ರಾಯಚೂರಿನಲ್ಲಿ ಪ್ರಿಯಕರನಿಂದಲೇ ಗೃಹಿಣಿ ಭೀಕರ ಹತ್ಯೆ!
ಸ್ನೇಹದ ಹೆಸರಿನಲ್ಲಿ ನಡೆದ ಈ ರಕ್ತಸಿಕ್ತ ಅಧ್ಯಾಯ, ಹುಟ್ಟಿದ ಒಂದೂವರೆ ವರ್ಷದ ಕೂಸನ್ನು ಅನಾಥವಾಗಿಸಿದೆ. ತಾಯಿಯ ಶವದ ಮೇಲೆ ಬಿದ್ದು ಮಗು ಅತ್ತ ಅಳು, ಆ ಕಲ್ಲಿನಂಥ ಹೃದಯಗಳನ್ನೂ ಕರಗಿಸುವಂತಿದೆ.
ರಾಯಚೂರು/ಸಿಂಧನೂರು: ‘ಕಟ್ಟಿಕೊಂಡವನು ಕಡೆತನಕ, ಇಟ್ಟುಕೊಂಡವನು ಇರೋತನಕ’ ಎನ್ನುವ ಹಳೆಯ ಗಾದೆ ಮಾತೊಂದಿದೆ. ಈ ಮಾತು ಅದೆಷ್ಟೋ ಜನರ ಜೀವನಕ್ಕೆ ಅಕ್ಷರಶಃ ಅನ್ವಯಿಸುತ್ತದೆ. ಸಂಸಾರವೆಂಬ ಹಡಗನ್ನು ನೆಮ್ಮದಿಯಿಂದ ನಡೆಸಿಕೊಂಡು ಹೋಗುವುದನ್ನು ಬಿಟ್ಟು, ಅಡ್ಡದಾರಿಯ ತುಳಿತಕ್ಕೆ ಸಿಲುಕಿ ಪರಪುರುಷನ ಮೋಹಕ್ಕೆ ಬಿದ್ದ ಗೃಹಿಣಿಯೊಬ್ಬಳು ಕೊನೆಯಲ್ಲಿ ಅದೇ ಪ್ರಿಯಕರನಿಂದಲೇ ಭೀಕರವಾಗಿ ಹತ್ಯೆಯಾದ ದಾರುಣ ಘಟನೆಯೊಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ನಡೆದಿದೆ.
ಸ್ನೇಹದ ಹೆಸರಿನಲ್ಲಿ ನಡೆದ ಈ ರಕ್ತಸಿಕ್ತ ಅಧ್ಯಾಯ, ಹುಟ್ಟಿದ ಒಂದೂವರೆ ವರ್ಷದ ಕೂಸನ್ನು ಅನಾಥವಾಗಿಸಿದೆ. ತಾಯಿಯ ಶವದ ಮೇಲೆ ಬಿದ್ದು ಮಗು ಅತ್ತ ಅಳು, ಆ ಕಲ್ಲಿನಂಥ ಹೃದಯಗಳನ್ನೂ ಕರಗಿಸುವಂತಿದೆ.
ಏನಿದು ಭೀಕರ ಪ್ರಕರಣ?
ಸಿಂಧನೂರು ತಾಲೂಕಿನ RH ಕ್ಯಾಂಪ್-5 ನ ನಿವಾಸಿಯಾಗಿದ್ದ 20 ವರ್ಷದ ಸ್ನೇಹಾ ಎಂಬಾಕೆಯೇ ಕೊಲೆಯಾದ ದುರದೃಷ್ಟಕರ ಗೃಹಿಣಿ. ನೋಡಲು ಸ್ಪುರದ್ರೂಪಿಯಾಗಿದ್ದ ಈಕೆಗೆ ಒಂಬತ್ತನೇ ತರಗತಿಗೇ ಓದು ಮುಗಿದಿತ್ತು. ಸಣ್ಣ ವಯಸ್ಸಿನಲ್ಲೇ ಮೊದಲ ಮದುವೆಯಾಗಿದ್ದರೂ, ಕಾರಣಾಂತರಗಳಿಂದ ಮೊದಲ ಗಂಡನಿಗೆ ವಿಚ್ಛೇದನ ನೀಡಿ ಆತನಿಂದ ದೂರವಾಗಿದ್ದಳು. ತದನಂತರ ಕುಟುಂಬದವರು ಈಕೆಗೆ ಮತ್ತೊಂದು ಮದುವೆ ಮಾಡಿಸಿದ್ದರು. ಎರಡನೇ ಸಂಸಾರದಲ್ಲಿ ಪ್ರೀತಿಯ ಕುರುಹಾಗಿ ಒಂದೂವರೆ ವರ್ಷದ ಮುದ್ದಾದ ಹೆಣ್ಣು ಮಗುವೂ ಇತ್ತು.
ಆದರೆ, ಸುಂದರ ಸಂಸಾರ, ಮುದ್ದಾದ ಮಗು ಯಾವುದೂ ಸ್ನೇಹಾಳ ಕಣ್ಣಿಗೆ ಕಾಣಿಸಲಿಲ್ಲ. ಅದೇ ಗ್ರಾಮದ ಶುಭಂ ಎಂಬ ಯುವಕನ ಜೊತೆಗೆ ಈಕೆಗೆ ಅನೈತಿಕ ಸಂಬಂಧ ಏರ್ಪಟ್ಟಿತ್ತು. ದಿನಕಳೆದಂತೆ ಇವರಿಬ್ಬರ ನಡುವಿನ ಕದ್ದುಮುಚ್ಚಿ ಪ್ರೇಮಾಯಣ ಮಿತಿಮೀರಿ ಬೆಳೆದಿತ್ತು. ಕೊನೆಗೆ ಇದೇ ಅಕ್ರಮ ಸಂಬಂಧ ಆಕೆಯ ಪ್ರಾಣಕ್ಕೇ ಕುತ್ತು ತಂದೊಡ್ಡುತ್ತದೆ ಎಂದು ಆಕೆ ಕನಸಿನಲ್ಲೂ ಭಾವಿಸಿರಲಿಲ್ಲ.
ಇಂದು ಬೆಳಗಿನ ಜಾವ ಸುಮಾರು 4 ಗಂಟೆಯ ಸಮಯ. ಜಗತ್ತು ಇನ್ನೂ ಕತ್ತಲಲ್ಲಿ ತೇಲುತ್ತಿದ್ದಾಗ ಪ್ರಿಯಕರ ಶುಭಂ, ಸ್ನೇಹಾಳಿಗೆ ಕರೆ ಮಾಡಿ ಹೊರಗೆ ಬರುವಂತೆ ಹೇಳಿದ್ದಾನೆ. ಆ ಸಮಯದಲ್ಲಿ ಮನೆಯಲ್ಲಿ ಅಜ್ಜಿ ಮಾತ್ರ ಮಲಗಿದ್ದರು. ಮಗುವನ್ನು ಮನೆಯಲ್ಲೇ ಬಿಟ್ಟು ಹೋಗಲು ಮನಸ್ಸಾಗದ ಸ್ನೇಹಾ, ತನ್ನ ಒಂದೂವರೆ ವರ್ಷದ ಕಂದಮ್ಮನನ್ನೂ ತನ್ನ ಜೊತೆಯಲ್ಲೇ ಕರೆದುಕೊಂಡು ಹೋಗಿದ್ದಾಳೆ.
ಶುಭಂ ಆಕೆಯನ್ನು ಊರ ಹೊರವಲಯದ ನಿರ್ಜನ ಜಮೀನೊಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಇಬ್ಬರ ನಡುವೆ ಭಾರಿ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಶುಭಂ, ತನ್ನಲ್ಲಿದ್ದ ಚಾಕುವಿನಿಂದ ಸ್ನೇಹಾಳ ಬೆನ್ನಿಗೆ ನಿಷ್ಕರುಣಿಯಾಗಿ ಇರಿದಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಕಲ್ಲಿನಿಂದ ಆಕೆಯ ತಲೆಗೆ ಜಜ್ಜಿ ಅತ್ಯಂತ ಭೀಕರವಾಗಿ ಹತ್ಯೆಗೈದು ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಮಗುವಿನ ಕಣ್ಣೀರು ಕಲ್ಲು ಹೃದಯವನ್ನೂ ಕರಗಿಸಿತು!
ಬೆಳಗ್ಗೆ ಜಮೀನಿಗೆ ತೆರಳಿದ ಗ್ರಾಮಸ್ಥರಿಗೆ ಸ್ನೇಹಾಳ ಶವ ಪತ್ತೆಯಾಗಿದೆ. ಆದರೆ ಅಲ್ಲಿ ಕಂಡ ದೃಶ್ಯ ಮಾತ್ರ ಎಂಥವರ ಎದೆಯನ್ನಾದರೂ ಝಲ್ಲೆನ್ನಿಸುವಂತಿತ್ತು. ತಾಯಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದರೆ, ಆಕೆಯ ಪರಿಸ್ಥಿತಿ ತಿಳಿಯದ ಒಂದೂವರೆ ವರ್ಷದ ಕಂದಮ್ಮ, ತಾಯಿಯ ಎದೆಯ ಮೇಲೆಯೇ ಬಿದ್ದು ನಾಲ್ಕೈದು ಗಂಟೆಗಳ ಕಾಲ ಅತ್ತೂ ಅತ್ತೂ ಸುಣ್ಣವಾಗಿತ್ತು. ಅತ್ತು ಅತ್ತು ಕಣ್ಣೀರೆಲ್ಲ ಬತ್ತಿಹೋಗಿ, ಸೋತು ಸೊರಗಿದ ಆ ಮಗು ತಾಯಿಯ ಶವಕ್ಕೆ ಅಂಟಿಕೊಂಡು ಮಲಗಿದ್ದ ದೃಶ್ಯವನ್ನು ಕಂಡ ಪ್ರತ್ಯಕ್ಷದರ್ಶಿಗಳ ಕಣ್ಣಲ್ಲೂ ನೀರು ಜಾರುವಂತೆ ಮಾಡಿತು.
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಸಿಂಧನೂರು ಗ್ರಾಮಾಂತರ ಠಾಣೆಯ ಪೊಲೀಸರು, ಮೃತಳ ಪತಿ ಹಾಗೂ ಪ್ರಿಯಕರ ಶುಭಂ ಇಬ್ಬರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರು. ಆಗಲೇ ಕೊಲೆಯ ಹಿಂದಿನ ಅಸಲಿ ರಹಸ್ಯ ಬಯಲಾಗಿದ್ದು!
ಆರೋಪಿ ಶುಭಂಗೂ ಈಗಾಗಲೇ ಮದುವೆಯಾಗಿತ್ತು. ಆದರೆ, ಶುಭಂ ಮತ್ತು ಸ್ನೇಹಾ ನಡುವಿನ ಅಕ್ರಮ ಸಂಬಂಧದ ವಿಚಾರ ಶುಭಂ ಪತ್ನಿಗೆ ತಿಳಿದುಹೋಗಿತ್ತು. "ನೀನು ಸ್ನೇಹಾಳನ್ನು ಬಿಡದಿದ್ದರೆ ನಾನು ನಿನಗೆ ಡೈವೋರ್ಸ್ ನೀಡುತ್ತೇನೆ" ಎಂದು ಆತನ ಹೆಂಡತಿ ಪ್ರತಿದಿನ ಗಲಾಟೆ ಮಾಡುತ್ತಿದ್ದಳು. ಇನ್ನೊಂದೆಡೆ ಶುಭಂ ಸ್ನೇಹಾಳಿಗೆ ಬುದ್ಧಿ ಹೇಳಲು ಯತ್ನಿಸಿದಾಗ, "ನಾನು ಬೇಕಿದ್ದರೆ ನನ್ನ ಗಂಡನನ್ನು ಬಿಡುತ್ತೇನೆ, ಆದರೆ ನಿನ್ನನ್ನು ಬಿಡಲು ಸಾಧ್ಯವೇ ಇಲ್ಲ" ಎಂದು ಆಕೆ ಹಠ ಹಿಡಿದಿದ್ದಳು.
ಇದರ ಮಧ್ಯೆ ಸ್ನೇಹಾಳಿಗೆ ಬೇರೆ ಬೇರೆ ಪುರುಷರ ಜೊತೆಯೂ ಸಂಪರ್ಕವಿತ್ತು ಎಂಬ ಅನುಮಾನ ಶುಭಂಗೆ ಕಾಡತೊಡಗಿತ್ತು. ಈಕೆಯ ಕಾಟದಿಂದ ತಪ್ಪಿಸಿಕೊಂಡು, ಆಕೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸಿದರೆ ಮಾತ್ರ ನಾನು ನನ್ನ ಹೆಂಡತಿಯೊಂದಿಗೆ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಭಾವಿಸಿದ ಶುಭಂ, ಸಂಚು ರೂಪಿಸಿ ಈ ಕೊಲೆ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಶ್ಲಾಘನೆ
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ತಕ್ಷಣವೇ ಕಾರ್ಯಪ್ರವೃತ್ತರಾದ ಸಿಂಧನೂರು ಗ್ರಾಮಾಂತರ ಪೊಲೀಸರು, ಹಂತಕ ಶುಭಂ ಎಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ. ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಪ್ರಸ್ತುತ ಸಿಂಧನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.