆವಕದಲ್ಲಿ ಶೇಕಡಾ 9ರಷ್ಟು, ಗೋಧಿ ಶೇಕಡಾ 13 ರಷ್ಟು ಕುಸಿತ ಕಂಡಿದೆ. ಆದ್ರೆ ಎಲ್ಲಾ ಬೆಳೆಗಳದ್ದೂ ಕುಸಿತ ಅನ್ನೋದಲ್ಲ. ಹೆಸರುಕಾಳು ಹಾಗೂ ಸೂರ್ಯಕಾಂತಿಯಲ್ಲಿ ಆವಕದ ಪ್ರಮಾಣ ಹೆಚ್ಚಳವಾಗಿದೆ.

ಹೊಲದಲ್ಲಿ ಬೆಳೆ ಕಡಿಮೆಯಾದ್ರೆ ಎಪಿಎಂಸಿಗೆ ಆವಕ ಕಡಿಮೆ. ಆವಕ ಕಡಿಮೆಯಾದ್ರೆ ಖರೀದಿ-ಮಾರಾಟದ ವಹಿವಾಟನ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ರೈತರು ಮಾತ್ರವಲ್ಲ, ಬೆಳೆ ಖರೀದಿ-ಮಾರಾಟವನ್ನೇ ನಂಬಿರುವ ವರ್ತಕರಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ. ಮಳೆ ಕೈಕೊಟ್ಟಿದ್ದರಿಂದ ಹೊಲದಲ್ಲಿ ಬೆಳೆ ಕಡಿಮೆಯಾಯ್ತು. ಬೆಳೆ ಕಡಿಮೆಯಾದ್ದರಿಂದ ಎಪಿಎಂಸಿಗೆ ಆವಕ ಕುಸಿಯಿತು. ಆವಕ ಕುಸಿದ ಬೆನ್ನಲ್ಲೇ ಮಾರುಕಟ್ಟೆಯ ವಹಿವಾಟೂ ಡಲ್ ಹೊಡೆದಿದೆ. ಅಂದ್ರೆ ಬರದ ಹೊಡೆತ ಹೊಲದಿಂದ ಶುರುವಾಗಿ, ಈಗ ಕೃಷಿ ಮಾರುಕಟ್ಟೆಯ ಬಾಗಿಲಿಗೂ ಬಂದು ನಿಂತಿದೆ. ಅನ್ನದಾತನ ಬೆಳೆ ಬೆಳೆಯದೇ ಇದ್ರೆ ಅದರ ಪ್ರತಿಧ್ವನಿ ಮಾರುಕಟ್ಟೆಯಲ್ಲೂ ಕೇಳಿಸುತ್ತೆ ಅನ್ನೋದಕ್ಕೆ ಗದಗ ಎಪಿಎಂಸಿಯೇ ಸಾಕ್ಷಿ.
 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES