SOCIAL MEDIA

Newsletter

PARTNER SITES
Select Language Select State

ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ; ಬಿಸಿಯೂಟ ನೌಕರರು ಆತಂಕಪಡಬೇಕಿಲ್ಲ: ಸಚಿವ ಮಧು ಬಂಗಾರಪ್ಪ

ಯಾವುದೇ ಕಾರಣಕ್ಕೂ ಕ್ಲಸ್ಟರ್ ಕಿಚನ್ ಸೆಂಟರ್‌ಗಳನ್ನು ಪ್ರಶ್ನೆಯೇ ಇಲ್ಲ. ಹಾಗಾಗಿ, ಬಿಸಿಯೂಟ ನೌಕರರು ಆತಂಕಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.

Written By Yashaswini V
Published: Nov 23, 2026, 11:44 IST | Updated: Nov 23, 2026, 11:48 IST
Join

ಬೆಂಗಳೂರು: ರಾಜ್ಯದ 1ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಯೋಜನೆಯಡಿ ಯಾವುದೇ ಕಾರಣಕ್ಕೂ ಕ್ಲಸ್ಟರ್ ಕಿಚನ್ ಸೆಂಟರ್‌ಗಳನ್ನು (ಕೇಂದ್ರೀಕೃತ ಅಡುಗೆ ಕೇಂದ್ರ) ಸ್ಥಾಪಿಸುವುದಿಲ್ಲ. ಈ ಬಗ್ಗೆ ಬಿಸಿಯೂಟ ನೌಕರರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಭರವಸೆ ನೀಡಿದರು. ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್‌ನ ಗೌರವಾಧ್ಯಕ್ಷ ಎಸ್. ಬಾಲನ್ ಅವರ ನೇತೃತ್ವದ ನಿಯೋಗ ಇಂದು ಸಚಿವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಸಲ್ಲಿಸಿದ ಸಂದರ್ಭದಲ್ಲಿ ಸಚಿವರು ಈ ಭರವಸೆ ನೀಡಿದರು.

ಕೇರಳದಲ್ಲಿ ಬಿಸಿಯೂಟ ನೌಕರರಿಗೆ ₹12 ಸಾವಿರ ವೇತನ ನೀಡಲಾಗುತ್ತಿದೆ. ಅಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿದ್ದು, ಕರ್ನಾಟಕದಲ್ಲಿಯೂ ಕಾಂಗ್ರೆಸ್ ಸರ್ಕಾರವಿದೆ. ಆದ್ದರಿಂದ ಬಿಸಿಯೂಟ ನೌಕರರ ಬೇಡಿಕೆಗಳನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕು ಎಂದು ನಿಯೋಗ ಸಚಿವರಲ್ಲಿ ಮನವಿ ಮಾಡಿತು.

ನಿಯೋಗದ ಮನವಿಗೆ ಸ್ಪಂದಿಸಿದ ಸಚಿವರು, "ವೇತನ ಹೆಚ್ಚಳದ ನಿರ್ಧಾರ ಕೇವಲ ನನ್ನ ಕೈಯಲ್ಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಖಂಡಿತವಾಗಿಯೂ ಚರ್ಚಿಸುತ್ತೇನೆ. ನಮ್ಮ ಸರ್ಕಾರದಿಂದ ಎಷ್ಟು ಸಾಧ್ಯವೋ ಅಷ್ಟು ವೇತನ ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಹಿಂದೆ ಬಿಸಿಯೂಟ ನೌಕರರ ಇಡುಗಂಟನ್ನು ₹40 ಸಾವಿರಕ್ಕೆ ಹೆಚ್ಚಿಸಿದ ಹೆಗ್ಗಳಿಕೆ ನಮ್ಮ ಸರ್ಕಾರದ್ದು. ನೀವು ಅತ್ಯಂತ ಶ್ರಮಜೀವಿಗಳು. ನಿಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಕಾಳಜಿಯಿದೆ" ಎಂದರು.

ಬಿಸಿಯೂಟ ಯೋಜನೆ ಕೇವಲ ರಾಜ್ಯ ಸರ್ಕಾರದ ಯೋಜನೆಯಲ್ಲ. ಕೇಂದ್ರ ಸರ್ಕಾರವೂ ಇದಕ್ಕೆ ಅನುದಾನ ನೀಡುತ್ತದೆ. ಹೀಗಾಗಿ ನಿಮ್ಮ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರದ ಮೇಲೆಯೂ ಒತ್ತಡ ಹೇರಬೇಕು ಎಂದು ಸಲಹೆ ನೀಡಿದರು.

ಕೆಲವು ಕಡೆ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ ಎಂದು ನಿಯೋಗ ಸಚಿವರ ಗಮನಕ್ಕೆ ತಂದಿತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ಧಾನ್ಯ ಪೂರೈಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಎಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂಬುದರ ಬಗ್ಗೆ ನಿಖರ ಮಾಹಿತಿ ನೀಡಿ. ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದರು.

ಶಾಲೆಯ ಮುಖ್ಯಶಿಕ್ಷಕರು ಮತ್ತು ಮುಖ್ಯ ಅಡುಗೆ ಸಿಬ್ಬಂದಿಯ ಜಂಟಿ ಬ್ಯಾಂಕ್ ಖಾತೆ, ಕನಿಷ್ಠ ₹1 ಲಕ್ಷ ಇಡುಗಂಟು, ಮಾಸಿಕ ₹5 ಸಾವಿರ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಿಯೋಗ ಸಚಿವರಿಗೆ ಮನವಿ ಸಲ್ಲಿಸಿತು.

ಸಚಿವರು ಮನವಿ ಸ್ವೀಕರಿಸಿದ ಬಳಿಕ, ಪ್ರತಿಭಟನೆ ನಿಮ್ಮ ಹಕ್ಕು. ಆದರೆ ದಯವಿಟ್ಟು ಬಿಸಿಯೂಟ ನೌಕರರು ಈಗ ಪ್ರತಿಭಟನೆ ಕೈಬಿಡಬೇಕು.  ನಿಮ್ಮ ಜೊತೆ ನಾವು ಇದ್ದೇವೆ. ನಮ್ಮ ಸರ್ಕಾರದ ವ್ಯಾಪಿಯಲ್ಲಿ ನಾವು ಏನು ಮಾಡಲು ಸಾಧ್ಯ ಆಗುತ್ತದೋ ಅದನ್ನು ಮಾಡುತ್ತೇವೆ ಎಂದು ಸಚಿವರು  ವಿಶ್ವಾಸ ವ್ಯಕ್ತಪಡಿಸಿದರು.

ಈ ನಿಯೋಗದಲ್ಲಿ ರಾಜ್ಯ ಸಮಿತಿ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಪ್ರಧಾನ ಕಾರ್ಯದರ್ಶಿ ಕಲ್ಪನಾ ವಿ.ಜಿ., ಖಜಾಂಚಿ ಪುಷ್ಪಲತಾ ಸೇರಿದಂತೆ ಯೂನಿಯನ್‌ನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
 

Related News

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES