SOCIAL MEDIA

Newsletter

PARTNER SITES
Select Language Select State

ತೀವ್ರಗೊಂಡ ಬರಗಾಲ, ಶೇ.90 ರಷ್ಟು ಬೆಳೆ ನಾಶ.. ರೈತರ ಹಿತದೃಷ್ಟಿಯಿಂದಲೇ ಹಾಲಿನ ದರ ಏರಿಕೆ

ಕರ್ನಾಟಕದಲ್ಲಿ ಸುಮಾರು ಶೇ. 90 ರಷ್ಟು ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಅದರಲ್ಲೂ ವಿಶೇಷವಾಗಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಭಾಗದಲ್ಲಿ ಬರದ ಪ್ರಭಾವ ಅತ್ಯಂತ ತೀವ್ರವಾಗಿದೆ.

Written By Bhimappa
Published: Oct 07, 2026, 02:44 PM IST | Updated: Oct 07, 2026, 02:46 PM IST
Image Credit: DCM
Join

Karnataka Drought: ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಅತ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿದೆ. ರೈತರ ಕೈಗೆ ಯಾವುದೇ ಬೆಳೆಯೂ ಸಿಗದೆ ಕಂಗಾಲಾಗಿದ್ದಾರೆ. ಎಲ್ಲಿ ನೋಡಿದರೂ ಯಾವುದೇ ಬೆಳೆ ಬಂದಿಲ್ಲ. ಎಲ್ಲ ಕಡೆಗಳಲ್ಲೂ ಶೇಕಡಾ 90 ರಷ್ಟು ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಎಲ್ಲ ಬರಡು ಭೂಮಿ ಆಗೋಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಬಳ್ಳಾರಿ ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿಯನ್ನು ನೇರವಾಗಿ ರೈತರ ಹೊಲಗಳನ್ನು ವೀಕ್ಷಿಸಿ ಪರಿಶೀಲನೆ ನಡೆಸಿದ ಬಳಿಕ ಹೇಳಿದ್ದಾರೆ.

ಬಳ್ಳಾರಿಯಲ್ಲಿ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಮಾತನಾಡಿದರು. ಕರ್ನಾಟಕದಲ್ಲಿ ಸುಮಾರು ಶೇ. 90 ರಷ್ಟು ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಅದರಲ್ಲೂ ವಿಶೇಷವಾಗಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಭಾಗದಲ್ಲಿ ಬರದ ಪ್ರಭಾವ ಅತ್ಯಂತ ತೀವ್ರವಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಇದೇ ಉದ್ದೇಶಕ್ಕಾಗಿ ತಾವು ಸ್ವತಃ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದರಿಂದ, ಕುಡಿಯುವ ನೀರಿನ ಸರಬರಾಜು ಮತ್ತು ನಿರ್ವಹಣೆಗಾಗಿ ಸರ್ಕಾರ ಈಗಾಗಲೇ 306 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಡಿಸಿಎಂ ಹೇಳಿದ್ದಾರೆ.

ರೈತರಿಗೆ ತಕ್ಷಣದ ನೆರವು ಕಲ್ಪಿಸುವ ನಿಟ್ಟಿನಲ್ಲಿ ಮೊದಲ ಹಂತವಾಗಿ ಕನಿಷ್ಠ ಖರ್ಚು-ವೆಚ್ಚಗಳಿಗಾಗಿ ಪ್ರತಿ ರೈತನಿಗೆ 2,500 ರೂಪಾಯಿಗಳನ್ನು ನೀಡಲಾಗಿದೆ. ಇದರೊಂದಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ಸುಮಾರು 20,000 ರೂಪಾಯಿವರೆಗೆ ಆರ್ಥಿಕ ಅನುಕೂಲ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ನೆರವಿನ ಕುರಿತು ಮಾತನಾಡಿದ ಡಿಸಿಎಂ ಡಾ. ಜಿ ಪರಮೇಶ್ವರ್‌ ಅವರು, ಬರ ಪರಿಹಾರಕ್ಕಾಗಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಮನವಿ ಪತ್ರಗಳನ್ನು ಮೆಮೋರಂಡಮ್ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಒಟ್ಟು 46 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟ ಸಂಭವಿಸಿದ್ದರೂ ಸಹ, ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಸಾಧ್ಯವಿರುವ ಸುಮಾರು 10 ರಿಂದ 11 ಸಾವಿರ ಕೋಟಿ ರೂಪಾಯಿಗಳ ಪರಿಹಾರವನ್ನು ಮಾತ್ರ ಕೇಳಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಚಿವರ ವಿರುದ್ಧ ವಿರೋಧ ಪಕ್ಷದವರು 'ಸ್ಟಿಂಗ್ ಆಪರೇಷನ್' ಮಾಡುತ್ತಿದ್ದಾರೆ ಎಂಬ ಮುಖ್ಯಮಂತ್ರಿಗಳ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಪರಮೇಶ್ವರ್ ಅವರು, ಸಿಎಂ ಡಿ.ಕೆ ಶಿವಕುಮಾರ್ ಅವರು ಸುಮ್ಮನೆ ಈ ಮಾತುಗಳನ್ನು ಆಡುವುದಿಲ್ಲ ಎಂದರು. ಮುಖ್ಯಮಂತ್ರಿಗೆ ಇಂಟೆಲಿಜೆನ್ಸ್ ಗುಪ್ತಚರ ಮೂಲಕ ಮಾಹಿತಿ ಬಂದಿರಬಹುದು. ಆದರೆ ಯಾವ ನಿರ್ದಿಷ್ಟ ವಿಚಾರದಲ್ಲಿ ಈ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ ಎಂಬುದು ಸದ್ಯಕ್ಕೆ ತಮಗೆ ಸ್ಪಷ್ಟವಿಲ್ಲ ಎಂದು ತಿಳಿಸಿದ್ದಾರೆ.

ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸದ ಮೇಲೆ ಆರ್ಥಿಕ ಹೊರೆಯಾಗಿರುವುದು ವಾಸ್ತವ ಎಂದು ಒಪ್ಪಿಕೊಂಡ ಅವರು, ಹಾಗಂದ ಮಾತ್ರಕ್ಕೆ ನಾವು ಜವಾಬ್ದಾರಿಯಿಂದ ಹಿಂದೆ ಸರಿಯಲ್ಲ. ಆರ್ಥಿಕ ಹೊರೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ಇದು ಸರ್ಕಾರದ ಬದ್ಧತೆಯಾಗಿದೆ. ಗ್ಯಾರಂಟಿಗಳಿಂದ ಸಾಮಾನ್ಯ ಜನರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗುತ್ತಿದೆ. ಆದರೆ ಇಂತಹ ಗಂಡಾಂತರದ ಬರ ಪರಿಸ್ಥಿತಿಯಲ್ಲಿ ರೈತನೇ ನಮಗೆ ಮೊದಲ ಆದ್ಯತೆಯಾಗಿದ್ದು, ಹೊಸ ರಸ್ತೆಗಳ ನಿರ್ಮಾಣ ಅಥವಾ ಇನ್ಯಾವುದೇ ಕಾಮಗಾರಿಗಳು ಸದ್ಯಕ್ಕೆ ನಮ್ಮ ಆದ್ಯತೆಯಲ್ಲ ಎಂದು ಸ್ಪಷ್ಟಪಡಿಸಿದರು.

ಹಾಲಿನ ದರವನ್ನು 8 ರೂಪಾಯಿಗಳಷ್ಟು ಹೆಚ್ಚಳ ಮಾಡಿರುವುದನ್ನು ಸಮರ್ಥಿಸಿಕೊಂಡ ಡಿಸಿಎಂ ಡಾ ಜಿ ಪರಮೇಶ್ವರ್‌ ಅವರು, ಬರಗಾಲದ ಈ ಕಷ್ಟದ ಕಾಲದಲ್ಲಿ ರೈತರಿಗೆ ಆರ್ಥಿಕವಾಗಿ ಆಸರೆಯಾಗಬೇಕು ಎಂಬ ಉದ್ದೇಶದಿಂದಲೇ ಈ ದರ ಏರಿಕೆ ಮಾಡಲಾಗಿದೆ. ಪಕ್ಕದ ಆಂಧ್ರಪ್ರದೇಶದಲ್ಲಿ ಒಂದು ಲೀಟರ್ ಹಾಲಿಗೆ 60 ರೂಪಾಯಿ ಇದ್ದರೆ, ನಮ್ಮಲ್ಲಿ 30 ರಿಂದ 32 ರೂಪಾಯಿಗಳಷ್ಟಿದೆ. ರೈತರಿಗೆ ಕಷ್ಟವಾದರೂ ಪರವಾಗಿಲ್ಲ, ಈ ಸಂಕಷ್ಟದ ಸಮಯದಲ್ಲಿ ಅವರ ಜೊತೆ ಗಟ್ಟಿಯಾಗಿ ನಿಲ್ಲುವುದು ಸರ್ಕಾರದ ಕರ್ತವ್ಯ ಎಂದು ಅವರು ಅಭಿಪ್ರಾಯಪಟ್ಟರು.
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES