ಶಾಸಕ ಸ್ಥಾನಕ್ಕೆ ಇಂಡಿ ಶಾಸಕ ರಾಜೀನಾಮೆ
ಕಾಂಗ್ರೆಸ್ ಪಕ್ಷದ ಶಾಸಕ ಯಶವಂತರಾಯಗೌಡ ವಿ. ಪಾಟೀಲ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ್ದಾರೆ. ಹಲವು ಬಾರಿ ಮನವಿ ಮಾಡಿದ್ರು ಸರ್ಕಾರ ಮನವಿಗೆ ಸ್ಪಂದಿಸದ ಹಿನ್ನಲೆ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಒಂದೆಡೆ ಕಸ್ತೂರಿ ರಂಗನ್ ವರದಿ ಹಾಗೂ ರಾಜ್ಯದಲ್ಲಿ ತಲೆದೂರಿರುವ ಬರಗಾಲ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರ ವಿಶೇಷ ಅಧಿವೇಶನ ನಡೆಸುತ್ತಿದೆ. ಏತನ್ಮಧ್ಯೆ, ಆಡಳಿತ ಪಕ್ಷದ ಶಾಸಕರೇ ಆಗಿರುವ ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಬಗ್ಗೆ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿರುವ ಜಿ.ಎಸ್ ಪಾಟೀಲ್ ಅವರಿಗೆ ಪತ್ರ ಬರೆದಿರುವ ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಈ ರೀತಿ ಬರೆದಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಬಗ್ಗೆ...
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ವಿಜಯಪುರ ಜಿಲ್ಲೆಯ ನಾನು ಪ್ರತಿನಿಧಿಸುವ ಇಂಡಿ ತಾಲ್ಲೂಕು 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ಆರಂಭದಲ್ಲಿ ಸ್ವಲ್ಪ ಮಳೆ ಬಿದ್ದ ಪ್ರಯುಕ್ತ ರೈತರು ಸಾಲಮಾಡಿ ಬೀಜ, ಗೊಬ್ಬರಗಳನ್ನು ಖರೀದಿಸಿ, ಭಿತ್ನನೆ ಮಾಡಿರುತ್ತಾರೆ. ಆದರೆ ಸಕಾಲಕ್ಕೆ ಮಳೆ ಆಗದ ಕಾರಣ ಬೆಳೆಗಳು ಬತ್ತಿ ಹೋಗಿದ್ದು ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿರುತ್ತದೆ.
ಮನವಿ ಪತ್ರ ಸಲ್ಲಿಸಿದ್ದರೂ ನಮ್ಮ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿಲ್ಲ!
ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ದಿನಾಂಕ 28.08.2026 ರಂದು ಇಂಡಿ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸುವಂತೆ ಮನವಿ ಪತ್ರ ಸಲ್ಲಿಸಲಾಗಿತ್ತು. ಆದರೆ ವಿಜಯಪುರ ಜಿಲ್ಲೆಯ ಒಟ್ಟು 13 ತಾಲ್ಲೂಕುಗಳ ಪೈಕಿ ನನ್ನ ಇಂಡಿ ಮತ್ತು ಚಡಚಣ ಈ 2 ತಾಲ್ಲೂಕುಗಳನ್ನು ಹೊರತುಪಡಿಸಿ, ಇದುವರೆಗೂ ರಾಜ್ಯದ 188 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿರುತ್ತದೆ ಎಂದು ತಮ್ಮ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ತಮ್ಮ ತಾಲ್ಲೂಕು ಇಲ್ಲದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಮಾತಿಗೆ... ನಮ್ಮ ಭಾವನೆಗಳಿಗೆ... ಬೆಲೆಯೇ ಇಲ್ಲ..!
ಮುಂದುವರೆದು ನಾನು ಆಡಳಿತ ಪಕ್ಷದ ಶಾಸಕನಾಗಿದ್ದು, ನಮ್ಮ ಸರ್ಕಾರಕ್ಕೆ ಮುಜಗರವಾಗಬಾರದೆಂದು ಸೂಕ್ಷ್ಮ ಮತಿಯನಾಗಿ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇನೆ. ಆದರೂ ಸಹ ನಮ್ಮ ಮಾತಿಗೆ, ನಮ್ಮ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದ್ದು, ಈಗಿನ ರಾಜಕೀಯ ವಾತಾವರಣದಲ್ಲಿ ಬಲಾಡ್ಯರಿಗೆ, ಒತ್ತಡ ತಂತ್ರಗಳನ್ನು ಎಳೆಯುವವರಿಗೆ ಮನ್ನಣೆ ನೀಡಲಾಗುತ್ತಿದೆ. ನಮ್ಮಂತಹ ಸೌಮ್ಯ ಸ್ವಭಾವದವರಿಗೆ ಯಾವುದೇ ಕೆಲಸಗಳಿಗೆ ಮನ್ನಣೆ ದೊರೆಯುತ್ತಿಲ್ಲ. ಆದ್ದರಿಂದ ನನ್ನ ಕ್ಷೇತ್ರದ ಜನರ ಆಸೆ, ಆಶೋತ್ತರಗಳಿಗೆ ಸ್ಪಂದಿಸಲು ಸಾಧ್ಯವಾಗದ ಪ್ರಯುಕ್ತ ನಾನು ಸ್ವರಾಜ್ಞೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಅಂಗೀಕರಿಸಿ."
ವಂದನೆಗಳೊಂದಿಗೆ ಯಶವಂತರಾಯಗೌಡ ವಿ. ಪಾಟೀಲ ಎಂದು ಬರೆದಿದ್ದಾರೆ.