SOCIAL MEDIA

Newsletter

PARTNER SITES
Select Language Select State

ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಟಾಸ್ಕ್ ಫೋರ್ಸ್ ರಚಿಸಿ : ಡಾ. ರೊನಾಲ್ಡ್‌ ಕೊಲಾಸೊ

‘ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಡಾ. ರೊನಾಲ್ಡ್‌ ಕೊಲಾಸೊ ಅವರಿಗೆ 'ವೀರ ಕನ್ನಡಿಗ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇದಿಕೆಯಲ್ಲಿ ಮಾತನಾಡಿದ ಡಾ. ಕೊಲಾಸೊ, ತಮ್ಮ ದೀರ್ಘಕಾಲದ ಸಮಾಜ ಸೇವೆಯನ್ನು ಸ್ಮರಿಸುವುದರ ಜೊತೆಗೆ, ಕರಾವಳಿ ಕರ್ನಾಟಕದ ಪ್ರವಾಸೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿಗೆ ವಿದೇಶಿ ಹೂಡಿಕೆ ಹಾಗೂ ವಿಶೇಷ 'ಟಾಸ್ಕ್ ಫೋರ್ಸ್' ರಚಿಸುವ ಕುರಿತು ಮಹತ್ವದ ಸಲಹೆಗಳನ್ನು ನೀಡಿದರು.

Written By Krishna NK
Published: Nov 18, 2026, 19:59 IST | Updated: Nov 18, 2026, 20:01 IST
Image Credit: Kannada News
Join

ಬೆಂಗಳೂರು: ನಗರದ ಪ್ರತಿಷ್ಠಿತ ದಿ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಅದ್ಧೂರಿ ‘ಜೀ ಕನ್ನಡ ನ್ಯೂಸ್‌ ವೀರ ಕನ್ನಡಿಗ ಪ್ರಶಸ್ತಿ’ ಪ್ರದಾನ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಮಾಜ ಸೇವೆ, ಕಲೆ, ಸಾಹಿತ್ಯ, ಸಿನಿಮಾ, ಕ್ರೀಡೆ, ಶಿಕ್ಷಣ, ವೈದ್ಯಕೀಯ, ಉದ್ಯಮ ಹಾಗೂ ಸಾರ್ವಜನಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ರಾಜ್ಯದ ಮುಂಚೂಣಿಯ ಸಾಧಕರನ್ನು ಈ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ 'ವೀರ ಕನ್ನಡಿಗ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ವಿಶ್ವಭೂಷಣ ಡಾ. ರೊನಾಲ್ಡ್‌ ಕೊಲಾಸೊ, ತಮ್ಮ ಜೀವನವನ್ನು ರೂಪಿಸಿದ ಮೂರು ಪ್ರಮುಖ ಪದಗಳ ಬಗ್ಗೆ ಭಾವುಕರಾಗಿ ಮಾತನಾಡಿದರು. "ಭಾರತ, ಕರ್ನಾಟಕ ಮತ್ತು ದಕ್ಷಿಣ ಕನ್ನಡ—ಈ ಮೂರು ಪದಗಳು ನನ್ನ ಜೀವನವನ್ನು ರೂಪಿಸಿವೆ. ಭಾರತ ನನಗೆ ಜಗತ್ತಿನಲ್ಲಿ ಭಾರತೀಯನೆಂಬ ಅಸ್ಮಿತೆ ನೀಡಿದರೆ, ಕರ್ನಾಟಕ ನನಗೆ ಭಾಷೆ ಹಾಗೂ ಸಂಸ್ಕೃತಿಯನ್ನು ನೀಡಿದೆ. ದಕ್ಷಿಣ ಕನ್ನಡ ನನ್ನ ಮೂಲ ಹಾಗೂ ಪೂರ್ವಿಕರ ನೆಲೆ," ಎಂದು ಸ್ಮರಿಸಿದರು.

ಕಳೆದ ನಾಲ್ಕು ದಶಕಗಳಿಂದ ಯಾವುದೇ ಪ್ರಶಸ್ತಿ, ಕೀರ್ತಿ ಅಥವಾ ಫಲ ಅಪೇಕ್ಷಿಸದೆ ಸಮಾಜ ಸೇವೆಯಲ್ಲಿ ತೊಡಗಿರುವುದಾಗಿ ತಿಳಿಸಿದ ಅವರು, ಕರ್ನಾಟಕದ ಸುಮಾರು 25 ವಿವಿಧ ಇಲಾಖೆಗಳಿಗೆ (ಪೊಲೀಸ್, ಕಂದಾಯ, ನ್ಯಾಯಾಂಗ, ಶಿಕ್ಷಣ ಇತ್ಯಾದಿ) ತಾವು ಮಾಡಿರುವ ಜನಪರ ಹಾಗೂ ಚಾರಿಟೇಬಲ್ ಸೇವೆಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ತಮ್ಮ ಈ ಸುದೀರ್ಘ ಸೇವೆಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ದಾಖಲಾಗಿದೆ ಎಂದರು.

ಕರಾವಳಿ ಅಭಿವೃದ್ಧಿ ಹಾಗೂ ವಿದೇಶಿ ಹೂಡಿಕೆಯ ಬಗ್ಗೆ ಸಲಹೆ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಚಿವರಾದ ರಾಮಲಿಂಗ ರೆಡ್ಡಿ ಹಾಗೂ ಇತರ ಗಣ್ಯರ ಸಮಕ್ಷಮದಲ್ಲಿ ಮಾತನಾಡಿದ ಡಾ. ರೊನಾಲ್ಡ್ ಕೊಲಾಸೊ, ಕರಾವಳಿ ಕರ್ನಾಟಕದ ಅಭಿವೃದ್ಧಿಯ ಕುರಿತು ಗಂಭೀರ ಚಿಂತನೆ ಹಂಚಿಕೊಂಡರು. ದುಬೈ, ಸಿಂಗಾಪುರ್, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳ ಅಭಿವೃದ್ಧಿ ಮಾದರಿಯನ್ನು ಉದಾಹರಿಸುತ್ತಾ, ನಮ್ಮ ಕರಾವಳಿ ಪ್ರದೇಶದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿಗೆ ಅವಕಾಶವಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳಾಗಿಲ್ಲ ಎಂದು ಅಭಿಪ್ರಾಯಪಟ್ಟರು.

"ಕರ್ನಾಟಕದ ಕರಾವಳಿ ಭಾಗದ ಪ್ರವಾಸೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಒಂದು ವಿಶೇಷ 'ಟಾಸ್ಕ್ ಫೋರ್ಸ್' ರಚಿಸಬೇಕು. ತಜ್ಞರನ್ನು ಒಳಗೊಂಡ ಈ ತಂಡವನ್ನು ದುಬೈ ಅಥವಾ ಸಿಂಗಾಪುರ್‌ಗೆ ಕಳುಹಿಸಿ ಅಲ್ಲಿನ ಅಭಿವೃದ್ಧಿ ಮಾದರಿಯನ್ನು ಅಧ್ಯಯನ ಮಾಡಿಸಬೇಕು. ಈ ಪ್ರವಾಸದ ಸಂಪೂರ್ಣ ಖರ್ಚನ್ನು ನಾನೇ ಭರಿಸಲು ಸಿದ್ಧನಿದ್ದೇನೆ" ಎಂದು ಅವರು ಬಹಿರಂಗವಾಗಿ ಘೋಷಿಸಿದರು. ಅಲ್ಲದೆ, ಅಬುಧಾಬಿಯ ಅಡಿಯಲ್ಲಿರುವ ಬೃಹತ್ ಫಂಡ್ ಹೋಲ್ಡಿಂಗ್ ಕಂಪನಿಯ ಸಿಎಫ್‌ಒ ತಮ್ಮ ಒಳ್ಳೆಯ ಸ್ನೇಹಿತರಾಗಿದ್ದು, ಒರಿಸ್ಸಾ ಸರ್ಕಾರಕ್ಕೆ ಕೋಟ್ಯಂತರ ರೂ. ಹೂಡಿಕೆ ಬಂದಿರುವಂತೆ ಕರ್ನಾಟಕಕ್ಕೂ ಅಂತಹ ವಿದೇಶಿ ಬಂಡವಾಳ ಹಾಗೂ ಹೂಡಿಕೆಯನ್ನು ಆಕರ್ಷಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.

ಒಟ್ಟಾರೆಯಾಗಿ ಬಾಳಿನ ಸಾರ್ಥಕತೆಯ ಬಗ್ಗೆ ಮಾತನಾಡುತ್ತಾ, "ಬಾಳಿನ ವರ್ಷಗಳನ್ನು ಕೌಂಟ್ ಮಾಡುವುದಕ್ಕಿಂತ ನಾವು ಬದುಕಿದ ಪ್ರತಿ ವರ್ಷ ಎಷ್ಟು ಅರ್ಥಪೂರ್ಣವಾಗಿತ್ತು ಎಂಬುದನ್ನು ನೋಡಬೇಕು. ನಾವು ಗಳಿಸುವ ಆಸ್ತಿ-ಪಾಸ್ತಿಗಳ ಜೊತೆಗೆ ಎಷ್ಟು ಜನರ ಮನಸ್ಸುಗಳನ್ನು ಮುಟ್ಟಿದ್ದೇವೆ ಎಂಬುದು ಮುಖ್ಯ," ಎಂದು ತಿಳಿಸುತ್ತಾ, ತಮಗೆ ಈ ಗೌರವ ನೀಡಿದ 'ಜೀ ಕನ್ನಡ ನ್ಯೂಸ್‌' ಮಾಧ್ಯಮದವರಿಗೆ ಹಾಗೂ ಸಮಾರಂಭದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES