• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳ ಸಾಧಕರಿಗೆ ಭವ್ಯ ಸನ್ಮಾನ

ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳ ಸಾಧಕರಿಗೆ ಭವ್ಯ ಸನ್ಮಾನ

ನಾಡಿನ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಹಾಗೂ ಅಸಾಧಾರಣ ಸಾಧನೆಯ ಮೂಲಕ ಕರುನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ‘ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ’ ಪ್ರದಾನ ಸಮಾರಂಭವು ಅತ್ಯಂತ ವೈಭವೋಪೇತವಾಗಿ ನಡೆಯಿತು. ರಾಜಕೀಯ, ಸಿನಿಮಾ, ಸಾಹಿತ್ಯ, ಪೊಲೀಸ್ ಹಾಗೂ ಕ್ರೀಡಾ ಕ್ಷೇತ್ರದ ದಿಗ್ಗಜರ ಸಮ್ಮುಖದಲ್ಲಿ ನಡೆದ ಈ ಭವ್ಯ ವೇದಿಕೆಯಲ್ಲಿ 6 ಮಂದಿ ಹಿರಿಯ ಸಾಧಕರಿಗೆ 'ಜೀವಮಾನ ಸಾಧನೆ ಪ್ರಶಸ್ತಿ' ನೀಡಿ ಸನ್ಮಾನಿಸಲಾಯಿತು.

Written ByKrishna NK
Published: Nov 17, 2026, 21:48 IST|Updated: Nov 18, 2026, 01:00 IST
joinshare
ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳ ಸಾಧಕರಿಗೆ ಭವ್ಯ ಸನ್ಮಾನ
Image Credit: zeee

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Zee Kannada News Veera Kannadiga Awards:  ಸಮಾಜ ಸೇವೆ, ಕಲೆ, ಸಾಹಿತ್ಯ, ಸಿನಿಮಾ, ಕ್ರೀಡೆ, ಶಿಕ್ಷಣ, ವೈದ್ಯಕೀಯ, ಉದ್ಯಮ, ಪೊಲೀಸ್‌ ಹಾಗೂ ಸಾರ್ವಜನಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಆಯೋಜಿಸಿದ್ದ ‘ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ’ ಪ್ರದಾನ ಸಮಾರಂಭವು ನವೆಂಬರ್‌ 17ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ದಿ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ಕನ್ನಡಿಗರ ಹೆಮ್ಮೆಯ ಸುದ್ದಿ ವಾಹಿನಿ ಜೀ ಕನ್ನಡ ನ್ಯೂಸ್‌  ಸಂಪಾದಕ ರವಿ ಎಸ್‌ ಗೌಡ ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆಯಿತು.

ದಿಗ್ಗಜರಿಗೆ ಜೀವಮಾನ ಸಾಧನೆ ಪ್ರಶಸ್ತಿ ಗೌರವ

ಈ ಭವ್ಯ ಕಾರ್ಯಕ್ರಮದಲ್ಲಿ ನಾಡಿಗೆ ಅಸಾಧಾರಣ ಕೊಡುಗೆ ನೀಡಿರುವ ಆರು ಮಂದಿ ಹಿರಿಯ ಸಾಧಕರಿಗೆ 'ಜೀವಮಾನ ಸಾಧನೆ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ, ಗೀತರಚನೆಕಾರ, ಲೇಖಕ ಹಾಗೂ ನಟ ಡಾ. ನಾಗತಿಹಳ್ಳಿ ಚಂದ್ರಶೇಖರ್‌, ಹಿರಿಯ ನಟಿ ಹಾಗೂ ವಿಧಾನ ಪರಿಷತ್‌ ಉಪಸಭಾಪತಿ ಶ್ರೀಮತಿ ಉಮಾಶ್ರೀ, ಹಿರಿಯ ನಟ ಹಾಗೂ ಲೋಕಸಭೆಯ ಮಾಜಿ ಸದಸ್ಯ ಶಶಿ ಕುಮಾರ್‌, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾದ ಪಿ. ಹರಿಶೇಖರನ್‌, ಹಿರಿಯ ಪತ್ರಕರ್ತರು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ತ್ಯಾಗರಾಜ್‌ ಪಿ., ಹಾಗೂ ಕಬಡ್ಡಿ ಕೋಚ್‌ ಮತ್ತು ಮಾಜಿ ಆಟಗಾರ ಬಿ.ಸಿ. ರಮೇಶ್‌ ಅವರು ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದರು.

ಪ್ರಶಸ್ತಿಗಳು ಸಾಧಕರಿಗೆ ಮತ್ತಷ್ಟು ಉತ್ಸಾಹ ತುಂಬುತ್ತವೆ: ಸಚಿವ ರಾಮಲಿಂಗಾರೆಡ್ಡಿ
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಜೀ ಕನ್ನಡ ನ್ಯೂಸ್‌ ಸಂಸ್ಥೆಯು ಪ್ರತಿವರ್ಷವೂ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು. ರಾಜ್ಯ ಸರ್ಕಾರವು ರಾಜ್ಯೋತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕೇಂದ್ರ ಸರ್ಕಾರವು ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸುವಂತೆ, ಜೀ ಕನ್ನಡ ನ್ಯೂಸ್ ಕೂಡ ರಾಜ್ಯದ ಮೂಲೆಮೂಲೆಗಳಿಂದ ಪ್ರತಿಭಾವಂತರನ್ನು ಕರೆಸಿ ಪ್ರಶಸ್ತಿ ನೀಡುತ್ತಿರುವುದು ಸಂತಸದ ವಿಚಾರ. ಈ ಪುರಸ್ಕಾರವು ಸಾಧಕರಿಗೆ ತಮ್ಮ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ಮತ್ತು ಉತ್ಸಾಹ ನೀಡಲಿ ಎಂದು ಹಾರೈಸಿ, ಸಂಪಾದಕ ರವಿ ಹಾಗೂ ಅವರ ತಂಡಕ್ಕೆ ಧನ್ಯವಾದ ಅರ್ಪಿಸಿದರು.

ಕನ್ನಡ ಕೇವಲ ಭಾಷೆಯಲ್ಲ, ಏಳು ಕೋಟಿ ಕನ್ನಡಿಗರ ಅಸ್ಮಿತೆ: ಸಚಿವ ಈಶ್ವರ್‌ ಖಂಡ್ರೆ
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಈಶ್ವರ್‌ ಖಂಡ್ರೆ ಅವರು, ಕನ್ನಡ ನಾಡಿಗೆ ಎರಡು ಸಾವಿರ ವರ್ಷಗಳ ಶ್ರೀಮಂತ ಹಾಗೂ ಸುದೀರ್ಘ ಇತಿಹಾಸವಿದೆ. ಕರ್ನಾಟಕ ಕೇವಲ ಹೆಸರಲ್ಲ, ಅದು ಏಳು ಕೋಟಿ ಕನ್ನಡಿಗರ ಚೇತನ ಮತ್ತು ಅಸ್ಮಿತೆ ಎಂದು ಬಣ್ಣಿಸಿದರು. ಮಹಾತ್ಮ ಗಾಂಧೀಜಿಯವರು ಹೇಳಿದಂತೆ ನಿಸ್ವಾರ್ಥ ಸಮಾಜ ಸೇವೆ ಮಾಡುವವರನ್ನು ನಾಗರಿಕ ಸಮಾಜ ಗುರುತಿಸಿ ಸನ್ಮಾನಿಸುವುದು ಅತ್ಯಗತ್ಯ. ಮನುಷ್ಯ, ಸಂಸ್ಥೆಗಳು ಹಾಗೂ ಸಾಮ್ರಾಜ್ಯಗಳು ಅಳಿಯಬಹುದು, ಆದರೆ ಒಬ್ಬ ಸಮಾಜ ಸೇವಕ ಮಾಡಿದ ಜನಕಲ್ಯಾಣ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಪ್ರಶಸ್ತಿ ಪಡೆದಿರುವುದು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದ ಅವರು, ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ಪರಿಸರ ಕಾಳಜಿಯನ್ನು ಸ್ಮರಿಸಿದರು. ಅಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಹವಾಮಾನ ಬದಲಾವಣೆ, ಕುಡಿಯುವ ನೀರು ಹಾಗೂ ರೈತರ ಬೆಳೆ ಪರಿಹಾರದಂತಹ ಸವಾಲುಗಳನ್ನು ಎದುರಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು.

ಎಐ ತಂತ್ರಜ್ಞಾನದ ನಡುವೆಯೂ ಕಲಾವಿದರ ಸ್ಥಾನ ಅಜರಾಮರ: ಉಮಾಶ್ರೀ
ಜೀವಮಾನ ಸಾಧನೆ ಗೌರವ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಉಪಸಭಾಪತಿ, ಹಿರಿಯ ನಟಿ ಉಮಾಶ್ರೀ ಅವರು, ಪ್ರಶಸ್ತಿಗಳು ಸಣ್ಣದಿರಲಿ ಅಥವಾ ದೊಡ್ಡದಿರಲಿ, ಅವು ಸಾಧಕರಿಗೆ ದೊಡ್ಡ ಪ್ರೇರಣಾದಾಯಕ ಶಕ್ತಿಯಾಗಿರುತ್ತವೆ ಎಂದರು. ಚಿತ್ರರಂಗದಲ್ಲಿ ಮಹಿಳಾ ನಿರ್ಮಾಪಕರು ಮತ್ತು ನಿರ್ದೇಶಕಿಯರ ಸಂಖ್ಯೆ ಕಡಿಮೆಯಿರುವ ಈ ಕಾಲಘಟ್ಟದಲ್ಲಿ ಪ್ರಿಯಾ ಹಾಸನ್ ಹಾಗೂ ಲತಾ ಜಯಪ್ರಕಾಶ್ ಅವರಂತಹ ಮಹಿಳೆಯರು ಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು. ಇದೇ ವೇಳೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ತೆರೆಯ ಮೇಲೆ ಕಾಣಿಸಿಕೊಂಡು ತಮ್ಮ ಕಲೆಯ ಮೂಲಕ ಜೀವನ ನಿರ್ವಹಿಸುವ ನಿಜವಾದ ಕಲಾವಿದರಿಗೆ ಅನ್ಯಾಯವಾಗಬಾರದು, ನಿರ್ಮಾಪಕರು ಕಲಾವಿದರನ್ನು ಬಳಸಿಕೊಂಡೇ ಸಿನಿಮಾ ಮಾಡಬೇಕು ಎಂದು ಕರೆ ನೀಡಿದರು.

ತೆರೆಮರೆಯ ಸಾಧಕರನ್ನು ಗುರುತಿಸಿರುವುದು ಶ್ಲಾಘನೀಯ: ಡಾ. ನಾಗತಿಹಳ್ಳಿ ಚಂದ್ರಶೇಖರ್‌
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ನಿರ್ದೇಶಕ, ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್‌ ಅವರು, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಕನ್ನಡ ನಾಡಿನಲ್ಲಿ ಹಬ್ಬದ ಸಂಭ್ರಮವಿರುತ್ತದೆ ಎಂದರು. 'ವೀರ ಕನ್ನಡಿಗ' ಶೀರ್ಷಿಕೆಯಡಿಯಲ್ಲಿ ಬೀದರ್‌ನಿಂದ ಚಾಮರಾಜನಗರದವರೆಗೆ, ಮೈಸೂರಿನಿಂದ ಕಾರವಾರದವರೆಗೆ ಸಮಗ್ರ ಕರ್ನಾಟಕವನ್ನು ಪ್ರತಿನಿಧಿಸುವಂತೆ ತೆರೆಮರೆಯ ಶಿಕ್ಷಕರು, ರೈತರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಒಂದೇ ವೇದಿಕೆಯಲ್ಲಿ ಗೌರವಿಸಿರುವುದು ಜೀ ಮಾಧ್ಯಮದ ದೊಡ್ಡ ಮನೋಧರ್ಮವನ್ನು ತೋರಿಸುತ್ತದೆ. ಆಡಳಿತ ಮತ್ತು ವಿಪಕ್ಷಗಳ ನಾಯಕರನ್ನು ಒಳಗೊಂಡ ಈ ಸಮಾವೇಶ ಕನ್ನಡದ ಏಕೀಕರಣದ ಶಕ್ತಿಯನ್ನು ಬಿಂಬಿಸುತ್ತಿದೆ ಎಂದ ಅವರು, ಈಶ್ವರ್ ಖಂಡ್ರೆ ಅವರ ಪರಿಸರ ಕಾಳಜಿಯನ್ನು ಮೆಚ್ಚಿಕೊಂಡರು.

ದೇಶ ಮೊದಲು ಎಂಬ ಭಾವನೆಯೊಂದಿಗೆ ನಾಡು ಕಟ್ಟೋಣ: ಛಲವಾದಿ ನಾರಾಯಣಸ್ವಾಮಿ
ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಇಲ್ಲಿಯವರೆಗೆ ಕೇವಲ ಕನ್ನಡಿಗರಾಗಿದ್ದ ಸಾಧಕರಿಗೆ ಜೀ ಕನ್ನಡ ನ್ಯೂಸ್ ವೀರ ಕನ್ನಡಿಗ ಎಂಬ ಬಿರುದು ನೀಡಿರುವುದು ಸಂತಸದ ವಿಷಯ ಎಂದರು. ಪುರುಷರಂತೆಯೇ ಮಹಿಳಾ ಸಾಧಕರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಿ ಗೌರವಿಸಬೇಕು ಎಂದು ಸಲಹೆ ನೀಡಿದರು. ಎಚ್.ಡಿ. ಕೋಟೆಯಿಂದ ಪ್ರಯಾಣಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ವಿಚಾರ ಹಂಚಿಕೊಂಡ ಅವರು, ದೇಶ ಸುರಕ್ಷಿತವಾಗಿದ್ದರೆ ಮಾತ್ರ ನಾವು ಸುರಕ್ಷಿತವಾಗಿರುತ್ತೇವೆ. ಆದ್ದರಿಂದ 'ದೇಶ ಮೊದಲು' ಎಂಬ ಭಾವನೆಯೊಂದಿಗೆ ನಾವೆಲ್ಲರೂ ಒಟ್ಟಾಗಿ ದೇಶ ಕಟ್ಟುವ ಕೆಲಸದಲ್ಲಿ ದುಡಿಯೋಣ ಎಂದು ಕರೆ ನೀಡಿದರು.

ಪ್ರಶಸ್ತಿ ನಮಗೆ ಸಿಕ್ಕ ದೊಡ್ಡ ಬೂಸ್ಟರ್: ಲತಾ ಜಯಪ್ರಕಾಶ್ ಹಾಗೂ ಪ್ರಿಯಾ ಹಾಸನ್
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕಿ ಡಾ. ಜಿ.ಎಸ್. ಲತಾ ಜಯಪ್ರಕಾಶ್ ಅವರು, ಜೀ ಕನ್ನಡ ನ್ಯೂಸ್ ತಂಡವು ನಮ್ಮನ್ನು ತಮ್ಮ ಕುಟುಂಬದ ಸದಸ್ಯರಂತೆ ಕಂಡು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಿದೆ ಎಂದರು. ಎಐ ತಂತ್ರಜ್ಞಾನದ ಸವಾಲುಗಳ ನಡುವೆಯೂ ತಾವು ನಿರ್ಮಿಸಿರುವ 'ಕಿತ್ತೂರು ರಾಣಿ ಚೆನ್ನಮ್ಮ' ಸಿನಿಮಾವನ್ನು ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುತ್ತಿದ್ದು, ಚಿತ್ರದ 'ಅಪ್ಪ' ಹಾಡಿಗೆ ಎಲ್ಲರ ಪ್ರೋತ್ಸಾಹವಿರಲಿ ಎಂದು ಕೋರಿದರು.

ನಟಿ, ನಿರ್ದೇಶಕಿ ಪ್ರಿಯಾ ಹಾಸನ್ ಮಾತನಾಡಿ, ನೆಗೆಟಿವ್ ರೀಲ್ ಕಾಲದಿಂದ ಡಿಜಿಟಲ್ ಹಾಗೂ ಈಗಿನ ಎಐ ಯುಗದವರೆಗೂ ಚಿತ್ರರಂಗ ಬದಲಾಗಿದೆ. ಆದರೆ, ಕಲಾವಿದರು ತುಂಬುವ ಭಾವನೆಗಳನ್ನು ಯಾವುದೇ ರೋಬೋ ಅಥವಾ ಎಐನಿಂದ ಸೃಷ್ಟಿಸಲು ಸಾಧ್ಯವಿಲ್ಲ ಎಂದರು. ಏಳು ವರ್ಷಗಳ ವಿರಾಮದ ನಂತರ 'ಜಸ್ಟಿಸ್' ಸೇರಿದಂತೆ ಎರಡು ಹೊಸ ಸಿನಿಮಾಗಳನ್ನು ಆರಂಭಿಸುತ್ತಿರುವುದಾಗಿ ತಿಳಿಸಿದ ಅವರು, ಜೀ ನ್ಯೂಸ್ ನೀಡಿರುವ ಈ 'ವೀರ ಕನ್ನಡತಿ' ಪ್ರಶಸ್ತಿ ತಮಗೆ ಸಿಕ್ಕ ದೊಡ್ಡ ಟಾನಿಕ್ ಹಾಗೂ ಬೂಸ್ಟರ್ ಇದ್ದಂತೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಗೌರವ ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಮೈಲಿಗಲ್ಲು: ನಟ ಶಶಿಕುಮಾರ್
ಜೀವಮಾನ ಸಾಧನೆ ಗೌರವ ಸ್ವೀಕರಿಸಿದ 'ಸುಪ್ರೀಂ ಹೀರೋ' ನಟ ಶಶಿಕುಮಾರ್ ಮಾತನಾಡಿ, ತಾವು ಚಿತ್ರರಂಗಕ್ಕೆ ಬಂದು 39 ವರ್ಷಗಳಾಗಿದ್ದು, ಸುಮಾರು 150 ಸಿನಿಮಾಗಳಲ್ಲಿ ನಟಿಸಿದ್ದರೂ ಇನ್ನೂ ಸಾಧಿಸಬೇಕಾದದ್ದು ಬಹಳಷ್ಟಿದೆ ಎಂದರು. ಕ್ರೀಡೆ, ಕೃಷಿ, ವಿಜ್ಞಾನ, ಕಲೆ ಸೇರಿದಂತೆ ಎಲ್ಲಾ ಕ್ಷೇತ್ರಗಳ ಸಾಧಕರನ್ನು ಗುರುತಿಸುತ್ತಿರುವ ಜೀ ಕನ್ನಡ ವಾಹಿನಿಯ ಕಾರ್ಯ ಶ್ಲಾಘನೀಯ. ಉಮಾಶ್ರೀ ಅವರಂತಹ ಹಿರಿಯ ಕಲಾವಿದರೊಂದಿಗೆ ಈ ವೇದಿಕೆ ಹಂಚಿಕೊಂಡಿರುವುದು ಹಾಗೂ ಈ ಪ್ರಶಸ್ತಿ ಪಡೆದಿರುವುದು ತಮ್ಮ ಜೀವನದಲ್ಲಿ ಎಂದೆಂದಿಗೂ ಮರೆಯಲಾಗದ ಕ್ಷಣ ಎಂದು ಭಾವುಕರಾದರು.

ಕನ್ನಡಿಗರಿಗೆ ಉದ್ಯೋಗ ಮತ್ತು 2047ಕ್ಕೆ ಭಾರತವನ್ನು ನಂಬರ್ ಒನ್ ಮಾಡುವ ಗುರಿ: ಮಾಧವ ಕಿರಣ್
ಸಮಾರಂಭದಲ್ಲಿ ಮಾತನಾಡಿದ ಉದ್ಯಮಿ ಮಾಧವ ಕಿರಣ್ ಅವರು, ಕನ್ನಡಿಗರ ಬುದ್ಧಿಶಕ್ತಿ ಮತ್ತು ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುವ ಉದ್ದೇಶದಿಂದ 'ಮ್ಯಾಕಿಸ್ ಗ್ರೂಪ್ ಆಫ್ ಕಂಪನೀಸ್' ಮೂಲಕ 6 ವಿಭಾಗಗಳಲ್ಲಿ 25 ಕಂಪನಿಗಳನ್ನು ಸ್ಥಾಪಿಸಿದ್ದು, 20 ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಿರುವುದಾಗಿ ತಿಳಿಸಿದರು. ರಾಜ್ಯವನ್ನು ಆರು ವಲಯಗಳಾಗಿ ವಿಂಗಡಿಸಿ ಸ್ಥಳೀಯರಿಗೆ ಉದ್ಯೋಗ ನೀಡುವುದು, ಪ್ರತಿ ಪಂಚಾಯಿತಿಯಲ್ಲೂ 49 ರೂಪಾಯಿಗೆ ಸಾರ್ವಜನಿಕ ಕ್ಲಿನಿಕ್ ಸೇವೆ ಒದಗಿಸುವುದು, ಅಗ್ರಿ ಕ್ಯಾಪಿಟಲ್ ಫಂಡ್ ಮೂಲಕ ರೈತರಿಗೆ ನೆರವಾಗುವುದು ಹಾಗೂ 100 ಕೋಟಿ ರೂಪಾಯಿ ವೆಚ್ಚದಲ್ಲಿ 15 ಕನ್ನಡ ಸಿನಿಮಾಗಳನ್ನು ನಿರ್ಮಿಸುವ ಯೋಜನೆಗಳ ಬಗ್ಗೆ ವಿವರಿಸಿದರು. 2047ರ ವೇಳೆಗೆ ಭಾರತವನ್ನು ವಿಶ್ವದ ನಂಬರ್ ಒನ್ ಆರ್ಥಿಕ ಶಕ್ತಿಯನ್ನಾಗಿ ಮಾಡಲು ನಾವೆಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.

ವೀರ ಕನ್ನಡಿಗ ಪ್ರಶಸ್ತಿ ಪುರಸ್ಕೃತರು

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 29 ಸಾಧಕರಿಗೆ ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಪುರಸ್ಕೃತರ ವಿವರ ಹೀಗಿದೆ.

1. ಅಂಬಾಲಿ ಭಾರತಿ - ಚಿತ್ರ ನಟಿ & ನಿರ್ಮಾಪಕಿ
2. ಸಿಎ ಶಾಂತರಾಮ್ ಶೆಟ್ಟಿ - ಸಮಾಜ ಸೇವಕರು    
3. ಶ್ರೀ ಚೇತನ್ ಗೌಡ - ನಟ & ಯುವ ರೈತ
4. ಡಾ. ವಾಟಾಳ್‌ ನಾಗರಾಜ್‌ - ಸಮಾಜ ಸೇವಕರು
5. ಶ್ರೀ ಸಿ. ಜಯರಾಮ್ - ಸಮಾಜ ಸೇವಕರು
6. ಶ್ರೀ ರವೀಂದ್ರಕುಮಾರ್‌ ಅಥರ್ಗಾ - ಸಂಗೀತ ಕ್ಷೇತ್ರ
7. ಡಾ. ಎಸ್‌. ಸಿದ್ದರಾಮಣ್ಣ - ಸಮಾಜ ಸೇವಕರು 
8. ಶ್ರೀ ಸುಮನ್‌ ಎಸ್‌. - ಸಮಾಜ ಸೇವಕರು 
9. ಶ್ರೀ ಕೆ.ಎಸ್.ಪವನ್‌ ಕುಮಾರ್‌ - ಸಮಾಜ ಸೇವಕರು 
10. ವಿಶ್ವಭೂಷಣ  ಡಾ‌. ರೊನಾಲ್ಡ್ ಕೊಲಾಸೊ - ಸಮಾಜ ಸೇವಕರು  
11. ಡಾ. ರವೀಂದ್ರ ಶೆಟ್ಟಿ ಬಜಗೊಳಿ - ಸಮಾಜ ಸೇವಕರು
12. ಶ್ರೀಮತಿ ಪ್ರಿಯಾ ಹಾಸನ್‌ - ನಟಿ, ನಿರ್ಮಾಪಕಿ, ನಿರ್ದೇಶಕಿ
13. ಡಾ. ವಿಜಯಕುಮಾರ್‌ - ವೈದ್ಯಕೀಯ ಸೇವೆ 
14. ಕಮಲನಗರ ಮಹೇಶ್‌ - ಸಮಾಜ ಸೇವಕರು 
15. ಶ್ರೀ ಅರವಿಂದ ಈ ಘಟ್ಟಿ - ಸಮಾಜ ಸೇವಕರು
16. ಶ್ರೀ ಮಂಜುನಾಥ್ ನಾಯ್ಕ್‌ - ಉದ್ಯಮಿ
17. ಡಾ. ನವೀನ್‌ ಮೌರ್ಯ - ಸಮಾಜ ಸೇವಕರು 
18. ಶ್ರೀ ಪಿ.ಬಿ. ಚಂದ್ರಶೇಖರ್‌ - ಸಮಾಜ ಸೇವಕರು
19. ಐಶ್ವರ್ಯ ವಿಶ್ವನಾಥರಡ್ಡಿ ನಾಗರಾಳ - ಪಿಎಸ್‌ಐ, ನರೇಗಲ್‌ ಪೊಲೀಸ್‌ ಠಾಣೆ 
20. ಶ್ರೀ ಸುನೀಲ ಮಹಾಂತೇಶಗೌಡ ಬಿರಾದಾರ - ಶಿಕ್ಷಣ ತಜ್ಞರು
21. ಶ್ರೀ ಮುನೀಶ್ವರ ಹೆಚ್‌. ಚೂರಿ - ಸಮಾಜ ಸೇವಕರು
22. ಶ್ರೀಮತಿ ಕಾವ್ಯ ಎಸ್. - ಉದ್ಯಮ ನಾಯಕಿ & ಸಮಾಜ ಸೇವಕಿ
23. ಶ್ರೀ ಪ್ರವೀಣ್‌ ಕುಮಾರ್‌ - ಸಮಾಜ ಸೇವಕರು 
24. ಶ್ರೀ ಮರಲಿಂಗ  ಬಿ. ಹೊನಗುಂಟಿಕರ್  - ಜಿಲ್ಲಾ ವ್ಯವಸ್ಥಾಪಕರು ಅಂಬೇಡ್ಕರ್  ಅಭಿವೃದ್ಧಿ ನಿಗಮ, ಕಲಬುರಗಿ
25. ಶ್ರೀ ಸಯ್ಯದ್ ಅಸ್ಗರ್‌ - ಸಮಾಜ ಸೇವಕರು
26. ಶ್ರೀ ಸಾಬಣ್ಣ  ಕಟ್ಟಿಕಾರ್‌ - ಮುಖ್ಯಾಧಿಕಾರಿ, ಪುರಸಭೆ, ಕಾರಟಗಿ 
27. ಶ್ರೀ ಮಂಜುನಾಥ್‌ ಆರ್. - ಅಧ್ಯಕ್ಷರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒಕ್ಕೂಟ
28. ಶ್ರೀ ಜಿ.ಕೆ. ಸ್ವಾಮಿ - ಸಂಸ್ಥಾಪಕರು, ಜಿ.ಕೆ ಫೌಂಡೇಶನ್, ಬಳ್ಳಾರಿ
29. ಶ್ರೀ ಗುಡ್ಡನಗೌಡ ಅಂದಾನಿಗೌಡ್ರ - ಸಮಾಜ ಸೇವಕರು

ಒಟ್ಟಾರೆ ನಾಡಿನ ನಾನಾ ಮೂಲೆಗಳಿಂದ ಆಗಮಿಸಿದ್ದ ಗಣ್ಯರು, ಸಚಿವರು, ಚಲನಚಿತ್ರ ಕಲಾವಿದರು, ಸಾಧಕರು ಹಾಗೂ ಕಲಾಪ್ರೇಮಿಗಳ ಸಮ್ಮುಖದಲ್ಲಿ ನಡೆದ ‘ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ’ ಪ್ರದಾನ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೇರವೇರಿತು. ನಿಸ್ವಾರ್ಥ ಸೇವೆ ಮತ್ತು ಸಾಧನೆಯ ಮೂಲಕ ಸಮಾಜಕ್ಕೆ ಮಾದರಿಯಾದವರನ್ನು ಗೌರವಿಸುವ ಮೂಲಕ, ಮುಂದಿನ ಪೀಳಿಗೆಗೆ ಈ ವೇದಿಕೆಯು ಹೊಸ ಸ್ಫೂರ್ತಿ ಮತ್ತು ಪ್ರೇರಣೆಯನ್ನು ನೀಡಿತು.

Add Zee News as a Preferred Source
TAGS:
Kannada News