Bellary mining companies: ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಬಳ್ಳಾರಿಯ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಗಣಿ ನಾಡಿನಲ್ಲಿ ಕಣ್ಣಿಗೆ ಮಣ್ಣೆರೆಚಿ ನಡೆಸಲಾಗಿದೆ ಎನ್ನಲಾದ ಭೂ ಒತ್ತುವರಿ ಹಾಗೂ ಗಡಿ ಬದಲಾವಣೆ ಹಗರಣದ ತನಿಖೆ ಮತ್ತು ಪರಾಮರ್ಶೆಗೆ ಕೇಂದ್ರ ಮುಂದಾಗಿದೆ. ಮಾಜಿ ಸಚಿವ ಮತ್ತು ಸದ್ಯ ಶಾಸಕ ಆಗಿರುವ ಗಾಲಿ ಜನಾರ್ದನರೆಡ್ಡಿ ಅವರ ಒಡೆತನದ ಒಎಂಸಿ Obulapuram Mining Company ಗಣಿ ಪ್ರದೇಶದ ಸುತ್ತಮುತ್ತಲಿನ ಮೂರು ಪ್ರಮುಖ ಗಣಿ ಕಂಪನಿಗಳಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ.
ಎಂಬಿಟಿ MBT, ಹೆಚ್.ಟಿ HT ಮತ್ತು ಎನ್.ಆರ್ NR ಗಣಿ ಕಂಪನಿಗಳ ಗುತ್ತಿಗೆ ಪರವಾನಗಿ ಹಾಗೂ ಗಡಿ ರೇಖೆಗಳ ಸಮಗ್ರ ಪರಾಮರ್ಶೆ ನಡೆಸುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಅಧಿಕೃತ ಪತ್ರದ ಮೂಲಕ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಕೇಂದ್ರ ಸರ್ಕಾರದ ಈ ದಿಢೀರ್ ಆದೇಶ ರಾಜ್ಯ ರಾಜಕಾರಣ ಹಾಗೂ ಗಣಿ ಉದ್ಯಮದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ.
ಗಡಿ ಬದಲಾವಣೆ ಮತ್ತು 800 ಎಕರೆ ಅಧಿಕೃತವಲ್ಲದ ಕಬಳಿಕೆ: ಸಿಬಿಐ ಕೋರ್ಟ್ ತೀರ್ಪಿನ ಸ್ಫೋಟಕ ಅಂಶಗಳು
ಕೇಂದ್ರ ಸರ್ಕಾರದ ಈ ಕಠಿಣ ಕ್ರಮಕ್ಕೆ ಪ್ರಮುಖ ಕಾರಣ, ಗಣಿ ಗುತ್ತಿಗೆ ನವೀಕರಣ ಪ್ರಕ್ರಿಯೆಯಲ್ಲಿ ನಡೆದಿರುವ ಭಾರೀ ಅಕ್ರಮಗಳು. 2008ರಲ್ಲಿ ಈ ಮೂರು ಕಂಪನಿಗಳ ಗುತ್ತಿಗೆಯನ್ನು ನವೀಕರಿಸುವ ಸಂದರ್ಭದಲ್ಲಿ ಅತ್ಯಂತ ಜಾಣ್ಮೆಯಿಂದ ಗಣಿಗಳ ಗಡಿರೇಖೆಗಳನ್ನೇ ಬದಲಾಯಿಸಲಾಗಿದೆ ಎಂಬ ಗಂಭೀರ ಆರೋಪವಿದೆ.
ಕೇವಲ ಗಡಿ ಬದಲಾವಣೆ ಮಾತ್ರವಲ್ಲದೆ, ಕಂದಾಯ ಗ್ರಾಮಗಳ ನೈಜ ಗಡಿಗಳನ್ನೇ ಅಳಿಸಿ ಹಾಕಿ, ಕೇವಲ ಒಂದು ಸ್ಟ್ರಿಪ್ ಮ್ಯಾಪ್ ಚಿತ್ರವನ್ನು ಆಧರಿಸಿ ಹೊಸದಾಗಿ ಗಡಿಗಳನ್ನು ಗುರುತಿಸಲಾಗಿದೆ. ಇದರ ಪರಿಣಾಮವಾಗಿ ಈ ಮೂರು ಕಂಪನಿಗಳಿಗೆ ಸುಮಾರು 800 ಎಕರೆ ಹೆಚ್ಚುವರಿ ಪ್ರದೇಶ ಲಭ್ಯವಾಗಿದೆ. ಈ ಮೂಲಕ ನಿಯಮಗಳನ್ನು ಗಾಳಿಗೆ ತೂರಿ ಬರೋಬ್ಬರಿ 800 ಎಕರೆ ಹೆಚ್ಚುವರಿ ಪ್ರದೇಶವನ್ನು ಕಬಳಿಸಿ, ಎಲ್ಲೆಂದರಲ್ಲಿ ಗಣಿಗಾರಿಕೆ ನಡೆಸಿ ಲೂಟಿ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಇತ್ತೀಚೆಗೆ ಅಂದರೆ 2025ರಲ್ಲಿ ಸಿಬಿಐ ವಿಶೇಷ ಕೋರ್ಟ್ ತನ್ನ ತೀರ್ಪಿನಲ್ಲಿ ಈ ಗಣಿಗಳ ಗಡಿಗಳನ್ನು ಬೇಕಂತಲೇ ಬದಲಾಯಿಸಲಾಗಿದೆ ಎಂದು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ, ಒತ್ತುವರಿಯಾಗಿರುವ ಆ 800 ಎಕರೆ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆದ ಗಣಿಗಾರಿಕೆಯ ಹಿಂದಿನ ಅಕ್ರಮಗಳ ಆಳ ಅಗಲವನ್ನು ಅಳೆಯಲು ಈಗ ಕಾಲ ಕೂಡಿಬಂದಿದೆ.
ದೂರುದಾರ ಟಪಾಲ್ ಗಣೇಶ್ ಹೋರಾಟಕ್ಕೆ ಸಿಕ್ಕ ಫಲ: ಮೌನ ಮುರಿದ ಕೇಂದ್ರದಿಂದ ಅರಣ್ಯ ಇಲಾಖೆಗೆ ತನಿಖಾ ಸೂಚನೆ
ರಾಜ್ಯದ ಒಡೆತನದ ಬರೋಬ್ಬರಿ 800 ಎಕರೆ ಪ್ರದೇಶ ಅನ್ಯರ ಪಾಲಾಗಿ ಒತ್ತುವರಿಯಾಗುತ್ತಿದ್ದರೂ ರಾಜ್ಯ ಸರ್ಕಾರ ಈ ಹಿಂದೆ ಮೌನ ವಹಿಸಿತ್ತು ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಅಕ್ರಮ ಗಣಿಗಾರಿಕೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಾ ಬಂದಿರುವ ಖ್ಯಾತ ದೂರುದಾರ ಟಪಾಲ್ ಗಣೇಶ್ ಅವರು, ಕೂಡಲೇ ಈ ಅನ್ಯಾಯವನ್ನು ಸರಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ದೂರು ಸಲ್ಲಿಸಿದ್ದರು.
ದೂರುದಾರರ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ತಕ್ಷಣವೇ ಕಾರ್ಯಪ್ರವೃತ್ತವಾಗಿದೆ. ಕೇಂದ್ರದಿಂದ ಪತ್ರ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕೂಡಲೇ ಈ ಮೂರು ಗಣಿ ಪ್ರದೇಶಗಳ ಗಡಿ ಹಾಗೂ ಲೈಸೆನ್ಸ್ ಅನ್ನು ಪರಾಮರ್ಶಿಸುವಂತೆ ಅರಣ್ಯ ಇಲಾಖೆಗೆ ಸ್ಪಷ್ಟ ಸೂಚನೆ ರವಾಯಿಸಿದ್ದಾರೆ. ಜನಾರ್ದನರೆಡ್ಡಿ ಅವರ ಜತೆ ಶಾಮೀಲಾಗಿ ಈ ಮೂರು ಕಂಪನಿಗಳು ನಡೆಸಿದೆಯೆನ್ನಲಾದ ಅಕ್ರಮ ಗಣಿಗಾರಿಕೆಯ ಕರಾಳ ಮುಖಗಳು ಈಗ ಒಂದೊಂದಾಗಿ ಹೊರಬೀಳುವ ಸಾಧ್ಯತೆಯಿದೆ. ಮುಂಬರುವ ದಿನಗಳಲ್ಲಿ ಸಂಬಂಧಪಟ್ಟ ಕಂಪನಿಗಳಿಗೆ ಕಾನೂನಿನ ಕುಣಿಕೆ ಬಿಗಿಯಾಗಲಿದೆ.