SOCIAL MEDIA

Newsletter

PARTNER SITES
Select Language Select State

ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಅದ್ಭುತ ಸಾಧನೆ.. 2 ವಿಶೇಷವಾದ ತಂತ್ರಜ್ಞಾನ ಆವಿಷ್ಕಾರ, ರಾಷ್ಟ್ರಮಟ್ಟಕ್ಕೆ ಆಯ್ಕೆ

ಮಕ್ಕಳ ಸುರಕ್ಷತೆ ಹಾಗೂ ಆರೋಗ್ಯದ ಕಾಳಜಿಯಿಂದ ತಯಾರಿಸಿದ ಎರಡು ವಿಜ್ಞಾನ ಮಾದರಿಗಳು ಇದೀಗ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ. ಒಂದೆಡೆ ಶಾಲೆಯ ಬಿಸಿಯೂಟದ ಆಹಾರ ಸುರಕ್ಷತೆ, ಮತ್ತೊಂದೆಡೆ ಶಾಲಾ ಮಕ್ಕಳ ರಸ್ತೆ ಸುರಕ್ಷತೆ.

Written By Bhimappa
Published: Oct 03, 2026, 11:53 AM IST | Updated: Oct 03, 2026, 12:08 PM IST
Image Credit: Government_School
Join

PM Sri Government Model Higher Primary School: ಸರ್ಕಾರಿ ಶಾಲೆ ಅಂದ್ರೆ ಬರೀ ಪಾಠ, ಪುಸ್ತಕ ಅನ್ನೋ ಮಾತಿದೆ. ಆದ್ರೆ ಈ ಸರ್ಕಾರಿ ಶಾಲೆ ಮಕ್ಕಳು ಮಾತ್ರ ತಮ್ಮದೇ ಐಡಿಯಾದಿಂದ ಹೊಸ ಆವಿಷ್ಕಾರ ಮಾಡಿದ್ದಾರೆ. ಮಕ್ಕಳ ಸುರಕ್ಷತೆ ಹಾಗೂ ಆರೋಗ್ಯದ ಕಾಳಜಿಯಿಂದ ತಯಾರಿಸಿದ ಎರಡು ವಿಜ್ಞಾನ ಮಾದರಿಗಳು ಇದೀಗ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ. ಒಂದೆಡೆ ಶಾಲೆಯ ಬಿಸಿಯೂಟದ ಆಹಾರ ಸುರಕ್ಷತೆ, ಮತ್ತೊಂದೆಡೆ ಶಾಲಾ ಮಕ್ಕಳ ರಸ್ತೆ ಸುರಕ್ಷತೆ. ಈ ಎರಡಕ್ಕೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಲು ವಿದ್ಯಾರ್ಥಿಗಳು ಮಾಡಿರುವ ಪ್ರಯತ್ನ ಹೊಸತನವನ್ನು ಪರಿಚಯಿಸಿದೆ. ಮಕ್ಕಳ ಸುರಕ್ಷತೆ ಹಾಗೂ ಆರೋಗ್ಯದ ಕಾಳಜಿಯಿಂದ ತಯಾರಿಸಿದ ಎರಡು ವಿಜ್ಞಾನ ಮಾದರಿಗಳು ಇದೀಗ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ. ಒಂದೆಡೆ ಶಾಲೆಯ ಬಿಸಿಯೂಟದ ಆಹಾರ ಸುರಕ್ಷತೆ, ಮತ್ತೊಂದೆಡೆ ಶಾಲಾ ಮಕ್ಕಳ ರಸ್ತೆ ಸುರಕ್ಷತೆ ಉದ್ದೇಶದಿಂದ ಇದನ್ನು ತಯಾರು ಮಾಡಲಾಗಿದೆ.

ಸಾಮಾನ್ಯವಾಗಿ ಶಾಲೆಯಲ್ಲಿ ಮಕ್ಕಳು ಪಾಠ ಕಲಿಯುತ್ತಾರೆ. ವಿಜ್ಞಾನ ಪ್ರಯೋಗ ಮಾಡುತ್ತಾರೆ. ಆದ್ರೆ ರಾಷ್ಟ್ರಮಟ್ಟದ ಅಂಗಳಕ್ಕೆ ಗದಗನ ಮಕ್ಕಳು. ಇದು ಬರೀ ಶಾಲಾ ಮಟ್ಟದ ಪ್ರಯೋಗವಾಗಿಲ್ಲ. ಕೇಂದ್ರ ಸರ್ಕಾರದ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಗೆ ಮಾದರಿಗಳು ಆಯ್ಕೆ. ಹೌದು ಇದು ಗದಗ ನಗರದ ಎಸ್‌.ಎಂ. ಕೃಷ್ಣನಗರದ ಪಿಎಂ ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ.12. ಇಲ್ಲಿನ 9ನೇ ತರಗತಿ ವಿದ್ಯಾರ್ಥಿಗಳು, ದಾವಲಸಾಬ ಒಂಟಿ, ಅಜಿತ್ ಪಾಟೀಲ್ ತಮ್ಮ ಶಾಲೆಯಲ್ಲೇ ಎದುರಾಗುವ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ಹುಡುಕಿದ್ದಾರೆ.

ವಿಜ್ಞಾನ ಶಿಕ್ಷಕ ಮಂಜುನಾಥ್ ಹುಯಿಲಗೋಳ ಮಾರ್ಗದರ್ಶನದಲ್ಲಿ ಎರಡು ವಿಭಿನ್ನ ವಿಜ್ಞಾನ ಮಾದರಿಗಳನ್ನು ತಯಾರಿಸಿದ್ದಾರೆ. ಈ ಎರಡೂ ಮಾದರಿಗಳು ಇದೀಗ ಕೇಂದ್ರ ಸರ್ಕಾರದ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾಗಿವೆ. ಮೊದಲ ಆವಿಷ್ಕಾರ, ಬಿಸಿಯೂಟದ ಸುರಕ್ಷತೆಗೆ ಸಂಬಂಧಿಸಿದೆ. ಶಾಲಾ ಮಕ್ಕಳಿಗೆ ಪ್ರತಿದಿನ ನೀಡುವ ಬಿಸಿಯೂಟದ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದ್ರೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತೆ. ಇದನ್ನೇ ಗಮನದಲ್ಲಿಟ್ಟುಕೊಂಡು ಮಕ್ಕಳು ಆವಿಷ್ಕಾರಕ್ಕೆ ಮುಂದಾಗಿದ್ದಾರೆ.

'ಮಿಡ್ ಡೇ ಮೀಲ್ ಸೇಫ್ಟಿ ಫಾರ್ ಸ್ಕೂಲ್’ ಎಂಬ ವಿಜ್ಞಾನ ಮಾದರಿ ತಯಾರಿಸಿ, ಬಿಸಿಯೂಟಕ್ಕೆ ಬಳಕೆಯಾಗುವ ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಹೈಟೆಕ್ ಬಾಕ್ಸ್‌ನ ಮಾದರಿ ರೆಡಿ ಮಾಡಿದ್ದಾರೆ. ಆಹಾರ ಪದಾರ್ಥ ಕೊಳೆಯಲು ಆರಂಭವಾದಾಗ ಅದರಿಂದ ಹೊರಬರುವ ಅನಿಲಗಳನ್ನು ಪತ್ತೆಹಚ್ಚುವ ರೀತಿಯಲ್ಲಿ ಸೆನ್ಸಾರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ವಿಶೇಷವಾಗಿ ಕೊಳೆಯುವ ಆಹಾರದಿಂದ ಉತ್ಪತ್ತಿಯಾಗುವ ಮಿಥೇನ್ ಅನಿಲವನ್ನು ಪತ್ತೆಹಚ್ಚುವ ತಂತ್ರಜ್ಞಾನ ಬಳಸಲಾಗಿದೆ. ಅಂದ್ರೆ, ಆಹಾರ ಕೆಡುವ ಹಂತದಲ್ಲಿದೆಯಾ..?, ಆಹಾರ ಸುರಕ್ಷಿತವಾಗಿದೆಯಾ..? ಎಂಬುದನ್ನು ಪತ್ತೆ ಹಚ್ಚಲು ಈ ಮಾದರಿ ನೆರವಾಗುವ ಉದ್ದೇಶ ಹೊಂದಿದೆ.

ಇದೊಂದೆ ಅಲ್ಲ ಇನ್ನೊಂದು ಮಾದರಿ ಮಾಡಿ ಈ ಸರ್ಕಾರಿ ಶಾಲೆಯ ಮಕ್ಕಳು ಸೈ ಎನಿಸಿಕೊಂಡಿದ್ದಾರೆ. ಶಾಲೆ ಬಿಡುವ ಸಮಯದಲ್ಲಿ ಮಕ್ಕಳ ಸುರಕ್ಷತೆ ಕುರಿತು, ಶಾಲೆಯ ಗೇಟ್‌ನಿಂದ ಮಕ್ಕಳು ಹೊರಬರುತ್ತಿದ್ದಂತೆ ವಾಹನ ಸಂಚಾರವೂ ಇರುತ್ತೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಅಪಾಯವಾಗದಂತೆ ಮಾಡಲು ವಿದ್ಯಾರ್ಥಿಗಳು ತಯಾರಿಸಿರುವ ಮತ್ತೊಂದು ಮಾದರಿ. 'ಸ್ಕೂಲ್ ಝೋನ್ ಆಟೋಮ್ಯಾಟಿಕ್ ಸ್ಪೀಡ್ ಬ್ರೇಕರ್.’ ಈ ಮಾದರಿಯಲ್ಲಿ ಸೆನ್ಸಾರ್ ತಂತ್ರಜ್ಞಾನ ಬಳಸಲಾಗಿದೆ.

ಶಾಲೆಯಿಂದ ಮಕ್ಕಳು ಹೊರಬಂದು ರಸ್ತೆ ದಾಟುವ ಸಂದರ್ಭದಲ್ಲಿ ಅವರ ಚಲನವಲನವನ್ನು ಸೆನ್ಸಾರ್ ಪತ್ತೆ ಹಚ್ಚುತ್ತೆ. ಮಕ್ಕಳು ರಸ್ತೆ ದಾಟುವ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಸೂಚನೆ ನೀಡುವ ವ್ಯವಸ್ಥೆ ಸಹ ಇದ್ರಲ್ಲಿ ಅಳವಡಿಸಲಾಗಿದೆ. ಅಗತ್ಯವಿದ್ದಾಗ ಆಟೋಮ್ಯಾಟಿಕ್ ರೋಡ್ ಬ್ರೇಕರ್ ಕಾರ್ಯನಿರ್ವಹಿಸುವ ಮಾದರಿ ತಯಾರಿಸಿ, ಮಕ್ಕಳು ಸುರಕ್ಷಿತ ವಲಯ ಪ್ರವೇಶಿಸಿದ ಬಳಿಕ ಮತ್ತೆ ರಸ್ತೆ ಸಂಚಾರ ಆರಂಭವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಂದ್ರೆ ಮಕ್ಕಳು ರಸ್ತೆ ದಾಟುವಾಗ ವಾಹನಗಳಿಗೆ ಬ್ರೇಕ್ ಬೀಳುತ್ತೆ. ಮಕ್ಕಳು ಸುರಕ್ಷಿತ ಸ್ಥಳಕ್ಕೆ ಹೋದ ಬಳಿಕ ಮತ್ತೆ ಸಂಚಾರ ಆರಂಭವಾಗುತ್ತೆ. ಇದೇ ಈ ಮಾಡೆಲ್‌ನ ಪ್ರಮುಖ ಉದ್ದೇಶ.

ಮಕ್ಕಳು ಇಂತಹ ಮಾಡೆಲ್ ತಯಾರಿಸಲು ಕಾರಣ, ಶಾಲೆಯಲ್ಲಿ ಮಕ್ಕಳಿಗೆ ನೀಡುವ ಆಹಾರ ಸುರಕ್ಷಿತವಾಗಿರಬೇಕು ಅನ್ನೋ ಉದ್ದೇಶ. ಕೊಳೆತ ಆಹಾರದಿಂದ ಹೊರಬರುವ ಅನಿಲವನ್ನು ಸೆನ್ಸಾರ್ ಮೂಲಕ ಪತ್ತೆಹಚ್ಚುವ ಪ್ರಯತ್ನ. ಜೊತೆಗೆ ಶಾಲೆಯಲ್ಲಿ ಮಕ್ಕಳಿಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಅನ್ನೋ ಉದ್ದೇಶದಿಂದ ಈ ಮಾಡೆಲ್ ತಯಾರಿಸಲಾಗಿದೆ. ನಮ್ಮ ಮಾಡೆಲ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರೋದು ತುಂಬಾ ಖುಷಿಯ ವಿಚಾರ. ದೇಶದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಹಾಗೂ ವಿಜ್ಞಾನ ಆಲೋಚನೆಗಳ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಸ್ಪರ್ಧೆ ನಡೆಯುತ್ತಿದೆ. ಅದರಲ್ಲೂ ಒಂದೇ ಶಾಲೆಯ ವಿದ್ಯಾರ್ಥಿಗಳ ಎರಡು ವಿಜ್ಞಾನ ಮಾದರಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರೋದು ವಿಶೇಷ.

ಅಕ್ಟೋಬರ್ 12 ಮತ್ತು 13 ರಂದು ನವದೆಹಲಿಯಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ನಡೆಯಲಿದೆ. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ನಮ್ಮ ಸರ್ಕಾರಿ ಶಾಲೆ ಮಕ್ಕಳು ತಮ್ಮ ಆವಿಷ್ಕಾರವನ್ನು ಪ್ರದರ್ಶಿಸಲಿದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧೆಗೆ ಎರಡು ಮಾಡೆಲ್‌ಗಳು ಆಯ್ಕೆಯಾಗಿರೋದು ನಮಗೆ ಹೆಮ್ಮೆಯ ವಿಷಯ. ಮಕ್ಕಳು ಇನ್ನಷ್ಟು ಹೊಸ ಆಲೋಚನೆಗಳನ್ನು ಮಾಡಬೇಕು ಅನ್ನೋ ಉದ್ದೇಶದಿಂದ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ಶಾಲೆಯ ಶಿಕ್ಷಕರು ಹೇಳಿದ್ದಾರೆ.

ಸರ್ಕಾರಿ ಶಾಲೆ ಅಂದ್ರೆ ಕಡಿಮೆ ಏನಿಲ್ಲ. ಸೌಲಭ್ಯಗಳು ಸೀಮಿತವಾಗಿದ್ದರೂ, ಆಲೋಚನೆಗೆ ಮಿತಿಯಿಲ್ಲ ಅನ್ನೋದನ್ನ ಈ ಮಕ್ಕಳು ತೋರಿಸಿದ್ದಾರೆ. ಬಿಸಿಯೂಟದ ಸುರಕ್ಷತೆ ಇರಲಿ. ಶಾಲಾ ಮಕ್ಕಳ ರಸ್ತೆ ಸುರಕ್ಷತೆ ಇರಲಿ. ತಮ್ಮ ಸುತ್ತಮುತ್ತಲಿನ ಸಮಸ್ಯೆಯನ್ನೇ ಗುರುತಿಸಿ, ಅದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಪರಿಹಾರ ಹುಡುಕಿದ್ದಾರೆ. ಪುಸ್ತಕದಲ್ಲಿ ವಿಜ್ಞಾನ ಕಲಿತ ಮಕ್ಕಳು, ಅದೇ ವಿಜ್ಞಾನವನ್ನ ತಮ್ಮ ಸುತ್ತಲಿನ ಬದುಕಿನಲ್ಲಿ ಬಳಸಿಕೊಂಡಿದ್ದಾರೆ.
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES