ತಂದೆ-ತಾಯಿಗೆ ಆತನೊಬ್ಬನೇ ಮಗ. ಅಪ್ಪ-ಅಮ್ಮ ಬೆಂಗಳೂರಲ್ಲಿ ನೆಲೆಸಿದ್ರೆ ಈತ ಓದಿನ ಜೊತೆಗೆ ತನ್ನ ಅಜ್ಜಿಗೂ ಆಸರೆ ಆಗಿದ್ದ. ಹಗಲೊತ್ತಲ್ಲಿ ಐಟಿಐ ವ್ಯಾಸಂಗ ಮಾಡ್ತಿದ್ದ ಆತ, ರಾತ್ರಿ ಹೊತ್ತಲ್ಲಿ ಕೇರ್ ಟೇಕರ್ ಕೆಲಸ ಮಾಡಿ ಹಲವು ಹಿರಿಯ ಜೀವಗಳಿಗೆ ಆಸರೆ ಆಗಿದ್ದ. ಚೆನ್ನಾಗಿ ಓದಿ ಉದ್ಯೋಗ ಹಿಡಿಯುವ ಕನಸು ಕಂಡಿದ್ದ 19 ವರ್ಷದ ಯುವಕನ ಜೀವನ ಈಗ ದಾರುಣ ಅಂತ್ಯಕಂಡಿದೆ. ಈ ಯುವಕನ ಬಲಿ ಪಡೆದಿದ್ದು ಮತ್ತದೇ ನಿಷೇಧಿತ ಮಾಂಜಾದಾರ.
ಹೌದು, ಕರ್ನಾಟಕದಲ್ಲಿ ನಾಡಿನಲ್ಲಿ ಈಗ ದಸರಾ ಹಬ್ಬದ ಸಂಭ್ರಮಕ್ಕೆ ದಿನಗಣನೇ ಶುರುವಾಗಿದೆ. ದಸರಾ ಹಬ್ಬದ ರಜೆಯಲ್ಲಿ ಗಾಳಿಪಟ ಹಾರಿಸುವುದು ಉತ್ತರ ಕರ್ನಾಟಕದ ಸಂಪ್ರದಾಯ. ಹಲವು ಜಿಲ್ಲೆಗಳಲ್ಲಿ ಗಾಳಿಪಟ ಹಾರಿಸಲು ನಾರ್ಮಲ್ ದಾರ ಬಳಿಸಲಾಗುತ್ತೆ. ಆದರೆ ಬೆಳಗಾವಿಯಲ್ಲಿ ಮಾತ್ರ ಮಾಂಜಾದಾರ ಬಳಸಿ ಗಾಳಿಪಟ ಹಾರಿಸಲಾಗುತ್ತದೆ.
ಮಾಂಜಾದಾರ ಬಳಕೆ, ಮಾರಾಟ ನಿಷೇಧ:
ಬೆಳಗಾವಿ ಜಿಲ್ಲೆಯಾದ್ಯಂತ ಮಾಂಜಾದಾರ ಬಳಕೆ ಹಾಗೂ ಮಾರಾಟ ನಿಷೇಧ ಇದ್ದರೂ ಅದರ ಮಾರಾಟ ಹಾಗೂ ಬಳಕೆ ಮಾತ್ರ ಇನ್ನೂ ನಿಂತಿಲ್ಲ. ಹೀಗೆ ಮಾಂಜಾದಾರಕ್ಕೆ ಬೆಳಗಾವಿಯಲ್ಲಿ ಮತ್ತೊಬ್ಬ ಯುವಕ ಉಸಿರು ಚೆಲ್ಲಿದ್ದಾನೆ. ಆ ಯುವಕನ ಹೆಸರು ಧ್ರುವ ಕರ್ಜಗಿ.
19 ವರ್ಷ ವಯಸ್ಸಿನ ಧ್ರುವ ಕರ್ಜಗಿ ಬೆಳಗಾವಿಯ ಮಹಾಂತೇಶ ನಗರದ ನಿವಾಸಿ. ಐಟಿಐ ವ್ಯಾಸಂಗ ಮಾಡ್ತಿದ್ದ ಧ್ರುವನ ಜೀವನ ಎಲ್ಲ ಯುವಕರಂತೆ ಬಿಂದಾಸ್ ಆಗಿರಲಿಲ್ಲ. ತನ್ನ ಓದಿಗೆ ತಾನೇ ದುಡಿಯಬೇಕಾದ ಅನಿವಾರ್ಯತೆ ಆತನಿಗೆ ಇತ್ತು. ನಿನ್ನೆ (ಅ. 1) ಐಟಿಐ ಪರೀಕ್ಷೆ ಮುಗಿಸಿ ಬೈಕ್ ಮೇಲೆ ಮನೆಗೆ ತೆರಳುತ್ತಿದ್ದ ಯುವಕ ಉಸಿರು ಚೆಲ್ಲಿದ್ದಾನೆ. ಈತನ ಪ್ರಾಣಪಕ್ಷಿ ಹಾರಿಹೋಗುವಂತೆ ಮಾಡಿದ್ದು ಮತ್ತದೇ ನಿಷೇಧಿತ ಮಾಂಜಾದಾರ.
ಗಾಳಿಪಟ ಹಾರಿಸಿದ ಯುವಕರು ಬಿಟ್ಟಿದ್ದ ಮಾಂಜಾದಾರ ಯುವಕನ ಕುತ್ತಿಗೆಗೆ ರಭಸವಾಗಿ ತಾಗಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಧ್ರುವ ಬೈಕ್ ಮೇಲೆ ಉಸಿರು ಚೆಲ್ಲಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು ಬೆಳಗಾವಿಯ ಗಾಂಧಿನಗರದ ಪಕ್ಕದಲ್ಲಿರುವ ಪುಣೆ-ಬೆಂಗಳೂರು ರಾಷ್ಟ್ರಿಯ ಹೆದ್ದಾರಿಯಲ್ಲೇ. ತಕ್ಷಣವೇ ಧ್ರುವನ ಮೃತದೇಹವನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲದೇ ಮಾಂಜಾದಾರ ಬಳಕೆ ಆಗ್ತಿದ್ದರೂ ಮೌನ ವಹಿಸಿರುವ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಂಜಾದಾರಕ್ಕೆ ಬೆಳಗಾವಿಯಲ್ಲಿ ಹತ್ತು ವರ್ಷದ ಅವಧಿಯಲ್ಲಿ ಸಾಕಷ್ಟು ಯುವಕರು ಸಾವನಪ್ಪಿದ್ದಾರೆ. ಈ ಕಾರಣಕ್ಕೆ ಬೆಳಗಾವಿಯ ಹಿಂದಿನ ಡಿಸಿ ಎಂ.ಜಿ ಹಿರೇಮಠ ಬೆಳಗಾವಿ ಜಿಲ್ಲೆಯಾದ್ಯಂತ ಮಾಂಜಾದಾರ ಬಳಕೆ ಹಾಗೂ ಮಾರಾಟಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದ್ದರು. ನಿಷೇಧ ಆದೇಶ ಇದ್ದರೂ ರಾಜಸ್ಥಾನ ಮೂಲದ ವ್ಯಾಪಾರಿಗಳು ಅಕ್ರಮವಾಗಿ ಬೆಳಗಾವಿಯ ಪಾಂಗೂಲ್ ಗಲ್ಲಿ ಸೇರಿದಂತೆ ಹಲವಡೆ ಮಾಂಜಾದಾರ ಮಾರಾಟ ಮಾಡ್ತಿದ್ದಾರೆ. ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಮೇಯರ್ ಪ್ರೀತಿ ಕಾಮಕರ, ಬೆಳಗಾವಿಯಲ್ಲಿ ಮಾಂಜಾದಾರ ಬಳಕೆ ನಿಷೇಧ ಇದೆ. ಆದರೂ ಮಾರಾಟ ಮಾಡುವವರ ವಿರುದ್ಧ ಕ್ರಮಕ್ಕೆ ನಾನು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಧ್ರುವನ ಕುಟುಂಬಕ್ಕೆ ನಾನೂ ಸಾಂತ್ವಾನ ಹೇಳ್ತಿನಿ ಎಂದರು.
ಯಾರ ಮೇಲೂ ಅವಲಂಬನೆ ಆಗದೇ ಓದಿನ ಜೊತೆಗೆ ಕುಟುಂಬ ಸಲುಹುತ್ತಿದ್ದ ಧ್ರುವ ಮಾಂಜಾದಾರಕ್ಕೆ ಬಲಿ ಆಗಿದ್ದು ದುರಂತವೇ ಸರಿ. ಇನ್ನಾದರೂ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಮಾಂಜಾದಾರಕ್ಕೆ ಸಂಪೂರ್ಣ ಮೂಗುದಾರ ಹಾಕಬೇಕಿದೆ. ಇಲ್ಲವಾದರೆ ದಸರಾ ರಜೆಯಲ್ಲಿ ಇನ್ನಷ್ಟು ಅಮಾಯಕ ಜೀವಗಳು ಬಲಿ ಆಗುವುದು ನಿಶ್ಚಿತ.