Missing KRIDL Engineer Parvez found: ಗದಗನಲ್ಲಿ ಕಳೆದ 19 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ, ರಾಜ್ಯಾದ್ಯಂತ ತೀವ್ರ ಆತಂಕ ಮೂಡಿಸಿದ್ದ ಜಿಲ್ಲೆಯ ಕೆಆರ್‌ಐಡಿಎಲ್ KRIDL ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ AEE ಪರ್ವೇಜ್ ಧಾರವಾಡ ಕೊನೆಗೂ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪತ್ತೆಯಾಗಿದ್ದಾರೆ.
ಅಧಿಕಾರಿಯ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗದಗ ಪೊಲೀಸರು, ಅವರ ಪ್ರತಿಯೊಂದು ಚಲನವಲನದ ಜಾಡನ್ನು ಬೆನ್ನಟ್ಟಿದ್ದು, ಸದ್ಯ ಭೋಪಾಲ್‌ನಿಂದ ಸ್ಥಳೀಯ ರೈಲಿನ ಮೂಲಕ ಉಜ್ಜಯಿನಿ ಕಡೆಗೆ ಪ್ರಯಾಣಿಸಿರುವ ಖಚಿತ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗದಗ ಪೊಲೀಸರ ವಿಶೇಷ ತಂಡವು ಉಜ್ಜಯಿನಿಗೆ ಧಾವಿಸಿ, ತೀವ್ರ ಶೋಧ ಕಾರ್ಯವನ್ನು ಮುಂದುವರಿಸಿದೆ.
ರೈಲುಗಳನ್ನು ಬದಲಿಸಿ ಸಂಚರಿಸಿದ ಎಂಜಿನಿಯರ್ ಪರ್ವೇಜ್: ಶಾಹಿ ಮಸೀದಿ ಹಾಗೂ ಮಹಾಕಾಳ ದೇಗುಲದತ್ತ ತನಿಖಾಧಿಕಾರಿಗಳ ಚಿತ್ತ ಕಳೆದ ಸುಮಾರು ಮೂರು ವಾರಗಳಿಂದ ಪತ್ತೆಯಾಗದೆ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ ಎಂಜಿನಿಯರ್ ಪರ್ವೇಜ್ ಅವರ ಪ್ರಯಾಣದ ಮಾರ್ಗವನ್ನು ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಮೂಲಕ ಪತ್ತೆ ಹಚ್ಚಿದ್ದಾರೆ. ಭೋಪಾಲ್ ರೈಲು ನಿಲ್ದಾಣಕ್ಕೆ ತಲುಪಿದ ಬಳಿಕ ಅವರು ಪೊಲೀಸರ ಕಣ್ಣಿಗೆ ಮಣ್ಣೆರೆಚಲು ಅಥವಾ ಬೇರೆ ಕಾರಣಗಳಿಗಾಗಿ ಹಲವು ಬಾರಿ ರೈಲುಗಳನ್ನು ಬದಲಾಯಿಸಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಅಂತಿಮವಾಗಿ ಭೋಪಾಲ್ ರೈಲು ನಿಲ್ದಾಣದಿಂದ ಒಂದು ಲೋಕಲ್ ರೈಲು ಹತ್ತಿ ಅವರು ಉಜ್ಜಯಿನಿ ಕಡೆಗೆ ತೆರಳಿರುವುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ. ಈ ಸುಳಿವಿನ ಬೆನ್ನೇರಿರುವ ಗದಗ ಪೊಲೀಸರು ಉಜ್ಜಯಿನಿಗೆ ತೆರಳಿ ಪ್ರಮುಖ ಸ್ಥಳಗಳಲ್ಲಿ ಜಾಲ ಬೀಸಿದ್ದಾರೆ. ಪರ್ವೇಜ್ ಅವರು ಉಜ್ಜಯಿನಿಯ ಪ್ರಸಿದ್ಧ ಶಾಹಿ ಮಸೀದಿ ಅಥವಾ ಐತಿಹಾಸಿಕ ಮಹಾಕಾಳ ದೇಗುಲದತ್ತ ತೆರಳಿರಬಹುದೇ ಎಂದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆ ಧಾರ್ಮಿಕ ಸ್ಥಳಗಳ ಸುತ್ತಮುತ್ತಲ ಸಿಸಿಟಿವಿ ದೃಶ್ಯಾವಳಿ ಹಾಗೂ ಇತರೆ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಅಲ್ಲದೆ, ಅಲ್ಲಿಂದ ರಾಜಸ್ಥಾನದ ಪ್ರಸಿದ್ಧ ಅಜ್ಮೀರ್ ಶರೀಫ್ ದರ್ಗಾಕ್ಕೆ ತೆರಳಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮುಂದುವರಿದ ಪೊಲೀಸರ ಸರ್ಚ್: ಠಾಣೆಗೆ KRIDL ಸಿಬ್ಬಂದಿ ವಿಚಾರಣೆ ಹಾಗೂ ಕಣ್ಣೀರಿಡುತ್ತಿರುವ ಕುಟುಂಬದ ಆತಂಕ
ಒಂದೆಡೆ ಪೊಲೀಸರು ಹೊರ ರಾಜ್ಯಗಳಲ್ಲಿ ಎಂಜಿನಿಯರ್ ಪರ್ವೇಜ್ ಪತ್ತೆಗಾಗಿ ಸರ್ಚ್ ಆಪರೇಷನ್ ನಡೆಸುತ್ತಿದ್ದಾರೆ. ಮತ್ತೊಂದೆಡೆ ಗದಗದಲ್ಲಿ ತನಿಖೆ ಚುರುಕುಗೊಂಡಿದೆ. ಪ್ರಕರಣದ ಹಿನ್ನೆಲೆಯಲ್ಲಿ ಗದಗ ಕೆಆರ್‌ಐಡಿಎಲ್ ಕಚೇರಿಯ ಕೆಲ ಸಿಬ್ಬಂದಿಯನ್ನು ಪೊಲೀಸ್ ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಲಾಗಿದೆ. ಪರ್ವೇಜ್ ಅವರ ವೃತ್ತಿಜೀವನ, ಕಚೇರಿ ವ್ಯವಹಾರಗಳು, ವೈಯಕ್ತಿಕ ಸಂಪರ್ಕಗಳು ಹಾಗೂ ನಾಪತ್ತೆಗೂ ಮುನ್ನ ಅವರ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಕಳೆದ 19 ದಿನಗಳಿಂದ ಮಗನ ಸುಳಿವಿಲ್ಲದೆ ಕಣ್ಣೀರಿಡುತ್ತಿರುವ ಪರ್ವೇಜ್ ಅವರ ಕುಟುಂಬಸ್ಥರ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಮ್ಮ ಮಗನನ್ನು ಪೊಲೀಸರು ಸುರಕ್ಷಿತವಾಗಿ ಪತ್ತೆಹಚ್ಚಿ ಆದಷ್ಟು ಬೇಗ ತಮಗೆ ಒಪ್ಪಿಸಬೇಕು ಎಂದು ಕುಟುಂಬ ವರ್ಗ ಕಣ್ಣೀರಿನೊಂದಿಗೆ ಮನವಿ ಮಾಡಿಕೊಂಡಿದೆ. ಶತಾಯಗತಾಯ ಪರ್ವೇಜ್ ಅವರನ್ನು ಪತ್ತೆಹಚ್ಚಿ ಸತ್ಯಾಸತ್ಯತೆಯನ್ನು ಹೊರಹಾಕಲು ಗದಗ ಪೊಲೀಸರು ತಮ್ಮ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.