Haveri Savanur taluk Daughter-in-law: ಹಾವೇರಿಯ ಜಿಲ್ಲೆಯ ಸವಣೂರು ತಾಲ್ಲೂಕಿನ ಬೈರಾಪೂರ ಗ್ರಾಮದಲ್ಲಿ ನಡೆದಿರುವ ದಾರುಣ ಘಟನೆಯೊಂದು ಇಡೀ ಕುಟುಂಬಕ್ಕೆ ದುಃಖ ತರಿಸಿದೆ. ಗಂಡನ ಮನೆಯವರ ನಿರಂತರ ಕಿರುಕುಳ ತಾಳಲಾರದೆ ಮನನೊಂದ ಗೃಹಿಣಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಮೃತರನ್ನು ಸುನಿತಾ ಎಂದು ಗುರುತಿಸಲಾಗಿದ್ದು, ಸುನಿತಾ ಬೈರಾಪೂರ ಗ್ರಾಮದ ರಾಮಪ್ಪ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಗಂಡನ ಮನೆಯವರ ಕಡೆಯಿಂದ ಆರಂಭವಾದ ಕಿರುಕುಳ ತಡೆಯಲಾಗದೇ ಸೊಸೆ ದೃಢ ನಿರ್ಧಾರ ಕೈಗೊಂಡಿದ್ದಾರೆ. ಈ ಎಲ್ಲವನ್ನು ಮೃತರ ಕುಟುಂಬಸ್ಥರು ಕಣ್ಣೀರಿಡುತ್ತಾ ಆರೋಪಿಸಿದ್ದಾರೆ.
ಪ್ರೀತಿ, ಎರಡನೇ ವಿವಾಹ ಹಾಗೂ ಜಾತಿ ನಿಂದನೆ: 4 ವರ್ಷಗಳ ಪ್ರೀತಿ ಮದುವೆ ಬಳಿಕ ದುರಂತ ಅಂತ್ಯವಾಗಿದೆ. ಗಂಡನ ಮನೆಯವರ ಮೇಲೆ ಆರೋಪ ಮಾಡಲಾಗಿದೆ. ಸುನಿತಾ ಹಾಗೂ ರಾಮಪ್ಪ ಇಬ್ಬರೂ ಒಂದೇ ಊರಿನವರಾಗಿದ್ದು, ಕಳೆದ 4 ವರ್ಷಗಳಿಂದ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದರು. ವಿಶೇಷವೆಂದರೆ, ಸುನಿತಾ ಹಾಗೂ ರಾಮಪ್ಪ ಇಬ್ಬರಿಗೂ ಸಹ ಇದು ಎರಡನೇ ವಿವಾಹವಾಗಿತ್ತು. ರಾಮಪ್ಪ ಕುರುಬ ಸಮುದಾಯಕ್ಕೆ ಸೇರಿದವರು ಆಗಿದ್ರೆ, ಸುನಿತಾ ಲಂಬಾಣಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಯುವತಿಯಾಗಿದ್ದರು.
ಪರಿಶಿಷ್ಟ ಜಾತಿಗೆ ಸೇರಿದ ಯುವತಿಯನ್ನು ಮದುವೆಯಾಗಿದ್ದರಿಂದಲೇ ಮನೆಯಲ್ಲಿ ಸಮಸ್ಯೆಗಳು ಆರಂಭವಾದವು ಎಂದು ಆರೋಪಿಸಲಾಗಿದೆ. ಮನೆಯಲ್ಲಿ ಇರುವ ಎರಡನೇ ಮಗನಿಗೆ ಈ ಕೆಳ ಜಾತಿಯ ಸೊಸೆಯಿಂದ ಬೇರೆ ಕಡೆ ವರ ಸಿಗುತ್ತಿಲ್ಲ ಎಂದು ದೂರಿದ ಗಂಡನ ಮನೆಯವರು, ಸೊಸೆಯಾದ ಸುನಿತಾಳನ್ನು ನಿರಂತರವಾಗಿ ಜರಿಯಲು ಶುರು ಮಾಡಿದ್ದರು. ಜಾತಿಯ ಕಾರಣ ಮುಂದಿಟ್ಟುಕೊಂಡು ಹಾಗೂ ಮೈದುನನ ಮದುವೆಗೆ ಈ ಮದುವೆಯೇ ಅಡ್ಡಿಯಾಗಿದೆ ಎಂಬ ಮೂದಲಿಕೆಯೊಂದಿಗೆ ನಿತ್ಯವೂ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.
ಅತ್ತೆ, ಮಾವ, ಗಂಡ ಹಾಗೂ ಸಂಬಂಧಿಕರ ವಿರುದ್ಧ FIR ದಾಖಲು: ಪಂಚಾಯತ್ ಮಾತುಕತೆ ವಿಫಲವಾಗಿ ಸೊಸೆ ಬಲಿ
ಮನೆಗೆ ಬಂದ ಸೊಸೆಗೆ ಅತ್ತೆ, ಮಾವ, ಮೈದುನ ಹಾಗೂ ಪತಿ ಸೇರಿದಂತೆ ಇತರೆ ಕುಟುಂಬಸ್ಥರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಈ ಕಿರುಕುಳ ಅತಿರೇಕಕ್ಕೆ ಹೋದಾಗ, ಈ ಹಿಂದೆ ಗ್ರಾಮದ ಹಿರಿಯರು ಹಾಗೂ ಎರಡೂ ಕುಟುಂಬಗಳ ಸದಸ್ಯರ ಸಮ್ಮುಖದಲ್ಲಿ ದೊಡ್ಡದೊಂದು ರಾಜಿ ಪಂಚಾಯತ್ ಕೂಡ ನಡೆಸಲಾಗಿತ್ತು. ಇನ್ನು ಮುಂದೆ ಸುನಿತಾಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಹಿರಿಯರ ಮುಂದೆ ಎಲ್ಲರೂ ಒಪ್ಪಂದ ಮಾಡಿಕೊಂಡಿದ್ದರು.
ಆದರೆ, ರಾಜಿ ಪಂಚಾಯತ್ ಮುಗಿದ ಬೆನ್ನಲ್ಲೇ ಗಂಡನ ಮನೆಯವರ ಕಿರುಕುಳ ಪುನಃ ಮುಂದುವರಿದಿದೆ. ಹಿರಿಯರ ಮಾತಿಗೂ ಬೆಲೆಕೊಡದೆ ಮತ್ತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದರಿಂದ ನೊಂದ ಸುನಿತಾ ಮನನೊಂದು ಆತ್ಮಹತ್ಯೆಯ ಹಾದಿ ತುಳಿದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸವಣೂರು ಪೊಲೀಸ್ ಠಾಣೆಯಲ್ಲಿ ಅತ್ತೆ, ಮಾವ, ಮೈದುನ ಹಾಗೂ ಪತಿ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ದೂರು ದಾಖಲಾಗಿದೆ. ಪತಿಯ ಮನೆಯವರ ಕಿರುಕುಳವೇ ತನ್ನ ಮಗಳ ಸಾವಿಗೆ ನೇರ ಕಾರಣ ಎಂದು ಸುನಿತಾಳ ಕುಟುಂಬಸ್ಥರು ಪ್ರಕರಣ ದಾಖಲು ಮಾಡಿದ್ದಾರೆ. ಸವಣೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.