ದೇವನಹಳ್ಳಿ: ನಕಲಿ ಆರ್‌ಬಿಐ ಮ್ಯಾನೇಜರ್ ಎಂದು ಹೇಳಿಕೊಂಡು, ದಿವಂಗತ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬೇನಾಮಿ ಆಸ್ತಿ ಬಂದಿದೆ ಎಂದು ಜನರನ್ನು ನಂಬಿಸಿ ಕೋಟಿ ಕೋಟಿ ರೂಪಾಯಿ ವಂಚನೆ ಮಾಡಿದ್ದ ಗ್ಯಾಂಗ್ ಇದೀಗ ಪೊಲೀಸರ ಬಲೆಗೆ ಬಿದ್ದಿದೆ. ಹತ್ತು ಲಕ್ಷ ರೂಪಾಯಿ ಕೊಟ್ಟರೆ ಒಂದು ಕೋಟಿ ರೂಪಾಯಿ ಹಣ ನೀಡುವುದಾಗಿ ನಂಬಿಸಿ, ಜನರಿಂದ ಲಕ್ಷ ಲಕ್ಷ ರೂಪಾಯಿ ಹಣ, ಚೆಕ್ ಹಾಗೂ ಚಿನ್ನಾಭರಣ ಪಡೆದು ವಂಚನೆ ಮಾಡಿರುವ ಗ್ಯಾಂಗ್ ಅಂದರ್ ಹಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...
ಕೋಟಿ ಕೋಟಿ ಹಣದ ಆಸೆ...ಬೇನಾಮಿ ಆಸ್ತಿಯ ಕಥೆ...ನಕಲಿ ಆರ್‌ಬಿಐ ಮ್ಯಾನೇಜರ್‌ನ ಪರಿಚಯ...ಇದನ್ನೇ ಬಂಡವಾಳ ಮಾಡಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದ ಗ್ಯಾಂಗ್ ಇದೀಗ ಖಾಕಿ ಬಲೆಗೆ ಬಿದ್ದಿದೆ. ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.
ಇನ್ನು ದಿವಂಗತ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸೇರಿದ ಬೇನಾಮಿ ಆಸ್ತಿ ತಮ್ಮ ಬಳಿ ಬಂದಿದೆ ಎಂದು ಆರೋಪಿಗಳು ಜನರನ್ನು ನಂಬಿಸುತ್ತಿದ್ದರು ಎನ್ನಲಾಗಿದೆ. ಹತ್ತು ಲಕ್ಷ ರೂಪಾಯಿ ನೀಡಿದರೆ ಒಂದು ಕೋಟಿ ರೂಪಾಯಿ ಹಣವನ್ನು ವಾಪಸ್ ನೀಡುವುದಾಗಿ ಆಮಿಷವೊಡ್ಡಿ, ಹಲವರಿಂದ ಹಣ ಪಡೆದುಕೊಳ್ಳುತ್ತಿದ್ದರು. ಈ ವಂಚನೆಯ ಪ್ರಮುಖ ಆರೋಪಿ ಯಳಚೇನಹಳ್ಳಿ ನಿವಾಸಿ ಶಶಿಕುಮಾರ್ ಎಂದು ತಿಳಿದುಬಂದಿದೆ.
ಕಳೆದ ಹಲವು ವರ್ಷಗಳಿಂದ ಸ್ನೇಹಿತರು ಹಾಗೂ ಸ್ಥಳೀಯರೊಂದಿಗೆ ಆತ್ಮೀಯವಾಗಿ ಬೆರೆತು, ಅವರ ವಿಶ್ವಾಸ ಗಳಿಸಿಕೊಂಡಿದ್ದ ಶಶಿಕುಮಾರ್, ಬಳಿಕ ಹಣದ ಆಸೆ ತೋರಿಸಿ ವಂಚನೆ ಮಾಡುತ್ತಿದ್ದ ಎನ್ನಲಾಗಿದೆ.ವಿಡಿಯೋ ಕಾಲ್‌ನಲ್ಲಿ ಮೂಟೆಗಳಲ್ಲಿ ಹಣ ಇರುವುದನ್ನು ತೋರಿಸಿ, ತಮ್ಮ ಬಳಿ ಕೋಟ್ಯಂತರ ರೂಪಾಯಿ ಹಣವಿದೆ ಎಂದು ಜನರನ್ನು ನಂಬಿಸುತ್ತಿದ್ದನಂತೆ. ಇದನ್ನು ನಂಬಿದ ಹಲವರು ಹಣ ನೀಡಿದ್ದು, ಕೆಲವರಿಂದ ಚೆಕ್ ಹಾಗೂ ಚಿನ್ನಾಭರಣಗಳನ್ನೂ ಪಡೆದುಕೊಂಡಿದ್ದ ಎನ್ನಲಾಗಿದೆ.
ಅಂದಹಾಗೆ ಹೊಸಕೋಟೆ ಸುತ್ತಮುತ್ತ ಇದೇ ರೀತಿಯಲ್ಲಿ ಬರೋಬ್ಬರಿ ನಾಲ್ಕೂವರೆ ಕೋಟಿಗೂ ಅಧಿಕ ಹಣ ವಂಚನೆ ಮಾಡಲಾಗಿದೆ. ಅಲ್ಲದೆ ಹಣ ನೀಡಿದ ಬಳಿಕ ವಾಪಸ್ ಸಿಗದೇ ಹೋದಾಗ ವಂಚನೆಗೊಳಗಾದವರು ಪೊಲೀಸರ ಮೊರೆ ಹೋಗಿದ್ದಾರೆ. ಈ ಸಂಬಂಧ ಕಳೆದ ತಿಂಗಳು ಶಶಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೊಸಕೋಟೆ ಪೊಲೀಸರು ತನಿಖೆ ಚುರುಕುಗೊಳಿಸಿ ಬಂಧನಕ್ಕೆ ಬಲೆ ಬೀಸಿದ್ದರು. ಕೊನೆಗೂ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಶಶಿಕುಮಾರ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಅಲ್ಲದೆ ಈ ಗ್ಯಾಂಗ್ ನ ನಾಗೇಶ್, ಪ್ರಮೀಳ ಶಶಿಕುಮಾರ್, ಅಂಬುಜಾ ಶಶಿಕುಮಾರ್ ಹಾಗೂ ವೆಂಕಟರವಣಪ್ಪರನ್ನ ಕೂಡ ಪೊಲೀಸರು ಎಡೆಮುರಿಕಟ್ಟಿದ್ದಾರೆ.
ಒಟ್ಟಾರೇ ಬಂಧಿತ ಆರೋಪಿಗಳಿಂದ ವಂಚನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಈ ಗ್ಯಾಂಗ್ ಇನ್ನೆಷ್ಟು ಮಂದಿಗೆ ಇದೇ ರೀತಿಯಲ್ಲಿ ವಂಚನೆ ಮಾಡಿದೆ. ಎಷ್ಟು ಹಣ ವಸೂಲಿ ಮಾಡಲಾಗಿದೆ, ವಂಚನೆ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ?ಎಂಬುದರ ಬಗ್ಗೆ ಹೊಸಕೋಟೆ ಪೊಲೀಸರು ಇನ್ನಷ್ಟು ತನಿಖೆ ಮುಂದುವರಿಸಿದ್ದಾರೆ.