SOCIAL MEDIA

Newsletter

PARTNER SITES
Select Language Select State

ಶಾಲಾ-ಕಾಲೇಜು ಬಂದ್‌ ನ.18ರಿಂದ ಅನಿರ್ದಿಷ್ಟಾವಧಿ ಮುಷ್ಕರ: ವಿಧಾನ ಪರಿಷತ್ ಸದಸ್ಯ ಪ್ರೋ.ಎಸ್.ವಿ.ಸಂಕನೂರ

ಅನುದಾನಿತ, ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ನಿರಂತರವಾಗಿ ಸರ್ಕಾರದಿಂದ ತೊಂದರೆ ಆಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸೂಕ್ತ ಪರಿಹಾರ ನೀಡದಿದ್ದರೆ ನವೆಂಬರ್‌ 18ರಿಂದ ಖಾಸಗಿ ಶಾಲಾ- ಕಾಲೇಜುಗಳು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಬೇಕಾಗಬಹುದು ಎಂದು ವಿಧಾನ ಪರಿಷತ್‌ ಸದಸ್ಯ ಪ್ರೋ.ಎಸ್.ವಿ.ಸಂಕನೂರ ಹೇಳಿದ್ದಾರೆ.

Written By Yashaswini V
Published: Nov 11, 2026, 11:12 IST | Updated: Nov 11, 2026, 11:18 IST
Join

ಹುಬ್ಬಳ್ಳಿ: ಅನುದಾನಿತ ಹಾಗೂ ಅನುದಾನ ರಹಿತ ಶಾಲಾ-ಕಾಲೇಜುಗಳ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಹಾಗೂ ನೌಕರರ ಹೋರಾಟ ಸಮನ್ವಯ ಸಮಿತಿಯಿಂದ ನವೆಂಬರ್ 17ರಂದು ಪ್ರತಿಭಟನೆ ಹಾಗೂ 18ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ' ಎಂದು ವಿಧಾನ ಪರಿಷತ್‌ ಸದಸ್ಯ ಪ್ರೋ.ಎಸ್.ವಿ.ಸಂಕನೂರ ಹೇಳಿದರು.

ಶಾಲಾ-ಕಾಲೇಜುಗಳು ಸಂಪೂರ್ಣ ಬಂದ್‌ ಎಚ್ಚರಿಕೆ:
ಹುಬ್ಬಳ್ಳಿ ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಪ್ರೋ.ಎಸ್.ವಿ.ಸಂಕನೂರ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಕಾಂಗ್ರೆಸ್ ಸರಕಾರದಿಂದ ಸಾಕಷ್ಟು ತೊಂದರೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ನವೆಂಬರ್‌ 17ರಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಧಾರವಾಡದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನವೆಂಬರ್‌ 18ರಂದು ಶಾಲಾ-ಕಾಲೇಜುಗಳು ಸಂಪೂರ್ಣ ಬಂದ್‌ ಆಗಲಿವೆ' ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅನುದಾನಿತ, ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ಸರ್ಕಾರಗಳಿಂದಲೇ ಸಮಸ್ಯೆ:
ಕಳೆದ 'ಮೂರು ನಾಲ್ಕು ದಶಕಗಳಿಂದ ರಾಜ್ಯ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಅದರಲ್ಲೂ ಅನುದಾನಿತ, ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ, ಅಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಹಾಗೂ ಆಡಳಿತ ಮಂಡಳಿಯವರಿಗೆ ಹಲವು ರೀತಿಯಲ್ಲಿ ತೊಂದರೆ ನೀಡುತ್ತಾ ಬಂದಿವೆ. ಖಾಸಗಿ ಶಾಲಾ ಶಿಕ್ಷಕರಿಗೆ ಸಾಕಷ್ಟು ರೀತಿಯಲ್ಲಿ ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಇದರ ಬಗ್ಗೆ ಹಲವು ಬಾರಿ ಸದನದ ಒಳಗೆ ಹಾಗೂ ಹೊರಗೆ ಪ್ರಸ್ತಾಪ ಮಾಡಿದ್ದರೂ, ಇಂತಹ ತಾರತಮ್ಯಗಳನ್ನು, ಅನ್ಯಾಯಗಳನ್ನು ಸರಿಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಉಳಿಯುವುದೇ ಕಷ್ಟ ಎಂಬಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾಗಾಗಿ, ಮುಷ್ಕರಕ್ಕೆ ಜಿಲ್ಲೆಯ ಎಲ್ಲ ಸಂಸ್ಥೆಗಳ ಆಡಳಿತ ಮಂಡಳಿಯವರು, ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ' ಎಂದು ಅವರು ಹೇಳಿದರು.

2006ರಿಂದ ಈಚೆಗೆ ಕೆಲಸಕ್ಕೆ ಸೇರಿದವರಿಗೆ ಯಾವುದೇ ರೀತಿಯ ಪಿಂಚಣಿ ಸೌಲಭ್ಯವಿಲ್ಲ. ಇದರ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು. ಒಬ್ಬ ಶಿಕ್ಷಕ 35 ವರ್ಷಗಳ ಕಾಲ ದುಡಿದು ನಿವೃತ್ತಿ ಹೊಂದುವ ಸಂದರ್ಭದಲ್ಲಿ ಅವರಿಗೆ ಪಿಂಚಣಿ ಸಿಗದಿದ್ದರೆ ಅವರು ಹೇಗೆ ಬದುಕಬೇಕು? ಇದೊಂದು ಗಂಭೀರವಾದ ಸಮಸ್ಯೆ ಆಗಿದೆ. ಇಂದು ಸರ್ಕಾರಿ ನೌಕರರಿಗೆ 2006ರಿಂದೀಚೆಗೆ ಕೆಲಸಕ್ಕೆ ಸೇರಿದವರಿಗೆ ಎನ್‌ಪಿಎಸ್‌ ವ್ಯವಸ್ಥೆ ಆದರೂ ಇದೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಏಕೆ ಈ ಸೌಕರ್ಯವಿಲ್ಲ. ಖಾಸಗಿ ಹಾಗೂ ಸರ್ಕಾರಿ ಶಿಕ್ಷಕರ ನಡುವೆ ಸರ್ಕಾರದ ಈ ತಾರತಮ್ಯ ಏಕೆ? ಸರ್ಕಾರಿ ಶಿಕ್ಷಕರಿಗೆ ಒಂದು ಕಾಯ್ದೆ, ಖಾಸಗಿ ಶಿಕ್ಷಕರಿಗೆ ಒಂದು ಕಾಯ್ದೆಯು ಇಬ್ಬಿಗೆಯ ನೀತಿ ಆಗಿದ್ದು, ಇದು ಒಳ್ಳೆಯದಲ್ಲ ಎಂದವರು ಅಸಮಾಧಾನ ಹೊರಹಾಕಿದರು.

1995ರ ನಂತರ ರಾಜ್ಯದಲ್ಲಿ ಆರಂಭವಾಗಿರುವ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ   ಅನುದಾನವನ್ನೇ ಕೊಟ್ಟಿಲ್ಲ. ಈ ಬಗ್ಗೆ ಸದನದಲ್ಲಿ ಸಾಕಷ್ಟು ಬಾರಿ ಪ್ರಶ್ನೆ ಮಾಡಲಾಗಿದೆ. ಅನುದಾನ ರಹಿತ ಶಾಲೆಗಳು ಎಷ್ಟು ಹೋರಾಟ ಮಾಡಬೇಕು? ಕಳೆದ ಮೂರು ದಶಕಗಳಿಂದ ಅನುದಾರ ರಹಿತ ಶಾಲಾ ಶಿಕ್ಷಕರು ತೀವ್ರವಾಗಿ ಹೋರಾಟ ಮಾಡಿದರೂ ಕೂಡ ಸರ್ಕಾರ ಅವರ ಸಮಸ್ಯೆಗಳಿಗೆ ಕಿವಿಗೊಟ್ಟಿಲ್ಲ. 95ರ ಬಳಿಕ ರಾಜ್ಯದಲ್ಲಿ ಆರಂಭವಾಗಿರುವ ಶಾಲಾ ಕಾಲೇಜುಗಳಿಗೆ ಅನುದಾನವನ್ನು ನೀಡಬೇಕು ಎಂದವರು ಒತ್ತಾಯಿಸಿದರು.

ಕೆಪಿಎಸ್‌ ಶಾಲೆಗಳ ಆರಂಭ ಅವೈಜ್ಞಾನಿಕ:
ಖಾಸಗಿ, ಅನುದಾನ ಶಾಲೆಗಳ ಸಮೀಪವೇ ಕೆಪಿಎಸ್‌ ಶಾಲೆಗಳನ್ನು ತೆರೆಯುವ ಸರ್ಕಾರದ ಯೋಜನೆ ಅವೈಜ್ಞಾನಿಕವಾದದ್ದು ಎಂದು ಅಸಮಾಧಾನದ ನುಡಿಗಳನ್ನಾಡಿದ ಪ್ರೋ.ಎಸ್.ವಿ.ಸಂಕನೂರ, ಇತ್ತೀಚೆಗೆ ಸರ್ಕಾರ ಕೆಪಿಎಸ್‌ - ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪ್ರಾರಂಭ ಮಾಡುತ್ತಿದೆ. ಇದು ಒಳ್ಳೆಯದೇ. ಬಡ ಮಕ್ಕಳಿಗೆ, ಗ್ರಾಮಾಂತರ ಪ್ರದೇಶದಲ್ಲಿ ಇರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕೆಂಬ ಉದ್ದೇಶದಿಂದ ಸರ್ಕಾರ ಕೆಪಿಎಸ್‌ ಶಾಲೆಗಳನ್ನು ಆರಂಭಿಸುತ್ತಿದೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಈಗಾಗಲೇ ಖಾಸಗಿ ಶಾಲೆಗಳು ಇರುವ ಪ್ರದೇಶದಲ್ಲಿ 3 ಕಿ.ಮೀ. ಒಳಗೇ ಒಂದು ಕೆಪಿಎಸ್‌ ಶಾಲೆಯನ್ನು ತೆರೆದರೆ ಕಳೆದ 25 ವರ್ಷಗಳ ಹಿಂದೆಯೇ ಆರಂಭವಾಗಿರುವ ಅನುದಾನ ಶಾಲೆಗಳ ಪರಿಸ್ಥಿತಿ ಏನಾಗಬೇಕು. ಕೆಪಿಎಸ್‌ ಶಾಲೆಗಳನ್ನು ಆರಂಭಿಸಿದರೆ ಮಕ್ಕಳು ಆ ಶಾಲೆಗಳಿಗೆ ಹೋಗುತ್ತಾರೆ. ಆಗ ಅನುದಾನ ಶಾಲೆಗಳನ್ನು ಮುಚ್ಚಬೇಕಾಗುತ್ತದೆ. ಆ ಶಾಲೆಯನ್ನೇ ನಂಬಿರುವವರ ಬದುಕು ಹೇಗೆ ಎಂದವರು ಪ್ರಶ್ನಿಸಿದ ಅವರು, ಈ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳು ಕಾಳಜಿವಹಿಸಬೇಕು ಎಂದು ಮನವಿ ಮಾಡಿದರು.

ಇಂತಹ ಜಾಗಗಳಲ್ಲಿ ಕೆಪಿಎಸ್‌ ಶಾಲೆಗಳನ್ನು ತೆರೆಯದಂತೆ ಆಗ್ರಹ:
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕೆಪಿಎಸ್‌ ಶಾಲೆಗಳನ್ನು ತೆರೆಯುವಾಗ ಖಾಸಗಿ ಅಥವಾ ಅನುದಾನಿತ ಶಾಲೆಗಳಿರುವ ಪ್ರದೇಶಗಳಲ್ಲಿ 3 ಕಿ.ಮೀ. ಒಳಗಡೆ ಹೊಸ ಕೆಪಿಎಸ್‌ ಶಾಲೆಗಳನ್ನು ತೆರೆಯದಂತೆ ಇದೇ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಪ್ರೋ.ಎಸ್.ವಿ.ಸಂಕನೂರ ಆಗ್ರಹಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಮುಖ ಬೇಡಿಕೆಗಳು ಏನು?
'ಎಲ್ಲ ಶಿಕ್ಷಕರಿಗೆ ಹಳೇ ಪಿಂಚಣಿ ಯೋಜನೆ ಜಾರಿ ಮಾಡಬೇಕು. ಎಲ್ಲ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಬೇಕು. ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿರುವ ಪ್ರದೇಶದ ಸಮೀಪದಲ್ಲೇ ಪಿಎಂಶ್ರೀ, ಕೆಪಿಎಸ್‌ ಶಾಲೆ ಸ್ಥಾಪಿಸಬಾರದು. ಸೇವಾ ಭದ್ರತೆ, ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು' ಎಂದು ಆಗ್ರಹಿಸಿದರು.‌

ಯಾವುದಾದರೂ ಗಂಭೀರ ಆರೋಗ್ಯ ಸಮಸ್ಯೆಗಳು, ಕಿಡ್ನಿ, ಹಾರ್ಟ್‌, ಕ್ಯಾನ್ಸರ್‌ ನಂತಹ ರೋಗಗಳು ಇದ್ದಾಗ ನೆರವಾಗಲೆಂದು ರಾಜ್ಯ ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಜಾರಿ ಮಾಡಿದ್ದಾರೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ ನೌಕರರಿಗೆ, ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿ ಮಾಡಿಲ್ಲ. ಹಾಗಾಗಿ, ಜ್ಯೋತಿ ಸಂಜೀವಿನಿ ಯೋಜನೆ ಜಾರಿ ಸೇರಿದಂತೆ 20 ಪ್ರಮುಖ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ನವೆಂಬರ್‌ 17ನೇ ತಾರೀಕಿನಂದು ಬಸವರಾಜ್‌ ಹೊರಟ್ಟಿ ಅವರ ನೇತೃತ್ವದಲ್ಲಿ ಧಾರವಾಡದಲ್ಲಿ ಬೃಹತ್‌ ಪ್ರತಿಭಟನೆಗೆ ಯೋಜಿಸಲಾಗಿದೆ. ಇದಕ್ಕೆ ವಿಧಾನ ಪರಿಷತ್‌ ಸದಸ್ಯರೂ ಕೂಡ ಸಂಪೂರ್ಣ ಬೆಂಬಲವನ್ನು ನೀಡಲಿದ್ದೇವೆ ಎಂದರು.

ಸರಕಾರಿ ಶಾಲೆಗಳ ಶಿಕ್ಷಕರಿಗೆ ಒಂದು ಅನುದಾನ ರಹಿತ, ಖಾಸಗಿ ಶಿಕ್ಷಣ ಸಂಸ್ಥೆಗಳ‌ ಶಿಕ್ಷಕರಿಗೆ ಸಾಕಷ್ಟು ತಾರತಮ್ಯ ಮಾಡುತ್ತಿರುವ ಬಗ್ಗೆ ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಪತ್ರ ಬರೆದು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಲಾಗಿದೆ. ಆದರೆ, ಸಿಎಂ ಆಗಲಿ ಅಥವಾ ಶಿಕ್ಷಣ ಸಚಿವರಾಗಲಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹಾಗಾಗಿ, ಶಾಲಾ-ಕಾಲೇಜುಗಳನ್ನು ಬಂದ್‌ ಮಾಡಿ ಬೀದಿಗಿಳಿದು ಹೋರಾಟ ಮಾಡುವುದನ್ನು ಬಿಟ್ಟರೆ ನಮಗೆ ಬೇರೆ ಮಾರ್ಗವಿಲ್ಲ ಎಂದವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಒಂದು ವೇಳೆ ತಮ್ಮ ಬೇಡಿಕೆ ಈಡೇರಿಸದಿದ್ದರೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುವುದು ಎಂದವರು ತಿಳಿಸಿದರು. 
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES