ಡ್ರೈವಿಂಗ್ ಕಲಿಯುವಾಗ ಮಹಿಳೆಯಿಂದ ಭೀಕರ ಅಪಘಾತ : ಕಬಾಬ್ ಅಂಗಡಿಗೆ ನುಗ್ಗಿದ ಕಾರು
ನೋಡನೋಡುತ್ತಿದ್ದಂತೆಯೇ ನಗು ನಗುತ್ತಾ ವ್ಯಾಪಾರ ಮಾಡುತ್ತಿದ್ದ ಅಂಗಡಿ ರಣರಂಗವಾಗಿ ಬದಲಾಗಿದೆ. ಅಷ್ಟಕ್ಕೂ ಈ ಭೀಕರ ಅಪಘಾತ ನಡೆದಿದ್ದೆಲ್ಲಿ, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳೇನು, ತೋರಿಸ್ತೀವಿ ನೋಡಿ.
ಬೆಂಗಳೂರು: ಡ್ರೈವಿಂಗ್ ಕಲಿಯುವಾಗ ಒಂದು ಕ್ಷಣದ ಎಚ್ಚರ ತಪ್ಪಿದ್ರೆ ಎಂತಹ ಭೀಕರ ಅನಾಹುತ ಸಂಭವಿಸಬಹುದು ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಹಿಳೆಯೊಬ್ಬರು ಚಾಲನೆ ಮಾಡುತ್ತಿದ್ದ ದುಬಾರಿ ಪಜೆರೋ ಸ್ಪೋರ್ಟ್ ಕಾರು ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ಬೈಕ್‌ಗಳಿಗೆ ಡಿಕ್ಕಿ ಹೊಡೆದು, ಬಳಿಕ ನೇರವಾಗಿ ಕಬಾಬ್ ಅಂಗಡಿಯೊಳಗೆ ನುಗ್ಗಿದೆ. ಕಾರು ಅಪ್ಪಳಿಸಿದ ರಭಸಕ್ಕೆ ಅಂಗಡಿಯಲ್ಲಿದ್ದ ಬಿಸಿ ಎಣ್ಣೆ ಮೂವರ ಮೈಮೇಲೆ ಚೆಲ್ಲಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನೋಡನೋಡುತ್ತಿದ್ದಂತೆಯೇ ನಗು ನಗುತ್ತಾ ವ್ಯಾಪಾರ ಮಾಡುತ್ತಿದ್ದ ಅಂಗಡಿ ರಣರಂಗವಾಗಿ ಬದಲಾಗಿದೆ. ಅಷ್ಟಕ್ಕೂ ಈ ಭೀಕರ ಅಪಘಾತ ನಡೆದಿದ್ದೆಲ್ಲಿ, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳೇನು, ತೋರಿಸ್ತೀವಿ ನೋಡಿ.
ಇದು ಯಾವುದೋ ಸಿನಿಮಾದಲ್ಲಿ ಚಿತ್ರೀಕರಿಸಿದ ಆ್ಯಕ್ಷನ್ ದೃಶ್ಯವಲ್ಲ. ಕಣ್ಣೆದುರೇ ನಡೆದ ಭೀಕರ ಅಪಘಾತದ ದೃಶ್ಯ. ರಸ್ತೆಯಲ್ಲಿ ವೇಗವಾಗಿ ಬಂದ ಪಜೆರೋ ಸ್ಪೋರ್ಟ್ ಕಾರು ಕ್ಷಣಾರ್ಧದಲ್ಲೇ ನಿಯಂತ್ರಣ ಕಳೆದುಕೊಂಡಿದೆ. ಮೊದಲು ರಸ್ತೆಯ ಬದಿಯಲ್ಲಿದ್ದ ಬೈಕ್‌ಗಳಿಗೆ ಬಲವಾಗಿ ಡಿಕ್ಕಿ ಹೊಡೆದ ಕಾರು, ಬಳಿಕ ಅಲ್ಲೇ ಇದ್ದ ಕಬಾಬ್ ಅಂಗಡಿಯೊಳಗೆ ನುಗ್ಗಿದೆ. ಕಾರಿನ ವೇಗ ಮತ್ತು ಡಿಕ್ಕಿಯ ರಭಸಕ್ಕೆ ಅಂಗಡಿಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಬೈಕ್‌ಗಳು ಜಖಂಗೊಂಡಿದ್ದು,ಅಂಗಡಿಯೊಳಗಿದ್ದವರು ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ಭಾರೀ ಅನಾಹುತವೇ ಸಂಭವಿಸಿದೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಹೊಮ್ಮದೇವನಹಳ್ಳಿಯಲ್ಲಿ ಅಕ್ಟೋಬರ್ 28ರಂದು ಈ ಭೀಕರ ಅಪಘಾತ ನಡೆದಿದ್ದು,ಸಜೀನಾ ಬೇಗಂ ಎಂಬ ಮಹಿಳೆ KA-05-MR-3925 ನೋಂದಣಿ ಸಂಖ್ಯೆಯ ಪಜೆರೋ ಸ್ಪೋರ್ಟ್ ಕಾರಿನಲ್ಲಿ ಡ್ರೈವಿಂಗ್ ಕಲಿಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಾರು ನಿಯಂತ್ರಣ ತಪ್ಪುತ್ತಿದ್ದಂತೆ ಅಂಗಡಿ ಬಳಿ ನಿಲ್ಲಿಸಿದ್ದ ಬೈಕ್‌ಗಳಿಗೆ ಡಿಕ್ಕಿ ಹೊಡೆದು, ನೇರವಾಗಿ ಕಬಾಬ್ ಅಂಗಡಿಗೆ ನುಗ್ಗಿದೆ. ಕ್ಷಣಮಾತ್ರದಲ್ಲಿ ಅಂಗಡಿಯ ಪರಿಸ್ಥಿತಿಯೇ ಸಂಪೂರ್ಣ ಬದಲಾಗಿದೆ. ಈ ಭೀಕರ ಅಪಘಾತದ ದೃಶ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೈ ಜುಮ್ಮೆನಿಸುವಂತಿವೆ.
ಇನ್ನು ಕಾರು ಅಂಗಡಿಗೆ ನುಗ್ಗಿದ ರಭಸಕ್ಕೆ ಅಡುಗೆ ಮಾಡುತ್ತಿದ್ದ ಬಿಸಿ ಎಣ್ಣೆ ಅಂಗಡಿಯಲ್ಲಿದ್ದ ಬಸವರಾಜ್, ಮುನಿಕೃಷ್ಣ ಹಾಗೂ ಮಂಜೇಶ್ ಅವರ ಮೈಮೇಲೆ ಚೆಲ್ಲಿದೆ. ಪರಿಣಾಮ ಮೂವರಿಗೂ ಗಂಭೀರ ಸುಟ್ಟ ಗಾಯಗಳಾಗಿವೆ. ಏಕಾಏಕಿ ಸಂಭವಿಸಿದ ಈ ಅನಾಹುತದಿಂದ ಅಂಗಡಿಯಲ್ಲಿದ್ದವರು ದಿಕ್ಕುತೋಚದೆ ಕಂಗಾಲಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಮೆಡೆಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಡ್ರೈವಿಂಗ್ ಕಲಿಯುವ ಸಂದರ್ಭದಲ್ಲಿ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ. ಜನನಿಬಿಡ ರಸ್ತೆಯಲ್ಲಿ ನಡೆದ ಈ ಅಪಘಾತ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಒಂದು ಕ್ಷಣದ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಮೂವರು ಅಮಾಯಕರು ಗಂಭೀರವಾಗಿ ಗಾಯಗೊಂಡಿರುವುದು ದುರಂತವೇ ಸರಿ.
ಒಟ್ಟಿನಲ್ಲಿ, ವಾಹನ ಚಾಲನೆ ಕಲಿಯುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸದಿದ್ದರೆ ಎಂತಹ ದೊಡ್ಡ ಅನಾಹುತ ಸಂಭವಿಸಬಹುದು ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅದೃಷ್ಟವಶಾತ್ ಭಾರೀ ಅನಾಹುತ ಸಂಭವಿಸಿದರೂ ಪ್ರಾಣಹಾನಿಯಾಗಿಲ್ಲ. ಘಟನೆ ಸಂಬಂಧ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾರಿನಲ್ಲಿದ್ದ ಮಹಿಳೆ ಸೇರಿದಂತೆ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.