• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಗದಗ ಡಿಸಿ-ಎಡಿಸಿ ಕಾರು ಜಪ್ತಿ!

ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಗದಗ ಡಿಸಿ-ಎಡಿಸಿ ಕಾರು ಜಪ್ತಿ!

ಸಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತರಿಗೆ ನ್ಯಾಯಾಲಯದ ಆದೇಶದಂತೆ ಹೆಚ್ಚುವರಿ ಪರಿಹಾರ ಪಾವತಿಯಾಗದ ಹಿನ್ನೆಲೆಯಲ್ಲಿ ಗದಗದಲ್ಲಿ ಮತ್ತೆ ಜಪ್ತಿ ಕ್ರಮಕ್ಕೆ ರೈತರು ಮುಂದಾಗಿದ್ದಾರೆ. ಡಿಸಿ ಕಚೇರಿ ಪರಿಕರ ಹಾಗೂ ಸರ್ಕಾರಿ ವಾಹನಗಳ ಜಪ್ತಿಗೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಕಾರುಗಳನ್ನ ಜಪ್ತಿ ಮಾಡಲು ರೈತರು ಹಾಗೂ ವಕೀಲರು ಮುಂದಾಗಿದ್ದಾರೆ. ಪರಿಹಾರ ಪಾವತಿಯಾಗುವವರೆಗೆ ಕಾನೂನು ಹೋರಾಟ ಮುಂದುವರಿಸುವುದಾಗಿ ರೈತರು ತಿಳಿಸಿದ್ದಾರೆ.

Reported ByPuttaraj K AlurEdited ByPuttaraj K Alur
Published: Sep 23, 2026, 03:50 PM IST|Updated: Sep 23, 2026, 04:16 PM IST
joinshare
ದಶಕಗಳು ಕಳೆದರೂ ರೈತರಿಗೆ ಸಿಗದ ಪರಿಹಾರ; ಗದಗ ಡಿಸಿ-ಎಡಿಸಿ ಕಾರು ಜಪ್ತಿ!
Image Credit: Gadag DC and ADC Cars

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Singatalur Lift Irrigation Project: ಸಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತರಿಗೆ ನ್ಯಾಯಾಲಯದ ಆದೇಶದಂತೆ ಹೆಚ್ಚುವರಿ ಪರಿಹಾರ ಪಾವತಿಯಾಗದ ಹಿನ್ನೆಲೆಯಲ್ಲಿ ಗದಗದಲ್ಲಿ ರೈತರು ಹಾಗೂ ವಕೀಲರು ಜಿಲ್ಲಾಡಳಿತದ ವಿರುದ್ಧ ಮತ್ತೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ನ್ಯಾಯಾಲಯದ ಜಪ್ತಿ ಆದೇಶದ ಹಿನ್ನೆಲೆಯಲ್ಲಿ ಗದಗ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಅವರ ಸರ್ಕಾರಿ ವಾಹನಗಳನ್ನ ಜಪ್ತಿ ಮಾಡಲು ರೈತರು ಮುಂದಾಗಿರುವ ಘಟನೆ ಜಿಲ್ಲೆಯಲ್ಲಿ ಗಮನ ಸೆಳೆದಿದೆ.

ಮುಂಡರಗಿ ತಾಲೂಕಿನ ಮೇವುಂಡಿ, ಬರದೂರು ಸೇರಿದಂತೆ ವಿವಿಧ ಗ್ರಾಮಗಳ ರೈತರು ಸಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ತಮ್ಮ ಜಮೀನುಗಳನ್ನ ಕಳೆದುಕೊಂಡಿದ್ದಾರೆ. ಆದರೆ ಭೂಮಿ ನೀಡಿದ ಹಲವು ವರ್ಷಗಳ ಬಳಿಕವೂ ನಿರೀಕ್ಷಿತ ಪರಿಹಾರ ಸಿಗದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಹೆಚ್ಚುವರಿ ಪರಿಹಾರಕ್ಕಾಗಿ ರೈತರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಅಂತಿಮವಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.

ಎಕರೆಗೆ ₹30 ಲಕ್ಷ ಪರಿಹಾರಕ್ಕೆ ಕೋರ್ಟ್ ಆದೇಶ

ರೈತರ ಪ್ರಕಾರ, ಆರಂಭದಲ್ಲಿ ಭೂಮಿಗೆ ಎಕರೆಗೆ ₹50 ಸಾವಿರ ಪರಿಹಾರ ನಿಗದಿಪಡಿಸಲಾಗಿತ್ತು. ಆದರೆ ಈ ಮೊತ್ತ ತಮಗೆ ನ್ಯಾಯಸಮ್ಮತವಾಗಿಲ್ಲವೆಂದು ಹೇಳಿದ ರೈತರು 2017ರಿಂದ ಹೆಚ್ಚುವರಿ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ 2024ರಲ್ಲಿ ಎಕರೆಗೆ ₹30 ಲಕ್ಷದವರೆಗೆ ಪರಿಹಾರ ನೀಡುವಂತೆ ಆದೇಶ ಹೊರಬಂದಿದೆ ಎಂದು ರೈತರು ತಿಳಿಸಿದ್ದಾರೆ.

ಆದರೆ ನ್ಯಾಯಾಲಯದ ಆದೇಶ ಹೊರಬಂದು ವರ್ಷಗಳೇ ಕಳೆದರೂ ಪರಿಹಾರ ಮೊತ್ತ ಪಾವತಿಯಾಗಿಲ್ಲ ಎಂಬುದು ರೈತರ ಪ್ರಮುಖ ಆರೋಪ. ಕೆಲವು ಪ್ರಕರಣಗಳಲ್ಲಿ ರೈತರಿಗೆ ಬರಬೇಕಿರುವ ಪರಿಹಾರದ ಮೊತ್ತ ಕೋಟ್ಯಂತರ ರೂಪಾಯಿಗಳಷ್ಟಿದೆ ಎಂದು ತಿಳಿದುಬಂದಿದೆ. ಒಟ್ಟಾರೆ 14 ಪ್ರಕರಣಗಳಲ್ಲಿ ₹12 ಕೋಟಿಗೂ ಅಧಿಕ ಪರಿಹಾರ ಬಾಕಿಯಿದೆ ಎಂದು ರೈತರು ಹೇಳುತ್ತಿದ್ದಾರೆ. ಈ ನಡುವೆ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕರಣಗಳು ಗದಗ ಜಿಲ್ಲಾ ನ್ಯಾಯಾಲಯದಲ್ಲಿ ಮುಂದುವರಿದಿರುವುದು ನ್ಯಾಯಾಲಯದ ದಾಖಲೆಗಳಿಂದಲೂ ಗೋಚರಿಸುತ್ತದೆ.  

ಜಿಲ್ಲಾಧಿಕಾರಿ ಕಚೇರಿ ಪರಿಕರ, ವಾಹನ ಜಪ್ತಿಗೆ ಆದೇಶ

ನ್ಯಾಯಾಲಯದ ಆದೇಶದಂತೆ ಪರಿಹಾರ ಪಾವತಿಯಾಗದ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ನ್ಯಾಯಾಲಯವು ಜಿಲ್ಲಾಧಿಕಾರಿ ಕಚೇರಿಯ ಪರಿಕರಗಳು ಹಾಗೂ ಸರ್ಕಾರಿ ವಾಹನಗಳ ಜಪ್ತಿಗೆ ಆದೇಶ ನೀಡಿದೆ ಎಂದು ರೈತರು ಮತ್ತು ಅವರ ಪರ ವಕೀಲರು ತಿಳಿಸಿದ್ದಾರೆ. ಈ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಅವರ ಸರ್ಕಾರಿ ಕಾರುಗಳನ್ನ ಜಪ್ತಿ ಮಾಡಲು ರೈತರು ಮುಂದಾಗಿದ್ದಾರೆ. ಅಧಿಕಾರಿಗಳ ವಾಹನಗಳ ಜಪ್ತಿ ಎನ್ನುವುದು ಸಾಮಾನ್ಯವಾಗಿ ಕಂಡುಬರುವ ಬೆಳವಣಿಗೆಯಲ್ಲ. ಹೀಗಾಗಿ ಈ ಪ್ರಕರಣ ಇದೀಗ ಜಿಲ್ಲಾಡಳಿತದ ಗಮನ ಸೆಳೆದಿದೆ.

ಆಗಸ್ಟ್‌ನಲ್ಲೂ ನಡೆದಿತ್ತು ಇದೇ ರೀತಿಯ ಜಪ್ತಿ

ಇದೇ ಪರಿಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಜಪ್ತಿ ಆದೇಶ ಹೊರಬಂದಿತ್ತು. ಮುಂಡರಗಿ ತಾಲೂಕಿನ ಮೇವುಂಡಿ, ಶಿರನಹಳ್ಳಿ ಹಾಗೂ ಬರದೂರು ಗ್ರಾಮದ ರೈತರ ಪರವಾಗಿ ನಡೆದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತದ ಆಸ್ತಿ ಮತ್ತು ವಾಹನಗಳ ಜಪ್ತಿಗೆ ಆದೇಶವಾಗಿತ್ತು. ಆಗಸ್ಟ್ 14ರಂದು ರೈತರ ತಂಡ ಜಿಲ್ಲಾಧಿಕಾರಿ ಅವರ ಕಾರನ್ನ ಜಪ್ತಿ ಮಾಡಿತ್ತು. ಬಳಿಕ ಜಿಲ್ಲಾಡಳಿತದ ಅಧಿಕಾರಿಗಳು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಾಹನವನ್ನ ವಾಪಸ್ ನೀಡಲಾಗಿತ್ತು. ಪರಿಹಾರ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆಡಳಿತ ಭರವಸೆ ನೀಡಿತ್ತು ಎನ್ನಲಾಗಿದೆ. ಆದರೆ ಇದೀಗ ಮತ್ತೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ರೈತರು ಮತ್ತು ವಕೀಲರು ಡಿಸಿ ಹಾಗೂ ಎಡಿಸಿ ಅವರ ವಾಹನಗಳ ಜಪ್ತಿಗೆ ಮುಂದಾಗಿದ್ದಾರೆ.

‘ಹತ್ತು ವರ್ಷವಾದರೂ ಪರಿಹಾರ ಸಿಕ್ಕಿಲ್ಲ’

ಭೂಮಿ ಕಳೆದುಕೊಂಡು ವರ್ಷಗಳೇ ಕಳೆದರೂ ಪರಿಹಾರ ಸಿಗದಿರುವ ಬಗ್ಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬರಗಾಲ ಸೇರಿದಂತೆ ಹಲವು ಸಂಕಷ್ಟಗಳನ್ನ ಎದುರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರದಿಂದ ಬರಬೇಕಾದ ಪರಿಹಾರ ಮೊತ್ತವೂ ಸಿಗದಿರುವುದು ತಮ್ಮ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ತಂದಿದೆ ಎಂದು ರೈತರು ಅಸಮಾಧಾನ ಹೊರಹಾಕಿದ್ದಾರೆ. ಸಿಂಗಟಾಲೂರು ಏತ ನೀರಾವರಿ ಯೋಜನೆ ರೈತರ ಜಮೀನನ್ನ ಪಡೆದು ರೂಪುಗೊಂಡ ಯೋಜನೆಯಾಗಿದ್ದು, ಭೂಮಿ ಕಳೆದುಕೊಂಡವರಿಗೆ ನ್ಯಾಯಯುತ ಪರಿಹಾರ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ರೈತರು ವಾದಿಸಿದ್ದಾರೆ. ನ್ಯಾಯಾಲಯದ ಆದೇಶವನ್ನ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಪಾಲಿಸಬೇಕೆಂದು ಆಗ್ರಹಿಸಿದ್ದಾರೆ.

ನೀರಾವರಿ ನಿಗಮದ ವಿರುದ್ಧವೂ ಅಸಮಾಧಾನ

ಪರಿಹಾರ ಪಾವತಿ ವಿಚಾರದಲ್ಲಿ ಕರ್ನಾಟಕ ನೀರಾವರಿ ನಿಗಮದ ವಿಳಂಬದ ವಿರುದ್ಧವೂ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಆದೇಶದ ನಂತರವೂ ಪರಿಹಾರ ನೀಡದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ರೈತರು ಆರೋಪಿಸಿದ್ದಾರೆ. ಇನ್ನು ಸಿಂಗಟಾಲೂರು ಏತ ನೀರಾವರಿ ಯೋಜನೆ ಸ್ವತಃ ಇತ್ತೀಚಿನ ದಿನಗಳಲ್ಲಿ ಹಲವು ಸಮಸ್ಯೆಗಳನ್ನ ಎದುರಿಸುತ್ತಿದೆ. ಸೆಪ್ಟೆಂಬರ್ 18ರ ವರದಿಯೊಂದರಲ್ಲಿ ಯೋಜನೆಯ ನೀರೆತ್ತುವ ಘಟಕಗಳ ವಿದ್ಯುತ್ ಬಿಲ್ ಬಾಕಿ ಸೇರಿದಂತೆ ಯೋಜನೆಯ ಕಾರ್ಯಾಚರಣೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಉಲ್ಲೇಖಿಸಲಾಗಿದೆ.  

ಕಾನೂನು ಹೋರಾಟ ಮುಂದುವರಿಸುವ ಎಚ್ಚರಿಕೆ

ನ್ಯಾಯಾಲಯದ ಆದೇಶದಂತೆ ಪರಿಹಾರ ಪಾವತಿಸುವವರೆಗೆ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ರೈತರು ಹೇಳಿದ್ದಾರೆ. ಅಗತ್ಯವಿದ್ದರೆ ಜಿಲ್ಲಾಡಳಿತದ ಇತರ ಪರಿಕರಗಳ ಜಪ್ತಿ ಸೇರಿದಂತೆ ಕಾನೂನುಬದ್ಧ ಕ್ರಮಗಳನ್ನ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಒಟ್ನಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತರಿಗೆ ಪರಿಹಾರ ಪಾವತಿ ವಿಚಾರ ಇದೀಗ ಮತ್ತೊಮ್ಮೆ ತೀವ್ರ ಸ್ವರೂಪ ಪಡೆದುಕೊಂಡಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಅವರ ಸರ್ಕಾರಿ ವಾಹನಗಳ ಜಪ್ತಿಗೆ ರೈತರು ಮುಂದಾಗಿರುವುದು ಪ್ರಕರಣದ ಗಂಭೀರತೆಯನ್ನ ತೋರಿಸುತ್ತಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿರುವ ಪರಿಹಾರ ಯಾವಾಗ ರೈತರ ಕೈ ಸೇರುತ್ತದೆ ಎಂಬುದೇ ಈಗ ಪ್ರಮುಖ ಪ್ರಶ್ನೆಯಾಗಿದೆ.

Add Zee News as a Preferred Source
TAGS:
Karnataka Politics
Kannada News