SOCIAL MEDIA

Newsletter

PARTNER SITES
Select Language Select State

ಮನೆಯ ಮಗಳಂತೆ ಸಾಕಿದ ಹಸುವಿಗೆ ಅದ್ಧೂರಿ ಸೀಮಂತ; ನೂರಾರು ಜನರಿಗೆ ಭರ್ಜರಿ ಊಟ

Hubballi Cow Baby Shower: ಇಲ್ಲೊಂದು ರೈತ ಕುಟುಂಬ ತಾವು ಸಾಕಿದ ಹಸುವನ್ನೇ ಮನೆಯ ಸದಸ್ಯೆಯಂತೆ ಭಾವಿಸಿ, ಅದಕ್ಕೂ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದೆ.

Written By Chetana Devarmani
Published: Nov 29, 2026, 17:27 IST | Updated: Nov 29, 2026, 17:29 IST
Join

ಹುಬ್ಬಳ್ಳಿ : ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಕುಟುಂಬದವರು ಸಂಪ್ರದಾಯಬದ್ಧವಾಗಿ ಸೀಮಂತ ಕಾರ್ಯಕ್ರಮ ಆಯೋಜಿಸುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ರೈತ ಕುಟುಂಬ ತಾವು ಸಾಕಿದ ಹಸುವನ್ನೇ ಮನೆಯ ಸದಸ್ಯೆಯಂತೆ ಭಾವಿಸಿ, ಅದಕ್ಕೂ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದೆ. ಹೂವಿನ ಅಲಂಕಾರ, ಹೊಸ ಬಟ್ಟೆ, ಪೂಜೆ, ಆರತಿ, ಬಂಧು-ಬಳಗದ ಸಂಭ್ರಮದ ನಡುವೆ ನಡೆದ ಈ ಅಪರೂಪದ ಕಾರ್ಯಕ್ರಮ ಇದೀಗ ಎಲ್ಲರ ಗಮನ ಸೆಳೆದಿದೆ.

ಹುಬ್ಬಳ್ಳಿ ತಾಲ್ಲೂಕಿನ ಬಿಡ್ನಾಳದ ಬ್ರಹ್ಮಲಿಂಗೇಶ್ವರ ನಗರದಲ್ಲಿ ರೈತ ನಿಂಗಪ್ಪ ಬಸಪ್ಪ ಯಲಿಗಾರ ಅವರ ಮನೆಯಲ್ಲಿ ಈ ವಿಶೇಷ ಸೀಮಂತ ಕಾರ್ಯಕ್ರಮ ನಡೆಯಿತು. ತಾವು ಪ್ರೀತಿಯಿಂದ ಸಾಕುತ್ತಿರುವ ಹಸು ಗರ್ಭಧರಿಸಿರುವ ಹಿನ್ನೆಲೆಯಲ್ಲಿ, ಮಾನವರ ಮನೆಯ ಸಂಪ್ರದಾಯದಂತೆಯೇ ಏಳನೇ ತಿಂಗಳಲ್ಲಿ ಸೀಮಂತ ಕಾರ್ಯವನ್ನು ಆಯೋಜಿಸಿದ್ದರು.

ಹೂವು, ಹೊಸ ಬಟ್ಟೆಯಿಂದ ಕಂಗೊಳಿಸಿದ ಗೋಮಾತೆ

ಸೀಮಂತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಯಲಿಗಾರ ಅವರ ಮನೆಯನ್ನು ಹೂವುಗಳು, ತಳಿರು ತೋರಣಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಮನೆಯ ಸದಸ್ಯೆಯಂತೆ ಪ್ರೀತಿಯಿಂದ ಸಾಕುತ್ತಿರುವ ಹಸುವಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು. ಹೂವುಗಳಿಂದ ಶೃಂಗರಿಸಿ, ಹೊಸ ಬಟ್ಟೆ ತೊಡಿಸಿ ಹಸುವನ್ನು ಸಿಂಗರಿಸಲಾಗಿತ್ತು.

ಬಳಿಕ ಹಸುವಿನ ಹಣೆಗೆ ಕುಂಕುಮ ಹಚ್ಚಿ, ಆರತಿ ಬೆಳಗಿ ಸಂಪ್ರದಾಯಬದ್ಧವಾಗಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಹಣ್ಣು-ಹಂಪಲು ಹಾಗೂ ವಿವಿಧ ಖಾದ್ಯಗಳನ್ನು ಅರ್ಪಿಸಿ ಹಸುವಿಗೆ ಶುಭ ಹಾರೈಸಲಾಯಿತು. ಮನೆಯ ಸೀಮಂತ ಕಾರ್ಯಕ್ರಮದಲ್ಲಿ ಪಾಲಿಸುವ ಸಂಪ್ರದಾಯಗಳನ್ನು ಇಲ್ಲಿಯೂ ಅನುಸರಿಸಿದ್ದು ವಿಶೇಷವಾಗಿತ್ತು.

ಮೂವರು ಶ್ರೀಗಳಿಂದ ಆಶೀರ್ವಾದ

ಈ ಅಪರೂಪದ ಕಾರ್ಯಕ್ರಮಕ್ಕೆ ಧಾರ್ಮಿಕ ಗಣ್ಯರೂ ಆಗಮಿಸಿ ಆಶೀರ್ವದಿಸಿದರು. ಗದಗ ಜಿಲ್ಲೆಯ ಅಂತೂರು-ಬೆಂತೂರು ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳು, ಕುಂದಗೋಳದ ಬಸವಣ್ಣ ಮಠದ ಶ್ರೀಗಳು ಹಾಗೂ ಮಣಕವಾಡದ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಹಸುವಿಗೆ ಆಶೀರ್ವಾದ ನೀಡಿದರು.

ಮನೆಯ ಬಂಧು-ಬಳಗದವರು, ಸ್ಥಳೀಯರು ಹಾಗೂ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಮನೆಯ ಬೀಗರು ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಸಂಪ್ರದಾಯವನ್ನೂ ನೆರವೇರಿಸಲಾಯಿತು. ವಿಶೇಷವಾಗಿ ಪಾಯಸ, ಹೋಳಿಗೆ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ನೂರಾರು ಜನರಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇಡೀ ಕಾರ್ಯಕ್ರಮದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು.

‘ಹಸುವಿಗೆ ಸೀಮಂತ ಮಾಡುತ್ತಿರುವುದು ಇದೇ ಮೊದಲು’

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ‘ಹಸುವಿಗೆ ಸೀಮಂತ ಕಾರ್ಯ ನಡೆಯುತ್ತಿರುವುದನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಮನುಷ್ಯರಿಗೆ ಮಾಡುವ ರೀತಿಯಲ್ಲಿಯೇ ಹಸುವಿಗೂ ಸಂಪ್ರದಾಯಬದ್ಧವಾಗಿ ಸೀಮಂತ ಮಾಡಿರುವುದು ಅಪರೂಪದ ಸಂಗತಿ. ಇಂತಹ ಕಾರ್ಯಕ್ರಮಗಳು ಪ್ರಾಣಿಗಳ ಮೇಲಿನ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುತ್ತವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯಲಿಗಾರ ಕುಟುಂಬದ ಸಂಬಂಧಿ ನಾಗವೇಣಿ ಮಾತನಾಡಿ, ಮನುಷ್ಯರು ಮತ್ತು ಮೂಕ ಪ್ರಾಣಿಗಳ ನಡುವೆ ಅವಿನಾಭಾವ ಸಂಬಂಧವಿದೆ. ಪ್ರಾಣಿಗಳ ಮೇಲಿನ ಪ್ರೀತಿ ಕೇವಲ ಮಾತಿಗೆ ಸೀಮಿತವಾಗದೆ, ಅವುಗಳ ಸಂತೋಷ ಮತ್ತು ಆರೈಕೆಯಲ್ಲಿಯೂ ವ್ಯಕ್ತವಾಗಬೇಕು. ಈ ಕಾರ್ಯಕ್ರಮ ಅದಕ್ಕೆ ಉತ್ತಮ ಉದಾಹರಣೆ ಎಂದರು.

‘ಇದು ಹಸುವಿಗೆ ಎರಡನೇ ಸೀಮಂತ’

ಕುಟುಂಬದ ಸದಸ್ಯರಾದ ನೀಲವ್ವ ಬಳ್ಳಾರಿ ಮತ್ತು ಸಾವಕ್ಕ ಮಾತನಾಡಿ, ‘ನಮ್ಮ ಮನೆಯಲ್ಲಿ ಹಸುವಿಗೆ ಸೀಮಂತ ಮಾಡುತ್ತಿರುವುದು ಇದೇ ಮೊದಲಲ್ಲ. ಇದು ಎರಡನೇ ಬಾರಿ. ಹಸು ಗರ್ಭಧರಿಸಿದಾಗ ಏಳನೇ ತಿಂಗಳಲ್ಲಿ ಈ ರೀತಿಯ ಕಾರ್ಯಕ್ರಮ ಆಯೋಜಿಸುವುದು ನಮ್ಮ ಸಂಪ್ರದಾಯ. ಮನುಷ್ಯರಿಗೆ ಸೀಮಂತ ಮಾಡುವಂತೆಯೇ ಹಸುವಿಗೂ ಎಲ್ಲ ವಿಧಿವಿಧಾನಗಳನ್ನು ನೆರವೇರಿಸಿದ್ದೇವೆ. ಬಂಧು-ಬಳಗ ಹಾಗೂ ಸ್ಥಳೀಯರಿಗೆ ಪಾಯಸ, ಹೋಳಿಗೆ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ಊಟ ಹಾಕಿಸಿದ್ದೇವೆ. ನಮ್ಮ ಕುಟುಂಬದ ಸದಸ್ಯರಂತೆಯೇ ಹಸುಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ’ ಎಂದು ತಿಳಿಸಿದರು.

ಮೂಕ ಪ್ರಾಣಿಗಳ ಮೇಲಿನ ಪ್ರೀತಿ ಸಾರಿದ ರೈತ ಕುಟುಂಬ

ರೈತ ಮುಖಂಡ ಪರ್ವತಪ್ಪ ಬಳಗಣ್ಣವರ ಮಾತನಾಡಿ, ರೈತರ ಕಷ್ಟ-ಸುಖಗಳಲ್ಲಿ ಹಸುಗಳ ಪಾತ್ರ ಬಹಳ ಮುಖ್ಯ. ಹೀಗಾಗಿ ಅವುಗಳ ರಕ್ಷಣೆ ಮತ್ತು ಆರೈಕೆ ನಮ್ಮ ಮೊದಲ ಆದ್ಯತೆಯಾಗಬೇಕು. ನಿಂಗಪ್ಪ ಯಲಿಗಾರ ಅವರು ಮೂಕ ಪ್ರಾಣಿಯನ್ನೂ ಮನೆಯ ಮಗಳಂತೆ ಕಂಡು, ಅದರ ಸಂತೋಷಕ್ಕಾಗಿ ಸೀಮಂತ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ, ಕೃಷಿ ಮತ್ತು ಹೈನುಗಾರಿಕೆಗೆ ನೆರವಾಗುವ ಪ್ರಾಣಿಗಳನ್ನು ಕೇವಲ ಆರ್ಥಿಕ ದೃಷ್ಟಿಯಿಂದ ನೋಡುವ ಬದಲು, ಅವುಗಳನ್ನೂ ಕುಟುಂಬದ ಸದಸ್ಯರಂತೆ ಪ್ರೀತಿಸಿ ಕಾಳಜಿ ವಹಿಸಬೇಕು ಎಂಬ ಸಂದೇಶವನ್ನು ಯಲಿಗಾರ ಕುಟುಂಬದ ಈ ವಿಶೇಷ ಕಾರ್ಯಕ್ರಮ ಸಾರಿದೆ. ಹುಬ್ಬಳ್ಳಿಯಲ್ಲಿ ನಡೆದ ಈ ಅಪರೂಪದ ಗೋವಿನ ಸೀಮಂತ ಕಾರ್ಯಕ್ರಮ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ZEENEWS TRENDING STORIES