ಬೆಂಗಳೂರಿನ ಪ್ರಸಿದ್ಧ ಉದ್ಯಾನವನ ಲಾಲ್‌ಬಾಗ್ ಕೆಳಗೇ ಸುರಂಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಭರದ ಸಿದ್ಧತೆ ನಡೆಸಿದ್ದು, ಇದಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪರಿಸರವಾದಿಗಳ ವಿರೋಧದ ನಡುವೆಯೂ ಸುರಂಗ ಮಾರ್ಗ ಯೋಜನೆಗೆ ಸರ್ಕಾರದ ಒಲವು!
ಲಾಲ್‌ಬಾಗ್ ಕೆಳಭಾಗದಲ್ಲಿ ಸುರಂಗ ನಿರ್ಮಾಣಕ್ಕೆ ಪರಿಸರವಾದಿಗಳ ತೀವ್ರ ವಿರೋಧದ ನಡುವೆಯೂ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಸುರಂಗ ಯೋಜನೆಗೆ ಸಂಬಂಧಿಸಿದ ಅಧಿಕೃತ ಸರ್ಕಾರಿ ಆದೇಶ ಪ್ರಕಟವಾಗುವುದಷ್ಟೇ ಬಾಕಿ ಇದೆ.
ಹೆಬ್ಬಾಳ ಸಮೀಪ ಬಿಡಿಎಯಿಂದ 2.75 ಕಿ.ಮೀ. ಶಾರ್ಟ್ ಟನಲ್ ಕಾಮಗಾರಿ ಆರಂಭವಾಗಿದೆ. ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಕೆಎಸ್‌ಆರ್‌ಪಿ ಜಂಕ್ಷನ್‌ವರೆಗೆ ಸುರಂಗ ರಸ್ತೆ ನಿರ್ಮಿಸಲು ಯೋಜಿಸಲಾಗಿದ್ದು, ಒಟ್ಟು 16.74 ಕಿ.ಮೀ. ಉದ್ದದ ಭೂಗತ ಅವಳಿ ಸುರಂಗ ರಸ್ತೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.
ಬೃಹತ್ ಸುರಂಗ ರಸ್ತೆ ಯೋಜನೆ:
ಸುಮಾರು 17 ಸಾವಿರ ಕೋಟಿ ರೂಪಾಯಿ ವೆಚ್ಚದ ಬೃಹತ್ ಸುರಂಗ ರಸ್ತೆ ಯೋಜನೆಗೆ ಸಿದ್ಧತೆ ನಡೆಸಿರುವ ಸರ್ಕಾರ, ಮೂರು ಲೇನ್‌ಗಳ ಭೂಗತ ಸುರಂಗ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.
ಸುರಂಗ ರಸ್ತೆ ನಿರ್ಮಾಣದ ಗುತ್ತಿಗೆಯನ್ನು ಅದಾನಿ ಸಂಸ್ಥೆಗೆ ನೀಡಲಾಗಿದ್ದು, ಭೂಮಿಯ ಒಳಪದರ ಹಾಗೂ ಕಲ್ಲಿನ ಗುಣಲಕ್ಷಣಗಳ ಕುರಿತು ಅದಾನಿ ಸಂಸ್ಥೆಯಿಂದ ಅಧ್ಯಯನ ನಡೆಸಲಾಗುತ್ತಿದೆ. ಸುರಂಗ ಕೊರೆಯುವ ಯಂತ್ರಗಳ ತಯಾರಿಕೆ ಆರಂಭಿಸಲು ಸಂಸ್ಥೆಯಿಂದ ಸಿದ್ಧತೆ ಪ್ರಗತಿಯಲ್ಲಿದೆ.
ಸುರಂಗ ಕೊರೆಯುವ ಯಂತ್ರಗಳ ತಯಾರಿಕೆಗೆ 8ರಿಂದ 9 ತಿಂಗಳ ಕಾಲಾವಕಾಶದ ನಿರೀಕ್ಷೆ ಇದ್ದು, ರೇಸ್‌ಕೋರ್ಸ್ ಸಮೀಪದ ಶೇಷಾದ್ರಿ ರಸ್ತೆವರೆಗೆ ಮೊದಲ ಹಂತದ ಸುರಂಗ ಮಾರ್ಗ ತಯಾರಾಗಲಿದೆ ಎನ್ನಲಾಗುತ್ತಿದೆ.
ಎರಡು ಹಂತಗಳಲ್ಲಿ ಸುರಂಗ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ 8.7 ಕಿ.ಮೀ. ಸುರಂಗ ಮಾರ್ಗ ನಿರ್ಮಾಣಕ್ಕೆ ಯೋಜಿಸಲಾಗಿದೆ. ಆರಂಭದಲ್ಲಿ ಭೂಮಿಯ 25 ಮೀಟರ್ ಆಳದಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಇದಲ್ಲದೆ, ಲಾಲ್‌ಬಾಗ್ ಪಕ್ಕದಲ್ಲಿ ಸುರಂಗ ಮಾರ್ಗ ನಿರ್ಮಿಸುವ ಪರ್ಯಾಯ ಪ್ರಸ್ತಾಪವೂ ಸರ್ಕಾರದ ಮುಂದಿತ್ತು. ಕಾಮಗಾರಿ ವೇಳೆ ಲಾಲ್‌ಬಾಗ್ ಸಮೀಪದ ಸುರಂಗ ಮಾರ್ಗದ ವಿನ್ಯಾಸ ಬದಲಿಸುವ ಸಾಧ್ಯತೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಯನಗರದ ಸರ್ಕಾರಿ ಜಾಗದತ್ತ ಸುರಂಗ ಮಾರ್ಗದ ಪ್ರವೇಶ ಅಥವಾ ನಿರ್ಗಮನ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದ್ದು, ಡಿಪಿಆರ್ ಪ್ರಕಾರವೇ ಟೆಂಡರ್ ಆಗಿರುವುದರಿಂದ ಲಾಲ್‌ಬಾಗ್ ಕೆಳಭಾಗದಲ್ಲೇ ಸುರಂಗ ಹಾದುಹೋಗಲಿದೆ ಎನ್ನಲಾಗುತ್ತಿದೆ. ಕಾಮಗಾರಿ ವೇಳೆ ವಿನ್ಯಾಸ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂತಲೂ ಹೇಳಲಾಗುತ್ತಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಉದ್ಯಾನವನ ಲಾಲ್‌ಬಾಗ್ ಕೆಳಭಾಗದಲ್ಲಿಯೇ ಸುರಂಗ ರಸ್ತೆ ನಿರ್ಮಾಣದ ಆಗು ಹೋಗುಗಳ ಬಗ್ಗೆ ಸರ್ಕಾರ ಮತ್ತೊಮ್ಮೆ ಪರಿಶೀಲಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವೂ ಆಗಿದೆ.